ಸ್ವಜಾತಿ ಪ್ರೇಮಕ್ಕಾಗಿ ಪ್ರಾಮಾಣಿಕರ ಬಲಿ ಬೇಕಾ ಯುಟಿ ಖಾದರ್!
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ಸ್ವಚ್ಚ ಭಾರತ್ ಮಾಡಬೇಕು. ಅದರ್ಥ ಅಲ್ಲಿ ಕಾಣುತ್ತಿರುವ ಕಸಗಳನ್ನು ತೆಗೆದು ಕ್ಲೀನ್ ಮಾಡಬೇಕು ಎಂದಲ್ಲ. ಕಾಣದ “ಕಸ”ವನ್ನು ಗುಡಿಸಿ ಸಾರಿಸಿ ಹೊರಗೆ ಹಾಕಬೇಕು. ಇದರಿಂದ ಶಿಕ್ಷಣ ಸಂಸ್ಥೆಗಳ ಮಟ್ಟಿಗೆ ದೊಡ್ಡ ದೇವಾಲಯವಾಗಿರುವ ಮಂಗಳೂರು ವಿವಿ ಸ್ವಚ್ಚವಾಗಿ ಅದರ ಕುರಿತು ಭಯಭಕ್ತಿ ಉಂಟಾಗುತ್ತದೆ. ಭಾರತದ ಪ್ರಧಾನಿ ನರೇಂದ್ರ ಮೋದಿಯವರು ಅನೇಕ ಕಡೆ ಸ್ವಚ್ಚ ಭಾರತ್ ಚಾಲೆಂಜ್ ಅಂದರೆ ಕೈಯಲ್ಲಿ ಪೊರಕೆ ಹಿಡಿದು ಕ್ಲೀನ್ ಮಾಡಿ ಎಂದು ಗಣ್ಯಾತೀಗಣ್ಯರಿಗೆ ಚಾಲೆಂಜ್ ಮಾಡಿ ಅವರಿಂದ ಸ್ವಚ್ಚ ಭಾರತದ ಬಗ್ಗೆ ಅಭಿರುಚಿ ಹುಟ್ಟಿಸಿದ್ದಾರೆ. ಈಗ ಅವರು ಕರ್ನಾಟಕದ ರಾಜ್ಯಪಾಲರಿಗೆ ಮಂಗಳೂರು ವಿವಿಯ ಒಳಗೆ ಆಡಳಿತದಲ್ಲಿರುವ ಕಸಗಳನ್ನು ತೆಗೆದು ಕ್ಲೀನ್ ಮಾಡಿ ಎಂದು ಸವಾಲು ಹಾಕಬೇಕು. ಇದು ಕೂಡ ಸ್ವಚ್ಚ ಭಾರತ್.
ಭ್ರಷ್ಟರಿಗೆ ಖಾನ್ ರಿಜಿಸ್ಟ್ರಾರ್ ಆದರೆ ಒಳ್ಳೆಯದು…
ಸದ್ಯ ಮಂಗಳೂರು ವಿವಿಯಲ್ಲಿ ದಕ್ಷ, ಪ್ರಾಮಾಣಿಕ ವ್ಯಕ್ತಿ ಬಿಎಸ್ ನಾಗೇಂದ್ರ ಪ್ರಕಾಶ್ ಅವರು ರಿಜಿಸ್ಟ್ರಾರ್ ಆಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿ ಆ ಜಾಗದಲ್ಲಿ ವಿರಾಜಮಾನರಾಗಲು ಹೋರಾಡುತ್ತಿರುವ ವ್ಯಕ್ತಿಯ ಹೆಸರು ಎಎಂ ಖಾನ್. ಇವರು ಯಾಕೆ ರಿಜಿಸ್ಟ್ರಾರ್ ಆಗಲು ಕೈಕಾಲು ಬಡಿಯುತ್ತಿದ್ದಾರೆಂದರೆ ಅದಕ್ಕೂ ಒಂದು ಕಾರಣವಿದೆ. ಒಂದು ವೇಳೆ ಮಂಗಳೂರು ವಿವಿಯ ಮೇಲೆ ತನಿಖೆಗೆ ರಾಜ್ಯಪಾಲರಿಂದ ಆದೇಶ ಬಂದರೆ ಆಗ ವಿಚಾರಣಾಧಿಕಾರಿಗಳಿಗೆ ಎಲ್ಲಾ ದಾಖಲೆ ಒದಗಿಸಬೇಕಾಗಿರುವುದು ರಿಜಿಸ್ಟ್ರಾರ್. ಒಂದು ವೇಳೆ ನಾಗೇಂದ್ರ ಪ್ರಕಾಶ್ ರಿಜಿಸ್ಟ್ರಾರ್ ಆಗಿಯೇ ಇದ್ದರೆ ಅವರಿಗೆ ಮಂಗಳೂರು ವಿವಿಯಲ್ಲಿ ನಡೆಯುತ್ತಿರುವ ಪ್ರತಿ ಭ್ರಷ್ಟಾಚಾರದ ಇಂಚಿಂಚೂ ಗೊತ್ತು. ಅವರು ಅಲ್ಲಿ ಆಗಿರುವ ಅಷ್ಟೂ ಭ್ರಷ್ಟಾಚಾರವನ್ನು ವಿರೋಧಿಸಿಕೊಂಡೇ ಬಂದವರು. ಯಾರು ಯಾವ ರೀತಿಯಲ್ಲಿ ಹಣ ಹೊಡೆದಿದ್ದಾರೆ ಎನ್ನುವ ಪ್ರತಿ ಮಾಹಿತಿ ಅವರ ಬಳಿ ಇದೆ. ಅದೆಲ್ಲವನ್ನು ಅವರು ತನಿಖೆ ಮಾಡಲು ಬಂದವರಿಗೆ ನೀಡಿದರೆ ಅಲ್ಲಿಗೆ ಆಲಿಬಾಬಾ ಔರ್ ಚಾಲೀಸ್ ಚೋರ್ ಕಥೆ ಏನಾಗಬಹುದು ಎಂದು ಅಂದಾಜು ಮಾಡುವುದು ಕಷ್ಟವೇನಲ್ಲ.
