ಯೋಗಿ ಆದಿತ್ಯನಾಥರ ವಿರುದ್ಧ ಅವಹೇಳನಕಾರಿ ಹೇಳಿಕೆ, ಎಸ್ಪಿ ಮುಖಂಡನ ವಿರುದ್ಧ ಎಫ್ಐಆರ್
ಲಖನೌ: ಉತ್ತರ ಪ್ರದೇಶದ ಮುಖ್ಯಮಂತ್ರಿಯಾಗಿ ಯೋಗಿ ಆದಿತ್ಯನಾಥರು ಅಧಿಕಾರ ಸ್ವೀಕರಿಸಿದ ಬಳಿಕ ಕೈಗೊಂಡ ಹಲವು ದಿಟ್ಟ ನಿರ್ಧಾರಗಳನ್ನು ಬಹುತೇಕ ಜನ ಮೆಚ್ಚಿದರೂ, ವಿರೋಧಿಸುವವರಿಗೇನೂ ಕಡಿಮೆ ಇಲ್ಲ. ಅದರಲ್ಲೂ ಯೋಗಿ ಆದಿತ್ಯನಾಥರನ್ನು ಹೇಗಾದರೂ ಮಾಡಿ ಟೀಕಿಸಲೇಬೇಕು ಎಂಬ ಮನಸ್ಥಿತಿಯವರೂ ಇಲ್ಲದಿಲ್ಲ.
ಈ ಮನಸ್ಥಿತಿಯ ಭಾಗವಾಗಿ ಯೋಗಿ ಆದಿತ್ಯನಾಥರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದ ಸಮಾಜವಾದಿ ಪಕ್ಷದ ಮುಖಂಡ ಕಮ್ಲಾ ಪ್ರಸಾದ್ ರಾವತ್ ವಿರುದ್ಧ ಪ್ರಕರಣ ದಾಖಲಾಗಿದೆ.
ಜೈಲುವಾಸಿಯಾಗಿರುವ ಸ್ವಯಂಘೋಷಿತ ದೇವಮಾನವನೊಬ್ಬನನ್ನು ಉಲ್ಲೇಖಿಸಿದ ರಾವತ್, ಸ್ವಯಂ ಘೋಷಿತ ದೇವಮಾನವನಿಗೂ ಹಾಗೂ ಯೋಗಿ ಆದಿತ್ಯನಾಥರಿಗೂ ಸಂಪರ್ಕವಿದೆ ಎಂದು ಜನವರಿ 20ರಂದು ಕಾರ್ಯಕ್ರಮವೊಂದರಲ್ಲಿ ಹೇಳಿಕೆ ನೀಡಿದ್ದರು.
ಈಗ ಪ್ರಸಾದ್ ಹೇಳಿಕೆ ಖಂಡಿಸಿ ಹಿಂದೂ ಯುವ ವಾಹಿನಿ ಜಿಲ್ಲಾ ಉಸ್ತುವಾರಿ ರವಿ ಸಿಂಗ್ ಎಂಬುವವರು ದರಿಯಾಬಾದ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.
ರಾವತ್ ಅವರ ಹೇಳಿಕೆಯಿಂದ ಯೋಗಿ ಆದಿತ್ಯನಾಥರ ವರ್ಚಸ್ಸು ಹಾಗೂ ಸಾರ್ವಜನಿಕರ ಭಾವನೆಗಳಿಗೆ ಧಕ್ಕೆಯಾಗಿರುವ ಕಾರಣದಿಂದ ರಾವತ್ ವಿರುದ್ಧ ಪ್ರಕರಣ ದಾಖಲಿಸಲಾಗಿದೆ ಎಂದು ರವಿ ಸಿಂಗ್ ತಿಳಿಸಿದ್ದಾರೆ.
Leave A Reply