ವಾರ್ಡ್ ಕಮಿಟಿ ಮಾಡದೇ ಇದ್ದ ಮೇಲೆ ಜನರಿಗೆ ಹೇಗೆ ಮುಖ ತೋರಿಸುತ್ತೀರಿ?
2013 ನೇ ರಾಜ್ಯ ವಿಧಾನಸಭೆಯ ಚುನಾವಣೆಯನ್ನು ನೆನಪಿಸಿಕೊಳ್ಳಿ. ಆವತ್ತು ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರವನ್ನು ಜ್ಞಾಪಿಸಿಕೊಳ್ಳಿ. ನಿಮ್ಮ ಮನೆಗೆ ಬಂದು ಆಗಿನ ವಿವಿಧ ಪಕ್ಷಗಳ ಅಭ್ಯರ್ಥಿಗಳು ತಮ್ಮ ಚುನಾವಣೆಯ ಪ್ರಣಾಳಿಕೆ ಅಥವಾ ಭರವಸೆಯ ಪಟ್ಟಿಯಂತಹ ಒಂದು ಕರಪತ್ರ ಅಥವಾ ಮೂರ್ನಾಕು ಪುಟಗಳ ಒಂದು ಪುಸ್ತಕ ಕೊಟ್ಟಿರುತ್ತಾರೆ. ಅದನ್ನು ಒಂದು ವೇಳೆ ನೀವು ಎಲ್ಲಿಯಾದರೂ ಮೂಲೆಯಲ್ಲಿ ತೆಗೆದಿಟ್ಟರೆ ಹೊರಗೆ ತೆಗೆಯಿರಿ. ಎರಡೂ ಪಕ್ಷದವರದ್ದು ಇದ್ದರೆ ಒಳ್ಳೆಯದು. ಒಂದು ವೇಳೆ ಆ ಎರಡೂ ಪಕ್ಷಗಳಲ್ಲಿ ಯಾವ ಪಕ್ಷದ ಅಭ್ಯರ್ಥಿ ಗೆದ್ದು ಶಾಸಕರಾಗಿದ್ದಾರೋ ಅವರ ಚುನಾವಣಾ ಪ್ರಣಾಳಿಕೆ ಇದ್ದರೆ ಅಷ್ಟಾದರೂ ಸಾಕು. ಅದನ್ನು ಒಮ್ಮೆ ಮೇಲಿನಿಂದ ಕೆಳಗಿನ ತನಕ ಓದಿಕೊಳ್ಳಿ. ಅದರಲ್ಲಿ ಅವರು ಕೊಟ್ಟಿರುವ ಭರವಸೆಗಳನ್ನು ಇನ್ನೊಮ್ಮೆ ಪರೀಕ್ಷಿಸಿಕೊಳ್ಳಿ.
ಭ್ರಷ್ಟಾಚಾರಕ್ಕೆ ಗ್ರೀನ್ ಸಿಗ್ನಲ್ ಕೊಟ್ಟಂತೆ ಆಗಿತ್ತು…
ನಿಜ ಹೇಳಬೇಕೆಂದರೆ ಒಬ್ಬ ಅಭ್ಯರ್ಥಿ ತಾವು ಗೆದ್ದ ಮೇಲೆ ತಮ್ಮ ಪ್ರಣಾಳಿಕೆಯಲ್ಲಿ ಹೇಳಿದ ವಿಷಯಗಳಲ್ಲಿ ಅರ್ಧದಷ್ಟನ್ನು ಮಾಡಿ ಮುಗಿಸಿದರೂ ಆ ಶಾಸಕರ ಕ್ಷೇತ್ರ ನಂದನವನವಾಗುತ್ತದೆ. ಆದರೆ ಯಾವ ಶಾಸಕರು ಕೂಡ ತಾವು ಗೆದ್ದ ಬಳಿಕ ತಮ್ಮ ಪ್ರಣಾಳಿಕೆಯನ್ನು ಸರಿಯಾಗಿ ಮತ್ತೆ ಓದುತ್ತಾರಾ ಎನ್ನುವುದೇ ಪ್ರಶ್ನೆ. ಅದಕ್ಕಾಗಿ ನಾನು ಹೇಳುವುದೇನೆಂದರೆ ನಿಮ್ಮ ಮನೆಗೆ ಬಂದ ಚುನಾವಣಾ ಪ್ರಣಾಳಿಕೆಯನ್ನು ನೀವು ಐದು