ಜಾರ್ಖಂಡ್ ನಲ್ಲಿ ಇಬ್ಬರು ಕೆಂಪು ಉಗ್ರರ ಹತ್ಯೆ
ದೆಹಲಿ: ಅರಣ್ಯದಲ್ಲಿ ಅವಿತು ಜನರ ನೆಮ್ಮದಿಗೆ ಭಂಗ ತರುತ್ತಿದ್ದ, ಮುಗ್ದರಿಗೆ ತೊಂದರೆ ನೀಡುವ ನಕ್ಸಲರ ವಿರುದ್ಧದ ಕೇಂದ್ರ ಸರ್ಕಾರದ ಕಠಿಣ ಕಾರ್ಯಚರಣೆ ಮುಂದುವರಿದಿದ್ದು, ಅದರ ಫಲವಾಗಿ ಆಡಳಿತಾಂಗಕ್ಕೆ ಸವಾಲಾಗಿದ್ದ ಇಬ್ಬರು ನಕ್ಸಲರನ್ನು ಜಾರ್ಖಂಡ್ನಲ್ಲಿ ಹತ್ಯೆ ಮಾಡಲಾಗಿದೆ.
ಜಾರ್ಖಂಡ್ ನ ಹಾಜೀರ್ ಭಾಗ್ ಪ್ರದೇಶದಲ್ಲಿ ಅರಣ್ಯದಲ್ಲಿ ಅವಿತಿದ್ದ ಇಬ್ಬರು ನಕ್ಸಲರನ್ನು ಪ್ಯಾರಾ ಮಿಲಿಟರಿ ಸೈನ್ಯ ಹೊಡೆದುರುಳಿಸಿದೆ. ಮಾವೋವಾದಿಗಳು ಮತ್ತು ಸಿಆರ್ ಫಿಎಫ್ ಸೈನಿಕರ ಮಧ್ಯೆ ನಡೆದ ಗುಂಡಿನ ಚಕಮಕಿಯಲ್ಲಿ ಇಬ್ಬರು ನಕ್ಸಲರನ್ನು ಹೊಡೆದುರುಳಿಸಲಾಗಿದೆ.
ಸೈನಿಕರು ದೊನೈ ಕುರ್ದ ಅರಣ್ಯ ಪ್ರದೇಶದಲ್ಲಿ ಪರಿಶೀಲನೆ ನಡೆಸುತ್ತಿರುವಾಗ ಮಾವೋವಾದಿಗಳೇ ಮೊದಲು ಗುಂಡಿನ ದಾಳಿ ಆರಂಭಿಸಿದ್ದರು. ಅದಕ್ಕೆ ಪ್ರತಿಕಾರವಾಗಿ ಸೈನಿಕರು ನಡೆಸಿದ ಗುಂಡಿನ ದಾಳಿಗೆ ಇಬ್ಬರು ನಕ್ಸಲರು ಹತ್ಯೆಯಾಗಿದ್ದಾರೆ ಎಂದು ಸಿಆರ್ ಫಿಎಫ್ ಡೆಪ್ಯುಟಿ ಇನ್ಸಪೆಕ್ಟರ್ ಜನರಲ್ ಎಂ ದಿನಕರನ್ ತಿಳಿಸಿದ್ದಾರೆ.
ಕೆಂಪು ಉಗ್ರರ ಎರಡು ದೇಹಗಳನ್ನು ವಶಕ್ಕೆ ಪಡೆದಿದ್ದು, ಒಂದು ಎಕೆ 47 ಗನ್, ಇನ್ಸಾಸ್ ರೈಫ್ಲ್ ಮತ್ತು 200 ಜೀವಂತ ಗುಂಡುಗಳನ್ನು ವಶಕ್ಕೆ ಪಡೆಯಲಾಗಿದೆ. ಕಾರ್ಯಾಚರಣೆ ಮುಂದುವರಿದಿದೆ. ಇದೇ ರೀತಿಯ ಕಾರ್ಯಾಚರಣೆ ಚತ್ತಿಗಡ್ ದ ಸುಕ್ಮಾ ಜಿಲ್ಲೆಯ ಪಿದ್ಮೇಲ್ ಅರಣ್ಯದ ಪೋಲಂಪಲ್ಲಿಯಲ್ಲೂ ನಡೆಸಲಾಗುತ್ತಿದೆ ಎಂದು ದಿನಕರನ್ ತಿಳಿಸಿದ್ದಾರೆ.
ಸುಕ್ಮಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಪೇದೆಯೊಬ್ಬರಿಗೆ ಗಾಯಗಳಾಗಿವೆ. ರಾಯಪುರ ಆಸ್ಪತ್ರೆಯಲ್ಲಿ ದಾಖಲಿಸಲಾಗಿದ್ದು, ಆರೋಗ್ಯ ಸ್ಥಿತಿ ಸ್ಥಿರವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Leave A Reply