ವಾಹನ ಸವಾರರಿಗೆ ಕೇಂದ್ರದಿಂದ ಗುಡ್ ನ್ಯೂಸ್…!!!
ನವದೆಹಲಿ: ತೈಲ ಬೆಲೆ ಏರಿಕೆ ಆಗುತ್ತಿದ್ದಂತೆ ಕೇಂದ್ರ ಸರ್ಕಾರ ಅಬಕಾರಿ ಸುಂಕವನ್ನು ಕಡಿತಗೊಳಿಸಿದೆ. ಸುಂಕ ಕಡಿತದಿಂದಾಗಿ ಪ್ರತಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ದರ 2.50 ರೂ. ಇಳಿಕೆಯಾಗಲಿದೆ.
ತೈಲ ಬೆಲೆ ಏರಿಕೆ ಆಗುತ್ತಿರುವ ಹಿನ್ನೆಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಇಂದು ಹಣಕಾಸು ಇಲಾಖೆಯ ಜೊತೆ ಸಭೆ ನಡೆಸಿದರು. ಸಭೆ ಬಳಿಕ ಸುದ್ದಿಗೋಷ್ಠಿ ನಡೆಸಿದ ಹಣಕಾಸು ಸಚಿವ ಅರುಣ್ ಜೇಟ್ಲಿ, ಅಬಕಾರಿ ಸುಂಕವನ್ನು ಕಡಿತಗೊಳಿಸಿದ ಪರಿಣಾಮ ಸರ್ಕಾರಕ್ಕೆ 10,500 ಕೋಟಿ ರೂ. ಹೊರೆಯಾಗುತ್ತದೆ. ಕೇಂದ್ರ ಸರ್ಕಾರ ಕಡಿಮೆ ಮಾಡಿದಂತೆ ರಾಜ್ಯ ಸರ್ಕಾರಗಳು ವ್ಯಾಟ್ ತೆರಿಗೆಯನ್ನು ಕಡಿತಗೊಳಿಸಲಿ ಎಂದು ಸಲಹೆ ನೀಡಿದರು.
ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಒಂದು ಬ್ಯಾರೆಲ್ ತೈಲ 76 ಡಾಲರ್ ನಲ್ಲಿ ಮಾರಾಟವಾಗುತ್ತಿದೆ. ಇದರ ಜೊತೆಯಲ್ಲಿ ಅಮೆರಿಕ ಚೀನಾ ವಾಣಿಜ್ಯ ಸಮರ, ಇರಾನ್ ನಿಂದ ತೈಲ ಖರೀದಿಗೆ ನಿರ್ಬಂಧ ಹೇರಿದ ಪರಿಣಾಮ ಡಾಲರ್ ಮುಂದೆ ರೂಪಾಯಿ ದುರ್ಬಲವಾಗುತ್ತಿದ್ದು 73 ರೂ. ಗಡಿ ದಾಟಿದೆ. ಹೀಗಾಗಿ ತೈಲ ಬೆಲೆ ಭಾರತದಲ್ಲಿ ಏರಿಕೆಯಾಗುತ್ತಿದೆ.
ಭಾರತದಲ್ಲಿ ಪೆಟ್ರೋಲ್ ದರ 82 ರೂ. – ಪಾಕಿಸ್ತಾನ, ಅಮೆರಿಕ, ಶ್ರೀಲಂಕಾದಲ್ಲಿ ಎಷ್ಟು?
2014 ರಿಂದ 2016 ರ ಅವಧಿಯಲ್ಲಿ ಕೇಂದ್ರ ಸರ್ಕಾರ 9 ಬಾರಿ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಈ ಅವಧಿಯಲ್ಲಿ ಪೆಟ್ರೋಲ್ ಮೇಲೆ 11.77 ರೂ., ಡೀಸೆಲ್ ಮೇಲೆ 13.47 ರೂ. ನಂತೆ ಅಬಕಾರಿ ಸುಂಕವನ್ನು ಹೆಚ್ಚಿಸಿತ್ತು. ಇದರಿಂದಾಗಿ 2014-15 ರಲ್ಲಿ ಬೊಕ್ಕಸಕ್ಕೆ 99 ಕೋಟಿ ರೂ. ಬಂದಿದ್ದರೆ, 2016-17 ನೇ ಅವಧಿಯಲ್ಲಿ 2.42 ಲಕ್ಷ ಕೋಟಿ ರೂ. ಆದಾಯ ಬಂದಿತ್ತು.
ನೂರರ ಗಡಿಯತ್ತ ತೈಲ ಬೆಲೆ: ಪೆಟ್ರೋಲ್‍ನಲ್ಲಿ ಕೇಂದ್ರ, ರಾಜ್ಯ ಸರ್ಕಾರದ ಪಾಲು ಎಷ್ಟು? ಕೇಂದ್ರ ಹೇಳೋದು ಏನು?
ಪ್ರತಿ ಲೀಟರ್ ಪೆಟ್ರೋಲ್ ಮೇಲೆ 9.48 ರೂ. ನಿಂದ 21.48 ರೂ., ಡೀಸೆಲ್ ಮೇಲೆ 3.56 ರೂ.ನಿಂದ 17.33 ರೂ. ಅಬಕಾರಿ ಸುಂಕವನ್ನು ಏರಿಕೆ ಮಾಡಿತ್ತು. 2016 ರ ವರೆಗೆ ಈ ಏರಿಕೆ ಮಾಡಿದ್ದು, 2017 ರ ಅಕ್ಟೋಬರ್ ನಲ್ಲಿ ಪೆಟ್ರೋಲ್ ಮತ್ತು ಡೀಸೆಲ್ ಮೇಲೆ 2 ರೂ. ಅಬಕಾರಿ ಸುಂಕವನ್ನು ಕಡಿತಗೊಳಿಸಿತ್ತು. ಅಬಕಾರಿ ಸುಂಕದಿಂದ ಸಂಗ್ರಹವಾದ ಹಣವನ್ನು ಜನರ ಕಲ್ಯಾಣ ಯೋಜನೆಗೆ ಬಳಕೆ ಮಾಡಲಾಗುತ್ತಿದೆ ಎಂದು ಕೇಂದ್ರ ಸರ್ಕಾರ ಈ ಹಿಂದೆ ತಿಳಿಸಿತ್ತು.
Leave A Reply