ಪೂಜಾರಿಯವರನ್ನು ಎನ್ ಕೌಂಟರ್ ಮಾಡಬೇಕು ಎನ್ನುವವ ಕಾಂಗ್ರೆಸ್ ಮರ್ಯಾದೆ ತೆಗೆದುಬಿಟ್ಟ!!
ಅಯೋಧ್ಯೆಯಲ್ಲಿಯೇ ರಾಮ ಮಂದಿರ ಆಗಬೇಕು ಎಂದು ಕೇಂದ್ರದ ಮಾಜಿ ಸಚಿವ, ಕಾಂಗ್ರೆಸ್ ಪಕ್ಷದ ರಾಜ್ಯಾಧ್ಯಕ್ಷರೂ ಆಗಿದ್ದ, ರಾಜೀವ್ ಗಾಂಧಿ, ಇಂದಿರಾಗಾಂಧಿಯವರಿಗೆ ಆಪ್ತರಾಗಿದ್ದ ಜನಾರ್ಧನ ಪೂಜಾರಿಯವರು ಹೇಳಿದ್ದರಲ್ಲಿ ತಪ್ಪು ಏನಿದೆ. ಹಾಗೆ ಹೇಳಿದ್ದಕ್ಕಾಗಿ ಅವರನ್ನು ಎನ್ ಕೌಂಟರ್ ಮಾಡಬೇಕು ಎಂದು ಹೇಳುವಂತದ್ದು ತಪ್ಪಲ್ವಾ? ಜನಾರ್ಧನ ಪೂಜಾರಿಯವರು ರಾಷ್ಟ್ರೀಯ ಸ್ವಯಂ ಸೇವಕ ಸಂಘದವರೊಂದಿಗೆ ಕೈ ಜೋಡಿಸಿದ್ದಾರೆ. ಅದಕ್ಕಾಗಿ ಕಳೆದ ಹತ್ತು ವರುಷಗಳಿಂದ ಭಾರತೀಯ ಜನತಾ ಪಾರ್ಟಿಯವರಿಗೆ ಬೇಕಾದ ರೀತಿಯಲ್ಲಿ ಮಾತನಾಡುತ್ತಿದ್ದಾರೆ ಎಂದು ಹೇಳಿ ಅದರ ಧ್ವನಿ ಮುದ್ರಿಕೆಯನ್ನು ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟು ಒಬ್ಬ ವ್ಯಕ್ತಿ ಮತ್ತೊಮ್ಮೆ ಹಿಂದೂ-ಮುಸ್ಲಿಮರ ನಡುವೆ ಕರಾವಳಿಯಲ್ಲಿ ಬಿರುಕನ್ನು ಸೃಷ್ಟಿಸಲು ಪ್ರಯತ್ನಪಡುತ್ತಿದ್ದಾನೆ. ಜನಾರ್ಧನ ಪೂಜಾರಿಯವರಿಗೆ ದೇವರು ಇಷ್ಟು ಆಯುಷ್ಯವನ್ನು ಕೊಟ್ಟದ್ದೇ ತಪ್ಪು ಎಂದು ಹೇಳುವ ವ್ಯಕ್ತಿ ನಮ್ಮ ಕರಾವಳಿಯ ಸಂಸ್ಕೃತಿಯನ್ನೇ ನಾಶ ಮಾಡುತ್ತಿದ್ದಾನೆ. ನಮ್ಮದು ಹಿರಿಯರನ್ನು ಆರಾಧಿಸುವ ಸಂಪ್ರದಾಯ ಇರುವಂತಹ ನೆಲ. ಇಲ್ಲಿ ಹಿರಿಯರು ಎಷ್ಟು ವರ್ಷ ಬದುಕಿರುತ್ತಾರೆ ಎಂದು ಕೊರಗುವಂತಹ ಕಲ್ಚರ್ ಇಲ್ಲ. ಹಾಗಿರುವಾಗ ಹೀಗೆ ಹೇಳುವುದು ತಪ್ಪು.
ಕಾಂಗ್ರೆಸ್ ಬಗ್ಗೆ ಪ್ರೀತಿಯಿಂದ ಪೂಜಾರಿ ಹೇಳಿದ್ದರು..
