ಕೇಂದ್ರ ಸರ್ಕಾರ ಸೂಟು ಬೂಟಿನ ಸರ್ಕಾರ ಎಂದವರು ಈಗ ಎಲ್ಲಿದ್ದಾರೆ?
ಪ್ರಧಾನಿ ನರೇಂದ್ರ ಮೋದಿ ಅವರು ವಿಶ್ವದ ನಾಯಕರ ಎದುರು ಭಾರತ ಆಧುನಿಕತೆ ತೋರಿಸಲು, ಶಕ್ತಿ ಪ್ರದರ್ಶಿಸಲು ಸೂಟು ತೊಟ್ಟು ಅಮೆರಿಕವೋ, ಇನ್ನಾವುದೋ ದೇಶಕ್ಕೆ ಹೊರಟು ನಿಂತಾಗ, ಅಥವಾ ಇನ್ನಾವುದೇ ಜಾಗತಿಕ ಸಮಾರಂಭದಲ್ಲಿ ಸೂಟು ತೊಟ್ಟು ಮಿಂಚಿದಾಗ ಸಹಿಸಿಕೊಳ್ಳದ ಕೆಲವು ಕುತ್ಸಿತ ಮನಸ್ಸುಗಳು ಇದು ಸೂಟು ಬೂಟಿನ ಸರ್ಕಾರ ಎಂದು ಟೀಕಿಸಿದ್ದವು. ರಾಹುಲ್ ಗಾಂಧಿಯವರಿಗಂತೂ ಬಾಯಿ ಬಿಟ್ಟರೆ ಸೂಟು… ಬೂಟು… ಅನ್ನೋರು!
ಆದರೆ ಈ ಬಾರಿಯ ಕೇಂದ್ರ ಸರ್ಕಾರ ಮಂಡಿಸಿರುವ ಬಜೆಟ್ ನೋಡಿ ಎಲ್ಲರೂ ಬಾಯಿಗೆ ಬೀಗ ಹಾಕಿಕೊಂಡಿದ್ದಾರೆ. ಟೀಕಿಸಬೇಕಲ್ಲ ಎಂದು ಬಜೆಟ್ ಸರಿ ಇಲ್ಲ ಎನ್ನುತ್ತಿದ್ದಾರೆ. ಆದರೆ ಒಬ್ಬನೇ ಒಬ್ಬ ಈ ಬಜೆಟ್ ರೈತರ ಪರ ಇಲ್ಲ ಎಂಬುದನ್ನು ತಿಳಿಸಲಿ ನೋಡೋಣ? ಒಬ್ಬರಿಗೂ ಬಾಯಿಯೇ ಬರುತ್ತಿಲ್ಲ.
ಸಾಮಾನ್ಯವಾಗಿ ಯಾವುದೇ ಬಜೆಟ್ ಮಂಡನೆಯಾದರೂ ಕೃಷಿಗೆ ಒಂದಷ್ಟು ಹಣ, ಗ್ರಾಮೀಣಾಭಿವೃದ್ಧಿಗೆ ಒಂದಷ್ಟು ಅನುದಾನ ಮೀಸಲಿಟ್ಟು ಕೈತೊಳೆದುಕೊಳ್ಳುತ್ತಾರೆ. ಆದರೆ ಈ ಬಾರಿ ಕೇಂದ್ರ ಸರ್ಕಾರ ಮಂಡಿಸಿದ ಬಜೆಟ್ ಬಹುತೇಕ ರೈತರು, ಗ್ರಾಮೀಣ ಜನ, ಮಧ್ಯಮ ವರ್ಗದವರ ಪರವಾಗಿದೆ ಎಂಬುದರಲ್ಲಿ ಸಂಶಯವೇ ಇಲ್ಲ.
ರಾಜ್ಯದಲ್ಲಿ ಕೇಂದ್ರ ಸರ್ಕಾರ ರೈತ ವಿರೋಧಿ, ಬಡವರ ವಿರೋಧಿ ಎಂದು ತಿರುಗಾಡುತ್ತಿರುವ ಸಿದ್ದರಾಮಯ್ಯನವರು 3500 ರೈತರು ರಾಜ್ಯದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೂ ಸುಮ್ಮನಿದ್ದಾರೆ.
