ಮುಖ್ಯಮಂತ್ರಿ ಸಿದ್ದರಾಮಯ್ಯನವರೇ, ಈ ಅಧಿಕಾರಿಗಳ ಗೋಳು ನಿಮಗೆ ಕೇಳುವುದಿಲ್ಲವೇ?
ಬೆಂಗಳೂರು: ಹಾಗೆ ನೋಡಿದರೆ ರಾಜ್ಯ ಸರ್ಕಾರವೇ ಅಧಿಕಾರಿಗಳ ವಿರುದ್ಧ ಸಮರ ಸಾರಿದಂತೆ ವರ್ತಿಸುತ್ತಿದೆ. ಐಎಎಸ್, ಐಪಿಎಸ್ ಅಧಿಕಾರಿಗಳನ್ನು ಮನಬಂದಂತೆ ವರ್ಗಾಯಿಸುವ ಮೂಲಕ ರಾಜ್ಯಾದ್ಯಂತ ನಕಾರಾತ್ಮಕವಾಗಿ ಸುದ್ದಿಯಲ್ಲಿದೆ. ಅದರಲ್ಲೂ ಹಾಸನ ಜಿಲ್ಲಾಧಿಕಾರಿ ರೋಹಿಣಿ ಸಿಂಧೂರಿಯವರಂತೂ ಸರ್ಕಾರದ ವಿರುದ್ಧವೇ ಹೋರಾಟಕ್ಕೆ ಮುಂದಾಗಿದ್ದಾರೆ.
ಇದರ ಬೆನ್ನಲ್ಲೇ, ಪೊಲೀಸ್ ಇಲಾಖೆಯಲ್ಲಿರುವ ವೈಫಲ್ಯ, ಹಿರಿಯ ಅಧಿಕಾರಿಗಳ ದರ್ಪದ ಕುರಿತು ಮಂಡ್ಯದಲ್ಲಿರುವ ರಾಜ್ಯ ಪೊಲೀಸ್ ಸಶಸ್ತ್ರ ಮೀಸಲು ಪಡೆ ಪೊಲೀಸರು ಮೇಲಧಿಕಾರಿಗಳ ಕಿರುಕುಳ ತಾಳಲಾರದ ಸರ್ಕಾರದ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಅವರಿಗೆ ಮನವಿ ಮಾಡಿದ್ದಾರೆ.
ಈ ಕುರಿತು ಕರ್ನಾಟಕ ರಾಜ್ಯ ಸಶಸ್ತ್ರ ಮೀಸಲು ಪಡೆಗಳ ಪೊಲೀಸ್ ಸಂಘ, ಐದು ಪುಟಗಳ ದೀರ್ಘ ಪತ್ರವನ್ನು ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಪತ್ರ ಬರೆದಿದ್ದು, “ಬ್ರಿಟಿಷರ ಕಾಲದ ಕಾನೂನಿನ ನಿರ್ಬಂದದಿಂದಾಗಿ ನೋಂದಣಿಯಾಗಿಲ್ಲದ ಹಾಗೂ ಮಾನ್ಯತೆ ಪಡೆಯದ ಸಂಘ ನಮ್ಮದಾಗಿದ್ದರೂ, ರಾಜ್ಯದಲ್ಲಿ ನಡೆಯುತ್ತಿರುವ ಐಪಿಎಸ್ ಅಧಿಕಾರಿಗಳ ಕಾರ್ಯವೈಖರಿ, ಪ್ರಾಮಾಣಿಕತೆಯ ಕೊರತೆ ಇರುವುದಕ್ಕೆ ಸಿಬ್ಬಂದಿ ಪರವಾಗಿ ವಿಷಾದಿಸುತ್ತೇನೆ” ಎಂದು ಸಂಘದ ಅಧ್ಯಕ್ಷ ಪತ್ರ ಬರೆದಿದ್ದಾರೆ.
ಅಷ್ಟೇ ಅಲ್ಲ, ಪೊಲೀಸ್ ಇಲಾಖೆಯಲ್ಲಿ ಇನ್ನೂ ಜೀತ ಪದ್ಧತಿ ಜೀವಂತವಾಗಿದೆ, ಕೆಳಹಂತದ ಅಧಿಕಾರಿಗಳಿಗೆ ಹಿಂಸೆ ನೀಡಲಾಗುತ್ತಿದೆ, ಅಧಿಕಾರದ ದುರುಪಯೋಗ ಮಾಡಿಕೊಳ್ಳಲಾಗುತ್ತಿದೆ, ಜಾತೀಯತೆ, ಅದಕ್ಷತೆ ತುಂಬಿ ತುಳುಕುತ್ತಿದೆ. ಈ ಕುರಿತು ಕ್ರಮ ಕೈಗೊಳ್ಳಬೇಕು ಎಂದು ಪತ್ರದಲ್ಲಿ ಉಲ್ಲೇಖಿಸಲಾಗಿದೆ.
ಯಾವಾಗಲೂ ಪೊಲೀಸ್ ಇಲಾಖೆ ಎಂದರೆ ಶಸ್ತಿಗೆ, ರಕ್ಷಣೆಗೆ ಹೆಸರಾಗಿದೆ. ಆದರೆ ಮಂಡ್ಯದಲ್ಲಿ ಹಿರಿಯ ಅಧಿಕಾರಿಗಳ ಉಪಟಳದಿಂದ ಸಶಸ್ತ್ರ ಮೀಸಲು ಪಡೆ ಸಿಬ್ಬಂದಿ ಬಸವಳಿದಿದ್ದು, ಸರ್ಕಾರ ಈ ಸಮಸ್ಯೆ ಬಗೆಹರಿಸುವುದೇ, ಸಿದ್ದರಾಮಯ್ಯನವರಿಗೆ ಅಧಿಕಾರಿಗಳ ಈ ಕೂಗು ಕೇಳುವುದೇ ಎಂಬುದೇ ಸದ್ಯದ ಪ್ರಶ್ನೆ.
Leave A Reply