ಕಪ್ಪುಪಟ್ಟಿ ಸೇರಲಿದ್ದ ಗುತ್ತಿಗೆದಾರ ಕಾಂಗ್ರೆಸ್ಸಿನಿಂದ ಬಿಜೆಪಿಗೆ ಜಂಪ್ ಅಂಡ್ ಕ್ಲೀನ್!!
ಕಾಂಗ್ರೆಸ್ಸಿನಲ್ಲಿ ಒಂದು ಕಾಲದಲ್ಲಿ ಯುವ ಮೋರ್ಚಾ ಅಧ್ಯಕ್ಷರಾಗಿದ್ದ ಅರುಣ್ ಕುವೆಲ್ಲೋ ಮೂಲತ: ಗುತ್ತಿಗೆದಾರರು. ಕಾಂಗ್ರೆಸ್ ಪಾಲಿಕೆಯಲ್ಲಿ ಅಧಿಕಾರದಲ್ಲಿದ್ದಾಗ ಮಂಗಳೂರಿನ ಅಳಕೆ ಮಾರುಕಟ್ಟೆಯ ನಿರ್ಮಾಣದ ಗುತ್ತಿಗೆ ಅವರಿಗೆ ಸಿಕ್ಕಿತ್ತು. ಅಂದಾಜು ಒಂದು ಕೋಟಿ ರೂಪಾಯಿಯ ಗುತ್ತಿಗೆ. ಅರುಣ್ ಕುವೆಲ್ಲೋ 83.89 ಲಕ್ಷ ರೂಪಾಯಿಗೆ ಗುತ್ತಿಗೆ ವಹಿಸಿಕೊಂಡಿದ್ದರು ಅಂದರೆ 17 ಲಕ್ಷ 11 ಸಾವಿರದಷ್ಟು ಕಡಿಮೆ ಮೊತ್ತಕ್ಕೆ ಅವರು ಬಿಡ್ ಮಾಡಿದ್ದ ಕಾರಣ ಗುತ್ತಿಗೆ ಅವರಿಗೆ ದೊರಕಿತ್ತು. ಅದರಲ್ಲಿ ಅವರಿಗೆ ಈಗಾಗಲೇ 59 ಲಕ್ಷ ರೂಪಾಯಿ ಪಾವತಿ ಆಗಿದೆ. ಇನ್ನು 6 ಲಕ್ಷ ಇಲೆಕ್ಟ್ರಿಕಲ್ ವ್ಯವಸ್ಥೆಗೆ ಆದರೆ ಪಾಲಿಕೆಯಿಂದ 18 ಲಕ್ಷ ರೂಪಾಯಿ ಮಾತ್ರ ಬಾಕಿ ಇದೆ.
ಒಂದು ಗುತ್ತಿಗೆಯ ವ್ಯವಹಾರ ಹೇಗೆ ನಡೆಯುತ್ತೆ ಎನ್ನುವುದನ್ನು ನಿಮಗೆ ವಿವರಿಸುತ್ತೇನೆ. ಪಾಲಿಕೆಯಿಂದ ಒಂದು ಕಾಮಗಾರಿ ನಡೆಯಬೇಕಾದರೆ ಅದಕ್ಕೆ ಟೆಂಡರ್ ಕರೆಯುತ್ತಾರೆ. ಯಾರು ಕಡಿಮೆಗೆ ಬಿಡ್ ಮಾಡುತ್ತಾರೋ ಅದು ಅವರಿಗೆ ಹೋಗುತ್ತದೆ. ಆ ಬಳಿಕ ಪಾಲಿಕೆ ಮತ್ತು ಗುತ್ತಿಗೆದಾರರ ನಡುವೆ ಒಪ್ಪಂದ ನಡೆಯುತ್ತದೆ. ಇನ್ನು ಗುತ್ತಿಗೆದಾರರಿಗೆ ಮತ್ತು ಪಾಲಿಕೆಗೆ ಒಪ್ಪಂದ ನಡೆದು ಕಾರ್ಯಾದೇಶ ಅಂದರೆ ವರ್ಕ್ ಆರ್ಡರ್ ಗುತ್ತಿಗೆದಾರರಿಗೆ ಸಿಕ್ಕಿರುತ್ತದೆ. ಅದರಲ್ಲಿ ಇಂತಿಷ್ಟು ಸಮಯದ ಒಳಗೆ ಕೆಲಸ ಮುಗಿಯಬೇಕು ಎನ್ನುವುದನ್ನು ನಮೂದಿಸಿರುತ್ತಾರೆ. ಅಳಕೆ ಮಾರುಕಟ್ಟೆಯ ಕೆಲಸ 2016-17 ರಲ್ಲಿ ಆರಂಭವಾಗಿತ್ತು. ಆದರೆ ಅದು ಇನ್ನು