ರಾಹುಲ್ ಗಾಂಧಿಯವರೇ ಲೋಕಪಾಲ್ ವಿಷಯದಲ್ಲಿ ಅಣ್ಣಾ ಹಜಾರೆಯವರನ್ನು ಬಂಧಿಸಿದ್ದು ನಿಮ್ಮ ಸರ್ಕಾರವೇ ಅಲ್ಲವೇ?
ಇದ್ದಿಲು ಮಸಿಗೆ ಹೇಳಿತ್ತಂತೆ ನೀನು ಕಪ್ಪು ಎಂದು, ಹಾಗಾಯಿತು ಈ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ರಾಹುಲ್ ಗಾಂಧಿಯವರ ಕತೆ.
ಅಣ್ಣಾ ಹಜಾರೆಯವರು ಜನಲೋಕಪಾಲ ಮಸೂದೆ ಜಾರಿ ಕುರಿತು ಹೋರಾಟ ಮಾಡುವುದಾಗಿ ಘೋಷಿಸುತ್ತಲೇ, ನಂದೆಲ್ಲಿ ಇಡಲಿ ಎಂಬಂತೆ ಮಧ್ಯಪ್ರವೇಶಿಸಿದ ರಾಹುಲ್ ಗಾಂಧಿಯವರು ಪ್ರಧಾನಿ ನರೇಂದ್ರ ಮೋದಿಯವರೇ, ನಾಲ್ಕು ವರ್ಷವಾದರೂ ಜನಲೋಕಪಾಲ ಮಸೂದೆ ಏಕೆ ಜಾರಿಗೊಳಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ತಾವೇನು, ತಮ್ಮ ಸರ್ಕಾರ ಇದ್ದಾಗವೇನು ಜನಲೋಕಪಾಲ ಮಸೂದೆ ಜಾರಿಗೆ ತಾವೇ ಒತ್ತಾಯಿಸಿದವರು ಎಂಬಂತೆ ಮಾತನಾಡಿದ್ದಾರೆ. ಮೋದಿ ಅವರನ್ನು ತರಾಟೆಗೆ ತೆಗೆದುಕೊಂಡಿದ್ದಾರೆ.
ಇಂಥ ಇಬ್ಬಂದಿತನಕ್ಕೆ, ಉಳುಕು ಮುಚ್ಚಿಕೊಳ್ಳುವ ಪ್ರಯತ್ನಕ್ಕೆ, ಮುಖವಾಡಕ್ಕೆ ಪರದೆ ಎಳೆಯುವ ವಿಫಲ ಯತ್ನಕ್ಕೆ ಏನೆನ್ನಬೇಕು ನೀವೇ ಹೇಳಿ?
ಅದು 2011. ಇದೇ ಅಣ್ಣಾ ಹಜಾರೆಯವರು ಜನಲೋಕಪಾಲ ಮಸೂದೆ ಜಾರಿಗಾಗಿ ಒತ್ತಾಯಿಸಿ ಅಣ್ಣಾ ಹಜಾರೆಯವರು ಉಪವಾಸ ಕುಳಿತಿದ್ದರು. ಇಡೀ ದೇಶಕ್ಕೆ ದೇಶವೇ ಅಣ್ಣಾ ಹಜಾರೆಯವರ ಪರ ನಿಂತಿತ್ತು. ಎಲ್ಲೆಡೆ ಬೆಂಬಲ ವ್ಯಕ್ತವಾಗಿತ್ತು. ಈಗ ಸುಬಗರಂತೆ ಮಾತನಾಡುತ್ತಿರುವ ರಾಹುಲ್ ಗಾಂಧಿಯವರ ತಾಯಿ, ಸೋನಿಯಾ ಗಾಂಧಿಯೇ ದೇಶವನ್ನು ಪರೋಕ್ಷವಾಗಿ ಆಳುತ್ತಿದ್ದರು, ಇವರ ಕೈಗೊಂಬೆಯಂತೆಯೇ ಇದ್ದ ಮನಮೋಹನ್ ಸಿಂಗ್ ಪ್ರಧಾನಿಯಾಗಿದ್ದರು.
ಆದರೆ ಕಾಂಗ್ರೆಸ್ ಸರ್ಕಾರ ಮಾತ್ರ ಅಣ್ಣಾ ಹಜಾರೆಯವರನ್ನು ಬಂಧಿಸಿತ್ತು. ಮಸೂದೆಗಾಗಿ ಹೋರಾಟ ನಡೆಸಿದ ಯೋಗಿ ಬಾಬಾ ರಾಮದೇವ್ ಅವರನ್ನೂ ಇದೇ ಕಾಂಗ್ರೆಸ್ ಸರ್ಕಾರ ಬಂಧನಕ್ಕೆ ಆದೇಶಿಸಿತ್ತು. ಆಗೆಲ್ಲ ಬಾಯಿಯಲ್ಲಿ ಕಡುಬು ತುರುಕಿಕೊಂಡಂತಿದ್ದ ರಾಹುಲ್ ಗಾಂಧಿ, ಮಸೂದೆ ಜಾರಿ ಪರ ನಿಲ್ಲದ ರಾಹುಲ್ ಗಾಂಧಿ ಈಗ ನರೇಂದ್ರ ಮೋದಿ ಅವರನ್ನು ಟೀಕಿಸಿದ್ದಾರೆ.
ಖಂಡಿತವಾಗಿಯೂ ಮಸೂದೆ ಜಾರಿಗಾಗಿ ಒತ್ತಾಯಿಸುವ ಎಲ್ಲ ಹಕ್ಕೂ ಅಣ್ಣಾ ಹಜಾರೆಯವರಿಗೆ. ಅವರು ಉಪವಾಸ ಕೂರಲೂ ಹಕ್ಕು ಹೊಂದಿದ್ದಾರೆ. ಆದರೆ ತಮ್ಮ ಸರ್ಕಾರವಿದ್ದಾಗ ಸುಮ್ಮನಿದ್ದ ರಾಹುಲ್ ಗಾಂಧಿ ಈಗ ಪ್ರಧಾನಿ ಮೋದಿ ಅವರನ್ನು ಟೀಕಿಸುವ ಹಿಂದೆ ಯಾವ ನೈತಿಕತೆ ಇದೆ? ಇಬ್ಬಂದಿತನ ಎಂದರೆ ಇದೇ ಅಲ್ಲವೇ?
Leave A Reply