ಕುಮಾರಸ್ವಾಮಿಯನ್ನು ಸಿಎಂ ಮಾಡಿ ದೇವೇಗೌಡ್ರು ತಮ್ಮ ಅಸ್ತಿತ್ವವನ್ನು ರಾಷ್ಟ್ರಕ್ಕೆ ತೋರಿಸಿದ್ದಾರೆ!!
ಸಂಜೆಯ ಧಾರಾವಾಹಿಗಳಿಗಿಂತ ಕರ್ನಾಟಕದ ರಾಜಕೀಯ ಇನ್ನು ಮುಂದೆ ಹೆಚ್ಚು ಕುತೂಹಲ ಕೆರಳಿಸಲಿದೆ. 2013 ರಿಂದ ಐದು ವರ್ಷ ತನಕ ಇದ್ದ ಕಾಂಗ್ರೆಸ್ ಸರಕಾರದ ವಿರುದ್ಧ ಭ್ರಷ್ಟಾಚಾರ, ಧರ್ಮ ಒಡೆಯುವುದು, ಕಾವೇರಿ, ಮಹದಾಯಿ ಹೋರಾಟ, ರಾಜ್ಯ ಬಾವುಟ ಎಲ್ಲ ವಿವಾದಗಳು ಇದ್ದವು. ಆದರೆ ಅವು ಆರೋಪ-ಪ್ರತ್ಯಾರೋಪಗಳಿಗೆ ಸೀಮಿತವಾಗಿರುತ್ತಿದ್ದವು. ಆದರೆ ಇನ್ನು ಮುಂದೆ ಹಾಗಲ್ಲ. ಜೆಡಿಎಸ್ ಮತ್ತು ಕಾಂಗ್ರೆಸ್ ಜಂಟಿಯಾಗಿ ಹೊರ ತರುತ್ತಿರುವ ಹೊಸ ಧಾರಾವಾಹಿ ಎಷ್ಟು ದಿನ ಬರುತ್ತೆ ಎಂದು ಹೇಳುವುದು ಸ್ವತ: ಫುಲ್ ಟೈಮ್ ರಾಜಕಾರಣಿ ದೇವೆಗೌಡರಿಗೂ ಗೊತ್ತಿದ್ದಂತೆ ಕಾಣುವುದಿಲ್ಲ. ನಾನು ಐದು ವರ್ಷ ಮುಖ್ಯಮಂತ್ರಿಯಾಗಲು ಕಾಂಗ್ರೆಸ್ ಸಮ್ಮತಿಸಿದೆ ಎಂದು ಹೇಳುತ್ತಿರುವ ಹರದನಹಳ್ಳಿ ದೇವೇಗೌಡರ ಮಗ ಕುಮಾರಸ್ವಾಮಿಯವರಿಗೆ ಅಂತರಾಳದಲ್ಲಿ ಅದು ಸಾಧ್ಯವೇ ಇಲ್ಲ ಎಂದು ಗೊತ್ತಿದೆ. ಯಾಕೆಂದರೆ ಜೆಡಿಎಸ್ ಪಕ್ಷಕ್ಕೆ ಮುಖ್ಯಮಂತ್ರಿ ಸ್ಥಾನ ಐದು ವರ್ಷ ಬಿಟ್ಟುಕೊಡುವುದೂ ಒಂದೇ, ಕಾಂಗ್ರೆಸ್ ತನ್ನ ಅಂಗಡಿಯ ಶಟರ್ ಶಾಶ್ವತವಾಗಿ ಎಳೆಯುವುದೂ ಒಂದೇ ಎನ್ನುವುದು ಡಿಕೆ ಶಿವಕುಮಾರ್ ಅವರಿಗೆ ಖಡಾಖಂಡಿತವಾಗಿ ತಿಳಿದಿರುವ ಸಂಗತಿ. ಐದು ವರ್ಷ ಕುಮಾರಸ್ವಾಮಿ ಮುಖ್ಯಮಂತ್ರಿ ಆದರೆ ಮುಂದಿನ ಚುನಾವಣೆಯಲ್ಲಿ ಕಾಂಗ್ರೆಸ್ ಎರಡಂಕಿಯಷ್ಟು ಸೀಟು ಪಡೆಯುವುದು ಕಷ್ಟವಾಗಲಿದೆ. ಕಾರಣ ಅಷ್ಟೊತ್ತಿಗಾಗಲೇ ಇತ್ತ ಜೆಡಿಎಸ್ ಅತ್ತ ಭಾರತೀಯ ಜನತಾ ಪಾರ್ಟಿ ಕಾಂಗ್ರೆಸ್ಸನ್ನು ಪೂರ್ಣವಾಗಿ ನುಂಗಿ ಆಗಿರುತ್ತದೆ. ಇದರಿಂದ ಸಿದ್ಧರಾಮಯ್ಯ ಅವರು ಕಳೆದುಕೊಳ್ಳುವಂತದ್ದು ಏನೂ ಇಲ್ಲ. ಏಕೆಂದರೆ ತಮ್ಮ ರಾಜಕೀಯ ಜೀವನದ ಸ್ಲಾಗ್ ಒವರ್ ಆಡುತ್ತಿರುವ ಸಿದ್ಧರಾಮಯ್ಯ ಅವರಿಗೆ ಕಾಂಗ್ರೆಸ್ ಮುಂದಿನ ಬಾರಿ ಗೆದ್ದರೆಷ್ಟು, ಬಿಟ್ಟರೆಷ್ಟು ಎನ್ನುವ ಪರಿಸ್ಥಿತಿ ಇದೆ. ಹಾಗಂತ ಡಿಕೆಶಿಯಂತವರಿಗೆ ಹಾಗಲ್ಲ. ಒಂದು ಕಡೆ ಬಿಜೆಪಿ ಅಧಿಕಾರಕ್ಕೆ ಬಂದು ತಮ್ಮನ್ನು ಮೆಟ್ಟಿ ನಿಲ್ಲುವುದನ್ನು ತಡೆಯಬೇಕು ಮತ್ತು ಅದೇ ಹೊತ್ತಿಗೆ ಒಕ್ಕಲಿಗರ ಅನಭಿಷೇಕ್ತ ದೊರೆ ಎನ್ನುವ ತಮ್ಮ ಪಟ್ಟವನ್ನು ಉಳಿಸಿ ರಾಜಕಾರಣ ಮಾಡಬೇಕು ಎನ್ನುವ ಪರಿಸ್ಥಿತಿ ಅವರ ಮುಂದಿದೆ. ಇದಕ್ಕಾಗಿ ಅವರು ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿ ಉಳಿಯಲು ಕೈ ಕಾಲು ಬಡಿಯುತ್ತಿದ್ದಾರೆ. ಇದು ಗೊತ್ತಿರುವುದರಿಂದ ಕುಮಾರಸ್ವಾಮಿ ಸಿಕ್ಕಿದ ಅವಕಾಶ ಎಷ್ಟು ದಿನವಾದರೂ ಪರವಾಗಿಲ್ಲ, ಅಷ್ಟೊತ್ತಿನ ಒಳಗೆ ಪಕ್ಷವನ್ನು ಗಟ್ಟಿಗೊಳಿಸುವುದು ಮತ್ತು ತಾವು ಇದ್ದಷ್ಟು ದಿನ ಒಳ್ಳೆಯ ಆಡಳಿತ ಕೊಟ್ಟಿದ್ದೆ ಎಂದು ಗ್ರಾಮೀಣ ಮತ್ತು ನಗರ ಭಾಗಗಳಲ್ಲಿ ಜನ ಮಾತನಾಡುವ ಹಾಗೆ ಮಾಡಬೇಕೆನ್ನುವ ಉಮ್ಮೇದಿನಲ್ಲಿದ್ದಾರೆ. ಅದೇ ಹೊತ್ತಿಗೆ ಮುಂದಿನ ಲೋಕಸಭಾ ಚುನಾವಣೆಯೊಂದಿಗೆ ರಾಜ್ಯದಲ್ಲಿಯೂ ವಿಧಾನಸಭೆ ಚುನಾವಣೆ ನಡೆದು ಕನಿಷ್ಟ 120 ಸೀಟುಗಳನ್ನು ಗೆದ್ದು ಅಧಿಕಾರಕ್ಕೆ ಮರಳಬೇಕು ಎನ್ನುವ ತವಕದಲ್ಲಿ ಬಿಜೆಪಿ ಇದೆ. ಆದ್ದರಿಂದ ಮೂರು ಪಕ್ಷಗಳು ಕೂಡ ತಮ್ಮದೇ ಲೆವೆಲ್ಲಿನಲ್ಲಿ ದಿನಗಳನ್ನು ಎಣಿಸುತ್ತಿವೆ. ಸರಕಾರ ಡೋಲಾಯಮಾನವಾಗುತ್ತಾ ಜನರಿಗೆ ದಿನಕ್ಕೊಂದು ಟ್ವಿಸ್ಟ್ ಸಿಗುತ್ತಿದೆ.