ಅದಕ್ಕಾಗಿ ಮಂಗಳೂರು ವಿವಿಯಲ್ಲಿ ಬೇರು ಬಿಟ್ಟಿರುವ ಭ್ರಷ್ಟರು ನಾಗೇಂದ್ರ ಪ್ರಕಾಶ್ ಅವರನ್ನು ಅಲ್ಲಿಂದ ದೂರ ಬೇರೆಡೆ ವರ್ಗಾಯಿಸುವ ಪ್ಲಾನ್ ಮಾಡುತ್ತಿದ್ದಾರೆ. ಅವರನ್ನು ವರ್ಗಾಯಿಸಿ ರಿಜಿಸ್ಟ್ರಾರ್ ಹುದ್ದೆಗೆ ತಮ್ಮದೇ ವ್ಯಕ್ತಿ ಎಎಂ ಖಾನ್ ಅವರನ್ನು ತರುವ ಉಪಾಯದಲ್ಲಿದ್ದಾರೆ. ತನಿಖೆ ಶುರುವಾಗುವ ಹೊತ್ತಿಗೆ ಎಎಂ ಖಾನ್ ರಿಜಿಸ್ಟ್ರಾರ್ ಆದರೆ ಭ್ರಷ್ಟರನ್ನು ರಕ್ಷಿಸುವುದು ಸುಲಭ. ಯಾಕೆಂದರೆ ಎಲ್ಲಾ ದಾಖಲೆಗಳು ಅವರ ಬಳಿಯೇ ಇರುತ್ತದೆ. ಅದರಲ್ಲಿ ಯಾವುದನ್ನು ಮುಚ್ಚಿಡುವುದು, ಯಾವುದರಲ್ಲಿ ಏನು ಹೆಚ್ಚು ಕಡಿಮೆ ಮಾಡಬೇಕು. ಯಾವುದನ್ನು ಮ್ಯಾನ್ಯುಪಲೇಟ್ ಮಾಡಬೇಕು ಎನ್ನುವುದನ್ನು ಎಎಂ ಖಾನ್ ರಿಜಿಸ್ಟ್ರಾರ್ ಆಗಿ ಇದ್ದರೆ ಮಾತ್ರ ಮಾಡಬಹುದು. ಇದರಿಂದ ಸುಲಭವಾಗಿ ತನಿಖೆಯನ್ನು ಹಾದಿ ತಪ್ಪಿಸಬಹುದು. ಇಂತಹ ಒಂದು ಪ್ಲಾನ್ ನಡೆಯುತ್ತಿದೆ.
ಭ್ರಷ್ಟರು ಎಎಂ ಖಾನ್ ಅವರ ಪರವಾಗಿ ಬ್ಯಾಟ್ ಬೀಸಲು ಕಾರಣ ಅವರು ಇವರದ್ದೇ ಗ್ಯಾಂಗಿನ ಸದಸ್ಯರು. ಈ ಹಿಂದೆ ಅಂಕಪಟ್ಟಿ ಹಗರಣದಲ್ಲಿ ಕೋಟ್ಯಾಂತರ ರೂಪಾಯಿ ಅವ್ಯವಹಾರಗಳಾದಾಗ ಅದರ ಕೇಂದ್ರ ಬಿಂದು ಆಗಿದ್ದವರು ಇದೇ ಎಎಂ ಖಾನ್. ಆಗ ಭೈರಪ್ಪ ಕುಲಪತಿಯಾಗಿದ್ದರು. ಸತ್ಯ ಶೋಧನಾ ಸಮಿತಿ ತನಿಖೆ ಮಾಡಿತ್ತು. ಆದರೆ ಅದನ್ನು ಮುಚ್ಚಿ ಹಾಕುವಲ್ಲಿ ಇಡೀ ಭ್ರಷ್ಟರ ಕೂಟ ಒಟ್ಟಾಗಿತ್ತು. ಅಂತಹ ಎಎಂ ಖಾನ್ ರನ್ನು ರಿಜಿಸ್ಟ್ರಾರ್ ಮಾಡುವುದೂ ಒಂದೇ, ತನಿಖೆ ಆಗುವ ಮೊದಲೇ ಫಲಿತಾಂಶ ಹೇಳುವುದೂ ಒಂದೇ.
