ಚಂಪಾ, ನರೇಂದ್ರ ಮೋದಿ ಕರ್ನಾಟಕಕಕ್ಕೆ ಬಂದರೆ ನಿಮ್ಮದ್ಯಾಕೀ ರಂಪ?

ಚಂದ್ರಶೇಖರ್ ಪಾಟೀಲ್ ಎನ್ನುವುದಕ್ಕಿಂತ ಅವರು ಚಂಪಾ ಎಂದೇ ಪರಿಚಿತ. ಮೊದಲು ಸಾಹಿತಿಯಾಗಿದ್ದ (ಈಗಲೂ ಎಲ್ಲ ಆಮಂತ್ರಣ ಪತ್ರಿಕೆಗಳಲ್ಲಿ ಹಿರಿಯ ಸಾಹಿತಿ ಎಂದೇ ಮುದ್ರಣವಾಗುತ್ತದೆ) ಅವರು ಈಗ ರಾಜಕಾರಣಿಗಳ ಹಾಗೆ ಹೇಳಿಕೆ ಶುರು ಮಾಡಿದ್ದಾರೆ.
ಹಾಗೆ ನೋಡಿದರೆ ಚಂಪಾ ಸಾಹಿತ್ಯ ಕ್ಷೇತ್ರದಿಂದ ಅಧಿಕೃತವಾಗಿ ನಿವೃತ್ತಿ ಪಡೆದಿಲ್ಲ, ಹಾಗಂತ ಅವರು ಸಾಹಿತ್ಯ ಕೃಷಿಯಲ್ಲೂ ತೊಡಗಿಲ್ಲ. ಅವರ ಇತ್ತೀಚಿನ ಕೃತಿ ಯಾವುದು? ಯಾವ ಪುಸ್ತಕ ಬರೆದರು? ಅವರ ಯಾವ ಪುಸ್ತಕ ಮಾಧ್ಯಮಗಳಲ್ಲಿ ಚರ್ಚೆಯಾಯಿತು? ಯಾವ ಲೇಖನ ಒರೆಗೆ ಹಚ್ಚಿತು? ಯಾವ ಹೋರಾಟದ ಮುಂದಾಳತ್ವ ಪಡೆದು ಕನ್ನಡ ನಾಡು, ನುಡಿ ಪರ ನಿಂತರು?
ಹೂಂ, ಹೂಂ. ಯಾವುದೂ ಇಲ್ಲ. ಪೆನ್ನು ಕೆಳಗಿಟ್ಟು ಚಂಪಾ ತುಂಬ ದಿನ ಆಯಿತೇನೋ ಎನ್ನುವಷ್ಟರ ಮಟ್ಟಿಗೆ ಅವರು ಸಾಹಿತ್ಯದಿಂದ ದೂರವೇ ಉಳಿದಿದ್ದಾರೆ. ಆದರೂ ಚಂಪಾ ಹಿರಿಯ ಸಾಹಿತಿ.
ಇಂತಿಪ್ಪ ಚಂಪಾ, ಈಗ ಮಾಧ್ಯಮಗಳಲ್ಲಿ ಸುದ್ದಿಯಾಗಿದ್ದಾರೆ. ಅದೂ ಪ್ರಧಾನಿ ನರೇಂದ್ರ ಮೋದಿ ಅವರ ವಿರುದ್ಧ ಮಾತನಾಡುವ ಮೂಲಕ ಸುದ್ದಿಯಾಗಿದ್ದಾರೆ. ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಎಂದು ಹೇಳುವ ಮೂಲಕ ಕಾಂಗ್ರೆಸ್ ವಕ್ತಾರರಂತೆ ಮಾತನಾಡಿ ಸುದ್ದಿಯಾಗಿದ್ದಾರೆ.
ಅಷ್ಟಕ್ಕೂ ಪ್ರಧಾನಿ ನರೇಂದ್ರ ಮೋದಿ ಅವರು ಕರ್ನಾಟಕಕ್ಕೆ ಬಂದರೆ ಚಂಪಾ ಅವರಿಗೇಕೆ ತ್ರಾಸ? ಮಹದಾಯಿ ಹೋರಾಟದಲ್ಲಿ ನರೇಂದ್ರ ಮೋದಿ ಅವರನ್ನು ಟೀಕಿಸಿದ ಚಂಪಾ ಸಿದ್ದರಾಮಯ್ಯನವರ ವಿರುದ್ಧ ಸೊಲ್ಲೆತ್ತಿದರಾ? ಇವರಿಗೇಕೆ ಈ ಇಬ್ಬಂದಿತನ?
ಖಂಡಿತವಾಗಿಯೂ ಕನ್ನಡ ನಾಡಿನ, ಅದರಲ್ಲೂ ಉತ್ತರ ಕರ್ನಾಟಕದ ಜನರಿಗೆ ಮಹದಾಯಿ ನೀರು ಸಿಗಬೇಕು ಎಂಬುದು ಎಲ್ಲರ ಅಭಿಪ್ರಾಯ ಹಾಗೂ ಒತ್ತಾಸೆ. ಈ ವಿಚಾರದಲ್ಲಿ ಮೋದಿ ಅವರೂ ಮಧ್ಯಸ್ಥಿಕೆ ವಹಿಸಬೇಕು ಎಂಬ ಆಗ್ರಹದಲ್ಲಿ ನ್ಯಾಯವಿದೆ.