ವರ್ಷ ಜೋಪಾನವಾಗಿ ತೆಗೆದಿಟ್ಟುಕೊಳ್ಳಿ. ಕಳೆದ ಬಾರಿ ಮಂಗಳೂರು ನಗರ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿಯಾಗಿದ್ದವರು ತಾವು ಗೆದ್ದರೆ ವಾರ್ಡ್ ಕಮಿಟಿಯನ್ನು ನಿರ್ಮಿಸುತ್ತೇನೆ ಎಂದು ಮಾತು ಕೊಟ್ಟಿದ್ದರು. ಅದು ಈಡೇರಿದೆಯಾ ಎನ್ನುವುದು ನನ್ನ ಪ್ರಶ್ನೆ. ವಾರ್ಡ್ ಕಮಿಟಿ ಎನ್ನುವುದು ಏನೂ ಸಣ್ಣ ವಿಷಯವಲ್ಲ. ಒಂದು ವಾರ್ಡ್ ಹೇಗೆ ಅಭಿವೃದ್ಧಿ ಹೊಂದಬೇಕು ಎನ್ನುವುದು ನಿರ್ಧಾರ ಮಾಡುವುದೇ ಈ ವಾರ್ಡ್ ಕಮಿಟಿ. ಅದರಲ್ಲಿ ಆಯಾ ವಾರ್ಡಿನ ಕಾರ್ಪೋರೇಟರ್ ಗಳೇ ಅಧ್ಯಕ್ಷರು. 10 ಮಂದಿ ಸದಸ್ಯರಲ್ಲಿ ಬೇರೆ ಬೇರೆ ಸ್ತರದ ವ್ಯಕ್ತಿಗಳನ್ನು ಹಾಕಿ ವಾರ್ಡ್ ಕಮಿಟಿ ರಚಿಸಲಾಗುತ್ತದೆ. ಈ ಕಮಿಟಿ ತಮ್ಮ ವಾರ್ಡ್ ನಲ್ಲಿ ಆಗಬೇಕಾದ ಕೆಲಸ, ಕಾಮಗಾರಿಗಳನ್ನು ಯೋಚಿಸಿ, ಯೋಜಿಸಿ ಅನುಷ್ಠಾನಕ್ಕೆ ತರುವಲ್ಲಿ ಪ್ರಧಾನ ಪಾತ್ರ ವಹಿಸುತ್ತದೆ. ಭ್ರಷ್ಟಾಚಾರ ಎನ್ನುವುದು ಪ್ರಾರಂಭವಾಗುವುದೇ ಪಾಲಿಕೆಯ ವಾರ್ಡುಗಳಲ್ಲಿ ಆಗುವ ಅಭಿವೃದ್ಧಿ ಕಾರ್ಯಗಳಿಂದ. ಒಂದು ವೇಳೆ ವಾರ್ಡ್ ಕಮಿಟಿ ಆದರೆ ಭ್ರಷ್ಟಾಚಾರಕ್ಕೆ ಅಡ್ರೆಸ್ ಇಲ್ಲದಂತೆ ಆಗುತ್ತದೆ. ಪಾಲಿಕೆಯ ಸದಸ್ಯರ, ಅಲ್ಲಿನ ಅಧಿಕಾರಿಗಳ ಮತ್ತು ಗುತ್ತಿಗೆದಾರರ ಅಪವಿತ್ರ ಮೈತ್ರಿ ಅಲ್ಲಿಗೆ ಮುಗಿಯುತ್ತದೆ. ಇನ್ನು ಕಳಪೆ ಕಾಮಗಾರಿ ಮಾಡಿ ಹಣ ಹೊಡೆಯುವುದನ್ನು ಕಾರ್ಪೋರೇಟರ್ ಗಳು ತಮ್ಮ ಕನಸಿನಲ್ಲಿಯೂ ಎನಿಸಲಾರರು. ನನ್ನಂತಹ ಒಬ್ಬ ವ್ಯಕ್ತಿ ಪ್ರತಿ ವಾರ್ಡ್ ಕಮಿಟಿಯಲ್ಲಿದ್ದರೆ ಮುಂದಿನ ಬಾರಿ ಯಾವುದೇ ಪಕ್ಷಕ್ಕೆ ಕಾರ್ಫೋರೇಟರ್ ಆಗಲು ಅಭ್ಯರ್ಥಿಯೇ ಸಿಗಲಿಕ್ಕಿಲ್ಲ.
ಯಾವುದಕ್ಕೂ ಧೈರ್ಯ ಬೇಕು…
ಈಗ ಇರುವ ಪ್ರಶ್ನೆ ಕಳೆದ ಐದು ವರ್ಷಗಳಲ್ಲಿ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ವಾರ್ಡ್ ಕಮಿಟಿ ಯಾಕೆ ಮಾಡಲಿಲ್ಲ. ಅಷ್ಟಕ್ಕೂ ಕಳೆದ ಬಾರಿ ಕಾಂಗ್ರೆಸ್ಸಿನಿಂದ ಅಭ್ಯರ್ಥಿಯಾಗಿದ್ದವರು ಆ ಭರವಸೆಯನ್ನು ಕೊಟ್ಟಿದ್ದರು. ಕೊಟ್ಟರೂ ಯಾಕೆ ಈಡೇರಿಸಲಿಲ್ಲ. ಕದ್ರಿ ಪಾರ್ಕಿಗೆ ಮುಖ್ಯದ್ವಾರ ಮಾಡುವುದಕ್ಕಿಂತ ವಾರ್ಡ್ ಕಮಿಟಿ ಮಾಡಿದಿದ್ದರೆ ಪ್ರತಿ ವಾರ್ಡಿನಲ್ಲಿಯೂ ಮುಖ್ಯದ್ವಾರಗಳು ಆಗುತ್ತಿದ್ದವು. ಅಷ್ಟಕ್ಕೂ ನ್ಯಾಯಾಲಯಗಳಿಂದ ವಾರ್ಡ್ ಕಮಿಟಿ ಮಾಡಲು ಆದೇಶ ಇದೆ. ಆದರೂ ನಮ್ಮನ್ನು ಐದು ವರ್ಷ ಆಳಿದ ರಾಜ್ಯದ ಕಾಂಗ್ರೆಸ್ ಸರಕಾರವಾಗಲಿ, ಏನೋ ಮಾಡುತ್ತಾರೆ ಎಂದು ಭರವಸೆ ಇಟ್ಟು ಜನ ಆಯ್ಕೆ ಮಾಡಿದ ಕಳೆದ ಸಲದ ಕಾಂಗ್ರೆಸ್ ಅಭ್ಯರ್ಥಿಯಾಗಲಿ ತಾವು ಗೆದ್ದ ಮೇಲೆ ವಾರ್ಡ್ ಕಮಿಟಿ ಮಾಡಲೇ ಇಲ್ಲ. ಹಾಗಾದರೆ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಿದಂತೆ ಆಗಲಿಲ್ಲವಲ್ಲ. ನೀವು ಒಂದು ರಸ್ತೆಗೆ ಕಾಂಕ್ರೀಟಿಕರಣ ಮಾಡಿಸಿದೆ ಎನ್ನುವುದಕ್ಕಿಂತ, ಯಾರದ್ದೋ ಸಾಧನೆಯನ್ನು ಕೇವಲ ಪೂರ್ತಿಗೊಳಿಸಿದ ಮಾತ್ರಕ್ಕೆ ತಮ್ಮದು ಎನ್ನುವುದಕ್ಕಿಂತ ಒಂದು ವಾರ್ಡ್ ಕಮಿಟಿ ಮಾಡುವುದು ಕಷ್ಟವಾ ಎಂದು ಈ ಬಾರಿ ಮತ್ತೆ ಕಾಂಗ್ರೆಸ್ ಅಭ್ಯರ್ಥಿಯಾಗಿರುವವರು ಹೇಳಬೇಕು. ವಿಷಯ ಏನೆಂದರೆ ವಾರ್ಡ್ ಕಮಿಟಿ ಮಾಡಿದರೆ ಬೇಕಾಬಿಟ್ಟಿಯಾಗಿ ಕಾಮಗಾರಿಗಳನ್ನು