ಇನ್ನು ಜನಾರ್ಧನ ಪೂಜಾರಿಯವರು ಸಿದ್ಧರಾಮಯ್ಯನವರ ಬಗ್ಗೆ ಹಿಂದೆ ಟೀಕೆ ಮಾಡುತ್ತಿದ್ದರು. ಅವರನ್ನು ಕಾಂಗ್ರೆಸ್ಸಿನಿಂದ ಆವಾಗಲೇ ತೆಗೆಯಬೇಕಾಗಿತ್ತು ಎಂದು ಧ್ವನಿ ರೆಕಾರ್ಡ್ ಮಾಡಿದ ವ್ಯಕ್ತಿ ಹೇಳುತ್ತಿದ್ದಾನೆ. ಸಿದ್ಧರಾಮಯ್ಯನವರು ಹಾದಿ ತಪ್ಪಿದಾಗ ಹಾಗೆ ಮಾಡಿದರೆ ಪಕ್ಷಕ್ಕೂ, ಸರಕಾರಕ್ಕೂ ಕೆಟ್ಟ ಹೆಸರು ಬರುತ್ತದೆ. ಹಾಗೆ ಮಾಡಬೇಡಿ ಎಂದು ಜನಾರ್ಧನ ಪೂಜಾರಿಯವರು ಹೇಳಿದ್ದು ಹೌದು. ಅವರು ಹೇಳಿದ ಕಾರಣದಿಂದಾರೂ ಸಿದ್ಧರಾಮಯ್ಯನವರು ತಿದ್ದಿಕೊಂಡ್ರಾ? ಇಲ್ಲವಲ್ಲ. ಅದರಿಂದ ಕಾಂಗ್ರೆಸ್ ಎಲ್ಲಿಗೆ ಬಂದು ಬಿಡ್ತು ನೋಡಿ. ಒಬ್ಬ ಮುಖ್ಯಮಂತ್ರಿಯನ್ನು ನಿಮಿಷ್ಟದ ಹಾಗೆ ಮಾಡಿ ಎಂದು ಬಿಟ್ಟಕಾರಣ ಕಾಂಗ್ರೆಸ್ ಮೊನ್ನೆ ಮೇಯಲ್ಲಿ ಎಲ್ಲಿಗೆ ಬಂದು ಮುಟ್ಟಿದೆ ಎಂದು ಗೊತ್ತಾಗಿದೆ. ಇನ್ನು ಪೂಜಾರಿಯವರು ತಮ್ಮ ಆತ್ಮಚರಿತ್ರೆಯನ್ನು ಪ್ರಭಾಕರ ಭಟ್ಟರ ಕೈಯಿಂದ ಮಾಡಿಸಿದ್ದು ಎಂದು ಟೀಕೆ ಮಾಡಲಾಗುತ್ತಿದೆ. ಮುಖ್ಯಮಂತ್ರಿಯವರ ಕೈಯಿಂದ ಮಾಡಿಸಬೇಕಿತ್ತು ಎಂದು ಹೇಳಲಾಗುತ್ತದೆ. ವಾಯ್ಸ್ ಕೊಟ್ಟವನಿಗೆ ಒಂದು ವಿಷಯ ಗೊತ್ತಿರಲಿ. ಸಿದ್ಧರಾಮಯ್ಯ ಮುಖ್ಯಮಂತ್ರಿಯಾಗಿದ್ದಾಗ ಪುಸ್ತಕ ಬಿಡುಗಡೆ ಆದದ್ದು. ನವರಾತ್ರಿಗೆ ಬನ್ನಿ ಎಂದು ಕರೆದಾಗಲೇ ಆವತ್ತು ಮಂಗಳೂರಿನಲ್ಲಿದ್ದ ಸಿದ್ಧರಾಮಯ್ಯ ತಪ್ಪಿಯೂ ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕಡೆ ಮುಖ ಮಾಡಿಯೂ ನೋಡಲಿಲ್ಲ. ಅಂತವರು ಪುಸ್ತಕ ಬಿಡುಗಡೆ ಮಾಡಲು ಬರುತ್ತಾರಾ?
ಪೂಜಾರಿ ಅಪ್ಪಟ ಜಾತ್ಯಾತೀತ ವ್ಯಕ್ತಿ..