ಕೂಡ ಮುಗಿದಿಲ್ಲ. ಈ ಅಳಕೆ ಮಾರುಕಟ್ಟೆಯ ಕಾಮಗಾರಿಯನ್ನು ಯಾಕೆ ಮುಗಿಸಲಿಲ್ಲ ಎಂದು ಕಾರಣ ಕೇಳಿ 2019 ನವೆಂಬರ್ ನಲ್ಲಿ ಗುತ್ತಿಗೆದಾರ ಅರುಣ್ ಕುವೆಲ್ಲೋ ಅವರಿಗೆ ಮೊದಲ ನೋಟಿಸ್ ನೀಡಲಾಗಿತ್ತು. ಒಂದು ತಿಂಗಳ ಒಳಗೆ ಮುಗಿಸಲು ಸೂಚಿಸಲಾಗಿತ್ತು. ಅದರ ನಡುವೆ ಅರುಣ್ ಕುವೆಲ್ಲೋ ಕಾಂಗ್ರೆಸ್ಸಿಗೆ ರಾಜೀನಾಮೆ ಕೊಟ್ಟು ಭಾರತೀಯ ಜನತಾ ಪಾರ್ಟಿಗೆ ಸೇರಿದರು.
ಆಶ್ಚರ್ಯ ಎಂದರೆ ಈಗ ಅದೇ ಮಾರುಕಟ್ಟೆಗೆ ಮೂವತ್ತು ಲಕ್ಷದ ಇನ್ನೊಂದು ಟೆಂಡರ್ ಕರೆಯಲಾಗಿದೆ. ಅದರಲ್ಲಿ ಮಾರುಕಟ್ಟೆಗೆ ಸಂಪು, ಮೇಲೆ ವಾಟರ್ ಟ್ಯಾಂಕರ್ ನಿರ್ಮಾಣ ಮಾಡಲು ಟೆಂಡರ್ ಎಂದು ಹೇಳಲಾಗಿದೆ. ಇದೇ ತಿಂಗಳ ಫೆಬ್ರವರಿ 5 ರಂದು ದಿನಪತ್ರಿಕೆಯಲ್ಲಿ ಜಾಹೀರಾತು ನೀಡಲಾಗಿದೆ. ಇಲ್ಲಿ ಈಗ ಇರುವ ಪ್ರಶ್ನೆ ಏನೆಂದರೆ ಅಳಕೆ ಮಾರುಕಟ್ಟೆಯಲ್ಲಿ ಮೀನು ಮಾರಾಟದ ಸೆಕ್ಷನ್ ಕೂಡ ಇದೆ. ಅಲ್ಲಿ ಸಹಜವಾಗಿ ನೀರಿನ ವ್ಯವಸ್ಥೆ ಬೇಕಾಗುತ್ತದೆ ಎನ್ನುವುದು ಎಂಟನೇ ಕ್ಲಾಸಿನಲ್ಲಿ ಫೇಲ್ ಆಗಿ ನಂತರ ಇಂಜಿನಿಯರಿಂಗ್ ಒದ್ದಾಡಿ ಪಾಸ್ ಮಾಡಿದ ಸಾಮಾನ್ಯ ಇಂಜಿನಿಯರಿಗೆ ಕೂಡ ಗೊತ್ತಾಗುತ್ತದೆ. ಅದರೊಂದಿಗೆ ಶೌಚಾಲಯಕ್ಕೆ ನೀರಿನ ವ್ಯವಸ್ಥೆ ಆಗಬೇಕು ಎಂದು ಮೊದಲೇ ಗೊತ್ತಿರುವಾಗ ಈಗ ಅದಕ್ಕೆ ಹೊಸದಾಗಿ 30 ಲಕ್ಷದ ಟೆಂಡರ್ ಕರೆಯುವ ಅಗತ್ಯವಾದರೂ ಏನಿತ್ತು? ಈಗ ಈ ಹೊಸ ಟೆಂಡರ್ ಕೂಡ ಅರುಣ್ ಕುವೆಲ್ಲೋ ಅವರಿಗೆ ಹೋಗಲಿದೆ. ಒಂದು ವೇಳೆ ಅವರಿಗೆ ಸಿಗದಿದ್ದರೂ ಅವರದ್ದೇ ಗುತ್ತಿಗೆ ಸಿಂಡಿಕೇಟಿನ ಯಾವುದಾದರೂ ವ್ಯಕ್ತಿಗೆ ಹೋಗಲಿದೆ. ಆದರೆ ನೂರಕ್ಕೆ ತೊಂಭತ್ತೊಂಭತ್ತು ಶೇಕಡಾ ಅರುಣ್ ಕುವೆಲ್ಲೋ ಅವರಿಗೆ ಆ ಗುತ್ತಿಗೆ ಸಿಗುವಂತೆ ಮಾಡಲಾಗುತ್ತಿದೆ.