ರಾಜಕೀಯದ ಗಂಧಗಾಳಿನೂ ಗೊತ್ತಿರದ ಪಾಮರನಿಗೆ ಕೇಳಿದರೂ ಆತ ಈ ಬಾರಿ ಜನತಾ ಜನಾರ್ಧನ ಮತ ಕೊಟ್ಟಿದ್ದು ಬಿಜೆಪಿ ಪರ ಎಂದು ಹೇಳಬಲ್ಲ. ಯಾಕೆಂದರೆ ನಲ್ವತ್ತು ಸೀಟುಗಳಿದ್ದ ಬಿಜೆಪಿ 104 ಸೀಟು ಪಡೆದುಕೊಂಡಿದೆ ಎಂದರೆ ಅದು ಜನಾದೇಶ ಯಾವ ಕಡೆ ಇದೆ ಎನ್ನುವುದರ ಸ್ಪಷ್ಟ ನಿದರ್ಶನ. ಕಳೆದ ಬಾರಿಗಿಂತ ಜೆಡಿಎಸ್ ಈ ಬಾರಿ ಕಡಿಮೆ ಸ್ಥಾನ ಪಡೆದುಕೊಂಡಿದೆ. ಕಾಂಗ್ರೆಸ್ ಎರಡಂಕಿ ದಾಟಿಲ್ಲ ಮತ್ತು ಅವರ ಅರ್ಧದಷ್ಟು ಸಚಿವರು ಸೋತಿದ್ದಾರೆ ಎಂದರೆ ಜನರಿಗೆ ಕಾಂಗ್ರೆಸ್ ಬಗ್ಗೆ ಎಷ್ಟು ಜಿಗುಪ್ಸೆ ಇತ್ತು ಎನ್ನುವುದು ಸಾಮಾನ್ಯ ಗಣಿತದ ಜ್ಞಾನ ಇದ್ದವರಿಗೂ ಇದು ಅರ್ಥವಾಗುವ ಸಂಗತಿ. ಒಂದು ವೇಳೆ ಜೆಡಿಎಸ್, ಬಿಜೆಪಿಯೊಂದಿಗೆ ಸೇರಿ ಸರಕಾರ ರಚಿಸಿದರೆ ಆಗ ಕನಿಷ್ಟ ಜನ ಜೆಡಿಎಸ್ ಬಗ್ಗೆ ಮೆಚ್ಚುಗೆಯ ನೋಟವನ್ನಾದರೂ ಬೀರುತ್ತಿದ್ದರು. ಆದರೆ ಅರ್ಜೆಂಟಾಗಿ ದೇವೆಗೌಡರಿಗೆ ರಾಷ್ಟ್ರ ರಾಜಕೀಯದಲ್ಲಿ ಗೆಳೆಯರ ನಡುವೆ ಫೋಸ್ ಕೊಡಬೇಕಿದೆ. ತಮ್ಮ ಕಳೆದು ಹೋಗಿರುವ ಅಲ್ಪಸಂಖ್ಯಾತ, ದಲಿತ, ಹಿಂದುಳಿದ ವರ್ಗಗಳ ಕಾಂಬೀನೇಶನ್ ಅನ್ನು ತಮ್ಮೆಡೆಗೆ ಮತ್ತೆ ಸೆಳೆಯಬೇಕಿದೆ. ಅದರೊಂದಿಗೆ ಕೇಂದ್ರದಲ್ಲಿ ರಾಜಗುರು ಪಟ್ಟ ಪಡೆದು ಯುಪಿಎ ಮಾರ್ಗದರ್ಶಕ ಸ್ಥಾನದಲ್ಲಿ ಕುಳಿತು ರಾಹುಲ್ ಗಾಂಧಿ, ತೇಜಸ್ವಿ ಯಾದವ್, ಅಖಿಲೇಶ್ ಸಿಂಗ್ ಇಂತವರ ಪಾಲಿಗೆ ಸ್ಟಾರ್ ಆಗಬೇಕಿದೆ. ಇದಕ್ಕಾಗಿ ದೇವೇಗೌಡರು ಮತ ಎಣಿಕೆಯಾಗಿ ಅತಂತ್ರ ಸ್ಥಿತಿ ಬರುತ್ತಿದ್ದಂತೆ ಮಾಯಾವತಿಗೆ ಫೋನ್ ಹಾಕಿ “ಬೆಹೆನ್ ಜೀ” ಎಂದದ್ದು. ಒಂದು ವೇಳೆ ದೇವೆಗೌಡರು