ಮಾಡಲು ಆಗುವುದಿಲ್ಲ. ಇಲ್ಲಿಯ ತನಕ ತಮಗೆ ಸಿಗುತ್ತಿದ್ದ ಕಮೀಷನ್ ಕೈ ತಪ್ಪಿ ಹೋಗುತ್ತೆ. ಪಾಲಿಕೆಯಲ್ಲಿ ಹೆಚ್ಚಿನ ಕಾರ್ಪೋರೇಟರ್ ಗಳಿಗೆ ಇದು ಪೂರ್ಣಾವಧಿಯ ಉದ್ಯೋಗ. ಐದು ವರ್ಷಗಳಲ್ಲಿ ಇಷ್ಟು ಯೋಜನೆಗಳನ್ನು ತಮ್ಮ ವಾರ್ಡಿನಲ್ಲಿ ತಂದರೆ ಸಾಕು, ಮುಂದಿನ ಐದು ವರ್ಷಕ್ಕೆ ಆಗುವಷ್ಟು ಕುಳಿತು ತಿನ್ನಬಹುದು. ಅಂತವರ ವಾರ್ಡಿನಲ್ಲಿ ವಾರ್ಡ್ ಕಮಿಟಿ ಆದರೆ ಅವರ “ಬಂಗಾರದ ಬದುಕು” ಆವತ್ತೆ ಕೊನೆಗೊಳ್ಳುತ್ತದೆ. ಮುಂದಿನ ಬಾರಿ ಅವರ ಕಾಲು ಹಿಡಿದರೂ ಅವರು ನಿಲ್ಲಲಾರರು. ಐದು ರೂಪಾಯಿ ತಿನ್ನಲು ಆಗದಿದ್ದ ಮೇಲೆ ಕಾರ್ಪೋರೇಟರ್ ಆಗುವುದ್ಯಾಕೆ ಎಂದು ಹೇಳಿ ಚುನಾವಣೆಗೆ ದೊಡ್ಡ ನಮಸ್ಕಾರ ಹಾಕಬಹುದು.
ಆದ್ದರಿಂದ ನಾನು ಹೇಳುವುದು ಯಾರು ತಾವು ಹೇಳಿದ್ದನ್ನು ಮಾಡಲಿಲ್ಲವೋ ಅವರನ್ನು ಮತ್ತೆ ಆಯ್ಕೆ ಮಾಡಿದರೆ ಅದರಿಂದ ಆಗುವಂತದ್ದು ಏನೂ ಇಲ್ಲ. ಅದರ ಬದಲಿಗೆ ಮತ್ತೆ ಗೆಲ್ಲುತ್ತೇನೋ ಇಲ್ಲವೋ ಜನರಿಗೆ ಉಪಯೋಗವಾಗುವುದನ್ನು ಮಾಡಿಯೇ ಸಿದ್ಧ ಎಂದು ಮೋದಿ ತರಹ ರಿಸ್ಕ್ ಗೆ ಕೈ ಹಾಕುತ್ತಾರಲ್ಲ. ಅಂತವರಿಗೆ ಒಂದು ಅವಕಾಶ ಕೊಡಿ. ಅದರೊಂದಿಗೆ ಅವರ ಪ್ರಣಾಳಿಕೆಯನ್ನು ತೆಗೆದಿಡಿ. ಆರು ತಿಂಗಳಲ್ಲಿ ಭರವಸೆಗಳು ಈಡೇರುವ ಲಕ್ಷಣಗಳು ಕಾಣಿಸಿಲ್ಲವೋ ನಡುಬೀದಿಯಲ್ಲಿ ನಿಲ್ಲಿಸಿ ಪ್ರಶ್ನೆ ಮಾಡಿ. ಹೇಗೂ ನಿಮ್ಮೊಂದಿಗೆ ನಾನು ಇದ್ದೇ ಇರುತ್ತೇನೆ, ಕೆಲಸ ಮಾಡದಿದ್ದರೆ ಬಿಡುವ ಪ್ರಶ್ನೆನೇ ಇಲ್ಲ!
Leave A Reply