ಆದರೆ ಚಂದ್ರಶೇಖರ ಪಾಟೀಲರೇ, ನರೇಂದ್ರ ಮೋದಿ ಅವರು ಕರ್ನಾಟಕಕ್ಕೇ ಬರುವ ಅವಶ್ಯಕತೆ ಇಲ್ಲ ಎಂದು ಹೇಳಲು ನಿಮಗೆ ಯಾವ ಹಕ್ಕಿದೆ ಸ್ವಾಮಿ? ಅಷ್ಟಕ್ಕೂ ಮೋದಿ ಅವರು ರಾಜ್ಯಕ್ಕೆ ಮಾಡಿದ ಅನ್ಯಾಯವೇನು? ರಾಜ್ಯ ಬಿಜೆಪಿ ನಾಯಕರು ಗೋವಾ ಸರ್ಕಾರದ ಜತೆ ಮಾತುಕತೆ ನಡೆಸುತ್ತಿಲ್ಲವೇ? ಬಿಜೆಪಿಯವರು ಮಹದಾಯಿ ನೀರು ಬೇಡ ಎಂದಿದ್ದಾರೆಯೇ? ಯಡಿಯೂರಪ್ಪನವರ ಮಾತುಕತೆ ಫಲವಾಗಿಯೇ ಇಂದು ಗೋವಾ ಸರ್ಕಾರ ಕರ್ನಾಟಕಕ್ಕೆ ಕುಡಿಯುಲು ನೀರು ಬಿಡುವುದಾಗಿ ಒಪ್ಪಿಲ್ಲವೇ? ಹಾಗಿದ್ದಮೇಲೆ ಮೋದಿ ಅವರ ವಿರುದ್ಧ ನಿಮ್ಮದೇನು ತಕರಾರು ಸ್ವಾಮಿ?
ಹಾಗೊಂದು ವೇಳೆ ಚಂಪಾ ಅವರಿಗೆ ನಿಜವಾಗಿಯೂ ಮಹದಾಯಿ ನೀರು ಉತ್ತರ ಕರ್ನಾಟಕದ ಜನರಿಗೆ ಬೇಕು ಎಂದಿದ್ದರೆ, ಆ ಕುರಿತು ನಿಜವಾಗಿಯೂ ಕಳಕಳಿ ಇಟ್ಟುಕೊಂಡು ಪ್ರತಿಭಟನೆ ಮಾಡುತ್ತಿದ್ದರೆ, ಚಂಪಾ ರಾಜ್ಯ ಸರ್ಕಾರದ ವಿರುದ್ಧವೂ ಮಾತನಾಡುತ್ತಿದ್ದರು. ಗೋವಾ ಕಾಂಗ್ರೆಸ್ಸಿಗೂ, ಕರ್ನಾಟಕ ಕಾಂಗ್ರೆಸ್ಸಿಗೂ ಸಂಬಂಧವೇ ಇಲ್ಲ ಎಂದ ಮುಖ್ಯಮಂತ್ರಿ ಸಿದ್ದರಾಮಯ್ಯನವರ ವಿರುದ್ಧ ಟೀಕೆ ಮಾಡುತ್ತಿದ್ದರು. ಆದರೆ ಅದಾವುದನ್ನೂ ಚಂಪಾ ಮಾಡಿಲ್ಲ.
ಮಹದಾಯಿ ವಿಚಾರದ ಕುರಿತು ಮೋದಿ ಒಂದೂ ಮಾತನಾಡಿಲ್ಲ ಎಂದು ಚಂಪಾ ಹೇಳಿದ್ದಾರಲ್ಲ, ಅದೇ ಈ ವಿಷಯದ ಕುರಿತು ಮಾತನಾಡದ ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ವಿರುದ್ಧ ಮಾತನಾಡುವುದಿಲ್ಲವೇಕೆ? ಮಹದಾಯಿ ಕುರಿತು ಮಾತನಾಡದ ಮೋದಿ ಕರ್ನಾಟಕಕ್ಕೆ ಬರುವ ಅವಶ್ಯಕತೆ ಇಲ್ಲ ಎನ್ನುವ ನೀವು, ಗೋವಾ ಕಾಂಗ್ರೆಸ್ಸಿಗೂ ನಮಗೂ ಸಂಬಂಧ ಇಲ್ಲ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯನವರನ್ನು ಕರ್ನಾಟಕದಿಂದ ಹೋಗಿ ಎಂದು ಏಕೆ ಒತ್ತಾಯಿಸಲಿಲ್ಲ? ಇದೆಂಥ ಇಬ್ಬಂದಿತನ ಚಂಪಾ ಅವರೇ ನಿಮ್ಮದು? ಮಾಧ್ಯಮಗಳಲ್ಲಿ ನಿಮ್ಮ ವೀಡಿಯೋ, ಚಿತ್ರ ಬರಲಿ ಎಂದು ಹೀಗೆ ಮಾಡುತ್ತಿದ್ದೀರಾ ಅಥವಾ ಮಾನಸಿಕವಾಗಿ ಕಾಂಗ್ರೆಸ್ ಸೇರಿಬಿಟ್ಟಿರಾ? ಹೇಗೆ? ಉತ್ತರಿಸಿ.
Leave A Reply