ಸಚಿವ ಸ್ಥಾನಕ್ಕಾಗಿ ದಕ್ಷಿಣ ಕನ್ನಡದ ಶಾಸಕರು ಯಾವತ್ತೂ ಹೀಗೆ ಆಡಿರಲಿಲ್ಲ!
ಉತ್ತರ ಕರ್ನಾಟಕದಲ್ಲಿ ಬೆಂಕಿಯ ಕೆನ್ನಾಲಿಗೆ ಮಳೆಯ ನಡುವೆ ಹೊತ್ತಿ ಉರಿಯುತ್ತಿದೆ. ಅತೃಪ್ತರು ಸಭೆ ನಡೆಸುತ್ತಿದ್ದಾರೆ. ಘಟ್ಟದ ಮೇಲಿನ ಕಾಂಗ್ರೆಸ್ ಶಾಸಕರ ಕಣ್ಣುಗಳ ಕೆಂಪಾಗಿವೆ. ಬಾಯಿಯಿಂದ ತಮ್ಮ ಪಕ್ಷದ ಉನ್ನತ ನಾಯಕರ ಬಗ್ಗೆ ಪುಖಾನುಪುಂಖ ಪದಗಳು ಹೊರಬೀಳುತ್ತಿವೆ. ಉತ್ತರ ಕರ್ನಾಟಕದ ಕಾಂಗ್ರೆಸ್ ಶಾಸಕರಿಗೆ ಹೋಲಿಸಿದರೆ ನಮ್ಮ ಕರಾವಳಿಯ ಕಾಂಗ್ರೆಸ್ ಶಾಸಕರಾಗಿದ್ದವರು ಒಂದಿಷ್ಟು ಹೆಚ್ಚು ಸಭ್ಯರು ಎಂದು ಅನಿಸುತ್ತದೆ. ಯಾಕೆಂದರೆ ಕಳೆದ ಬಾರಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಎಂಟರಲ್ಲಿ ಏಳರಲ್ಲಿ ಕಾಂಗ್ರೆಸ್ ಶಾಸಕರಾಗಿದ್ದಾಗ ಮೂವರಿಗೆ ಮಂತ್ರಿಗಿರಿ ಕೊಡಲಾಗಿತ್ತು. ಅದರಲ್ಲಿ ರಮಾನಾಥ್ ರೈ ಅವರಿಗೆ ಜೇಷ್ಟತೆಯ ಮೇಲೆ ಕೊಡಲಾಗಿತ್ತು. ಯುಟಿ ಖಾದರ್ ಹಾಗೂ ಅಭಯಚಂದ್ರ ಜೈನ್ ಅವರಿಗೆ ಜಾತಿ ಪ್ರಾತಿನಿಧ್ಯದ ಅಡಿಯಲ್ಲಿ ಕೊಡಲಾಗಿತ್ತು. ಆದರೆ ವಸಂತ ಬಂಗೇರ ಅವರಿಗೆ ಮಂತ್ರಿ ಸ್ಥಾನ ಕೊಡದೇ ಅನ್ಯಾಯ ಮಾಡಲಾಗಿತ್ತು ವಸಂತ ಬಂಗೇರ ಐದು ಬಾರಿ ಗೆದ್ದಿದ್ದರು. ಬಿಲ್ಲವ ಸಮುದಾಯದಿಂದ ಬಂದವರಾಗಿದ್ದರು. ಅವರಿಗೆ ಅವಕಾಶ ಅರ್ಹವಾಗಿ ಸಿಗಬೇಕಿತ್ತು. ಆದರೆ ಕಾಂಗ್ರೆಸ್ ಕೊಟ್ಟಿರಲಿಲ್ಲ. ಅದರ ನಂತರ ವಿನಯ ಕುಮಾರ್ ಸೊರಕೆಯವರಿಗೆ ಕೊಟ್ಟಿದ್ದ ಮಂತ್ರಿಗಿರಿ ಕಿತ್ತುಕೊಳ್ಳಲಾಯಿತು. ಅವರು ಕೂಡ ಏನೂ ವಿರುದ್ಧ ಹೇಳಿಕೆ ಕೊಟ್ಟಿರಲಿಲ್ಲ. ನಿಜವಾಗಿ ನೋಡಿದರೆ ವಿನಯ ಕುಮಾರ್ ಸೊರಕೆಯವರಿಂದ ಮಂತ್ರಿ ಸ್ಥಾನ ಕಸಿದು ಪ್ರಮೋದ್ ಮಧ್ವರಾಜ್ ಅವರಿಗೆ ಕೊಡುವ ಅಗತ್ಯ ಏನಿತ್ತೋ. ಪ್ರಮೋದ್ ಮೊದಲ ಬಾರಿ ಗೆದ್ದಿದ್ದರು. ಅವರಿಗೆ ಇನ್ನೂ ವಯಸ್ಸಿತ್ತು. ಆದರೂ ಕಾಂಗ್ರೆಸ್ ನಾಯಕರು ಆಟವಾಡಿದರು. ಕರಾವಳಿಯ ಇಬ್ಬರು ಬಿಲ್ಲವ ನಾಯಕರಿಗೆ ಅನ್ಯಾಯ ಮಾಡಿದರು. ಯಾರೂ ಕೂಡ ಏನೂ ಹೇಳಲಿಲ್ಲ.
ಸಿದ್ದು ದೂರ ಹೋಗಿ ಕೂತಿದ್ದಾರೆ…
ಕಾಂಗ್ರೆಸ್ ನಲ್ಲಿದ್ದ ಬಿಲ್ಲವ ನಾಯಕ ಹರಿಕೃಷ್ಣ ಬಂಟ್ವಾಳ್ ಅವರಿಗೆ ವಿಧಾನ ಪರಿಷತ್ ಸ್ಥಾನ ಕೊಡುವುದು ಎಂದು ತೀರ್ಮಾನವಾಗಿ ಕೊನೆಯ ಕ್ಷಣದಲ್ಲಿ ತಪ್ಪಿಸಲಾಯಿತು. ಬಿಲ್ಲವ ನಾಯಕರು ಏನೂ ವಿರೋಧ ತೋರಿಸಿಲ್ಲ. ಆದರೆ ಅದೇ ಉತ್ತರ ಕರ್ನಾಟಕ ನೋಡಿ. ಎಂಬಿ ಪಾಟೀಲ್, ಬಿಸಿ ಪಾಟೀಲ್, ಸತೀಶ್ ಜಾರಕಿಹೊಳೆ, ಕೆಎಚ್ ಪಾಟೀಲ್, ಶ್ಯಾಮನೂರು ಶಿವಶಂಕರಪ್ಪ ಸಹಿತ ಅನೇಕ ಮುಖಂಡರು ತಮಗೆ ಸಚಿವ ಸ್ಥಾನ ಸಿಗದೇ ಇರುವುದಕ್ಕೆ ಬಹಿರಂಗವಾಗಿ ಅಸಮಾಧಾನ ವ್ಯಕ್ತಪಡಿಸುತ್ತಿದ್ದಾರೆ. ಅವರ ಬೆಂಬಲಿಗರು ಮೈಮೇಲೆ ಎಣ್ಣೆ ಸುರಿದು ಪ್ರತಿಭಟನೆ ಮಾಡುತ್ತಿದ್ದಾರೆ. ರಾಜ್ಯದ ಕಾಂಗ್ರೆಸ್ ನಾಯಕರನ್ನು ಅಡ್ಡ ಹಾಕಿ ಪ್ರಶ್ನಿಸುತ್ತಿದ್ದಾರೆ. ಅತೃಪ್ತ ಶಾಸಕರು ಕಾಂಗ್ರೆಸ್ ಹೈಕಮಾಂಡ್ ವಾರದೊಳಗೆ ತೀರ್ಮಾನ ತೆಗೆದುಕೊಳ್ಳದೇ ಇದ್ದರೆ ನಮ್ಮ ದಾರಿ ನೋಡಿಕೊಳ್ಳುತ್ತೇವೆ ಎನ್ನುತ್ತಿದ್ದಾರೆ. ಇದೆಲ್ಲ ಗೊಡವೆಯೇ ಬೇಡವೆಂದು ಸಮ್ಮಿಶ್ರ ಸರಕಾರದ ಸಮನ್ವಯಕಾರರಾದ ಸಿದ್ಧರಾಮಯ್ಯ ಬೆಂಗಳೂರು ಬಿಟ್ಟು ದೂರದ ಬಾದಾಮಿಗೆ ಹೋಗಿ ಆರಾಮವಾಗಿದ್ದಾರೆ. ದಿನೇಶ್ ಗುಂಡುರಾವ್ ನನಗೆ ಸಿಗಲಿಲ್ಲ, ನಿಮಗೆ ಹೇಗೆ ಕೊಡಿಸಲಿ ಎನ್ನುವ ಭಾವನೆಯಲ್ಲಿದ್ದಾರೆ. ಒಂದಂತೂ ಸ್ಪಷ್ಟ ಒಂದು ಕಾಲದಲ್ಲಿ ಸಿದ್ಧರಾಮಯ್ಯನರೇ ನಮ್ಮ ಶಾಶ್ವತ ದೊರೆ ಎಂದು ಅವರ ಹಿಂದೆ ಮುಂದೆ ಹೋಗುತ್ತಾ, ಕೆಪಿಸಿಸಿ ಅಧ್ಯಕ್ಷರನ್ನು ಕಡೆಗಣಿಸಿ ಡಾ|ಪರಮೇಶ್ವರ್ ಅವರ ಸೋಲನ್ನು ಸಂಭ್ರಮಿಸಿದ್ದವರಿಗೆ ವಿಧಾನಸಭೆಗೆ ಆಯ್ಕೆಯಾಗಿ ಉಪಮುಖ್ಯಮಂತ್ರಿಯಾಗುತ್ತಲೇ ಪರಂ ಸರಿಯಾಗಿ ಪಾಠ ಕಲಿಸಿದ್ದಾರೆ.
