ಕಣ್ಣೂರಿನಲ್ಲಿ ಐಸಿಸ್ 20 ಜನರ ಸ್ಲೀಪರ್ ಸೆಲ್: ಗುಪ್ತಚರ ಮಾಹಿತಿ
ಕಣ್ಣೂರು: ವಿಶ್ವಕ್ಕೆ ಮಾರಕವಾಗಿರುವ ಭಯೋತ್ಪಾದಕ ಸಂಘಟನೆ ಐಸಿಸ್ಗೆ ಕೇರಳದ ಕಣ್ಣೂರಿನ 20 ಜನರು ಸ್ಥಳೀಯ ಯುವಕರನ್ನು ನೇಮಿಸುವ ಕಾರ್ಯ ನಿರ್ವಹಿಸುತ್ತಿದ್ದಾರೆ ಎಂಬ ಮಾಹಿತಿ ಕೇರಳ ಗುಪ್ತಚರ ಇಲಾಖೆಗೆ ಮಾಹಿತಿ ದೊರಕಿದೆ. ಈ ಮಾಹಿತಿ ಇಡೀ ಕೇರಳವನ್ನು ಬೆಚ್ಚಿ ಬೀಳಿಸಿದ್ದು, ಕಣ್ಣೂರಿನಲ್ಲಿ ಐಸಿಸ್ ಉಗ್ರ ಸ್ಲೀಪರ್ ಸೇಲ್ ಕಾರ್ಯ ನಿರ್ವಹಿಸುತ್ತಿದೆ ಎಂಬ ಅನುಮಾನಕ್ಕೆ ಮತ್ತಷ್ಟು ಪುಷ್ಟಿ ದೊರಕಿದೆ.
ಕೇರಳ ಗುಪ್ತಚರ ವಿಭಾಗ ಕಣ್ಣೂರು ಭಾಗದಲ್ಲಿ ಹೆಚ್ಚು ನಿಗಾವಹಿಸಿದ್ದು, ಕೇರಳದ ಯುವಕರನ್ನುಐಸಿಸ್ ಗೆ ಸೇರಿಸಲು 20 ಜನರ ತಂಡ ಗೌಪ್ಯವಾಗಿ ಕಾರ್ಯ ತಂತ್ರ ರೂಪಿಸಿರುವ ಬಗ್ಗೆ ಮಾಹಿತಿ ಕಲೆ ಹಾಕಿದೆ. 20 ಜನರ ಸಂಘಟನೆ, ಅವರ ಕಾರ್ಯತಂತ್ರ, ಚಟುವಟಿಕೆಗಳ ಕುರಿತು ತನಿಖೆ ನಡೆಸಲಾಗುತ್ತಿದೆ.
ಕಣ್ಣೂರು ನಿವಾಸಿ ಹಂಸಾ ಎಂಬಾತನನ್ನು ಈ ಹಿಂದೆ ಪೊಲೀಸರು ಬಂಧಿಸಿದ್ದರು. ಈತ ಕಾಸರಗೋಡು ಜಿಲ್ಲೆಯ ಪಡನ್ನ, ಕಣ್ಣೂರು ಜಿಲ್ಲೆಯ ಕನಕಮಲೆ ಹಾಗೂ ಬೆಹರೇನ್ ನ ಕೇರಳದ ಯುವಕ, ಯುವತಿಯರನ್ನು ಐಸಿಸ್ಗೆ ಸೇರ್ಪಡೆಗೊಳಿಸುವ ಜಾಲದ ಪ್ರಧಾನ ಸೂತ್ರಧಾರ ಎನ್ನಲಾಗಿದೆ. ಹಂಸಾ ನೀಡಿದ ಮಾಹಿತಿ ಆಧಾರದಲ್ಲಿ ಕಣ್ಣೂರು ಜಿಲ್ಲೆಯ ಇತರ ಐವರನ್ನು ಬಂಧಿಸಲಾಗಿತ್ತು. ಈ ಐವರು ತುರ್ಕಿಯ ಐಸಿಸ್ ಕೇಂದ್ರಕ್ಕೆ ಸಾಗುವ ದಾರಿ ಮಧ್ಯೆ ತುರ್ಕಿ ಪೊಲೀಸರು ಇವರನ್ನು ತಡೆದು ಭಾರತಕ್ಕೆ ಗಡೀಪಾರು ಮಾಡಿದ್ದರು. ನಂತರ ವಳಪಟ್ಟಣ ಪೊಲೀಸರು ಇವರನ್ನು ಬಂಧಿಸಿದ್ದರು.
ಕೇರಳದಲ್ಲಿ ವಿವಿಧ ಸಂಘಟನೆಗಳ ಹೆಸರಲ್ಲಿ ಐಸಿಸ್ ನಂಟು ಹೊಂದಿರುವ 20 ಮಂದಿ ಚಟುವಟಿಕೆ ನಡೆಸುತ್ತಿರುವ ಬಗ್ಗೆ ಹಂಸಾ ಪೊಲೀಸರ ಮುಂದೆ ಬಾಯಿಬಿಟ್ಟಿದ್ದ. ಎನ್ಐಎ ಪ್ರಕರಣವನ್ನು ನಾನಾ ಆಯಾಮಗಳಲ್ಲಿ ತನಿಖೆ ನಡೆಸುತ್ತಿದ್ದು, ತನಿಖೆ ವಿದೇಶದಲ್ಲೂ ನಡೆಯುವ ಸಾಧ್ಯತೆಗಳು ಇವೆ.
Leave A Reply