ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಬೆಂಗಳೂರನ್ನು ಇನ್ನೂ ಎಷ್ಟು ಹಾಳು ಮಾಡಬೇಕೆಂದಿದ್ದೀರಿ?
ಚುನಾವಣೆಗೆ ಇನ್ನೇನು ದಿನಗಣನೆ ಆರಂಭವಾಗಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯನವರು ಸಾಧನಾ ಸಮಾವೇಶ ಏರ್ಪಡಿಸಿ ಸರ್ಕಾರದ ದುಡ್ಡಿನಲ್ಲಿ ಯಡಿಯೂರಪ್ಪನವರ ವಿರುದ್ಧ ಭರ್ಜರಿ ಟೀಕೆ ಮಾಡಿಬಂದಿದ್ದಾರೆ. ಇನ್ನೇನಿದ್ದರೂ ಜಾತಿಯ ಆಧಾರದ ಮೇಲೆ ಮತಗಳನ್ನು ಹೇಗೆ ಪಡೆಯಬೇಕು ಎಂಬ ಲೆಕ್ಕಾಚಾರದಲ್ಲಿದ್ದಾರೆ. ರಾಜ್ಯಾದ್ಯಂತ ಆಡಳಿತ ವಿರೋಧಿ ಅಲೆಯಿದ್ದರೂ ಹೇಗಾದರೂ ಮಾಡಿ ರಾಜ್ಯದಲ್ಲಿ ಮತ್ತೊಮ್ಮೆ ಶತಾಯ-ಗತಾಯ ಅಧಿಕಾರಕ್ಕೆ ಬರುವ ಹವಣಿಕೆಯಲ್ಲಿದ್ದಾರೆ…
ಇದೆಲ್ಲದರ ಮಧ್ಯೆ ಸಮಸ್ಯೆಗಳು ಬೆಂಗಳೂರನ್ನು ಕುಕ್ಕಿ ಕುಕ್ಕಿ ತಿನ್ನುತ್ತಿವೆ ಹಾಗೂ ಮುಖ್ಯಮಂತ್ರಿ ಸಿದ್ದರಾಮ್ಯನವರಿಗೆ ಇತ್ತ ಗಮನ ಹರಿಸಲು ಬಿಡಿ, ತಲೆ ಹಾಕಿ ಮಲಗಲು ಸಾಧ್ಯವಾಗುತ್ತಿಲ್ಲ. ಪಾಪ, ಚುನಾವಣೆ ಅಲ್ಲವೇ, ಪುರಸೊತ್ತು ಎಲ್ಲಿ ಸಿಗಬೇಕು?
ನೀವೇ ಯೋಚನೆ ಮಾಡಿ, ಮೂರ್ನಾಲ್ಕು ತಿಂಗಳ ಹಿಂದೆ ಬೆಂಗಳೂರಿನ ಗುಂಡಿಗಳಿಗೆ ನಾಲ್ಕೈದು ಜನ ಪ್ರಾಣ ಕಳೆದುಕೊಂಡರು. ಇದಕ್ಕೆ ಟೀಕೆ ವ್ಯಕ್ತವಾಗುತ್ತಲೇ, ಅಧಿಕಾರಿಗಳಿಗೆ ಸಿಎಂ ಗಡುವು ನೀಡಿದರು. ಆದರೂ ಏನು ಪ್ರಯೋಜನವಾಯಿತು? ಕೆಲವೆಡೆ ಮಾತ್ರ ರಸ್ತೆ ಸುಧಾರಣೆಯಾಯಿತು? ಆದರೆ ಉಳಿದೆಡೆ? ಇನ್ನೂ ಗುಂಡಿಗಳು ಹಾಗೆಯೇ ಇವೆ. ಬೆಂಗಳೂರಿನ ಯಾವ ಪ್ರದೇಶಕ್ಕೆ ಹೋದರೂ ಗುಂಡಿಗಳು ರಾಚುತ್ತಿವೆ.
ಇದರ ನಡುವೆಯೇ, ಬೆಂಗಳೂರಿನ ಮಹಾತ್ಮ ಗಾಂಧಿ ರಸ್ತೆ ಸೇರಿ ಪಾದಚಾರಿ ಮಾರ್ಗದಲ್ಲಿ ಆಫ್ಟಿಕಲ್ ಫೈಬರ್ ಕೇಬಲ್ ಗಳು ತಲೆಯೆತ್ತಿದ್ದು, ಹಲವು ಜನ ಎಡವಿಬಿದ್ದು ಗಾಯಮಾಡಿಕೊಂಡಿದ್ದಾರೆ. ಈ ಕೇಬಲ್ ಗಳಿಗೆ ಒಬ್ಬ ವ್ಯಕ್ತಿ ಮೃತಪಟ್ಟಿದ್ದಾರೆ. ಆದರೆ ಕೇಬಲ್ ತೆರವಿಗೆ ಮಾತ್ರ ಮುಖ್ಯಮಂತ್ರಿಯವರು ಮನಸ್ಸು ಮಾಡುತ್ತಿಲ್ಲ.
