ಮುಸ್ಲಿಮರೇ ಯಾರನ್ನು ನಂಬುತ್ತೀರಿ!
ಮುಸಲ್ಮಾನರ ಒಲೈಕೆ ಬಿಡಿ ಎಂದು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಗುಜರಾತ್ ಚುನಾವಣೆಯ ಸಂದರ್ಭದಲ್ಲಿಯೇ ತಮ್ಮ ಪಕ್ಷದ ಆಂತರಿಕ ಸಭೆಗಳಲ್ಲಿ ಮುಖಂಡರಿಗೆ ಕರೆ ಕೊಟ್ಟಿದ್ದಾರೆ. ಅದನ್ನು ಅವರು ಮತ್ತೆ ಕರ್ನಾಟಕ ಚುನಾವಣೆಯಲ್ಲಿ ಹೇಳಲೇಬೇಕಾಗಿಲ್ಲ. ಅವರು ಒಂದು ಕಡೆ ಹೇಳಿದ್ದು ಅದು ರಾಷ್ಟ್ರಮಟ್ಟದಲ್ಲಿ ಅನ್ವಯವಾಗಬೇಕು. ಯಾಕೆಂದರೆ ಅವರು ಕಾಂಗ್ರೆಸ್ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ಮತ್ತು ಅವರ ಆ ರಣತಂತ್ರ ಗುಜರಾತಿನ ಮಟ್ಟಿಗೆ ಒಂದಿಷ್ಟು ವರ್ಕೌಟ್ ಆಗಿದೆ. ಅಲ್ಲಿ ರಾಹುಲ್ ಗಾಂಧಿ ಬಹಿರಂಗ ಸಭೆಗಳಷ್ಟೇ ದೇವಸ್ಥಾನಗಳನ್ನು ಕೂಡ ಸುತ್ತಿದ ಕಾರಣ ಫಲಿತಾಂಶದ ಬಳಿಕ ಧರಾಶಾಯಿಯಾಗಲಿದ್ದ ಪಕ್ಷಕ್ಕೆ ಒಂದಿಷ್ಟು ಉಸಿರಾಡುವ ಅವಕಾಶವನ್ನಾದರೂ ಕೊಟ್ಟರು. ಆದ್ದರಿಂದ ವಾಕರಿಕೆ ಬರುವಷ್ಟು ಅಲ್ಪಸಂಖ್ಯಾತರನ್ನು ಹೆಗಲ ಮೇಲೆ ಕೂರಿಸಿ ಮೆರವಣಿಗೆ ಮಾಡಬೇಡಿ, ನಮ್ಮ ಜಾತ್ಯಾತೀತ ಟ್ಯಾಗ್ ಎಂದರೆ ಮುಸ್ಲಿಮರ ಒಲೈಕೆ ಎಂದು ಆಗಿದೆ ಹೀಗಂತ ರಾಹುಲ್ ಗಾಂಧಿ ಹೇಳಿದ ಮೇಲೆ ಉಸ್ಸಪ್ಪ ಎಂದು ಇಲ್ಲಿನ ಕಾಂಗ್ರೆಸ್ ನಾಯಕರು ಮುಸ್ಲಿಮರನ್ನು ಎಲ್ಲಿ ಇಡಬೇಕೋ ಅಲ್ಲಿ ಇಡಲು ನಿರ್ಧರಿಸಿದ್ದಾರೆ.