ಖಾದರ್ ಅವರು ಮಾಹಿತಿ ತರಿಸಿಕೊಳ್ಳಲಿ...
ಇನ್ನು ನಮ್ಮ ರಾಜ್ಯದ ವಸತಿ, ನಗರಾಭಿವೃದ್ಧಿ ಸಚಿವ ಯುಟಿ ಖಾದರ್ ಅವರು ಈ ವಿಷಯದಲ್ಲಿ ಮೂಗು ತೂರಿಸದಿದ್ದರೆ ಒಳ್ಳೆಯದು. ಯಾಕೆಂದರೆ ಒಂದು ವೇಳೆ ಅವರು ಇದರಲ್ಲಿ ಕೈ ಹಾಕಿದರೆ ಅವರ ಕೈಗೆ ಕೆಸರು ತಾಗುತ್ತದೆ. ಆದರೆ ಸ್ವಜಾತಿ ಪ್ರೇಮದಿಂದ ಅವರು ಎಎಂ ಖಾನ್ ಪರವಾಗಿ ಉನ್ನತ ಶಿಕ್ಷಣ ಸಚಿವ ಜಿಟಿ ದೇವೇಗೌಡರ ಬಳಿ ಶಿಫಾರಸ್ಸು ಮಾಡುತ್ತಿದ್ದಾರೆಂದು ತಿಳಿದು ಬಂದಿದೆ. ಯುಟಿ ಖಾದರ್ ತಮ್ಮೊಂದಿಗೆ ವಿಧಾನ ಪರಿಷತ್ ಸದಸ್ಯ ಬಿಎಂ ಫಾರೂಕ್ ಅವರನ್ನು ಕರೆದುಕೊಂಡು ಹೋಗಿ ಸಿಕ್ಕಾಪಟ್ಟೆ ಒತ್ತಡ ಹಾಕಿ ಕೆಲಸ ಮಾಡಿಕೊಡಿ ಎಂದು ದಂಬಾಲು ಬಿದ್ದಿದ್ದಾರೆ. ಒಂದು ವೇಳೆ ಎಎಂ ಖಾನ್ ಪ್ರಾಮಾಣಿಕರಾಗಿದ್ದಲ್ಲಿ ಅವರ ಬಗ್ಗೆ ಯುಟಿ ಖಾದರ್ ಶಿಫಾರಸ್ಸು ಮಾಡುತ್ತಿದ್ದರೆ ಯಾರದ್ದೂ ಆಕ್ಷೇಪ ಇರುತ್ತಿರಲಿಲ್ಲ. ಬೇಕಾದರೆ ಯುಟಿ ಖಾದರ್ ಜಾತಿಪ್ರೇಮ ಬಿಟ್ಟು ನಿಜವಾಗಿ ಮಂಗಳೂರು ವಿವಿಯಲ್ಲಿ ಭ್ರಷ್ಟಾಚಾರ ನಿಲ್ಲಬೇಕು ಎಂದು ಇಚ್ಚಿಸಿದ್ದಲ್ಲಿ ಖಾನ್ ಪರವಾಗಿ ವಶೀಲಿಬಾಜಿ ಮಾಡಬಾರದು. ಒಂದು ವೇಳೆ ಅವರು ಜಾತಿಪ್ರೇಮಿಯಾಗಿಯೇ ಹೋರಾಡುತ್ತೇನೆ ಎಂದು ನಿರ್ಣಯಿಸಿದ್ದಲ್ಲಿ ನಾಗೇಂದ್ರ ಪ್ರಕಾಶ್ ಅವರದ್ದು ಯಾವ ಜಾತಿ ಎಂದು ಕೂಡ ಅವರಿಗೆ ಗೊತ್ತಿರಲಿ.
ನಾಗೇಂದ್ರ ಪ್ರಕಾಶ್ ಲಿಂಗಾಯತ ಧರ್ಮದವರು. ಅವರನ್ನು ಅನಗತ್ಯವಾಗಿ ಮಂಗಳೂರು ವಿವಿಯ ರಿಜಿಸ್ಟ್ರಾರ್ ಹುದ್ದೆಯಿಂದ ವರ್ಗಾಯಿಸುವ ಮೂಲಕ ರಾಜ್ಯ ಸರಕಾರದ ಮಂತ್ರಿಯೊಬ್ಬರು ಲಿಂಗಾಯಿತ ವಿರೋಧಿ ಧೋರಣೆಯನ್ನು ತಾಳುತ್ತಿರುವುದು ಸ್ಪಷ್ಟ. ಇದನ್ನು ಯಾರಾದರೂ ಖಾದರ್ ಅವರಿಗೆ ಮನವರಿಕೆ ಮಾಡುವುದು ಒಳ್ಳೆಯದು!
Leave A Reply