9 ಯೋಧರ ಸಾವಿಗೆ ಕಾರಣರಾದ 7 ಕೆಂಪು ಉಗ್ರರ ಹೆಡೆಮುರಿ ಕಟ್ಟಿದ ಸೇನೆ
ಸುಕ್ಮಾ: ಇತ್ತೀಚೆಗೆ ನಕ್ಸಲರ ದಾಳಿಯಲ್ಲಿ ಒಂಬತ್ತು ಸಿಆರ್ ಫಿಎಫ್ ಯೋಧರು ಹುತಾತ್ಮರಾಗಲು ಕಾರಣರಾದ 7 ಕೆಂಪು ಉಗ್ರರನ್ನು ಸೈನಿಕರು ಭಾನುವಾರ ನಸುಕಿನ ಜಾವ ಬಂಧಿಸಿದ್ದಾರೆ. ಛತ್ತೀಸ್ ಗಢದ ಸುಕ್ಮಾ ಜಿಲ್ಲೆಯ ಕಿಸ್ತಾರಾಮ್ ಅರಣ್ಯ ಪ್ರದೇಶದಲ್ಲಿ ಜಂಟಿ ಕಾರ್ಯಾಚರಣೆ ನಡೆಸಿದ ಸಿಆರ್ ಪಿಎಫ್ ತಂಡ ಏಳು ಕೆಂಪು ಉಗ್ರನ್ನು ಸೆರೆಹಿಡಿಯುವಲ್ಲಿ ಯಶಸ್ವಿಯಾಗಿದೆ.
ಜಿಲ್ಲಾ ಪೊಲೀಸರು, ಜಿಲ್ಲಾ ಮೀಸಲು ಪಡೆ, ಸಿಆರ್ ಪಿಎಫ್, ಕೋಬ್ರಾ ತಂಡ ಸೇರಿ ನಾನಾ ಪಡೆಗಳು ಜಂಟಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಸುಕ್ಮಾ ಜಿಲ್ಲೆ ಪೊಲೀಸ್ ವರಿಷ್ಠಾಧಿಕಾರಿ ಅಭಿಷೇಕ ಮೀನಾ ತಿಳಿಸಿದ್ದಾರೆ.
ಅರಣ್ಯದಲ್ಲಿ ಅಲ್ಟ್ರಾ ಸೌಂಡ್ ಮೂಲಕ ಮಾಹಿತಿ ತಿಳಿದ ತಕ್ಷಣ ಎಲ್ಲ ಪಡೆಗಳೊಂದಿಗೆ ಜಂಟಿ ಕಾರ್ಯಾಚರಣೆ ನಡೆಸಲಾಗಿದೆ. ಶನಿವಾರ ರಾತ್ರಿ ಎಲ್ಲ ಪಡೆಗಳು ಕಿಸ್ತಾರಾಮ್ ಪ್ರದೇಶದವನ್ನು ಸುತ್ತುವರಿದಿದ್ದವು, ಭಾನುವಾರ ನಸುಕಿನ ಜಾವ ಏಕಕಾಲಕ್ಕೆ ದಾಳಿ ನಡೆಸಿ, ಏಳು ಜನರನ್ನು ಬಂಧಿಸಲಾಗಿದೆ ಎಂದು ಅಭಿಷೇಕ ಮೀನಾ ತಿಳಿಸಿದ್ದಾರೆ.
ಮಾರ್ಚ್ 13ರಂದು ಸಿಆರ್ ಫಿಎಫ್ ಯೋಧರ ಶಿಬಿರದ ಮೇಲೆ ನಕ್ಸಲರು ನೆಲ ಬಾಂಬ್ ಸ್ಫೋಟಿಸಿದ್ದರಿಂದ ಒಂಬತ್ತು ಯೋಧರು ಹುತಾತ್ಮರಾಗಿದ್ದಲ್ಲದೇ, ಎಂಟು ಜನರಿಗೆ ಗಂಭೀರ ಗಾಯಗಳಾಗಿದ್ದವು. ಈ ದಾಳಿಯಲ್ಲಿ ಭಾಗಿಯಾಗಿರುವ ಕೊಮ್ರಾಮ್ ಸಾಡೆ, ಮದ್ಕಮ್ ಜೋಗಾ, ಮದ್ಕಮ್ ಹಿಡ್ಮಾ, ಮಡ್ಕಮ್ ಗಂಗಾ, ವಂಜಾಮ್ ಆಯತ್, ವಂಜಮ್ ಸಿಂಗಾ ಮತ್ತು ಮಾದ್ವಿ ಸುಕ್ಕಾ ಎಂಬುವರನ್ನು ಬಂಧಿಸಲಾಗಿದೆ ಎಂದು ಎಸ್ ಪಿ ತಿಳಿಸಿದ್ದಾರೆ.
Leave A Reply