ಮುಂದುವರಿದ ತುಷ್ಟೀಕರಣ ರಾಜಕೀಯ, ಧರ್ಮ ಒಡೆದ ಸಿದ್ದರಾಮಯ್ಯರಿಂದ ಮಠಗಳ ನಿಯಂತ್ರಣಕ್ಕೆ ಷಡ್ಯಂತ್ರ
ಬೆಂಗಳೂರು: ಹಿಂದೂ ಧರ್ಮದಲ್ಲೇ ಇರುವ ವೀರಶೈವ ಸಮುದಾಯವನ್ನು ಒಡೆದು ಆಳುವ ಮೂಲಕ ತಮ್ಮ ಹೇಸಿಕೆ ರಾಜಕೀಯ ಮಾಡಿದ ಸಿದ್ದರಾಮಯ್ಯ ಇದೀಗ ರಾಜ್ಯದಲ್ಲಿ ಶೈಕ್ಷಣಿಕ, ಸಾಮಾಜಿಕ ಸೇವೆಗಳನ್ನು ಮಾಡುತ್ತಿರುವ ಮಠಗಳ ಮೇಲೆ ಕಣ್ಣಿಟ್ಟಿದ್ದು, ಮಠಗಳ ನಿಯಂತ್ರಣಕ್ಕೆ ಷಡ್ಯಂತ್ರ ರೂಪಿಸಿದ್ದಾರೆ.
ಕರ್ನಾಟಕ ಧಾರ್ಮಿಕ ದತ್ತಿ ಇಲಾಖೆ ವ್ಯಾಪ್ತಿಗೆ ಹಿಂದೂ ಸಮುದಾಯದ ಮಠ, ಮಾನ್ಯಗಳನ್ನು ಸೇರಿಸಿಕೊಳ್ಳಬೇಕು ಎಂಬ ಪ್ರಸ್ತಾವನೆಯನ್ನು ಸಲ್ಲಿಸಿದ್ದು, ಈ ಕುರಿತು ಮಠಾಧಿಪತಿಗಳು, ಧರ್ಮಗುರುಗಳು, ಸಾರ್ವನಿಕರು ಸಲಹೆ ಸೂಚನೆ ನೀಡಬೇಕು ಎಂದು ಹೇಳುವ ಮೂಲಕ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ತಮ್ಮ ಮೂಗಿನ ನೇರಕ್ಕೆ ಇಟ್ಟುಕೊಳ್ಳುವ ಹುನ್ನಾರವನ್ನು ರಾಜ್ಯ ಸರ್ಕಾರ ಹೂಡಿರುವುದು ಸ್ಪಷ್ಟವಾಗಿದೆ.
ಧಾರ್ಮಿಕ ದತ್ತಿ ಕಾಯ್ದೆ ವ್ಯಾಪ್ತಿಗೆ ಮಠಗಳು, ಮಠಗಳಿಗೆ ಸೇರಿದ ದೇವಸ್ಥಾನಗಳು, ಧಾರ್ಮಿಕ ಸಂಸ್ಥೆಗಳನ್ನು ಒಳಪಡಿಸಬೇಕೇ ಬೇಡವೇ ಎಂದು ಪ್ರಶ್ನೆಗಳನ್ನು ಕೇಳಿದ್ದಾರೆ.
ಮುಸ್ಲಿಂ, ಕ್ರಿಶ್ಚಿಯನ್ ಬಿಟ್ಟು ಉಳಿದೆಲ್ಲ ಧರ್ಮಗಳ ಪ್ರಸ್ತಾಪ
ಸರ್ಕಾರದ ಧಾರ್ಮಿಕ ದತ್ತಿ ಇಲಾಖೆ ನೂತನ ಕಾಯಿದೆ ಕರಡು ಸಮಿತಿ ಕೇಂದ್ರ ಸ್ಥಾನಿಕ ಸಹಾಯಕ ಜಯಪ್ರಕಾಶ್ ಹೆಸರಿನಲ್ಲಿ ಹೊರಡಿಸಿರುವ ಸಾರ್ವಜನಿಕ ಪ್ರಕಟಣೆಯಲ್ಲಿ ಹಿಂದೂ ಮಠಗಳು, ಮಠಗಳಿಗೆ ಸೇರಿದ ದೇವಸ್ಥಾನಗಳು ಮತ್ತು ಜೈನ್, ಬೌದ್ಧ, ಸಿಖ್ ಜನಾಂಗಗಳಿಗೆ ಒಳಪಟ್ಟ ಧಾರ್ಮಿಕ ಸಂಸ್ಥೆಗಳನ್ನು ಒಳಪಡಿಸಬೇಕೆ ಇಲ್ಲವೇ ಎಂದು ಪ್ರಶ್ನೆ ಕೇಳಲಾಗಿದೆ. ಆದರೆ ಇಡೀ ಪ್ರಕಟಣೆಯಲ್ಲಿ ಒಂದು ಕಡೆಯೂ ಮುಸ್ಲಿಂ, ಕ್ರಿಶ್ಚಿಯನ್ ಧರ್ಮಗಳನ್ನು ಉಲ್ಲೇಖಿಸದೇ ತಮ್ಮ, ತುಷ್ಠೀಕರಣ ರಾಜಕೀಯ ಮುಂದುವರಿಸಿದ್ದಾರೆ.
ಸದಾ ಹಿಂದೂ ವಿರೋಧಿ ನೀತಿ
ನಾನು ಹಿಂದೂ ಎನ್ನುತ್ತಲೇ ಸದಾ ಹಿಂದೂ ವಿರೋಧಿ ನೀತಿ ಅನುಸರಿಸುತ್ತಾ, ಹಿಂದೂಗಳ ಮಾರಣ ಹೋಮಕ್ಕೆ ಕಾರಣವಾಗಿರುವುದು ಸಿಎಂ ಸಿದ್ದರಾಮಯ್ಯ ನೇತೃತ್ವದ ಸರ್ಕಾರ. ರಾಜ್ಯದಲ್ಲಿ 24 ಹಿಂದೂ ಕಾರ್ಯಕರ್ತರ ಹತ್ಯೆಯಾದರೂ ಸ್ಪಂದಿಸದೇ, ಇದೀಗ ಹಿಂದೂಗಳ ಶ್ರದ್ಧಾಕೇಂದ್ರಗಳನ್ನು ನಿಯಂತ್ರಿಸುವ ಹುನ್ನಾರ ಮಾಡಿದ್ದಾರೆ.
Leave A Reply