ಜಸ್ಟಿಸ್ ಲೋಯಾ ಸಾವಿಗೆ ಹೃದಯಾಘಾತ ಕಾರಣ: ನಾಗಪುರ ಪೊಲೀಸ್
ನಾಗಪುರ: ಸೋಹ್ರಾಬುದ್ದೀನ್ ನಕಲಿ ಎನ್ ಕೌಂಟರ್ ಕುರಿತು ವಿಚಾರಣೆ ನಡೆಸುತ್ತಿದ್ದ ಜಸ್ಟಿಸ್ ಲೋಯಾ ಸಾವಿನಲ್ಲಿ ವಿನಾಕಾರಣ ಅನುಮಾನಗಳನ್ನು ಹುಟ್ಟು ಹಾಕಿ, ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರನ್ನು ಹಣಿಯಲು ಯತ್ನಿಸುತ್ತಿರುವ ಕಾಂಗ್ರೆಸ್ ಮತ್ತು ವಿರೋಧ ಪಕ್ಷಗಳಿಗೆ ಇತ್ತೀಚೆಗೆ ಲೋಯಾ ಪುತ್ರ ತಕ್ಕ ಉತ್ತರ ನೀಡಿದ್ದರು. ಇದೀಗ ಲೋಯಾ ಸಾವಿನ ಕುರಿತು ತನಿಖೆ ನಡೆಸಿರುವ ಪೊಲೀಸರು ಕೂಡ ಸ್ಪಷ್ಟನೆ ನೀಡಿದ್ದಾರೆ.
ಜಸ್ಟಿಸ್ ಲೋಯಾ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಅವರ ಸಾವಿನ ಹಿಂದೆ ಯಾವುದೆ ಸಂಚು ನಡೆದಿಲ್ಲ. ವೈದ್ಯಕೀಯ ವರದಿಯಲ್ಲಿ ಲೋಯಾ ಸಾವಿಗೆ ಹೃದಯಾಘಾತ ಕಾರಣ ಎಂಬುದು ತಿಳಿದು ಬಂದಿದೆ ಎಂದು ತನಿಖೆ ನಡೆಸಿರುವ ನಾಗಪುರ ಜಂಟಿ ಪೊಲೀಸ್ ಆಯುಕ್ತ ಶಿವಾಜಿ ಬೋಡ್ಕೆ ಸ್ಪಷ್ಟಪಡಿಸಿದ್ದಾರೆ.
ಲೋಯಾ ಸಾವಿನ ಕುರಿತು ಎದ್ದಿರುವ ಹಲವು ಪ್ರಶ್ನೆಗಳಿಗೆ, ಆರೋಪಗಳ ಕುರಿತು ಸ್ಪಷ್ಟನೆ ನೀಡಲು ಸುದ್ದಿಗೋಷ್ಠಿ ನಡೆಸಿದ ನಾಗಪುರ ಜಂಟಿ ಪೊಲೀಸ್ ಆಯುಕ್ತ ಶಿವಾಜಿ ಬೋಡ್ಕೆ, ವೈದ್ಯಕೀಯ ವರದಿ ಮತ್ತು ಫೋರೆನಿಕ್ಸ್ ವರದಿ ಪ್ರಕಾರ ಲೋಯಾ ಸಾವಿಗೆ ಹೃದಯಾಘಾತ ಕಾರಣ ಎಂಬುದು ಸಾಬೀತಾಗಿದೆ. ಅದರಲ್ಲಿ ಯಾವುದೇ ಅನುಮಾನವಿಲ್ಲ ಎಂದು ತಿಳಿಸಿದ್ದಾರೆ.
ವೈದ್ಯಕೀಯ ವರದಿಯಲ್ಲಿ ಲೋಯಾ ದೇಹದಲ್ಲಿ ಯಾವುದೇ ರೀತಿಯ ಗಾಯಗಳಾಗಲಿ, ಗುರುತುಗಳಾಗಲಿ, ಮತ್ತು ದೇಹದಲ್ಲಿ ವಿಷ ಪದಾರ್ಥಗಳಾಗಲಿ ಕಂಡು ಬಂದಿಲ್ಲ. ಕೊಲೆ ಆಗಿದೆ ಎಂಬುದಕ್ಕೆ ಯಾವುದೇ ಆಧಾರಗಳಿಲ್ಲ ಎಂದು ತಿಳಿಸಿದ್ದಾರೆ.
ನಾಗಪುರದಲ್ಲಿ 2014 ಡಿಸೆಂಬರ್ 1 ರಂದು ಜಸ್ಟಿಸ್ ಲೋಯಾ ಸಹೋದ್ಯೋಗಿಯ ಮಗಳ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದಾಗ ಹೃದಯಾಘಾತಕ್ಕೆ ಒಳಗಾಗಿ, ಮೃತಪಟ್ಟಿದ್ದರು. ಇನ್ನು ಇತ್ತೀಚೆಗೆ ಲೋಯಾ ಪುತ್ರ ಅನುಜ್ ಲೋಯಾ ಕೂಡ ಸ್ಪಷ್ಟನೆ ನೀಡಿ, ನಮ್ಮ ತಂದೆಯದ್ದೂ ಸಹಜ ಸಾವು. ನಮ್ಮ ಕುಟುಂಬಕ್ಕೆ ತೊಂದರೆ ಕೊಡಬೇಡಿ ಎಂದು ಬೇಡಿಕೊಂಡಿದ್ದರು. ಆದರೆ ಇಷ್ಟೇಲ್ಲಾ ಸಾಕ್ಷಿ ಸಮೇತ ಹೇಳಿಕೆ ಬಂದರೂ ವಿರೋಧ ಪಕ್ಷಗಳು ಲೋಯಾ ಸಾವಿನ ಕುರಿತು ಅನುಮಾನವ ವ್ಯಕ್ತಪಡಿಸುವುದನ್ನು ಮುಂದುವರಿಸಿವೆ.
Leave A Reply