ಅಭಿವೃದ್ಧಿ ಮರೆತು, ಅರಾಜಕತೆ ಸೃಷ್ಟಿಸಿದ ಆಪ್ ಅಧೋಗತಿಗೆ ಇಳಿಯಿತೇ..?
ರಾಷ್ಟ್ರ ರಾಜಕಾರಣದಲ್ಲಿ ಹೊಸ ಆಶಾಕಿರಣವೊಂದು ಸೃಷ್ಟಿಯಾಯಿತು ಎಂದು ಅರವಿಂದ್ ಕೇಜ್ರಿವಾಲ್ ನೇತೃತ್ವದ ಆಪ್ ದೆಹಲಿಯಲ್ಲಿ ಅಧಿಕಾರಕ್ಕೆ ಬಂದಾಗ ದೇಶದ ಜನ ಅಂದುಕೊಂಡಿದ್ದರು. ದೇಶದಲ್ಲಿ ಹೊಸ, ಭ್ರಷ್ಟಾಚಾರ ಮುಕ್ತ ಆಡಳಿತ ನೀಡುವ, ಜನಸೇವಕರಾಗಿ ಇರುವ ಬುದ್ಧಿವಂತ ಚಿಂತನಾ ಶೀಲರ ಪಡೆ ಸೃಷ್ಟಿಯಾಯಿತು ಎಂದು ದೇಶ ಜನ ಅರವಿಂದ್ ಕೇಜ್ರಿವಾಲ್ ಮೇಲೆ ಅತಿಯಾದ ನಂಬಿಕೆ ಇಟ್ಟಿದ್ದರು. ಆದರೆ ಪೊರಕೆ ಹಿಡಿದುಕೊಂಡು ಬಂದ ಆಪ್ ಆಡಳಿತವಲ್ಲ, ರಾಜ್ಯವಲ್ಲ ತನ್ನ ಪಕ್ಷವನ್ನೇ ಸರಿಯಾದ ರೀತಿಯಲ್ಲಿ ಮುನ್ನಡೆಸಿಕೊಂಡು ಹೋಗಲಾರದೇ ಬೆಟ್ಟದಷ್ಟಿದ್ದ ಆಸೆಗಳನ್ನು ನಿರಾಸೆ ಮಾಡಿತು.
ಆಪ್ ಅಧಿಕಾರಕ್ಕೆ ಬಂದಾಗಿನಿಂದ ಒಂದಲ್ಲ ಒಂದು ಖ್ಯಾತೆ ತೆಗೆಯುತ್ತಾ, ವಿವಾದಗಳ ಮಧ್ಯೆ ದಿನದೂಡುತ್ತಾ, ಅಭಿವೃದ್ಧಿ, ಜನರ ಸಂಕಷ್ಟ ಎಂದರೆ ಏನು ಎಂಬುದನ್ನು ಮರೆತಂತೆ ವರ್ತಿಸಿತು. ದಿನಕ್ಕೊಬ್ಬ ನಾಯಕರು ಪಕ್ಷ ಬಿಟ್ಟು ತೆರಳುವುದು, ಕೇಜ್ರಿ ವಾಲ್ ವಿರುದ್ಧ ತಿರುಗಿ ಬಿಳುವುದು, ಕೇಜ್ರಿ ಹುಚ್ಚಾಟಕ್ಕೆ ಬೇಸತ್ತು ದೂರ ಉಳಿಯುತ್ತಿರುವುದು ಮುಂದುವರಿದಿದೆ. ಕೇಜ್ರಿ ಸಾಥಿಗಳಾಗಿದ್ದ ಪ್ರಶಾಂತ ಭೂಷಣ್, ಯೋಗೇಂದ್ರ ಯಾದವ್ ಇವರ ನಡವಳಿಗೆ, ದರ್ಪಕ್ಕೆ ಬೇಸತ್ತು ಬಿಟ್ಟು ಹೋದರು. ಇತ್ತೀಚೆಗೆ ಅತ್ಯಂತ ಆಪ್ತ ಕುಮಾರ್ ವಿಶ್ವಾಸ್ ಕೇಜ್ರಿ ವಿರುದ್ಧ ಮಾತನಾಡಿ ಆಪ್ ಪಕ್ಷವೇ ಸದೃಢವಿಲ್ಲ ಎಂಬ ಸಂದೇಶ ನೀಡಿದ್ದರು. ಕೇಜ್ರಿವಾಲ್ ದುರಾಡಳಿತ ವಿರೋಧಿಸಿ ಅವರ ಗುರು ಅಣ್ಣಾ ಹಜಾರೆ ಬೇಸರ ವ್ಯಕ್ತಪಡಿಸಿದ್ದರು.
