ಧನಂಜಯ ಕುಮಾರ್ ಗೆ ಬೇರೆ ಆಯ್ಕೆಯಿರಲಿಲ್ಲ!
ಧನಂಜಯ ಕುಮಾರ್ ಅವರಿಗೆ ಬೇರೆ ಯಾವುದೇ ಆಯ್ಕೆಗಳಿರಲಿಲ್ಲ. ಭಾರತೀಯ ಜನತಾ ಪಾರ್ಟಿಯ ಬಾಗಿಲು ಮುಚ್ಚಿತ್ತು. ಕರ್ನಾಟಕ ಜನತಾ ಪಾರ್ಟಿ (ಕೆಜೆಪಿ) ಬಿಜೆಪಿಯೊಂದಿಗೆ ಸಜ್ಜಿಗೆ ಬಜಿಲ್ ಆಗಿದೆ. ಇನ್ನು ಜಾತ್ಯಾತೀತ ಜನತಾದಳದಲ್ಲಿ ಇದ್ದರಾದರೂ ಆ ಪಕ್ಷದ ಯಾವ ಕಾರ್ಯಕ್ರಮದಲ್ಲಿಯೂ ಕಾಣಿಸಿಕೊಂಡಿರಲಿಲ್ಲ. ಈಗ ಕೊನೆಯದಾಗಿ ಕಾಂಗ್ರೆಸ್ ಸೇರಿಕೊಂಡಿದ್ದಾರೆ. ಅಲ್ಲಿಗೆ ಅವರ ರಾಜಕೀಯ ಚಕ್ರ ಪೂರ್ತಿಗೊಂಡಿದೆ. ಬಹುಶ: ಕಾಂಗ್ರೆಸ್ ನಲ್ಲಿ ಕೂಡ ಸಮಾಧಾನ ಆಗದಿದ್ದರೆ ಎಡಪಕ್ಷಗಳು ಮಾತ್ರ ಬಾಕಿ ಇವೆ.
ಅಷ್ಟಕ್ಕೂ ಧನಂಜಯ್ ಕುಮಾರ್ ಅವರ ರಾಜಕೀಯ ಜೀವನ ಹೀಗೆ ಡೋಲಾಯಮಾನವಾಗಿ ಹೋಗುವುದಕ್ಕೆ ಏನು ಕಾರಣ? ಸಂಶಯವೇ ಇಲ್ಲ. ಅವರು ಬಿಜೆಪಿಯ ಮೂಲ ಸಿದ್ಧಾಂತ ವ್ಯಕ್ತಿಗಿಂತ ಪಕ್ಷ ದೊಡ್ಡದು ಎನ್ನುವುದು ಅನುಸರಿಸದೇ ಹೋದದ್ದು. ಈಗಂತೂ ಪಕ್ಷಕ್ಕಿಂತ ದೇಶ ದೊಡ್ಡದು ಎನ್ನುವ ಮತ್ತೊಂದು ನಂಬಿಕೆಗಂತೂ ಅವರು ಕಾಂಗ್ರೆಸ್ಸಿಗೆ ಸೇರುವ ಮೂಲಕ ಎಳ್ಳುನೀರು ಬಿಟ್ಟಿದ್ದಾರೆ. ದಕ್ಷಿಣ ಕನ್ನಡ ಅಥವಾ ಆಗಿನ ಮಂಗಳೂರು ಲೋಕಸಭಾ ಕ್ಷೇತ್ರವನ್ನು ನಾಲ್ಕು ಬಾರಿ ಪ್ರತಿನಿಧಿಸಿದ ಧನಂಜಯ್ ಕುಮಾರ್ ಅವರು ಮೊದಲ ಬಾರಿಗೆ ಸೋಲಿಲ್ಲದ ಸರದಾರ ಜನಾರ್ಧನ ಪೂಜಾರಿಯನ್ನು ಸೋಲಿಸಿ ಕಾಂಗ್ರೆಸ್ಸಿನ ಸುವರ್ಣ ಯುಗವನ್ನು ಅಂತ್ಯಗೊಳಿಸಿದ್ದರು. ಅದರ ನಂತರ ವಾಜಪೇಯಿ ಸಂಪುಟದಲ್ಲಿ ಮಂತ್ರಿ ಆಗಿಯೂ ಕಾರ್ಯ ನಿರ್ವಹಿಸಿದ್ದರು. ಸಿವಿಲ್ ಎವಿಯೇಶನ್, ಹಣಕಾಸು ರಾಜ್ಯ ಮಂತ್ರಿ, ಜವುಳಿ ಮಂತ್ರಿಯೂ ಆಗಿದ್ದ ಧನಂಜಯ ಕುಮಾರ್, ಯಡಿಯೂರಪ್ಪನವರ ಕಟ್ಟಾ ಬೆಂಬಲಿಗರಾಗಿದ್ದರು. ಎಲ್ಲಿಯ ತನಕ ಎಂದರೆ ಯಡಿಯೂರಪ್ಪ ಭ್ರಷ್ಟಾಚಾರದ ಹಗರಣದಲ್ಲಿ ಸಿಲುಕಿ ಬಿದ್ದು ಮುಖ್ಯಮಂತ್ರಿ ಸ್ಥಾನದಿಂದ ಇಳಿಯಲು ಹೈಕಮಾಂಡ್ ಸೂಚಿಸಿದಾಗ ಬಹಿರಂಗವಾಗಿ ಕೇಂದ್ರದ ನಾಯಕರಿಗೆ ಸಡ್ಡು ಹೊಡೆದಿದ್ದರು. ಶೋಭಾ ಕರಂದ್ಲಾಜೆ ಎಡಭಾಗದಲ್ಲಿ ನಿಂತರೆ ಧನಂಜಯ್ ಕುಮಾರ್ ಬಲಭಾಗದಲ್ಲಿ ನಿಂತು ಯಡಿಯೂರಪ್ಪನವರಿಗೆ ಎಲ್ಲಾ ವಿಷಯಗಳಿಂದಲೂ ರಕ್ಷಣೆ ನೀಡುತ್ತಿದ್ದರು. ಆದರೆ ಯಾವಾಗ ಬಿಎಸ್ ವೈ ಪರವಾಗಿ ನಿಂತು ಬಿಜೆಪಿ ನಾಯಕರನ್ನೇ ಧನಂಜಯ್ ಟೀಕಿಸಿದರೋ ಅದು ಅವರ ರಾಜಕೀಯ ಜೀವನದ ದೊಡ್ಡ ತಪ್ಪಾಗಿ ಪರಿಣಮಿಸಿತ್ತು.
ಪಕ್ಷ ಮೊದಲು ಇವರನ್ನು ಉಚ್ಚಾಟಿಸಿ ಬಿಎಸ್ ವೈಗೆ ಸಂದೇಶ ಕಳುಹಿಸಿತ್ತು. ಅದರ ನಂತರ ಯಡಿಯೂರಪ್ಪ ಕೂಡ ಬಿಜೆಪಿ ಬಿಟ್ಟು ಕೆಜೆಪಿ ಕಟ್ಟಿದರು. ತಮ್ಮ ಪರಮಾಪ್ತನಿಗೆ ಅದರ ಅಧ್ಯಕ್ಷ ಪಟ್ಟ ಕಟ್ಟಿದರು. ಆದರೆ ಮತ್ತೆ ಯಡಿಯೂರಪ್ಪ ಬಿಜೆಪಿಗೆ ವಾಪಾಸಾದಾಗ ಅವರೊಂದಿಗೆ ಇದ್ದ ಅಷ್ಟು ಜನರನ್ನು ಒಳಗೆ ಸೇರಿಸಿ ಮೈಲಿಗೆ ಮಾಡಿಕೊಳ್ಳಲು ಬಿಜೆಪಿ ಸಿದ್ಧವಿರಲಿಲ್ಲ. ಯಾರನ್ನು ಕಡ್ಡಾಯವಾಗಿ ಸೇರಿಸಿಕೊಳ್ಳಲು ಬಿಎಸ್ ವೈ ಹೇಳಿದರೋ ಅವರನ್ನು ಮಾತ್ರ ಒಳಗೆ ಬಿಟ್ಟುಕೊಳ್ಳಲಾಯಿತು. ಆಗ ನಡೆದ ಸಂಧಾನ ಮಾತುಕತೆಯಲ್ಲಿ ಧನಂಜಯ್ ಕುಮಾರ್ ಅವರಿಗೆ ಪಾಸ್ ಸಿಕ್ಕಿರಲಿಲ್ಲ. ಕಾದು ಕಾದು ಅವರು ದೇವೆಗೌಡರ ಮನೆ ದಾರಿ ಹಿಡಿದರು. ಆದರೆ ಅಲ್ಲಿ ತಂದೆ ಮಕ್ಕಳದ್ದೇ ರಾಜಕೀಯ. ಅವರಿಗೆ ಮೂರು ಬಾರಿಯಲ್ಲ, ಮೂವತ್ತು ಬಾರಿ ಕೇಂದ್ರ ಸಚಿವರಾಗಿದ್ದವರ ಮೇಲೆನೆ ಪ್ರೀತಿಯಿರುವುದಿಲ್ಲ, ಹಾಗಿರುವಾಗ ಇವರು ಅವರಿಗೆ ಯಾವ ಲೆಕ್ಕ. ಸೂಟುಕೇಸ್ ಕೊಟ್ಟವರಿಗೆ ಮೊದಲ ಸ್ಥಾನ ಎಂದು ಅವರದ್ದೇ ಕುಟುಂಬದ ಕುಡಿ ಹೇಳಿರುವಾಗ ಬಹುಶ: ಧನಂಜಯ್ ಕುಮಾರ್ ಅವರು ಕೊಟ್ಟ ಸೂಟ್ ಕೇಸ್ ಸೈಜಿನ ಮೇಲೆ ಅವರಿಗೆ ಮರ್ಯಾದೆ ಸಿಕ್ಕಿರಬಹುದು.
ಈಗ ಚುನಾವಣೆ ಬರುತ್ತಾ ಇರುವುದರಿಂದ ತುರ್ತಾಗಿ ಧನಂಜಯ್ ಅವರಿಗೆ ಏನಾದರೂ ಮಾಡಿ ಲೈಮ್ ಲೈಟ್ ಗೆ ಬರಬೇಕು. ಅದಕ್ಕೆ ಉಳಿದಿರುವ ಒಂದು ಪಾರ್ಟಿ ಕಾಂಗ್ರೆಸ್. ಅಲ್ಲಿಗೆ ಸೇರಿದ್ದಾರೆ. ಮುಖ್ಯಮಂತ್ರಿ ಸಿದ್ಧರಾಮಯ್ಯನವರು ರಾಹುಲ್ ಗಾಂಧಿ ಸಮ್ಮುಖದಲ್ಲಿ ಪಕ್ಷಕ್ಕೆ ವಿದ್ಯುಕ್ತವಾಗಿ ಸೇರಿಸಿಕೊಂಡಿದ್ದಾರೆ. ಅಲ್ಲಿಗೆ ಬಿಜೆಪಿಯನ್ನು ಬೈಯಲು ಅವರದ್ದೇ ಪಕ್ಷದ ಎರಡೂವರೆ ದಶಕದ ಸಂಬಂಧ ಹೊಂದಿದ ನಾಯಕ ಸಿಕ್ಕಿದಂತಾಗಿದೆ. ಇನ್ನು ಧನಂಜಯ್ ಗೆ ಕಾಂಗ್ರೆಸ್ ವಕ್ತಾರರ ಸ್ಥಾನ ಕೊಟ್ಟರೆ ಮಹಾಭಾರತದಲ್ಲಿ ನಡೆದ ಶೈಲಿಯಲ್ಲಿಯೇ ಯುದ್ಧ ನಡೆಯಲಿದೆ. ಇವರನ್ನು ಮುಂದಿಟ್ಟು ಕಾಂಗ್ರೆಸ್ ಯಾವ ಆಟ ಆಡುತ್ತೊ ಕಾದು ನೋಡಬೇಕು.
Leave A Reply