ಬಿಜೆಪಿಗೆ ಅಧಿಕಾರ ಹತ್ತಿರದಲ್ಲಿದೆಯಾ….
ಇದನ್ನೇ ನೋಡಿ ಭಾರತೀಯ ಜನತಾ ಪಾರ್ಟಿ ಮತ್ತೆ ಅಧಿಕಾರಕ್ಕೆ ಮರಳುವ ನಿರೀಕ್ಷೆಯಲ್ಲಿದೆ. ಅತೃಪ್ತರಲ್ಲಿ ಏಳೆಂಟು ಮಂದಿ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟು ಬಿಜೆಪಿಗೆ ಬರಬಹುದು ಎನ್ನುವ ಲೆಕ್ಕಾಚಾರ ಬಿಜೆಪಿಯಲ್ಲಿದೆ. ಆದರೆ ಇದು ಸದ್ಯಕ್ಕೆ ಈಡೇರಲಿಕ್ಕಿಲ್ಲ. ಏಕೆಂದರೆ ಕಾಂಗ್ರೆಸ್ ಇನ್ನೂ ಐದು ಸ್ಥಾನಗಳನ್ನು ತನ್ನಲ್ಲಿ ಇಟ್ಟುಕೊಂಡಿದೆ. ಈಗ ಅತೃಪ್ತರಲ್ಲಿ ಗುಂಪು ಮಾಡಿ ಅವರ ನಾಯಕನಿಗೆ ಮೊದಲ ಇಪ್ಪತ್ತು ತಿಂಗಳು ನಂತರ ಅದೇ ಗುಂಪಿನ ಇನ್ನೊಬ್ಬನಿಗೆ ಇಪ್ಪತ್ತು ತಿಂಗಳು ಮತ್ತು ಉಳಿದ 20 ತಿಂಗಳು ಮತ್ತೊಬ್ಬನಿಗೆ ಕೊಟ್ಟು ಜ್ವಾಲೆಯನ್ನು ಸರಿ ಮಾಡಬಹುದು. ಹೀಗೆ ಮಾಡಿದರೆ ಒಂದು ಲಾಭವಿದೆ. ಇಪ್ಪತ್ತು ತಿಂಗಳುಗಳ ಬಳಿಕ ಸಚಿವರಾಗಲು ಸಿದ್ಧರಾದವರು ಯಾವ ಕಾರಣಕ್ಕೂ ಸರಕಾರ ಬೀಳಲು ಬಿಡುವುದಿಲ್ಲ. ಯಾಕೆಂದರೆ ಅಲಿಖಿತ ಭರವಸೆ ಸಿಕ್ಕಿದೆಯಲ್ಲ.
ಈ ನಡುವೆ ಕರಾವಳಿಯಲ್ಲಿ ಬಿಲ್ಲವರನ್ನು ಖುಷಿ ಪಡಿಸಲು ಹರೀಶ್ ಕುಮಾರ್ ಅವರಿಗೆ ವಿಧಾನಪರಿಷತ್ ಸ್ಥಾನ ನೀಡಲಾಗಿದೆ. ಕಳೆದ ಬಾರಿ ಹರಿಕೃಷ್ಣ ಬಂಟ್ವಾಳ್ ವಿಷಯದಲ್ಲಿ ಮಾಡಿದ ತಪ್ಪನ್ನು ಈ ಬಾರಿ ಮಾಡದಿರಲು ಕಾಂಗ್ರೆಸ್ ತೀರ್ಮಾನಿಸಿತ್ತು. ಅದರ ಫಲವಾಗಿ ಬಿಲ್ಲವ ಮುಂದಾಳು ಹರೀಶ್ ಕುಮಾರ್ ಎಂಎಲ್ಸಿ ಆಗಿದ್ದಾರೆ. ಸಜ್ಜನ ರಾಜಕಾರಣಿ ಹರೀಶ್ ಕುಮಾರ್ ಅವರು ತಮ್ಮ ಕ್ಷೇತ್ರಕ್ಕಾಗಿ ಏನು ಮಾಡಬಹುದು ಎಂದು ನೋಡುವ ಕಾಲ ಇದು. ಇನ್ನು ರಮಾನಾಥ್ ರೈಯವರು ಲೋಕಸಭೆಗೆ ಸ್ಪರ್ಧಿಸುವ ಇಂಗಿತ ವ್ಯಕ್ತಪಡಿಸಿದ್ದಾರೆ. ಹಾಗೆ ನೋಡಿದರೆ ಮುಂದಿನ ಬಾರಿ ದಕ್ಷಿಣ ಕನ್ನಡ ಲೋಕಸಭಾ ಕ್ಷೇತ್ರದಲ್ಲಿ ಇಬ್ಬರು ಬಂಟರ ಮುಖಾಮುಖಿ ಆಗಲಿದೆಯಾ ಎನ್ನುವುದು ಪ್ರಶ್ನೆ. ಅದರೊಂದಿಗೆ ವಿಧಾನಸಭಾ ಚುನಾವಣೆಯೂ ನಡೆದು ಹೋಗುತ್ತಾ ಎನ್ನುವುದು ಕುತೂಹಲ!
Leave A Reply