ನಾನೀಗ ಕೇಳುತ್ತಿರುವುದು, ಒಂದು ಕಾಮಗಾರಿಯನ್ನು ನಿರ್ದಿಷ್ಟ ಅವಧಿಯೊಳಗೆ ಮುಗಿಸದೇ ಹೋದ ಗುತ್ತಿಗೆದಾರನನ್ನು ಕಪ್ಪು ಪಟ್ಟಿಗೆ ಸೇರಿಸುವ ಕ್ರಮ ಇದೆ. ಇಲ್ಲಿ ಅರುಣ್ ಕುವೆಲ್ಲೋ ಕೂಡ ಕಪ್ಪು ಪಟ್ಟಿಗೆ ಹೋಗುವ ಬದಲು ಇನ್ನೊಂದು ಗುತ್ತಿಗೆಯನ್ನು ಪಡೆದುಕೊಳ್ಳಲಿದ್ದಾರೆ. ಹಾಗಾದರೆ ಪಾಲಿಕೆಯಲ್ಲಿ ಏನಾಗುತ್ತಿದೆ. ಪ್ರತಿ ಪಕ್ಷದಲ್ಲಿಯೂ ಅವರದ್ದೇ ಆದ ಗುತ್ತಿಗೆದಾರರು ಇರುತ್ತಾರೆ. ಅವರ ಪಕ್ಷ ಅಧಿಕಾರದಲ್ಲಿ ಇದ್ದಾಗ ಅವರ ಹಾರಾಟ ಇದ್ದೇ ಇರುತ್ತದೆ. ಒಬ್ಬ ಗುತ್ತಿಗೆದಾರ ಕಾಂಗ್ರೆಸ್ಸಿನಲ್ಲಿದ್ದು ಲಾಭದ ರುಚಿ ನೋಡಿ ನಂತರ ಇನ್ನೇನೂ ಬ್ಲ್ಯಾಕ್ ಲಿಸ್ಟ್ ಗೆ ಹೋಗುವ ಸೂಚನೆ ಸಿಕ್ಕಿದ ತಕ್ಷಣ ಬಿಜೆಪಿಗೆ ಬಂದರೆ ಅವನಿಗೆ ಇಲ್ಲಿ ರಕ್ಷಣೆ ಸಿಗುತ್ತದೆ. ಒಬ್ಬ ಗುತ್ತಿಗೆದಾರ ತಪ್ಪು ಮಾಡಿದಾಗ ಅವನು ತನ್ನ ರಕ್ಷಣೆಗೋಸ್ಕರ ಪಕ್ಷ ಬದಲಾಯಿಸಿದರೆ ಆತನಿಗೆ ಶುದ್ಧತೆಯ ಪ್ರಮಾಣಪತ್ರ ಸಿಗುತ್ತದೆ ಎಂದಾದರೆ ನಾವು ಮಂಗಳೂರು ಮಹಾನಗರ ಪಾಲಿಕೆಯಿಂದ ಇನ್ಯಾವ ಆಡಳಿತ ನಿರೀಕ್ಷಿಸಬಹುದು. ಯಾಕೋ ಆಡಳಿತ ಯಂತ್ರಕ್ಕೆ ಧೂಳು ಮಾತ್ರ ಅಲ್ಲ ತುಕ್ಕು ಕೂಡ ಹಿಡಿದಿದೆಯಾ ಎಂದು ಅನಿಸುತ್ತದೆ!
Leave A Reply