ಇನ್ನು ಭಾರತೀಯ ಜನತಾ ಪಾರ್ಟಿಯ ಸಿದ್ಧಾಂತವಂತೂ ಹೇಳುವುದೇ ಬೇಡಾ. ಅವರು ಆಗಾಗ ಉತ್ತರಪ್ರದೇಶದ ಮುಖ್ಯಮಂತ್ರಿ ಆದಿತ್ಯನಾಥ್ ಅವರನ್ನು ಕರೆಸಿ ಭಾಷಣ ಮಾಡಿಸುತ್ತಾ ಜನ ಸಭೆಗಳಲ್ಲಿ ಜೈಶ್ರೀರಾಮ್ ಎಂದು ಘೋಷಣೆ ಕೂಗುವಾಗಲೇ ಒಂದು ಮಾತು ಸ್ಪಷ್ಟ. ಬಿಜೆಪಿ ಹಿಂದೂತ್ವದ ಏಜೆಂಡಾ ಬಿಟ್ಟಿಲ್ಲ. ಅವರು ಸಬ್ ಕಾ ವಿಕಾಸ್ ಎಂದು ನೂರು ಬಾರಿ ಹೇಳಿದರೂ ಎಷ್ಟು ಮುಸ್ಲಿಂ ವೋಟ್ ಅವರಿಗೆ ಬೀಳುತ್ತೆ ಎನ್ನುವುದು ಅವರಿಗೂ ಗೊತ್ತು. ಒಂದು ವೇಳೆ ಬಿಜೆಪಿ ತನ್ನ ಸಿದ್ಧಾಂತದಲ್ಲಿ ಮೃದುತ್ವ ಮಾಡಿದರೆ ಇರುವ ಹಿಂದೂ ವೋಟ್ ಅವರ ಕೈ ಬಿಡಬಹುದು ಎನ್ನುವ ಆತಂಕದಲ್ಲಿ ಅವರು ಮುಸ್ಲಿಂ ಒಲೈಕೆಗೆ ಮುಂದಾಗುವುದಿಲ್ಲ
ಕೊನೆಗೆ ಕರ್ನಾಟಕದಲ್ಲಿ ಉಳಿದಿರುವುದು ಜಾತ್ಯಾತೀತ ಜನತಾದಳ. ಈ ಪಕ್ಷ ಯಾವತ್ತೂ ಹಿಂದೂತ್ವದ ಜಪ ಮಾಡಿಲ್ಲ. ಹಳೆ ಮೈಸೂರು ಭಾಗದಲ್ಲಿರುವ ಗೌಡ, ಲಿಂಗಾಯಿತ ಮತಗಳನ್ನೇ ನಂಬಿಕೊಂಡು ರಾಜಕೀಯ ಮಾಡುವ ಜೆಡಿಎಸ್ ಗೆ ಈ ಬಾರಿ ಜ್ಞಾನೋದಯವಾಗಿದೆ. ಯಾಕೆಂದರೆ ಬುದ್ಧಿವಂತ ಒಕ್ಕಲಿಗ, ಲಿಂಗಾಯಿತ ಸಮಾಜದವರಿಗೆ ತಾವು ಜಾತಿ ಆಧಾರಿತವಾಗಿ ಯೋಚಿಸುವ ಬದಲು ಮೊದಲು ನಾವು ಹಿಂದೂಗಳು. ಅದನ್ನು ಮರೆಯಬಾರದು. ನಮ್ಮನ್ನು ಜಾತಿ ಆಧಾರದಲ್ಲಿ ಒಡೆಯುವವರಿಗೆ ಬೆಲೆ ಕೊಡಬಾರದು ಎಂದು ತೀರ್ಮಾನಿಸಿದ್ದಾರೆ. ಹಿಂದೂತ್ವದ ಕೂಗು ಕೇಳುವ ಪಕ್ಷಕ್ಕೆ ಮತ ಹಾಕುವ ಬದಲು ಯಾರ್ಯಾರಿಗೋ ಜೈ ಎಂದರೆ ಏನೂ ಪ್ರಯೋಜನವಿಲ್ಲ ಎಂದು ಅವರಿಗೆ ಗ್ಯಾರಂಟಿಯಾಗಿದೆ. ಅದಕ್ಕಾಗಿ ಜೆಡಿಎಸ್ ಕೂಡ ಈ ಬಾರಿ ತಮ್ಮ ಮುನ್ನಲೆಯಲ್ಲಿ ಮಹೇಂದ್ರ ಕುಮಾರ್ ಅವರಂತಹ ಒಂದು ಕಾಲದ ಪ್ರಬಲ ಹಿಂದೂ ನಾಯಕನನ್ನು ನಿಲ್ಲಿಸಿ ತಾವೂ ಹಿಂದೂಪರ ಎಂದು ಬಿಂಬಿಸುವ ಪ್ರಯತ್ನ ಮಾಡುತ್ತಿದೆ. ಮಹೇಂದ್ರ ಕುಮಾರ್ ಸಂಘ ಪರಿವಾರದ ಪ್ರಮುಖ ಜವಾಬ್ದಾರಿಯಲ್ಲಿದ್ದವರು. ಅವರು ಅಲ್ಲಿಂದ ಕೋಪಿಸಿ ಜೆಡಿಎಸ್ ಗೆ ಹೋದವರು. ಬಂದ ಪ್ರಾರಂಭದಲ್ಲಿ ಅವರನ್ನು ಒಳ್ಳೆಯ ರೀತಿಯಲ್ಲಿ ಪ್ರಾಜೆಕ್ಟ್ ಮಾಡಿದ ಜೆಡಿಎಸ್ ನಂತರ ಮೂಲೆಗೆ ತಳ್ಳಿತ್ತು. ಈಗ ಹಿಂದೂತ್ವದ ಅಲೆ ಏಳುತ್ತಿರುವ ನಿಟ್ಟಿನಲ್ಲಿ ಮತ್ತೆ ಮಹೇಂದ್ರ ಕುಮಾರ್ ಅವರನ್ನು ಮುಂದೆ ತಂದು ಹಿಂದೂ ಮತಗಳನ್ನು ಸೆಳೆಯುವ ಪ್ರಯತ್ನ ಮಾಡಲಾಗುತ್ತಿದೆ. ಆದರೆ ಅದು ಸಾಕಾಗುತ್ತಿಲ್ಲ. ಅದಕ್ಕಾಗಿ ಇತ್ತೀಚೆಗೆ ಚಕ್ರವರ್ತಿ ಸೂಲಿಬೆಲೆಯವರು ಸಂಸದ ಅನಂತ ಕುಮಾರ್ ಹೆಗ್ಡೆಯವರ ಹೇಳಿಕೆಯೊಂದಕ್ಕೆ ಪ್ರತಿಕ್ರಿಯಾತ್ಮಕವಾಗಿ ಬರೆದ ಅಂಕಣವನ್ನೇ ಹಿಡಿದಿಟ್ಟುಕೊಂಡು ಚಕ್ರವರ್ತಿ ಸೂಲಿಬೆಲೆಯವರು ಬಿಜೆಪಿಯ ಬಗ್ಗೆ ಭ್ರಮನಿರಸನಗೊಂಡಿದ್ದಾರೆ, ಅದಕ್ಕಾಗಿ ಜೆಡಿಎಸ್ ಗೆ ಬರುತ್ತಿದ್ದಾರೆ ಎಂದು ತಮ್ಮ ಆಪ್ತ ಮಾಧ್ಯಮಗಳ ಮೂಲಕ ಸುದ್ದಿ ಹಬ್ಬಿಸುತ್ತಿದ್ದಾರೆ. ಹೇಳಿ ಕೇಳಿ, ಸೂಲಿಬೆಲೆ ನರೇಂದ್ರ ಮೋದಿಯವರ ಗುಣಗಾನವನ್ನು ಮಾಡದ ದಿನವೇ ಇಲ್ಲ. ಮೋದಿಯವರೇ ಹೇಳುವ ಹಾಗೆ ನಮಗೆ ವಿಕಾಸ ಮೊದಲು ನಂತರ ಉಳಿದದ್ದು ಎನ್ನುವುದು ಸೂಲಿಬೆಲೆಯವರ ಅಭಿಪ್ರಾಯ. ವಿಕಾಸದ ವಿಷಯದಲ್ಲಿ ಮಾತನಾಡಬೇಕಾದ ನಮ್ಮ ಜನಪ್ರತಿನಿಧಿಗಳು ಹಿಂದೂತ್ವದ ವಿಷಯದ ಬಗ್ಗೆ ಅತೀ ಹೆಚ್ಚಾಗಿ ಮಾತನಾಡಿದಾಗ ಅದಕ್ಕೆ ತಮ್ಮ ಪ್ರತಿಕ್ರಿಯೆ ಚಕ್ರವರ್ತಿ ಸೂಲಿಬೆಲೆಯವರು ಕೊಟ್ಟರೆ ಅದು ಬಿಜೆಪಿಯ ವಿರುದ್ಧ ಹೇಗಾಗುತ್ತದೆ ಎಂದು ಗೊತ್ತಿಲ್ಲದ ಜೆಡಿಎಸ್ ಮುಖಂಡರು ಚಕ್ರವರ್ತಿ ನಮ್ಮ ಪಕ್ಷಕ್ಕೆ ಬಂದೇ ಬರುತ್ತಾರೆ, ಅವರನ್ನು ಉಡುಪಿಯಲ್ಲಿ ಚುನಾವಣೆಗೆ ನಿಲ್ಲಿಸುತ್ತೇವೆ, ಹಾಗೆ ಮಂಗಳೂರಿನಲ್ಲಿ ನಮೋ ಬ್ರಿಗೇಡ್ ಮಾಡಿದ ಕಾರ್ಯದಿಂದ ಸ್ವತ: ಮೋದಿಯವರಿಂದ ಬೆನ್ನು ತಟ್ಟಿಸಿಕೊಂಡ ನರೇಶ್ ಶೆಣೈಯವರನ್ನು ಚುನಾವಣೆಗೆ ನಿಲ್ಲಿಸಿ ಕರಾವಳಿಯಲ್ಲಿ ಹಿಂದೂತ್ವದ ಮುಖವಾಣೆಯಾಗಿ ಇಬ್ಬರನ್ನು ಬಳಸುತ್ತೇವೆ ಎಂದು ಹೇಳಿಕೊಳ್ಳುತ್ತಿದ್ದಾರೆ.
ಹೌದು, ಚಕ್ರವರ್ತಿ ಇತ್ತೀಚೆಗೆ ಜೆಡಿಎಸ್ ಹಮ್ಮಿಕೊಂಡಿದ್ದ ಹಿರಿಯ ನಾಗರಿಕರ ಸಮಾವೇಶದ ಪೋಸ್ಟರ್ ತಮ್ಮ ಸಾಮಾಜಿಕ ತಾಣದಲ್ಲಿ ಶೇರ್ ಮಾಡಿದ್ದರು. ಅಷ್ಟಕ್ಕೆ ಸೂಲಿಬೆಲೆ ಜೆಡಿಎಸ್ ಗೆ ಎಂದು ಸುದ್ದಿ ಹಬ್ಬಿಸಲಾಗಿದೆ. ಅದರ ಹಿಂದೆ ಬಿಎಸ್ ಯಡಿಯೂರಪ್ಪನವರ ಒಂದು ಪೋಸ್ಟ್ ಹಾಗೇ ಪ್ರತಾಪಸಿಂಹ ಅವರ ಒಂದು ಪೋಸ್ಟ್ ಶೇರ್ ಮಾಡಿಕೊಂಡಿದ್ದ ಸೂಲಿಬೆಲೆಯವರು ಒಳ್ಳೆಯ ಕೆಲಸ ಎಲ್ಲಿಂದ ಬಂದರೂ ಸ್ವಾಗತಿಸುತ್ತಾರೆ. ಅದನ್ನೇ ತಮ್ಮ ಪಕ್ಷಕ್ಕೆ ಬರುತ್ತಾರೆ ಎಂದು ನಂಬುವ ಮೂರ್ಖರು ಜೆಡಿಎಸ್ ನಲ್ಲಿ ಇದ್ದಾರಲ್ಲ ಎನ್ನುವುದೇ ಆಶ್ಚರ್ಯ. ಮುಖ್ಯವಾಗಿ ಚಕ್ರವರ್ತಿ ಸೂಲಿಬೆಲೆಯವರಿಗೆ ಜೆಡಿಎಸ್ ಗೆ ಹೋಗುವ ಅವಶ್ಯಕತೆ ಇಲ್ಲ.
