ಮಂಗಳೂರು ವಿವಿಯಲ್ಲಿ ಪರೀಕ್ಷೆ ಬರೆಯದೇ ಅಂಕಪಟ್ಟಿ ಪಡೆಯಬಹುದು!!
ಮಂಗಳೂರು ವಿಶ್ವವಿದ್ಯಾನಿಲಯದಲ್ಲಿ ನೀವು ಅಗೆದಷ್ಟು ಭ್ರಷ್ಟಾಚಾರ ಸಿಗುತ್ತದೆ. ಇಲ್ಲಿನ ಗೋಡೆ, ಕಂಬಗಳಿಗೂ ಮಾತನಾಡಲು ಬರುತ್ತಿದ್ದರೆ ಇಲ್ಲಿ ನಡೆದಿರುವ ಭ್ರಷ್ಟಾಚಾರದ ಬಗ್ಗೆ ಪುಟಗಟ್ಟಲೆ ಕಥೆಯನ್ನು ಹೇಳಬಲ್ಲವು. ಇವತ್ತು ಕೆಲವು ಉದಾಹರಣೆಗಳನ್ನು ನೋಡೋಣ.
ಮಂಗಳೂರು ವಿಶ್ವವಿದ್ಯಾಲಯದ ವ್ಯಾಪ್ತಿಯ ಹೊರಗೆ ಇವರು ಅಧ್ಯಯನ ಕೇಂದ್ರ (ಸ್ಟಡಿ ಸೆಂಟರ್) ತೆರೆಯುವಂತಿಲ್ಲ. ಆದರೆ ಇವರು ತೆರೆದಿದ್ದಾರೆ. ಅದು ವಿಶ್ವವಿದ್ಯಾನಿಲಯದ ನೀತಿ ನಿಯಮಾವಳಿಗೆ ತದ್ವಿರುದ್ಧ ಎಂದು ಗೊತ್ತಿರುವುದರಿಂದ ಒಂದು ಉಪಾಯ ಹೂಡಿದ್ದಾರೆ. ಅದೇನೆಂದರೆ ಮಡಿಕೇರಿಯ ಕುಶಾಲನಗರದಲ್ಲಿ ಪರೀಕ್ಷಾ ಕೇಂದ್ರ ಎಂದು ಮಾಡಿದ್ದಾರೆ ಅಂದರೆ ದೂರಶಿಕ್ಷಣದ ವಿದ್ಯಾರ್ಥಿಗಳಿಗೆ ಪರೀಕ್ಷೆ ಮಾಡುವ ಕೇಂದ್ರ ಎಂದು ದಾಖಲೆಗಳಲ್ಲಿ ತೋರಿಸಲು ಹೀಗೆ ಮಾಡಿದ್ದಾರೆ. ಆದರೆ ನೀವು ಕುಶಾಲನಗರಕ್ಕೆ ಹೋಗಿ ನೋಡಿದರೆ ಅಲ್ಲೊಂದು ಚಿಕ್ಕ ಕೋಣೆ ಮಾತ್ರ ಕಾಣುತ್ತದೆ. ಇವರು ಏನು ಮಾಡುವುದು ಎಂದರೆ ಬೆಂಗಳೂರಿನ ವಿದ್ಯಾರ್ಥಿಗಳಿಗೆ ಅವರ ಊರಿನಲ್ಲಿಯೇ ಪರೀಕ್ಷೆ ಮಾಡುವುದು ಆದರೆ ತೋರಿಸುವಾಗ ಕುಶಾಲನಗರದಲ್ಲಿ ಎಂದು ತೋರಿಸುವುದು. ಹೀಗೆ ಬೆಂಗಳೂರಿನ ವಿದ್ಯಾರ್ಥಿಗಳಿಂದ ಇಪ್ಪತ್ತಿಪ್ಪತ್ತು ಸಾವಿರ ರೂಪಾಯಿ ಹಣ ತೆಗೆದುಕೊಳ್ಳುವುದು. ಹೀಗೆ ಮಾಡಿ ಹಣ ಮಾಡುವುದು ಇವರ ಪ್ಲ್ಯಾನ್.
