ಯಾರೋ ಕೆಣಕಿದ ಕಾರಣ ಅನೇಕ ದಾಖಲೆಗಳು ಹೊರಗೆ ಬಂತು!
ಒಂದೇ ದಿನಕ್ಕೆ ಬರೆದು ಮುಗಿಸಬೇಕು ಎಂದು ಅಂದುಕೊಂಡಿದ್ದ ವಿಚಾರವನ್ನು ಇಷ್ಟು ದಿನ ಬರೆಯಬೇಕಾಗಿ ಬರಬಹುದು ಎಂದು ಅಂದುಕೊಂಡಿರಲಿಲ್ಲ. ಆದರೆ ಸುಮಿತ್ ಎಸ್ ರಾವ್ ಅವರು ಈ ವಿಷಯದಲ್ಲಿ ತಪ್ಪು ಸಂಗತಿಗಳಿಗೆ ಭಾವನಾತ್ಮಕ ಪ್ಯಾಕೇಜ್ ಮಾಡಿ ನನಗೆ ಬಹಿರಂಗ ಪತ್ರ ಬರೆದ ಕಾರಣ ನಾನು ಕೂಡ ಅದಕ್ಕೆ ಇಂಚಿಂಚಾಗಿ ಉತ್ತರ ಕೊಡಬೇಕಾಯಿತು. ಅದಕ್ಕಾಗಿ ನಾನು ಅನೇಕ ಕಡೆ ಓಡಾಡಿ ದಾಖಲೆಗಳನ್ನು ತಂದು ಅದನ್ನು ಜೆರಾಕ್ಸ್ ಮಾಡಿ, ಅದನ್ನು ಸ್ಟಡಿ ಮಾಡಿ ಬರೆಯಬೇಕಾಯಿತು. ಇನ್ನೂ ಕೂಡ ಸಂಶಯ ಇದ್ದರೆ ನನಗೊಂದು ಫೋನ್ ಮಾಡಿ ಚರ್ಚೆಗೆ ಯಾರಾದರೂ ಬರುವುದಾದರೆ ಅದಕ್ಕಾಗಿ ಸ್ವಲ್ಪ ಸಮಯ ಇಡುವುದಕ್ಕೆ ನಾನು ರೆಡಿ ಅಥವಾ ಯಾವುದಾದರೂ ಟಿವಿಯಲ್ಲಿಯೇ ಚರ್ಚೆ ಮಾಡಲು ನೀವು ಬಯಸುವುದಾದರೆ ನಾನು ರೆಡಿ. ಅಷ್ಟಕ್ಕೂ ಈ ರಸ್ತೆಗೆ ಎಲೋಶಿಯಸ್ ಕಾಲೇಜು ರಸ್ತೆ ಅಥವಾ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ಇಡುವುದರಿಂದ ನನಗೆ ಲಾಭವೂ ಇಲ್ಲ, ನಷ್ಟವೂ ಇಲ್ಲ.
ಈಗ ಸುಮಿತ್ ಅವರ ಕೊನೆಯ ಕೆಲವು ಪ್ರಶ್ನೆಗಳಿಗೆ ಉತ್ತರ ಕೊಡೋಣ. ಶಿವರಾಮ ಕಾರಂತ ರಸ್ತೆಗೆ ಮೂಲ್ಕಿ ಸುಂದರರಾಮ ಶೆಟ್ಟಿ ರಸ್ತೆ ಎಂದು ವಿಜಯಾ ಬ್ಯಾಂಕಿನ ನೌಕರರ ಸಂಘದ ಕಡೆಯಿಂದ ಯಾವತ್ತೂ ಮನವಿ ಹೋಗಿಲ್ಲ, ಅದನ್ನು ಮತ್ತೆ ಸ್ಪಷ್ಟಪಡಿಸುತ್ತೇನೆ. ಅದನ್ನು ಸುಮಿತ್ ರಾವ್ ಅರ್ಥ ಮಾಡಿಕೊಳ್ಳುತ್ತಾರೆ ಎಂದು ಭಾವಿಸುತ್ತೇನೆ. ಆ ಬಗ್ಗೆ ದಾಖಲೆ ತಾನು ತರಿಸಿದ್ದೇನೆ. ಸುಮ್ಮನೆ ಜನರಲ್ಲಿ ಗೊಂದಲ ಮೂಡಬೇಕೆಂದು ಯಾರದ್ದೋ ಕುಮ್ಮಕ್ಕಿನಿಂದ ಬರೆಯುವುದರಲ್ಲಿ ಅರ್ಥವಿಲ್ಲ.