ಆದರೆ ಹಿಂದೂತ್ವದ ಜಪ ಮಾಡುತ್ತಾ ಕರಾವಳಿಯಲ್ಲಿ ಕೆಲವು ಖಾತೆ ತೆರೆಯಲು ಹರಸಾಹಸ ಪಡುತ್ತಿರುವ ಜೆಡಿಎಸ್ ಗೆ ಚಕ್ರವರ್ತಿಯವರ ಅವಶ್ಯಕತೆ ಇದೆ. ಅತ್ತ ಕಾಂಗ್ರೆಸ್ ಈ ಬಾರಿ ಮೃದು ಹಿಂದೂತ್ವಕ್ಕೆ ವಾಲಿ ಆಗಿದೆ. ಅದನ್ನು ರಾಹುಲ್ ಗಾಂಧಿಯವರ ನಡೆಗಳೇ ಗ್ಯಾರಂಟಿ ಕೊಡುತ್ತವೆ. ಹಿಂದೂತ್ವ ಇಲ್ಲದಿದ್ದರೆ ಈ ಬಾರಿ ಮೂರು ಮುಕ್ಕಾಲು ಸೀಟು ಕರಾವಳಿ, ಮಲೆನಾಡಿನಲ್ಲಿ ಕಷ್ಟ ಎಂದು ಜೆಡಿಎಸ್ ಗೂ ಅರಿವಾಗಿದೆ. ಅವರು ಹಿಂದೂ ನಾಯಕರ ಮನೆಬಾಗಿಲಿಗೆ ಅಡ್ಡಾಡುತ್ತಿದ್ದಾರೆ. ಬಿಜೆಪಿಗಂತೂ ಹಿಂದೂತ್ವವೇ ಜೀವಾಳ. ಇದರ ನಡುವೆ ಅನಾಥ ಶಿಶುವಾಗಿರುವವರು ಯಾರೆಂದರೆ ಮುಸಲ್ಮಾನರು. ಅಭಿವೃದ್ಧಿಗಿಂತ ತಮ್ಮ ಧರ್ಮದ ಒಲೈಕೆ ಮಾಡುವವರಿಗೆ ಮತ ಹಾಕುವ ಮನಸ್ಥಿತಿಯವರಿಗೆ ಈ ಬಾರಿ ಗೊಂದಲ ಏರ್ಪಟ್ಟಿದೆ. ಅಂತಿಮವಾಗಿ ನಿಜಕ್ಕೂ ಅಲ್ಪಸಂಖ್ಯಾತರಿಗೆ ಮೊಣಕೈಗೆ ಬೆಣ್ಣೆ ಹಚ್ಚದೆ ಹೆಚ್ಚು ಅನುದಾನ ಕೊಟ್ಟ ಬಿಜೆಪಿಗಾದರೂ ಮತ ಹಾಕಿದರೆ ಅದಾದರೂ ಸಿಕ್ಕಿತು, ಕಪಟ ಹಿಂದೂತ್ವದ ಮುಖವಾಡ ತೊಟ್ಟು ಕುಣಿಯಲು ಸಿದ್ಧರಾಗಿರುವ ಪಕ್ಷಗಳು ತಮ್ಮ ಬೇಳೆ ಬೇಯಬೇಕಾದರೆ ಮುಸ್ಲಿಮರನ್ನು ಅರ್ಧ ನೀರಿಗೆ ಬಿಡಲು ತಯಾರಾಗಿವೆ, ಆಯ್ಕೆ ಅವರಿಗೆ ಬಿಟ್ಟಿದ್ದು!!
Leave A Reply