ಇನ್ನು ಜನಾರ್ಧನ ಪೂಜಾರಿಯವರು ತಮ್ಮ ಜೀವಿತದ ಉದ್ದಕ್ಕೂ ಅಪ್ಪಟ ಜಾತ್ಯಾತೀತವಾದಿಯೇ ಉಳಿದವರು. ಅವರು ಸಂಸದರಾಗಿದ್ದಾಗ ಒಂದಿಷ್ಟು ಹೆಚ್ಚೆ ಮುಸಲ್ಮಾನರ ಕಡೆ ವಾಲಿದ್ದರು ಎನ್ನುವವರೂ ಇದ್ದಾರೆ. ಆಗ ಮುಸಲ್ಮಾನರಿಗೆ ಅವರು ತಮ್ಮವರು ಎಂದು ಅನಿಸಲಿಲ್ಲವಾ? ಅಶ್ರಫ್, ಬಿಎ ಮೊಯ್ದೀನ್ ಅವರನ್ನು ರಾಜಕೀಯವಾಗಿ ಉನ್ನತ ಸ್ಥಾನಕ್ಕೆ ಏರಿಸಿದ್ದು ಮಾತ್ರವಲ್ಲ, ಅನೇಕ ಮುಸ್ಲಿಂ ರಾಜಕಾರಣಿಗಳು ಜಿಲ್ಲೆ, ರಾಜ್ಯ, ರಾಷ್ಟ್ರಮಟ್ಟದಲ್ಲಿ ಬೆಳೆಯಲು ಪೂಜಾರಿಯವರ ಕೊಡುಗೆ ಬಹಳಷ್ಟಿದೆ. ಅವರ ಅಧಿಕಾರಾವಧಿಯಲ್ಲಿ ಅವರು ಮುಸ್ಲಿಮರಿಗೆ ಸಾಕಷ್ಟು ಸಹಾಯ ಮಾಡಿದ್ದಾರೆ. ಅಧಿಕಾರ ಹೋದ ಮೇಲೆ ಅವರ ಮಾರ್ಗದರ್ಶನವನ್ನು ಕಾಂಗ್ರೆಸ್ ಪಡೆಯಬೇಕಿತ್ತು. ಅವರನ್ನು ಕಡೆಗಣಿಸಿದ್ದು ತಪ್ಪಲ್ಲವೇ? ಇವತ್ತಿಗೂ ಪೂಜಾರಿಯವರು ಆವತ್ತು ಮಾಡಿದ ಸಾಲಮೇಳದ ಕಾರಣದಿಂದ ಅವರನ್ನು ಜನ ನೆನಪಿಟ್ಟುಕೊಳ್ಳುತ್ತಿದ್ದಾರೆ. ಅವರ ಅಭಿಪ್ರಾಯವನ್ನು ಇಂದಿರಾಗಾಂಧಿ, ಪಿವಿ ನರಸಿಂಹರಾವ್ ಅವರಂತಹ ದಿಗ್ಗಜರು ಕೇಳುತ್ತಿದ್ದರು ಎಂದರೆ ಪೂಜಾರಿಯವರ ಲೆವೆಲ್ ಎಷ್ಟಿತ್ತು ಎನ್ನುವುದು ಈಗಿನವರಿಗೆ ಅಂದಾಜೆ ಇಲ್ಲ. ಹಾಗಿರುವಾಗ ಇವತ್ತು ಪೂಜಾರಿಯವರನ್ನು ಕಾಂಗ್ರೆಸ್ ಎಲ್ಲಿಟ್ಟಿದೆ ಧ್ವನಿ ಮುದ್ರಿಸಿದವರೇ?
ಇನ್ನು ಅಯೋಧ್ಯೆಯ ರಾಮಮಂದಿರದ ವಿಷಯಕ್ಕೆ ಬರೋಣ. ಪೂಜಾರಿಯವರು ಕೇವಲ ರಾಜಕಾರಣಿ ಅಲ್ಲ. ಅವರು ಮೂಲತ: ವಕೀಲರು. ಅವರಿಗೆ ಕಾನೂನಿನ ಬಗ್ಗೆ ಅರಿವಿದೆ. ಅವರಿಗೆ ರಾಮಮಂದಿರವನ್ನು ಅಲ್ಲಿಯೇ ಕಟ್ಟಬೇಕೆಂಬ ಆಸೆ ಇದೆಯೋ ಇಲ್ವೋ ಬೇರೆ ವಿಚಾರ. ಆದರೆ ಸುಪ್ರೀಂ ಕೋರ್ಟ್ ತನ್ನ ಎದುರಿರುವ ಸಾಕ್ಷಿಗಳನ್ನು ಪರಿಗಣಿಸಿ ಹಾಗೆ ಹೇಳಿರಬಹುದು. ಅದನ್ನು ಮುಸ್ಲಿಮರು ಆಕ್ಷೇಪಿಸುವುದಿಲ್ಲ ಎನ್ನುವ ಧೈರ್ಯ ಅವರದ್ದು. ಇನ್ನು ಕಾಂಗ್ರೆಸ್ ಮುಖಂಡರಾದ ರೋಶನ್ ಬೇಗ್, ಜಮೀರ್ ಅಹ್ಮದ್, ಇಬ್ರಾಹಿಂ ಅವರಂತವರೇ ಅಲ್ಲಿಯೇ ಆಗಲಿ ಬಿಡಿ ಎಂದು ಹೇಳಿದ್ದಾರೆ. ಅವರ ಬಗ್ಗೆ ಮಾತನಾಡಲು ಧೈರ್ಯ ಇಲ್ಲದ ವ್ಯಕ್ತಿ ವಯೋವೃದ್ಧ ಪೂಜಾರಿಯವರನ್ನು ಎನ್ ಕೌಂಟರ್ ಮಾಡಬೇಕು ಎನ್ನುತ್ತಾನಲ್ಲ, ಅವನಿಗೆ ಏನು ಹೇಳುವುದು!
Leave A Reply