ಹತ್ತು ನಿಮಿಷ ತಡ ಮಾಡಿದಿದ್ದರೆ ಅಮಿತ್ ಶಾ ದೇವೆಗೌಡರೊಂದಿಗೆ ಚಾ ಕುಡಿಯುತ್ತಾ ಆಪ್ ಕಾ ರೇವಣ್ಣ ಡಿಸಿಎಂ ಹೋನೆ ಕೇಲಿಯೇ ಆಪ್ ಕೋ ಹಮಾರಾ ಸಾಥ್ ದೇನಾ ಪಡೇಗಾ ಎಂದು ಹೇಳಿಯಾಗುತ್ತಿತ್ತು. ಆದರೆ ರೇವಣ್ಣ ಉಪಮುಖ್ಯಮಂತ್ರಿ ಆಗುವುದಕ್ಕಿಂತ ತಮ್ಮ ಕೊನೆಯ ಲೋಕಸಭಾ ಅವಧಿಯಲ್ಲಿ ಎಲ್ಲರೂ ತಮ್ಮ ಕಾಲ ಕೆಳಗೆ ಬರುವ ಖುಷಿ ಅನುಭವಿಸುವುದನ್ನು ಬಿಡಲು ದೊಡ್ಡಗೌಡರು ತಯಾರಿರಲೇ ಇಲ್ಲ. ಆದ್ದರಿಂದ ಲೋಕಸಭಾ ಚುನಾವಣೆಗೆ ಬಾಕಿ ಉಳಿದಿರುವ ಕೊನೆಯ ಹತ್ತು ತಿಂಗಳ ಅವಧಿಯಲ್ಲಿ ಹರದನಹಳ್ಳಿಯ ದೊಡ್ಡಗೌಡರು ಆಡಲಿರುವ ಆಟ ಡಿಕೆಶಿ ಅಥವಾ ಪರಮೇಶ್ವರ್ ಇಬ್ಬರಿಗೂ ಗೊತ್ತಾಗಲು ಚಾನ್ಸೆ ಇಲ್ಲ.
ಹಾಗಂತ ಕಾಂಗ್ರೆಸ್ ಪರಮೋಚ್ಚ ನಾಯಕಿ ಸೋನಿಯಾ ಗಾಂಧಿ ಮುಂದಿನ ಐದು ವರ್ಷ ರಾಜ್ಯದ ಕಿರೀಟವನ್ನು ಕುಮಾರಸ್ವಾಮಿಯವರ ಕೈಗಿತ್ತು ಪಾದುಕೆಯನ್ನು ಮಾತ್ರ ರಾಜ್ಯ ಕಾಂಗ್ರೆಸ್ಸಿಗರ ಕೈಯಲ್ಲಿ ಇಡಲು ತಯಾರಿಲ್ಲ. ಮುಂದಿನ ಆರು ತಿಂಗಳೊಳಗೆ ಕುಮಾರಸ್ವಾಮಿಯ ಆಡಳಿತ ಉತ್ತಮವಾಗಿ ಟೆಕ್ ಆಫ್ ಆದರೆ ಕಾಂಗ್ರೆಸ್ ತನ್ನ ಭತ್ತಳಿಕೆಯ ಬಾಣವೊಂದನ್ನು ಬಿಡುವ ತಯಾರಿಯಲ್ಲಿದೆ. ಅದೇನೆಂದರೆ ಮೂವತ್ತು ತಿಂಗಳ ಬಳಿಕ ಮುಖ್ಯಮಂತ್ರಿ ಸ್ಥಾನ ನಮಗೆ ಕೊಡಬೇಕು. ಒಂದು ವೇಳೆ ಆರು ತಿಂಗಳಲ್ಲಿ ಕುಮಾರಸ್ವಾಮಿ ಭರ್ಜರಿಯಾಗಿ ತಮ್ಮ ಸರಕಾರವನ್ನು ಓಡಿಸಲು ಶುರು ಮಾಡಿಬಿಟ್ಟರು ಎಂದರೆ ಮೂವತ್ತು ತಿಂಗಳ ನಂತರ ದೇವೇಗೌಡರಲ್ಲ, ದೇವರೇ ಬಂದು ಹೇಳಿದ್ರು ಕುಮಾರಸ್ವಾಮಿ ಅಧಿಕಾರದಲ್ಲಿ ಕೆಳಗಿಳಿಯುವ ಚಾನ್ಸೆ ಇಲ್ಲ!!
Leave A Reply