ಇನ್ನು ಎಲೋಶಿಯಸ್ ಕಾಲೇಜು ರಸ್ತೆ ಎಂದು ಬೋರ್ಡ ಇದೆ ಎಂದು ಬರೆದಿದ್ದಿರಿ. ಬೋರ್ಡ 40 ವರ್ಷದಿಂದ ಅಲ್ಲ 80 ವರ್ಷದಿಂದ ಇದ್ದರೂ ಅದು ಸರಕಾರಿ ದಾಖಲೆಗಳಲ್ಲಿ ಬರುವ ತನಕ ದಾಖಲೆಯಾಗಿ ಉಳಿಯಲ್ಲ. ಹೋಗಲಿ, ಕನಿಷ್ಟ ಆ ರಸ್ತೆಯಲ್ಲಿ ಒಂದಕ್ಕಿಂತ ಒಂದು ದೊಡ್ಡ ಸಂಸ್ಥೆಗಳಿವೆ. ಅವುಗಳ ವಿಳಾಸದಲ್ಲಿಯಾದರೂ ಎಲೋಶಿಯಸ್ ಕಾಲೇಜು ರಸ್ತೆ ಎಂದು ಇದೆಯಾ? ಅದು ಕೂಡ ಇಲ್ಲ. ಕ್ಯಾಥೋಲಿಕ್ ಕ್ಲಬ್ ನಂತರ ಆ ರಸ್ತೆಯಲ್ಲಿ ಮೊದಲಿಗೆ ಸಿಗುವುದು ಸಿಂಡಿಕೇಟ್ ಬ್ಯಾಂಕ್. ಅವರ ವಿಳಾಸದಲ್ಲಿ ಲೈಟ್ ಹೌಸ್ ಹಿಲ್ ರಸ್ತೆ ಎಂದಿದೆ. ನಂತರ ಸಿಗುವುದು ಕೆಎಂಸಿ ಕಾಲೇಜು. ಅವರೇನಾದರೂ ಎಲೋಶಿಯಸ್ ಕಾಲೇಜು ರಸ್ತೆ ಎಂದು ಬರೆದಿದ್ದಾರಾ, ಅದು ಇಲ್ಲ. ನಂತರ ಬರುವುದು ನಲಪಾಡ್ ರೆಸಿಡೆಸ್ಸಿ. ಅವರು ಕೂಡ ಲೈಟ್ ಹೌಸ್ ಹಿಲ್ ರಸ್ತೆ ಎಂದು ಬರೆದಿದ್ದಾರೆ. ನಂತರ ಲೇಡಿಸ್ ಕ್ಲಬ್, ಅವರಾದರೂ ಎಲೋಶಿಯಸ್ ಕಾಲೇಜು ರಸ್ತೆ ಎಂದು ಬರೆದಿದ್ದಾರಾ, ಬೇಕಾದರೆ ಸುಮಿತ್ ಅವರೇ ನಿಮ್ಮ ಕಾರ್ ನಿಲ್ಲಿಸಿ ಹತ್ತಿರ ಹೋಗಿ ನೋಡಿ, ಅವರು ಕೂಡ ಲೈಟ್ ಹೌಸ್ ಹಿಲ್ ರಸ್ತೆ ಎಂದೇ ಬರೆದಿದ್ದಾರೆ. ಈ ವಿವಾದ ಆದ ನಂತರ ನನ್ನ ಹಿತೈಷಿಗಳು ಆ ರಸ್ತೆಯ ಅಷ್ಟೂ ಕಟ್ಟಡಗಳ ಹೊರಗೆ ಹೋಗಿ ಅಲ್ಲಿ ಇದ್ದ ಬೋರ್ಡಗಳ ಪೋಟೋ ತೆಗೆದುಕೊಂಡು ಬಂದು ಇಟ್ಟುಕೊಂಡಿದ್ದಾರೆ.
ಇನ್ನು ಆ ರಸ್ತೆಯಲ್ಲಿ ಸ್ವಾತಂತ್ರ್ಯ ಸೇನಾನಿ ಕೆಕೆ ಶೆಟ್ಟಿಯವರ ಸ್ಮಾರಕ ಇದೆ. ಅದು ಕೂಡ ಲೈಟ್ ಹೌಸ್ ಹಿಲ್ ರಸ್ತೆ ಎಂದೇ ಕರೆಯಲ್ಪಡುತ್ತಿದೆ. ನಂತರ ನಗರ ಕೇಂದ್ರ ಗ್ರಂಥಾಲಯವಿದೆ. ಅದು ಎಲೋಶಿಯಸ್ ಕಾಲೇಜು ಹೊರಗೆ ಇದ್ದರೂ ಎಲೋಶಿಯಸ್ ಕಾಲೇಜು ರಸ್ತೆ ಎಂದು ಹಾಕಿಕೊಂಡಿಲ್ಲ. ಇನ್ನೂ ಅಲ್ಲಿರುವ ಫ್ಲಾಟ್ ಒಂದಕ್ಕೂ ಲೈಟ್ ಹೌಸ್ ಹಿಲ್ ರಸ್ತೆ ಎಂದೇ ತನ್ನ ಅಸ್ತಿತ್ವವನ್ನು ಗುರುತಿಸಿಕೊಂಡಿದೆ. ಇಷ್ಟು ಬೃಹತ್ ಕಟ್ಟಡಗಳೇ ಎಲೋಶಿಯಸ್ ಕಾಲೇಜು ರಸ್ತೆ ಎಂದೇ ಅದನ್ನು ಮಾನ್ಯ ಮಾಡದೇ ಇರುವಾಗ ನೀವು ಒಂದು ಮೂಲೆಯಲ್ಲಿರುವ ಬೋಡರ್ಿನ ಬಗ್ಗೆ
ಮಾತನಾಡುತ್ತೀರಿ.