ಆದರೆ ಕೇಂದ್ರ ಸರ್ಕಾರ ಮಾತ್ರ, ಮುಂಗಾರು ಉತ್ಪನ್ನದ ಕನಿಷ್ಠ ಬೆಂಬಲ ಬೆಲೆಯನ್ನು 1.5 ಪಟ್ಟು ಹೆಚ್ಚಿಸುವ ಮೂಲಕ ರೈತರಿಗೆ ಅನುಕೂಲ ಮಾಡಿಕೊಟ್ಟಿದ್ದಾರೆ. ಆ ಮೂಲಕ ಮಾರುಕಟ್ಟೆಗೆ ಫಸಲು ಒಯ್ದ ರೈತ ಬರುವಾಗ ಕೈತುಂಬ ಹಣ ತರುವಂತೆ ಮಾಡಿದ್ದಾರೆ. ಬೆಳೆದ ರೈತರಿಗೆ ಬೆಲೆಯೂ ಸಿಕ್ಕರೆ ಇನ್ನೇನು ಬೇಕು?
ಇನ್ನು ಜಗತ್ತಿನ ಅತಿದೊಡ್ಡ ಆರೋಗ್ಯ ಭದ್ರತಾ ಯೋಜನೆಯಾದ ಆಯುಷ್ಮಾನ ಭವ ಯೋಜನೆ ಜಾರಿಗೆ ಹಣ ಬಿಡುಗಡೆ ಮಾಡುವ ಮೂಲಕ ದೇಶದ 10 ಕೋಟಿ ಕುಟುಂಬಗಳು, 50 ಕೋಟಿ ಜನ ಆಸ್ಪತ್ರೆಗಳಲ್ಲಿ 5 ಲಕ್ಷ ರೂ. ಮೌಲ್ಯದವರೆಗೆ ಉಚಿತವಾಗಿ ಚಿಕಿತ್ಸೆ ಪಡೆಯಲು ಅವಕಾಶ ಮಾಡಿಕೊಟ್ಟಿದ್ದಾರೆ. ಗ್ರಾಮೀಣ ಭಾಗದ ಜನರಿಗೆ ಆರೋಗ್ಯ ಕೆಟ್ಟರೆ ಲಕ್ಷ ಲಕ್ಷ ಸಾಲವಾಗುತ್ತಿತ್ತು. ಆದರೆ ಈಗ ಕೇಂದ್ರ ಸರ್ಕಾರ ಅದನ್ನು ತಪ್ಪಿಸಿ ಆರೋಗ್ಯ ಭದ್ರತೆ ಒದಗಿಸಿದ್ದಾರೆ.
ಇನ್ನು ಗ್ರಾಮೀಣ ರೈತರು ಕೃಷಿಯಲ್ಲಿ ತಲ್ಲೀನರಾದರೆ, ಮಗ ಡಿಗ್ರಿ ಮುಗಿಸಿ ಮನೆಯಲ್ಲಿ ಕೂತಿರುತ್ತಾನೆ. ಆತ ನಗರಕ್ಕೆ ಹೋಗಿ ಸಂಬಳಕ್ಕೆ ಕೈಚಾಚದೆ ಸ್ವಂತ ಉದ್ಯಮ ಕೈಗೊಳ್ಳಲು ಸಹ ಕೇಂದ್ರ ಸರ್ಕಾರ ಮುಂದಾಗಿದೆ. ಸಣ್ಣ ಉದ್ಯಮ ಕೈಗೊಳ್ಳಲು ಇದ್ದ ಕಾರ್ಪೋರೇಟ್ ತೆರಿಗೆ ಕಡಿತಗೊಳಿಸುವ ಮೂಲಕ ಹಳ್ಳಿ ಹೈಕಳೂ ಉದ್ಯಮಿಗಳಾಗಲು ಪ್ರೋತ್ಸಾಹ ನೀಡಿದ್ದಾರೆ.
ಇವುಗಳ ಜತೆಗೆ ದೇಶದ ಲಕ್ಷ ಗ್ರಾಪಂಗಳಿಗೆ ವೈಫೈ ಸೌಲಭ್ಯ, 2 ಕೋಟಿ ಶೌಚಾಲಯ ನಿರ್ಮಾಣ ಗುರಿ, ಸರಕಾರಿ ನೌಕರರಿಗೆ ಶೇ.40ರಷ್ಟು ಸ್ಟಾಂಡರ್ಡ್ ಡಿಡಕ್ಷನ್, ಪೆಟ್ರೋಲ್, ಡೀಸೆಲ್ ಮೇಲಿನ ಸುಂಕ ಕಡಿತ ಸೇರಿ ನೂರಾರು ಯೋಜನೆಗಳು ಬಡವರು, ಮಧ್ಯಮ ವರ್ಗದ ಜನರಿಗೆ ಅನುಕೂಲವಾಗುವಂತೆ ಮಾಡಿದ್ದಾರೆ. ಈಗ ಹೇಳಿ ಕೇಂದ್ರ ಸರ್ಕಾರ ಸೂಟು ಬೂಟಿನ ಸರ್ಕಾರವಾ?
Leave A Reply