ಆಗ್ನೆಸ್ ಕಾಲೇಜಿನಲ್ಲಿ ಸ್ಕಾರ್ಫ್ ನಿಷೇಧ: ವಿದ್ಯಾರ್ಥಿನಿಯರಿಂದ ಪ್ರತಿಭಟನೆ
ಮಂಗಳೂರು : ಆಗ್ನೆಸ್ ಕಾಲೇಜಿನಲ್ಲಿ ಹಿಜಾಬ್ ಧರಿಸುವುದನ್ನು ನಿರ್ಭಂದಿಸಿದ ಆಡಳಿತ ಮಂಡಳಿಯ ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿನಿಯರು ರಸ್ತೆಗಿಳಿದು ಪ್ರತಿಭಟನೆ ನಡೆಸಿದ ಘಟನೆ ಮಂಗಳೂರಿನಲ್ಲಿ ನಡೆದಿದೆ.
ಕಾಲೇಜಿನಲ್ಲಿ ಸ್ಕಾರ್ಫ್ ಅಥವಾ ಹಿಜಾಬ್ ಧರಿಸುವ ಹಕ್ಕು ನೀಡಬೇಕೆಂದು ಆಗ್ರಹಿಸಿ ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರು ತರಗತಿ ಬಹಿಷ್ಕರಿಸಿ ಇಂದು ಪ್ರತಿಭಟನೆ ನಡೆಸಿದ್ದಾರೆ. ಕ್ಯಾಂಪಸ್ ಫ್ರಂಟ್ ಆಫ್ ಇಂಡಿಯಾ ನೇತೃತ್ವದಲ್ಲಿ ಈ ಪ್ರತಿಭಟನೆ ನಡೆಸಲಾಗಿದೆ. ಆಗ್ನೆಸ್ ಕಾಲೇಜು ವಿದ್ಯಾರ್ಥಿನಿಯರ ಧಾರ್ಮಿಕ ಸ್ವಾತಂತ್ರ್ಯವನ್ನು ಕಸಿದುಕೊಂಡು ದೌರ್ಜನ್ಯ ನಡೆಸುತ್ತಿದೆ ಎಂದು ವಿದ್ಯಾರ್ಥಿನಿಯರು ಆರೋಪಿಸಿದ್ದಾರೆ. ಹಿಜಾಬ್ ಧರಿಸುವುದು ಸಂವಿಧಾನ ನೀಡಿದ ಹಕ್ಕು. ಆದರೆ, ಹಿಜಾಬ್ (ಸ್ಕಾರ್ಫ್) ಧರಿಸದಂತೆ ಕಾಲೇಜು ನಿಯಮ ವಿಧಿಸುವುದು ತಪ್ಪು ಎಂದು ಪ್ರತಿಭಟನಾ ನಿರತ ವಿದ್ಯಾರ್ಥಿನಿಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಶೈಕ್ಷಣಿಕ ಸಾಲಿನಿಂದ ಕಾಲೇಜು ಆಡಳಿತ ಮಂಡಳಿ ಹಿಜಾಬ್ ಧರಿಸದಂತೆ ನಿಯಮ ಹೇರಿತ್ತು. ಕಾಲೇಜಿನ ಆಡಳಿತ ಮಂಡಳಿ ಹಾಗೂ ಪ್ರಾಂಶುಪಾಲರು ಮುಸ್ಲಿಂ ವಿದ್ಯಾರ್ಥಿನಿಯರಿಗೆ ಧಾರ್ಮಿಕ ನಿಯಮ ಪಾಲಿಸಲು ಅವಕಾಶ ನೀಡಬೇಕು. ಸಂವಿಧಾನ ನೀಡಿದ ಹಕ್ಕು ನಮಗೆ ಒದಗಿಸಬೇಕು ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
Leave A Reply