ದೆಹಲಿಗೆ ಹೋಗಿ ಮನವಿಗೆ ಕೊಟ್ಟಾಯ್ತು, ಭರವಸೆ ಸಿಕ್ಕಿದೆ!!
ದೆಹಲಿಗೆ ಹೋಗಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ನೇತೃತ್ವದಲ್ಲಿ ರೈಲ್ವೆ ರಾಜ್ಯ ಸಹಾಯಕ ಸಚಿವ ಸುರೇಶ್ ಅಂಗಡಿಯವರನ್ನು ಭೇಟಿಯಾದೆ. ಸುರೇಶ್ ಅಂಗಡಿಯವರು ನಮ್ಮದೇ ರಾಜ್ಯದವರು. ಅವರಿಗೆ ಮನವರಿಕೆ ಮಾಡುವುದು ಸುಲಭ. ಅಪಾಯಿಟ್ ಮೆಂಟ್ ರೈಲ್ವೆ ಸಚಿವ ಪಿಯೂಷ್ ಗೋಯಲ್ ಅವರೊಂದಿಗೆ ಇತ್ತು. ಆದರೆ ಕೊನೆಯ ಕ್ಷಣದಲ್ಲಿ ಬೇರೆ ಕೆಲಸದ ಒತ್ತಡದಲ್ಲಿ ಗೋಯಲ್ ಇದ್ದ ಕಾರಣ ಅವರ ಮನವಿಯಂತೆ ಸುರೇಶ್ ಅಂಗಡಿಯವರನ್ನು ಭೇಟಿಯಾದೆವು. ನಾವು ಹೇಳಿದ ವಿಷಯವನ್ನು ಸಾವಧಾನವಾಗಿ ಕೇಳಿದ ಸುರೇಶ್ ಅಂಗಡಿಯವರು ಈ ಕೆಲಸವನ್ನು ಶೀಘ್ರದಲ್ಲಿ ಮಾಡಿಕೊಡುವ ಭರವಸೆ ನೀಡಿದರು. ಅಲ್ಲಿಗೆ ಇಲ್ಲಿ ತನಕ ಮಂಗಳೂರಿನ ಮೇಲೆ ಆಗುತ್ತಿದ್ದ ಮಲತಾಯಿ ಧೋರಣೆ ನಿಂತು ಹೋಗಲಿದೆ ಎನ್ನುವ ವಿಶ್ವಾಸ ಒಬ್ಬ ರೈಲ್ವೆ ಹೋರಾಟಗಾರನಾಗಿ ನನ್ನಲ್ಲಿ ಮೂಡಿದೆ. ಅಷ್ಟಕ್ಕೂ ನಾವು ಕೊಟ್ಟ ಮನವಿ ಏನು? ಅದನ್ನು ವಿವರಿಸುತ್ತೇನೆ
ಈ ವಿಷಯವನ್ನು ನಾನು ಈ ಹಿಂದೆ ಒಮ್ಮೆ ಬರೆದಿದ್ದೆ. ಡಿ ವಿ ಸದಾನಂದ ಗೌಡ ರೈಲ್ವೆ ಸಚಿವರಾಗಿದ್ದಾಗಲೇ ಮನಸ್ಸು ಮಾಡಿದ್ದರೆ ಆಗಲೇ ನಮ್ಮ ಮೇಲೆ ಆಗುತ್ತಿರುವ ಅನ್ಯಾಯ ಕೊನೆಗಾಣುತ್ತಿತ್ತು. ಆದರೆ ಹಾಗೆ ಆಗಲಿಲ್ಲ. ಈಗಲಾದರೂ ಆಗಬಹುದು ಎನ್ನುವ ಧೈರ್ಯ ಬಂದಿರುವುದು ಸುರೇಶ್ ಅಂಗಡಿಯವರು ತಮಗೆ ಈ ವಿಷಯ ಈಗಾಗಲೇ ಅರಿವಿಗೆ ಬಂದಿದೆ. ಸರಿ ಮಾಡಿ ಕೊಡುತ್ತೇವೆ ಎಂದು ಹೇಳಿದ ಕಾರಣ. ಭಾರತರತ್ನ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಧಾನಿಯಾಗಿದ್ದಾಗ ನಿತೀಶ್ ಕುಮಾರ್ ರೈಲ್ವೆ ಸಚಿವರಾಗಿದ್ದರು. ಆಗ ರೈಲ್ವೆ ಇಲಾಖೆಯಿಂದ ರೈಲ್ವೆ ಬೋರ್ಡಿಗೆ ಒಂದು ಲಿಖಿತ ಮನವಿ ಹೋಗುತ್ತದೆ. ಅದೇನೆಂದರೆ ನೇತ್ರಾವತಿ ಸೇತುವೆ ಅಂದರೆ ಉಳ್ಳಾಲ ಸೇತುವೆಯಿಂದ ತೋಕೂರುವರೆಗಿನ ಪ್ರದೇಶವನ್ನು ಫಾಲ್ಗಾಟ್ ನಿಂದ ಅಂದರೆ ಸೌತರ್ನ್ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ಶೀಫ್ಟ್ ಮಾಡಬೇಕು. ಯಾಕೆಂದರೆ ಈ ಪ್ರದೇಶ ರೈಲ್ವೆ ಇಲಾಖೆಯ ಪಾಲಿಗೆ ಅಪ್ಪಟ ಚಿನ್ನದ ಮೊಟ್ಟೆ ಇಡುವ ಕೋಳಿ. ತಿಂಗಳಿಗೆ ಅಂದಾಜು ನಾಲ್ಕು ಕೋಟಿ ರೂಪಾಯಿ ಲಾಭ ತರುವ ಪ್ರದೇಶವಿದು. ಎನ್ ಎಂಪಿಟಿ, ಎಂಸಿಎಫ್, ಎಂಆರ್ ಪಿಎಲ್ ಸಹಿತ ಅನೇಕ ಕೈಗಾರಿಕೆಗಳಿಂದ ಉತ್ತಮ ಫಸಲು ಇರುವ ಸ್ಥಳ ಫಾಲ್ಗಾಟ್ ಡಿವಿಜನ್ ಗೆ ಹೋಗಿರುವುದರಿಂದ ಅವರು ಚೆನ್ನಾಗಿದ್ದಾರೆ. ಆದರೆ ಲಾಭ ಇಲ್ಲಿಂದ ಬಂದರೂ ನಮ್ಮ ಮಂಗಳೂರು ಸೆಂಟ್ರಲ್ ಮತ್ತು ಜಂಕ್ಷನ್ ರೈಲ್ವೆ ನಿಲ್ದಾಣಗಳ ಅಭಿವೃದ್ಧಿಯ ವಿಚಾರ ಬಂದಾಗ ಅಪ್ಪಟ ಕಣ್ಣಿಗೆ ಬಟ್ಟೆ ಕಟ್ಟಿದ್ದಂತೆ ದಕ್ಷಿಣ ರೈಲ್ವೆ ವರ್ತಿಸುತ್ತದೆ. ಅಷ್ಟೇ ಅಲ್ಲ, ದೇಶದ ಪ್ರಮುಖ ನಗರಗಳಿಗೆ ಮಂಗಳೂರು ಸೆಂಟ್ರಲ್ ನಿಂದ ರೈಲು ಓಡಿಸಿ ಎಂದರೆ ಇಲ್ಲಿ ಫ್ಲಾಟ್ ಫಾರಂ ಕೊರತೆ ಇದೆ ಎನ್ನುತ್ತಾರೆ. ನಂತರ ಕೆಲವು ದಿನ ಮಂಗಳೂರು ಜಂಕ್ಷನ್ ನಿಂದ ಓಡಿಸಿ ನಂತರ ಅಲ್ಲಿ ಪ್ರಯಾಣಿಕರಿಲ್ಲದೆ ಆ ರೈಲು ನಷ್ಟದಲ್ಲಿದೆ ಎಂದು ಸಬೂಬು ಹೇಳಿ ಆ ರೈಲನ್ನು ಕೇರಳದ ಯಾವುದಾದರೂ ನಗರಕ್ಕೆ ಇವರು ವಿಸ್ತರಿಸುತ್ತಾರೆ. ಅಲ್ಲಿಗೆ ಕೇರಳದ ಲಾಬಿ ನಮ್ಮ ರೈಲು ನಿಲ್ದಾಣಗಳಲ್ಲಿ ತಮಗೆ ಬೇಕಾದ ಹಾಗೆ ಹೇಗೆ ಕೆಲಸ ಮಾಡುತ್ತದೆ ಎಂದು ಗೊತ್ತಾಗುತ್ತದೆ. ಅಷ್ಟಕ್ಕೂ ರೈಲ್ವೆ ಬೋರ್ಡಿನಲ್ಲಿ ಇರುವ ಅರವತ್ತು ಶೇಕಡಾ ಅಧಿಕಾರಿಗಳು ಕೇರಳದವರು. ಅವರು ತಮ್ಮ ರಾಜ್ಯಕ್ಕೆ ಯಾವ ಲಾಬಿ ಮಾಡಲು ಕೂಡ ತಯಾರು. 2004 ಮತ್ತು 2014 ರಲ್ಲಿ ಮಂಗಳೂರನ್ನು ದಕ್ಷಿಣ ರೈಲ್ವೆಯಿಂದ ನೈರುತ್ಯ ರೈಲ್ವೆಗೆ ಸೇರಿಸುವ ಪ್ರಕ್ರಿಯೆ ಮುಗಿಯಬೇಕಿದ್ದರೂ ಆ ಕೇರಳದ ಲಾಬಿಯಿಂದ ನಡೆಯಲಿಲ್ಲ. ಆದ್ದರಿಂದ ಈಗಲಾದರೂ ಈ ಪ್ರಕ್ರಿಯೆ ಮುಗಿಸಿ ನಮಗೆ ನ್ಯಾಯ ಕೊಡಿಸಿ ಎಂದು ಮನವಿ ಮಾಡಿದ್ದೇನೆ. ಆಗುತ್ತೆ ಎನ್ನುವ ವಿಶ್ವಾಸವಿದೆ. ಉಳಿದ ವಿಷಯವನ್ನು ನಾಳೆ ಬರೆಯುತ್ತೇನೆ.
Leave A Reply