ವ್ಯಕ್ತಿಗಿಂತ ಸಂಸ್ಥೆ ದೊಡ್ಡದು, ಅದಕ್ಕಾಗಿ ಲ್ಯಾಂಡ್ ಮಾರ್ಕ ಇರುವ ಸಂಸ್ಥೆಯ ಹೆಸರನ್ನೇ ಇಡಬೇಕು ಎಂದು ಬರೆದಿದ್ದಿರಿ. ನಿಜ ಹೇಳಬೇಕೆಂದರೆ ಎಲೋಶಿಯಸ್ ಕಾಲೇಜಿಗೆ ತನ್ನ ಅಸ್ತಿತ್ವವನ್ನು ರಸ್ತೆಯೊಂದಿಗಿನ ಹೆಸರಿನೊಂದಿಗೆ ಗುರುತಿಸಿಕೊಳ್ಳುವ ಅಗತ್ಯ ಇಲ್ಲ. ಅಲ್ಲದೆ ಮೂಲ್ಕಿ ಸುಂದರರಾಮ ಶೆಟ್ಟಿಯವರು ಮನುಕುಲಕ್ಕಾಗಿ ನಿಸ್ವಾರ್ಥ ಸೇವೆ ಸಲ್ಲಿಸಿದವರು. ಅವರು ತಮ್ಮ ಕೈಯಲ್ಲಿದ್ದ ಅವಕಾಶವನ್ನು ಪಾಪದವರ ಏಳಿಗೆಗೆ ಮುಡಿಪಿಟ್ಟರು. ಅದು ಕೂಡ ಯಾವುದೇ ಒಂದು ಜಾತಿ, ಧರ್ಮಕ್ಕಲ್ಲ. ಅವರು ಕಮೀಷನ್ ಅಥವಾ ಫೀಸ್ ತೆಗೆದುಕೊಂಡು ಯಾರಿಗೂ ಕೆಲಸ ಕೊಟ್ಟದ್ದಲ್ಲ. ಅವರ ಸಹಾಯದಿಂದ ಇವತ್ತಿಗೆ ಎಷ್ಟು ಕುಟುಂಬಗಳು ಉನ್ನತ ಸ್ಥಾನದಲ್ಲಿದ್ದಾವೆ ಎನ್ನುವುದು ನಿಮಗೆ ಗೊತ್ತಿದ್ದರೆ ಒಳ್ಳೆಯದು.
ಕೊನೆಯದಾಗಿ ಹೇಳಿ ಮುಗಿಸುತ್ತಿದ್ದೇನೆ. ನನಗೆ ಎಲೋಶಿಯಸ್ ಕಾಲೇಜಿನ ಮೇಲೆ ನಿಮಗೆಷ್ಟು ಗೌರವ ಇದೆಯೋ ಅಷ್ಟೇ ಗೌರವ ನನಗೂ ಇದೆ. ಒಂದು ವೇಳೆ ನಾನು ಕಲಿತ ಶಿಕ್ಷಣ ಸಂಸ್ಥೆಗೆ ಹೀಗೆ ಆದರೆ ಬಿಡುತ್ತಿದ್ದಿರಾ ಎಂದು ಕೇಳಿದ್ದಿರಿ. ನಾನು ಅಂತಹ ಸಂದರ್ಭದಲ್ಲಿ ಯಾರು ನಿಯಮ ಪ್ರಕಾರವಾಗಿ ನಡೆದಿದ್ದಾರೆ ಎಂದು ನೋಡಿ ಆ ಪ್ರಕಾರ ನಡೆಯುತ್ತೇನೆ. ಬಾವೋದ್ರೇಕಕ್ಕೆ ಒಳಗಾಗಿ ನಿಯಮಗಳ ಪರವಾಗಿರುವವರಿಗೆ ಬಹಿರಂಗ ಪತ್ರ ಬರೆಯುವುದಿಲ್ಲ. ನಿಮಗೆ ಉತ್ತರ ಕೊಡುವುದರಿಂದ ನಾನು ದೊಡ್ಡವನೂ ಆಗುವುದಿಲ್ಲ, ಸಣ್ಣವನೂ ಆಗುವುದಿಲ್ಲ. ಆದರೆ ಈ ಮೂಲಕವಾದರೂ ಎಲೋಶಿಯಸ್ ಕಾಲೇಜು ಇರುವುದು ಕಾಶೀಮಠದ ಜಾಗದಲ್ಲಿ ಎಂದು ನಾಲ್ಕು ಜನರಿಗೆ ಹೇಳುವಂತಹ ಅವಕಾಶ ಮತ್ತು ಅದಕ್ಕೆ ಸಂಬಂಧಪಟ್ಟ ದಾಖಲೆಗಳನ್ನು ಒಟ್ಟು ಮಾಡಿದ ಸುಯೋಗ ನನಗೆ ಸಿಕ್ಕಿತ್ತಲ್ಲ, ಅದು ನನ್ನ ಭಾಗ್ಯ
Leave A Reply