ಪಾಕಿಸ್ತಾನ ಒಂದು ಗುಂಡು ಹಾರಿಸಿದರೆ, ನೀವು ಲೆಕ್ಕವಿಲ್ಲದಷ್ಟು ಹಾರಿಸಿ ಎಂದು ಸೈನಿಕರಿಗೆ ರಾಜನಾಥ ಸಿಂಗ್ ಅಭಯ!
ಅಗರ್ತಲಾ: ಪಾಕಿಸ್ತಾನದ ಜತೆ ನಾವು ಎಂದಿಗೂ ಶಾಂತಿ ಕಾಪಾಡಲು, ಸೌಹಾರ್ದದಿಂದ ಇರಲು ಬಯಸುತ್ತೇವೆ. ಆದರೆ ಪಾಕಿಸ್ತಾನ ಗಡಿಯಲ್ಲಿ ಒಂದು ಗುಂಡು ಹಾರಿಸಿದರೆ, ನೀವು ಲೆಕ್ಕವಿಲ್ಲದಷ್ಟು ಹಾರಿಸಿ ಎಂದು ಕೇಂದ್ರ ಗೃಹ ಸಚಿವ ರಾಜನಾಥ ಸಿಂಗ್ ಭಾರತೀಯ ಸೈನಿಕರಿಗೆ ಅಭಯ ನೀಡಿದ್ದಾರೆ.
ಪಾಕಿಸ್ತಾನದ ಕ್ರಿಯೆಗೆ ಪ್ರತಿಕ್ರಿಯೆ ನೀಡಲು ಯಾವುದೇ ಅಳುಕು ಬೇಡ. ಗಡಿಯಲ್ಲಿ ಪಾಕಿಸ್ತಾನದ ಒಂದೇ ಗುಂಡು ಹಾರಿದರೂ, ನಮ್ಮ ಸೈನಿಕರು ಮನಬಂದಂತೆ ಗುಂಡು ಹಾರಿಸಲಿ. ಇದು ನಾನು ಇಲ್ಲೇ ನಿಂತು ನೀಡುತ್ತಿರುವ ಆದೇಶ ಎಂದು ಕಾರ್ಯಕ್ರಮವೊಂದರಲ್ಲಿ ರಾಜನಾಥ ಸಿಂಗ್ ಹೇಳಿದ್ದಾರೆ.
ಪಾಕಿಸ್ತಾನ ನಮ್ಮ ನೆರೆ ರಾಷ್ಟ್ರವಾಗಿದ್ದು, ನಾವು ಎಂದಿಗೂ ಅದರ ಜತೆ ಸ್ನೇಹ, ಸೌಹಾರ್ದದೊಂದಿಗೆ ಇರುತ್ತೇವೆಯೇ ಹೊರತು ಅದರ ಮೇಲೆ ದಾಳಿ ಮಾಡುವುದಿಲ್ಲ. ಆದರೆ ಪಾಕಿಸ್ತಾನ ಇತ್ತೀಚೆಗೆ ಭಾರತೀಯ ಸೈನಿಕರು ಹಾಗೂ ಭಾರತದ ಗಡಿ ದಾಟಿ ದಾಳಿ ಮಾಡುತ್ತಿದೆ ಎಂದು ತಿಳಿಸಿದ್ದಾರೆ.
ನಾವು ಶಾಂತಿಯಿಂದ ಇದ್ದರೂ ಪಾಕಿಸ್ತಾನಿ ಸೈನಿಕರು ಹಾಗೂ ಉಗ್ರರು ಭಾರತದ ಮೇಲೆ ದಾಳಿ ಮಾಡಿದರೆ ನಾವು ಪ್ರತಿದಾಳಿ ಮಾಡದೆ ಸುಮ್ಮನಿರುವುದಿಲ್ಲ. ಪ್ರತಿದಾಳಿಗೆ ಬೇಕಾದ ಎಲ್ಲ ಸಿದ್ಧತೆ ಹಾಗೂ ಅನುಮತಿ ಸೈನಿಕರಿಗೆ ನೀಡಲಾಗಿದೆ ಎಂದು ಹೇಳಿದ್ದಾರೆ.
Leave A Reply