ಇದರ ಬೆನ್ನಲ್ಲೇ ಬೆಂಗಳೂರಿನಲ್ಲಿ ಮತ್ತೊಂದು ಸಮಸ್ಯೆ ಎದುರಾಗಿದೆ. ರಾಜ್ಯ ಸರ್ಕಾರವೇನೋ, ಕೆಸಿ ವ್ಯಾಲಿ ಯೋಜನೆ ಮೂಲಕ ಬೆಂಗಳೂರಿನ ಚರಂಡಿ ನೀರು ಶುದ್ಧೀಕರಿಸಿ ಕೋಲಾರ-ಚಿಕ್ಕಬಳ್ಳಾಪುರ ಜಿಲ್ಲೆಗಳ ಕೆರೆಗಳಿಗೆ ಹರಿಸುತ್ತೇನೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತದೆ. ಆದರೆ ಬೆಂಗಳೂರೇ ಗಬ್ಬೆದ್ದು ಹೋಗಿದ್ದರೂ, ಕಸದ ಸಮಸ್ಯೆ ನೀರಿನ ಮೂಲಗಳಿಗೇ ಕುತ್ತು ತಂದಿದ್ದರೂ ಮುಖ್ಯಮಂತ್ರಿಯವರು ಮಾತ್ರ ಚುನಾವಣೆ ತಂತ್ರ ರೂಪಿಸುವಲ್ಲಿ ಬ್ಯುಸಿಯಾಗಿದ್ದಾರೆ.
ಹೌದು, ಬೆಂಗಳೂರಿನ ಮಾವಳ್ಳಿಪುರ, ಉತ್ತರ ಬೆಂಗಳೂರು ಸೇರಿ ಹಲವೆಡೆ ದಶಲಕ್ಷ ಟನ್ ಗಟ್ಟಲೇ ಸಂಸ್ಕರಿಸದ ಕಸವನ್ನು ತಂದು ಸುರಿಯುತ್ತಿದ್ದು, ಪರಿಸರಕ್ಕೆ ಅಪಾರ ಹಾನಿಯಾಗುತ್ತಿದೆ. ಅಲ್ಲದೆ ಈ ಕಸ ಅರ್ಕಾವತಿ ನದಿ ಮತ್ತು ತಿಪ್ಪಗೊಂಡನಹಳ್ಳಿ ಜಲಾಶಯಕ್ಕೆ ನುಗ್ಗುತ್ತಿದ್ದು, ನೀರು ಕೊಳೆಯಾಗಿ ರೋಗ-ರುಚಿನ ಆವರಿಸುತ್ತಿವೆ ಎಂದು ಸಾರ್ವಜನಿಕರು ಆರೋಪಿಸಿದ್ದಾರೆ.
ಇದರಿಂದ ಕೋರ್ಮನಕುಂಟೆ, ಮಾವಳ್ಳಿಪುರ, ಶಿವಕೋಟೆ ಮತ್ತು ಅರ್ವಾರ ಕಂದಾಪುರ ಪ್ರದೇಶಗಳು ಕಸದಿಂದ ಹಲವು ಸಮಸ್ಯೆ ಎದುರಾಗಿದ್ದರೂ ರಾಜ್ಯ ಸರ್ಕಾರ ಇದುವರೆಗೂ ಕ್ರಮ ಕೈಗೊಂಡಿಲ್ಲ. ಕಸದ ಸಮಸ್ಯೆ ಜನರನ್ನು ಬೆಚ್ಚಿಬೀಳಿಸುತ್ತಿದ್ದರೂ, ಯಾವುದೇ ಕ್ರಮ ತೆಗೆದುಕೊಂಡಿಲ್ಲ.
ಕಳೆದ ನಾಲ್ಕೂವರೆ ವರ್ಷದಿಂದ ರಾಜ್ಯವನ್ನು ಆಳುತ್ತಿರುವ ಮುಖ್ಯಮಂತ್ರಿಯವರು ಬಾಯಿಬಿಟ್ಟರೆ ಅಭಿವೃದ್ಧಿ ಅಭಿವೃದ್ಧಿ ಎನ್ನುತ್ತಾರೆ. ಆದರೆ ಬೆಂಗಳೂರಿನಲ್ಲೇ ಹಲವು ಸಮಸ್ಯೆಗಳಿದ್ದರೂ ಮಾತ್ರ ಕ್ರಮ ಕೈಗೊಳ್ಳದೆ ಓಡಾಡಿಕೊಂಡಿದ್ದಾರೆ. ಸಾಲದ್ದಕ್ಕೆ ನಗರಾಭಿವೃದ್ಧಿ ಖಾತೆ ರಚಿಸಿ, ಅದಕ್ಕೊಬ್ಬ ಸಚಿವರನ್ನು ನೇಮಿಸಿದರೂ, ಬೆಂಗಳೂರು ಮಾತ್ರ ದಿನೇದಿನೆ ಹಾಳಾಗುತ್ತಿದೆ. ಅಷ್ಟಕ್ಕೂ ಬೆಂಗಳೂರನ್ನೇ ಚೆನ್ನಾಗಿ ಇಟ್ಟುಕೊಳ್ಳದವರು, ರಾಜ್ಯವನ್ನು ಹೇಗೆ ಅಭಿವೃದ್ಧಿಗೊಳಿಸಿಯಾರು?
Leave A Reply