ಸುಪ್ರೀಂ ಆದೇಶವಿದ್ದರೂ ಜನರ ಪ್ರತಿಭಟನೆ, ನಾಲ್ಕು ರಾಜ್ಯಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಪದ್ಮಾವತ್ ಸ್ಥಗಿತ!

ದೆಹಲಿ: ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಬಹುವಿವಾದಿತ ಚಿತ್ರ ಪದ್ಮಾವತ್ ಬಿಡುಗಡೆಗೆ ಸುಪ್ರೀಂ ಕೋರ್ಟೇ ಹಸಿರು ನಿಶಾನೆ ತೋರಿದರೂ, ಜನರ ಆಕ್ರೋಶ ಎದುರು ನಾಲ್ಕು ರಾಜ್ಯಗಳಲ್ಲಿ ಸಿನಿಮಾಗೆ ಹಿನ್ನಡೆಯಾಗುವ ಎಲ್ಲ ಲಕ್ಷಣ ಗೋಚರಿಸಿವೆ.
ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ಜನವರಿ 25ರಂದು ದೇಶದ ಎಲ್ಲ ರಾಜ್ಯಗಳಲ್ಲಿ ಪದ್ಮಾವತ್ ಬಿಡುಗಡೆಯಾಗಬೇಕಿತ್ತು. ಆದರೆ ನಾಲ್ಕು ರಾಜ್ಯಗಳಲ್ಲಿ ಹೋರಾಟ ತೀರ್ವಸ್ವರೂಪ ಕಂಡಿರುವುದರಿಂದ, ಸಿನಿಮಾ ಬಿಡುಗಡೆಗೆ ರಜಪೂತರ ಎಲ್ಲಿಲ್ಲದ ಖಂಡನೆ ವ್ಯಕ್ತಪಡಿಸಿರುವುದರಿಂದ ಹೆದರಿದ ಭಾರತೀಯ ಮಲ್ಟಿಪ್ಲಕ್ಸ್ ಅಸೋಸಿಯೇಷನ್ ನಾಲ್ಕು ರಾಜ್ಯಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಘೋಷಿಸಿದೆ.
ಪ್ರತಿಭಟನೆ ತೀವ್ರವಾಗಿರುವ ಹಿನ್ನೆಲೆಯಲ್ಲಿ ರಾಜಸ್ಥಾನ, ಮಧ್ಯಪ್ರದೇಶ, ಗೋವಾ ಮತ್ತು ಗುಜರಾತ್ ರಾಜ್ಯಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಪದ್ಮಾವತ್ ಸಿನಿಮಾ ಪ್ರದರ್ಶನವಾಗುವುದಿಲ್ಲ. ದೇಶದ ಸುಮಾರು ಶೇ.75ರಷ್ಟು ಮಲ್ಟಿಪ್ಲೆಕ್ಸ್ ಗಳು ಈ ಅಸೋಸಿಯೇಷನ್ ಗೆ ಒಳಪಟ್ಟಿರುವುದರಿಂದ ನಾಲ್ಕು ರಾಜ್ಯಗಳ ಬಹುತೇಕ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಬಿಡುಗಡೆಯಾಗದಿರುವುದು ಖಾತ್ರಿಯಾಗಿದೆ.
ಸ್ಥಳೀಯ ಆಡಳಿತ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವ ದೃಷ್ಟಿಯಿಂದ ಮನವಿ ಮಾಡಿರುವ ಕಾರಣ ನಾಲ್ಕು ರಾಜ್ಯಗಳಲ್ಲಿ ಸಿನಿಮಾ ಸ್ಥಗಿತಗೊಳಿಸಲಾಗುವುದು ಎಂದು ಭಾರತೀಯ ಮಲ್ಟಿಪ್ಲಕ್ಸ್ ಅಸೋಸಿಯೇಷನ್ ಅಧ್ಯಕ್ಷ ದೀಪಕ್ ಅಶೇರ್ ಮಾಹಿತಿ ನೀಡಿದ್ದಾರೆ.
ದೀಪಿಕಾ ಪಡುಕೋಣೆ ಹಾಗೂ ರಣವೀರ್ ಕಪೂರ್ ಅಭಿನಯದ ಪದ್ಮಾವತ್ ಚಿತ್ರದಲ್ಲಿ ರಾಣಿ ಪದ್ಮಿನಿಯನ್ನು ಅಶ್ಲೀಲವಾಗಿ ಚಿತ್ರಿಸಲಾಗಿದೆ ಎಂದು ಆರೋಪಿಸಿ ದೇಶಾದ್ಯಂತ ಚಿತ್ರದ ವಿರುದ್ಧ ಪ್ರತಿಭಟನೆ ನಡೆಸಿದ್ದಾರೆ. ಈಗ ನಾಲ್ಕು ರಾಜ್ಯಗಳ ಮಲ್ಟಿಪ್ಲೆಕ್ಸ್ ಗಳಲ್ಲಿ ಸಿನಿಮಾ ಸ್ಥಗಿತಗೊಳಿಸುತ್ತಿದ್ದು, ಉಳಿದ ರಾಜ್ಯಗಳಲ್ಲಿ ಸಿನಿಮಾಗೆ ಹೇಗೆ ಪ್ರತಿಕ್ರಿಯೆ ಸಿಗುತ್ತದೆ ಎಂಬುದು ಕುತೂಹಲ ಕೆರಳಿಸಿದೆ.
ಆದಾಗ್ಯೂ ಸಂಜಯ್ ಲೀಲಾ ಬನ್ಸಾಲಿ ಹಿಂದೂಗಳ ವಿರುದ್ಧವೇ ಸಿನಿಮಾ ಮಾಡುತ್ತಾರೆ ಎಂಬ ಆರೋಪ ಹೊತ್ತಿದ್ದು, ಪದ್ಮಾವತ್ ವಿಷಯದಲ್ಲಿ ಹೈರಾಣಾಗಿದ್ದಂತೂ ಸುಳ್ಳಲ್ಲ.
Leave A Reply