ಪದ್ಮಾವತ್ ಸಿನಿಮಾ ನೋಡದಂತೆ ಅಸಾದುದ್ದೀನ್ ಓವೈಸಿ ಮುಸ್ಲಿಮರಿಗೆ ಕರೆ
ಹೈದರಾಬಾದ್: ದೇಶಾದ್ಯಂತ ಗಮನ ಸೆಳೆದಿರುವ, ವಿವಾದಗಳಿಂದಲೇ ಸುದ್ದಿಯಾಗಿರುವ ಪದ್ಮಾವತಿ ಚಿತ್ರಕ್ಕೆ ಕೇವಲ ರಜಪೂತರು ಮಾತ್ರವಲ್ಲ, ಮುಸ್ಲಿಂ ಮುಖಂಡರೂ ವಿರೋಧ ವ್ಯಕ್ತಪಡಿಸಿದ್ದಾರೆ.
ಪದ್ಮಾವತ್ ಸಿನಿಮಾ ಕಳಪೆಯಾಗಿದ್ದು, ಅದನ್ನು ಯಾವೊಬ್ಬ ಮುಸ್ಲಿಮರೂ ವೀಕ್ಷಿಸಬಾರದು ಎಂದು ಎಐಎಂಐಎಂ ಮುಖ್ಯಸ್ಥ, ಸಂಸದ ಅಸಾದುದ್ದೀನ್ ಓವೈಸಿ ಕರೆ ನೀಡಿದ್ದಾರೆ.
ವಾರಂಗಲ್ ನಲ್ಲಿ ಆಯೋಜಿಸಿದ್ದ ಸಾರ್ವಜನಿಕ ಸಭೆಯೊಂದರಲ್ಲಿ ಮಾತನಾಡಿದ ಓವೈಸಿ, ಯಾವುದೇ ಮುಸ್ಲಿಮರು ಈ ಸುಳ್ಳಿನಿಂದ ಕೂಡಿದ ಚಿತ್ರವನ್ನು ವೀಕ್ಷಿಸಬಾರದು. ಎರಡು ತಾಸು ಕುಳಿತು ನೋಡುವಷ್ಟು ಸಿನಿಮಾ ಚೆನ್ನಾಗಿಲ್ಲ ಹಾಗೂ ದೇವರು ಈ ಸಿನಿಮಾ ಸೃಷ್ಟಿಸಿಲ್ಲ. ಹಾಗಾಗಿ ಸಿನಿಮಾ ವೀಕ್ಷಿಸಬಾರದು ಎಂದಿದ್ದಾರೆ.
ಅಲ್ಲದೆ ಪದ್ಮಾವತ್ ಚಿತ್ರ ಬಿಡುಗಡೆಗೆ ವಿರೋಧಿಸಿ ದೇಶಾದ್ಯಂತ ಒಗ್ಗಟ್ಟಾಗಿ ಹೋರಾಡಿದ ರಜಪೂತರ ಕುರಿತು ಮೆಚ್ಚುಗೆಯ ಮಾತನಾಡಿರುವ ಓವೈಸಿ, ಸಿನಿಮಾ ವಿರೋಧಿಸಿ ರಜಪೂತರು ಹೇಗೆ ಒಗ್ಗಟ್ಟಾಗಿ ಹೋರಾಡಿದರು ಎಂಬುದನ್ನು ಮುಸ್ಲಿಮರು ನೋಡಿ ಕಲಿತುಕೊಳ್ಳಬೇಕು ಎಂದು ಸಹ ಓವೈಸಿ ತಿಳಿಸಿದ್ದಾರೆ.
ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಪದ್ಮಾವತಿ ಚಿತ್ರದಲ್ಲಿ ರಾಣಿ ಪದ್ಮಿನಿಯನ್ನು ಕೆಟ್ಟದಾಗಿ ಚಿತ್ರಿಸಲಾಗಿದೆ ಎಂಬ ಆರೋಪವಿದ್ದು, ದೇಶಾದ್ಯಂತ ರಜಪೂತರು ಸಿನಿಮಾ ಬಿಡುಗಡೆಗೆ ವಿರೋಧ ವ್ಯಕ್ತಪಡಿಸಿ ಪ್ರತಿಭಟನೆ ನಡೆಸಿದ್ದರು. ಬಳಿಕ ಪದ್ಮಾವತಿ ಇದ್ದ ಸಿನಿಮಾದ ಹೆಸರು ಪದ್ಮಾವತ್ ಆಯಿತು. ಈಗ ಸುಪ್ರೀಂ ಕೋರ್ಟ್ ಅನುಮತಿ ಮೇರೆಗೆ ಜನವರಿ 25ರಂದು ಸಿನಿಮಾ ಬಿಡುಗಡೆಯಾಗಲಿದೆ.
Leave A Reply