ಇದರಲ್ಲಿ ಇನ್ನೊಂದು ಪ್ಲ್ಯಾನ್ ಏನೆಂದರೆ ಯಾರೋ ಪರೀಕ್ಷೆ ಕಟ್ಟಿ ಇನ್ಯಾರೋ ಬರೆಯುವಂತಹ ಅವಕಾಶ ಕೂಡ ಮಂಗಳೂರು ವಿವಿಯ ಭ್ರಷ್ಟರ ಪಡೆ ಮಾಡಿಕೊಡುತ್ತದೆ. ಇದು ಬೇಕಾದರೆ ಇವರು ಬೆಂಗಳೂರಿನಲ್ಲೋ ಅಥವಾ ನಿಯಮ ಉಲ್ಲಂಘಿಸಿ ಎಲ್ಲೋ ಮಾಡುವ ಪರೀಕ್ಷೆಗಳಲ್ಲಿ ಕುಳಿತುಕೊಳ್ಳುವ ವ್ಯಕ್ತಿಗಳ ಮತ್ತು ಹಾಲ್ ಟಿಕೆಟ್ ನಲ್ಲಿ ಇರುವ ವಿದ್ಯಾರ್ಥಿಗಳ ಹ್ಯಾಂಡ್ ರೈಟಿಂಗ್ ಅನ್ನು ತಜ್ಞರಿಂದ ಪರಿಶೋಧಿಸಿದರೆ ಸತ್ಯ ಹೊರಗೆ ಬರುತ್ತದೆ. ಇನ್ನು ಎಷ್ಟೋ ಬಾರಿ ದೂರಶಿಕ್ಷಣದ ಹೆಸರಿನಲ್ಲಿ ಪರೀಕ್ಷೆಗಳನ್ನು ಮಾಡದೇ ಅಂಕಪಟ್ಟಿ ಮತ್ತು ಸರ್ಟಿಫಿಕೇಟ್ ಕೊಟ್ಟಿರುವುದೂ ಇದೆ. ಈ ಎಲ್ಲಾ ಹಗರಣಗಳ ಹಿಂದಿರುವ ಮಾಸ್ಟರ್ ಮೈಂಡ್ ಮಂಗಳೂರು ವಿವಿಯ ಪರೀಕ್ಷಾಂಗ ಕುಲಪತಿ ಎಎಂ ಖಾನ್. ಆದರೆ ಇಲ್ಲಿಯ ತನಕ ಯಾವುದೇ ಹಗರಣದಲ್ಲಿ ಯಾರಿಗೂ ಶಿಕ್ಷೆ ಆಗಿಲ್ಲ.
ಇದೆಲ್ಲಾ ನೋಡಬೇಕಾದ ಸಿಂಡಿಕೇಟ್ ಸದಸ್ಯರು ಸಭೆಗಳಲ್ಲಿ ಭಾಗವಹಿಸುವುದು, ಮೀನೂಟ ಮಾಡುವುದು ಮತ್ತು 1400 ಗೌರವಧನ ಸ್ವೀಕರಿಸುವುದಕ್ಕೆ ಮಾತ್ರ ಸೀಮಿತವಾಗಿದ್ದಾರೆ. ಇವರು ಸ್ವಲ್ಪ ಸಮಯ ಮಂಗಳೂರು ವಿವಿಯ ಆಡಳಿತದ ಬಗ್ಗೆ ಗಮನವಿಟ್ಟು ಒಳಗೆ ಏನಾಗುತ್ತಿದೆ, ಭ್ರಷ್ಟಾಚಾರದ ವಾಸನೆ ಬಡಿಯುತ್ತಿದೆಯಲ್ಲ ಎಂದು ನೋಡಿದ್ದರೆ ಒಂದಷ್ಟರ ಮಟ್ಟಿಗೆ ಭ್ರಷ್ಟರಿಗೆ ಯಾರಾದರೂ ಕೇಳುವವರು ಇದ್ದಾರೆ ಎನ್ನುವ ಹೆದರಿಕೆ ಆದರೂ ಇರುತ್ತಿತ್ತು!
Leave A Reply