ಮಂಗಳೂರಿನಲ್ಲಿ ವರುಣ ದೇವನ ಪ್ರೀತ್ಯರ್ಥಕ್ಕೆ ಪರ್ಜನ್ಯ ಜಪ
ಮಂಗಳೂರು, ಆಗಸ್ಟ್ 18: ಜಲಪ್ರಳಯದಲ್ಲಿ ಸಂತ್ರಸ್ತರಾದವರಿಗೆ ಸಾಂತ್ವನ ವರುಣ ದೇವರ ಪ್ರೀತ್ಯರ್ಥ ಮಂಗಳೂರಿನಲ್ಲಿ ಪರ್ಜನ್ಯ ಜಪ ನಡೆದಿದೆ. ನಗರದ ಕ್ರದಿ ದೇವಾಲಯದಲ್ಲಿ ಈ ಜಪ ನಡೆಸಲಾಗಿದೆ. ಕೇರಳ ಸೇರಿದಂತೆ ರಾಜ್ಯದ ಕೊಡಗು ಹಾಗು ಪಶ್ಚಿಮ ಘಟ್ಟ ತಪ್ಪಲಲ್ಲಿ ಅತಿವೃಷ್ಟಿಯ ಪರಿಣಾಮ ಉಂಟಾಗಿರುವ ಪ್ರಾಣ ಹಾನಿ ಹಾಗೂ ಸಂತ್ರಸ್ತರಾದವರ ಪರವಾಗಿ ಶ್ರೀ ಕ್ಷೇತ್ರ ಕದ್ರಿಯಲ್ಲಿ ಅಖಿಲ ಭಾರತ ಬ್ರಾಹ್ಮಣ ಒಕ್ಕೂಟ ವತಿಯಿಂದ ವರುಣ ದೇವರ ಪ್ರೀತ್ಯರ್ಥ ಪರ್ಜನ್ಯ ಜಪ, ರುದ್ರ ಪಾರಾಯಣ ವಿಷ್ಣುಸಹಸ್ರನಾಮ ಪಠಣ ನಡೆಸಲಾಯಿತು.
ಮಂಗಳೂರು ನಗರದ ಇತಿಹಾಸ ಪ್ರಸಿದ್ದ ಕದ್ರಿ ದೇವಳದ ಗಂಗಾ ತೀರ್ಥದಲ್ಲಿ ಪರ್ಜನ್ಯ ಜಪ ನಡೆಯಿತು. ಅರ್ಚಕರಾದ ಪ್ರಭಾಕರ ಅಡಿಗ, ರವಿ ಅಡಿಗ, ರಾಘವೇಂದ್ರ ಅಡಿಗರ ನೇತೃತ್ವದಲ್ಲಿ ಈ ಕಾರ್ಯಕ್ರಮ ಆಯೋಜಿಸಲಾಗಿತ್ತು. ಕಲ್ಕೂರ ಪ್ರತಿಷ್ಠಾನದ ಅಧ್ಯಕ್ಷ ಎಸ್. ಪ್ರದೀಪ ಕುಮಾರ ಕಲ್ಕೂರ ವಿಪ್ರ ಸಮಾಜ ಲ್ಯಾಂಡ್ ಲಿಂಕ್ಸ್, ರುದ್ರ ಸಮಿತಿ ಭಾರತಿ ಕಾಲೇಜು ನಂತೂರು, ಸುಬ್ರಹ್ಮಣ್ಯ ಸಭಾ ಹಾಗೂ ಪರಿಸರದ ವಿಪ್ರ ಸಮಾಜದ ಬಂಧುಗಳು ಮತ್ತು ಸಾರ್ವಜನಿಕರು ಪಾಲ್ಗೊಂಡರು.
ಭಾರಿ ಮಳೆ ಹಾಗೂ ಭೂ ಕುಸಿತದಿಂದಾಗಿ ಬೆಂಗಳೂರು-ಮಂಗಳೂರು ನಡುವೆ ಸುಮಾರು 50 ಕಡೆಗಳಲ್ಲಿ ರೈಲು ಹಳಿ ಸಂಪರ್ಕ ಕಡಿತಗೊಂಡಿದ್ದು, ತಿಂಗಳುಗಳ ಕಾಲ ಈ ಮಾರ್ಗದಲ್ಲಿ ರೈಲು ಸಂಚಾರ ಅನುಮಾನ ಎಂದು ರೈಲ್ವೆ ಮೂಲಗಳು ತಿಳಿಸಿವೆ. ಈಗಾಗಲೇ ಭಾರೀ ಮಳೆಯಿಂದ ಶಿರಾಡಿಘಾಟ್ ಸ್ಥಗಿತಗೊಂಡಿದ್ದು, ಪ್ರಯಾಣಿಕರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.
Leave A Reply