ಇದೀಗ ಲಾಭದಾಯಕ ಹುದ್ದೇ ಅನುಭವಿಸುತ್ತಿರುವ ಆರೋಪದ ಮೇಲೆ 20 ಆಪ್ ಶಾಸಕರನ್ನು ಚುನಾವಣೆ ಆಯೋಗ ಅನರ್ಹಗೊಳಿಸಿದೆ. ಆದರೆ ಈಗಲೂ ಬುದ್ಧಿ ಕಲಿಯದ ಕೇಜ್ರಿವಾಲ್ ಮತ್ತು ಗ್ಯಾಂಗ್ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುತ್ತಾ… ಎಲ್ಲದಕ್ಕೂ ಕಾರಣ ಮೋದಿ ಎಂದು ಕನವರಿಸುತ್ತಿದ್ದಾರೆ. ದೇಶದ ಸಂವಿಧಾನದಲ್ಲಿದ್ದ ಪ್ರಕಾರ ಕ್ರಮ ಕೈಗೊಂಡರೂ ಎಲ್ಲದಕ್ಕೂ ಮೋದಿಯೇ ಕಾರಣ ಎನ್ನುವವರಿಗೆ ಜನರ ಅಭಿವೃದ್ಧಿ ಮುಖ್ಯವೋ, ಅಧಿಕಾರವೋ ಎಂಬುದು ಸಾಬೀತಾಗಿದೆ.
ಐಐಟಿ ಪದವಿದರ, ಭ್ರಷ್ಟಾಚಾರ ಕಪ್ಪು ಹಣದ ವಿರುದ್ಧ ಹೋರಾಟ ಮಾಡುವ ಮೂಲಕ ಅಧಿಕಾರಕ್ಕೆ ಬಂದ ಕೇಜ್ರಿವಾಲ್ ತನ್ನ ಮೂಲ ಉದ್ದೇಶವನ್ನೇ ಮರೆತು, ಕೇಂದ್ರ ಸರ್ಕಾರ, ಮೋದಿ ವಿರುದ್ಧ ಹೇಳಿಕೆಗಳನ್ನು ನೀಡುತ್ತಾ, ವಿವಾದಗಳನ್ನು ಸೃಷ್ಟಿಸುತ್ತಾ ದಿನದೂಡಿದರು. ಅಧಿಕಾರಕ್ಕೆ ಬಂದಾಗಿನಿಂದ ಒಂದು ಬಾರಿಯೂ ಅಭಿವೃದ್ಧಿ, ನೂತನ ಯೋಜನೆ ವಿಷಯದಲ್ಲಿ ಕೇಜ್ರಿವಾಲ್ ಸುದ್ದಿಯಾಗದಿರುವುದು ದೇಶದ ದುರಂತವೇ ಸರಿ.
ಪ್ರಧಾನಿ ನರೇಂದ್ರ ಮೋದಿ ಅವರನ್ನು ಗುರಿಯಾಗಿಟ್ಟುಕೊಂಡು, ಅಭಿವೃದ್ಧಿ ಚಿಂತನೆ, ರಚನಾತ್ಮಕ ಸಲಹೆ ನೀಡುವುದು ಬಿಟ್ಟು ಕೇವಲ ರಾಜಕೀಯ ಉದ್ದೇಶಕ್ಕಾಗಿ ನಿತ್ಯ ಹಲಬುವುದನ್ನೇ ಕಾಯಕ ಮಾಡಿಕೊಂಡರು. ನೋಟ್ಯಂತರ ವೇಳೆಯಲ್ಲಿ ಮಧ್ಯಪ್ರದೇಶದಲ್ಲಿ ಬ್ಯಾಂಕ್ ನಲ್ಲಿ ವ್ಯಕ್ತಿಯೊಬ್ಬ ನೇಣಿಗೆ ಶರಣಾಗಿದ್ದ ಫೋಟೋ ಹಾಕಿ, ಮೋದಿ ಅವರ ನೀತಿಯಿಂದ ಎಂದು ಬೊಗಳೆ ಬಿಟ್ಟು ಜನರಿಂದ ಛೀಮಾರಿ ಹಾಕಿಸಿಕೊಂಡಿದ್ದರು.
ನೋಟ್ಯಂತರವನ್ನು ಶತಾಯ ಗತಾಯ ವಿರೋಧಿಸುವ ಮೂಲಕ ತಮ್ಮ ಹಿಂದಿನ ಹೋರಾಟ ಕಪ್ಪು ಹಣದ ವಿರುದ್ಧವಲ್ಲ ಕೇವಲ ಅಧಿಕಾರಕ್ಕೆ ಎಂಬ ಸಂದೇಶವನ್ನು ಪರೋಕ್ಷವಾಗಿ ದೇಶದ ಜನರಿಗೆ ತಲುಪಿಸಿದ್ದರು. ಅಲ್ಲಿಗೆ ಜನರೆದುರು ಇವರ ಮೋದಿ ವಿರೋಧಿ ಮನಸ್ಥಿತಿ, ಅಧಿಕಾರದ ಹಪಾಹಪಿತನ ಬಯಲಾಗಿತ್ತು.
ಇದೀಗ 20 ಶಾಸಕರ ಅಧಿಕಾರಕ್ಕೆ ಕುತ್ತು ಬಂದಿದೆ. 20 ಶಾಸಕರು ಅನರ್ಹರಾದರೂ ಕೇಜ್ರಿವಾಲ್ ಸಿಎಂ ಸ್ಥಾನಕ್ಕೆ ಯಾವುದೇ ಕುತ್ತು ಬರುವುದಿಲ್ಲ. ಆದರೆ ಕೇಜ್ರಿವಾಲ್ ಮೇಲಿರುವ ವಿಶ್ವಾಸಾರ್ಹತೆ ಮಾತ್ರೆ ನುಚ್ಚುನುರಾಗಿದೆ. ಅದು ಮುಂದುವರಿಯುತ್ತಲೇ ಇರುತ್ತದೆ ಎಂಬುದಕ್ಕೆ ಹಲವು ಘಟನೆಗಳು ನಡೆದಿವೆ. ಇನ್ನಾದರೂ ಕೇಜ್ರಿ ಉತ್ತಮ ಕೆಲಸ ಮಾಡಿ, ಕೇಂದ್ರ ಸರ್ಕಾರದೊಂದಿಗೆ ಅಭಿವೃದ್ಧಿಗಾಗಿ ಉತ್ತಮ ಸಂಬಂಧವಿಟ್ಟುಕೊಂಡು, ರಾಜಕೀಯದಲ್ಲೂ ರಚನಾತ್ಮಕ ಟೀಕೆಗಳನ್ನು ಮಾಡಲಿ…
ಇಲ್ಲದಿದ್ದರೇ ಭಾರತ ದೇಶದ ಇತಿಹಾಸದಲ್ಲೇ ಕೇಜ್ರಿವಾಲ್ ಎಂಬ ಹೋರಾಟಗಾರರನ ದುರಂತ ಅಂತ್ಯವಾದೀತು. ಭವಿಷ್ಯದಲ್ಲಿ ಹೊಸ ಹೋರಾಟಗಾರರಿಗೆ, ಅಧಿಕಾರಕ್ಕೆ ಬರುವವರಿಗೆ ದೊಡ್ಡ ಹೊಡೆತ ನೀಡುವುದರಲ್ಲಿ ಅನುಮಾನವಿಲ್ಲ.
Leave A Reply