ಬಿಲ್ ಕೊಟ್ಟು ಪೆಟ್ಟು ತಿನ್ನುವ ಅಂಗಡಿಯವನನ್ನು ಹುಡುಕಿಕೊಡಿ!!
ದೇವರು ನಮ್ಮನ್ನು ಪರೀಕ್ಷಿಸುತ್ತಿದ್ದಾನೆ ಎನ್ನುವುದರಲ್ಲಿ ಸಂಶಯವೇ ಇಲ್ಲ. ಈ ಸಮಯದಲ್ಲಿ ಎಲ್ಲರೂ ಜನಸೇವೆಯಲ್ಲಿ ಇರುವಾಗ ನಾವು ಮಾತ್ರ ಜನರನ್ನು ಮೋಸ ಮಾಡಿ ಹಣ ಸಂಪಾದಿಸುವ ಎಂದುಕೊಂಡರೆ ಅಂತವರಿಗೆ ಘೋರ ವಿಪತ್ತು ಕಾದಿದೆ ಎಂದೇ ಅರ್ಥ. ಎಲ್ಲರೂ ಅಲ್ಲದಿದ್ದರೂ ಕೆಲವರು ಅಂತಹ ದಾರಿಗೆ ಇಳಿದಿದ್ದಾರೆ. ಹತ್ತು ರೂಪಾಯಿ ವಸ್ತುವನ್ನು ಇಪ್ಪತ್ತು ರೂಪಾಯಿ ಮಾರುತ್ತಿದ್ದಾರೆ. ಇನ್ನು ಕೆಲವರು ಅತೀ ಬುದ್ಧಿವಂತಿಕೆಗೆ ಇಳಿದು ಜನರ ಅಸಹಾಯಕತೆಯನ್ನು ದುರುಪಯೋಗ ಮಾರುತ್ತಿದ್ದಾರೆ. ನಿಮಗೆ ಮಂಗಳೂರಿನ ಪ್ರಮುಖ ಸ್ಥಳ ಚಿಲಿಂಬಿ ಗೊತ್ತಿರುತ್ತದೆ. ಅಲ್ಲಿ ರಿಲಾಯನ್ಸ್ ಸ್ಮಾರ್ಟ್ ಎನ್ನುವ ದೊಡ್ಡ ಮಳಿಗೆ ಇದೆ. ಅಲ್ಲಿ ಉದಾಹರಣೆಗೆ ಒಂದು ಕ್ವಾಲಿಫವರ್ ಗೆ 19 ರೂಪಾಯಿ ಎಂದು ಇಟ್ಟುಕೊಳ್ಳೋಣ. ಅದೇ ಕ್ವಾಲಿಫವರ್ ಅನ್ನು ನೀವು ಪಕ್ಕದ ಬೀದಿಯಲ್ಲಿ ಅಂಗಡಿ ಇಟ್ಟುಕೊಂಡವನಿಂದ ಖರೀದಿಸಿದರೆ 50 ರೂಪಾಯಿ ಇರುತ್ತದೆ. ಹಾಗಾದರೆ 19 ರೂಪಾಯಿ ಎಲ್ಲಿ, 50 ರೂಪಾಯಿ ಎಲ್ಲಿ? ಇದು ಕೇವಲ ಒಂದೆರಡು ತರಕಾರಿ ಅಥವಾ ಹಣ್ಣಿನ ವಿಷಯವಲ್ಲ. ಪ್ರತಿ ತರಕಾರಿ ಅಥವಾ ಹಣ್ಣಿಗೂ ಹೀಗೆ ದರದಲ್ಲಿ ಅಜಗಜಾಂತರ. ಇನ್ನು ಹಾಪ್ ಕಾಮ್ಸ್ ಮಳಿಗೆಗಳಿಗೆ ಬನ್ನಿ. ಅಲ್ಲಿ ಕೂಡ ದರ ಸಾಮಾನ್ಯಗಿಂತ ಎಷ್ಟೋ ಪಾಲು ಹೆಚ್ಚಿದೆ. ನಿಮಗೆ ಇನ್ನೊಂದು ಉದಾಹರಣೆ ಕೊಡುತ್ತೇನೆ. ಮಂಗಳೂರಿನ ರಥಬೀದಿ ವೆಂಕಟರಮಣ ದೇವಸ್ಥಾನದ ಹತ್ತಿರ ಒಂದು ಗಾಡಿ ನಿಲ್ಲುತ್ತದೆ. ಅದಕ್ಕೆ ಹಾಪ್ ಕಾಮ್ಸ್ ಎಂದು ಬ್ಯಾನರ್ ಕಟ್ಟಲಾಗಿರುತ್ತದೆ. ಅಲ್ಲಿ ಒಂದೊಂದು ಟಬ್ ನಲ್ಲಿ ಒಂದೊಂದು ತರಕಾರಿಯನ್ನು ರಾಶಿ ಹಾಕಿರುತ್ತಾರೆ. ಸಾಕಷ್ಟು ಜನ ಬಂದು ಖರೀದಿಸುತ್ತಾರೆ. ನೀವು ಬೇಕಾದ ತರಕಾರಿಗಳನ್ನು ಆಯ್ದು ಕೊಟ್ಟರೆ ಅವರು ಅರ್ಜೆಂಟಲ್ಲಿ ಪಟ್ಟಿ ಮಾಡಿ ನಿಮ್ಮ ಚೀಲದಲ್ಲಿ ಸುರಿದು ಇಂತಿಷ್ಟು ಎಂದು ಹಣ ಹೇಳುತ್ತಾರೆ. ನಿಮಗೆ ಮೊದಲೇ ರಶ್ ಇದ್ದ ಕಾರಣ ಒಂದೊಂದೇ ತರಕಾರಿಗೆ ಎಷ್ಟು ಎಂದು ಪ್ರತ್ಯೇಕವಾಗಿ ಕೇಳಿ ಲೆಕ್ಕ ಮಾಡುವ ವ್ಯವಧಾನ ಇರುವುದಿಲ್ಲ. ಕೊನೆಗೆ ನೀವು ಮನೆಗೆ ಬಂದು ನೋಡಿದರೆ 15-20 ರೂಪಾಯಿ ಜಾಸ್ತಿಯೇ ಹಾಕಿ ಲೆಕ್ಕದಲ್ಲಿ ಮೋಸ ಮಾಡಿರುತ್ತಾರೆ. ಮೊದಲೇ ಪ್ರತಿ ತರಕಾರಿಗೆ ಲೆಕ್ಕಕ್ಕಿಂತ ಜಾಸ್ತಿ ದರ, ಅದರ ಮೇಲೆ ಮೊತ್ತದಲ್ಲಿ ಮೋಸ.
ಚಿತ್ರ: ವಾರಣಾಸಿಯಲ್ಲಿ ಜೀನಸು ಅಂಗಡಿಗಳ ಬಿಲ್ ಗಳನ್ನು ಎಸ್ಪಿ ಪ್ರಭಾಕರ್ ಚೌಧರಿ ಮತ್ತು ಜಿಲ್ಲಾಧಿಕಾರಿ ಕೌಶರಾಜ್ ಶರ್ಮ ಅವರು ವಿಚಾರಿಸುತ್ತಿರುವುದು.
ಇಂತದ್ದು ಆಗುತ್ತಿದೆ ಎಂದು ಪ್ರತಿ ಶಾಸಕನಿಂದ ಹಿಡಿದು ಜಿಲ್ಲಾಧಿಕಾರಿಗಳ ತನಕ ಪ್ರತಿಯೊಬ್ಬರಿಗೂ ಗೊತ್ತು. ಹೀಗೆ ಆಗುತ್ತಿದೆ ಎಂದು ಹೇಳಿ ನೋಡಿ, ನಮಗೆ ಬಿಲ್ ತಂದುಕೊಡಿ, ವಿಚಾರಿಸುತ್ತೇವೆ ಎಂದು ಹೇಳುತ್ತಾರೆ. ಮೋಸ ಮಾಡುವ ಯಾವ ವ್ಯಕ್ತಿ ಬಿಲ್ ಕೊಟ್ಟು ಪೆಟ್ಟು ತಿನ್ನಲು ರೆಡಿ ಇರುತ್ತಾನೆ. ಹಾಗಾದರೆ ಅವನು ಮೋಸ ಮಾಡಿದ್ದಾನೆ ಎನ್ನುವುದಕ್ಕೆ ಸಾಕ್ಷಿ ಏನು ಎನ್ನುವುದು ಇವರ ಪ್ರಶ್ನೆ?
ಅದಕ್ಕೂ ನನ್ನ ಬಳಿ ಉಪಾಯ ಇದೆ. ಸುಮ್ಮನೆ ಸಮಸ್ಯೆ ಹೇಳಿದರೆ ನೀವು ಎಲ್ಲ ಜನರು ಹೇಳುವುದನ್ನೇ ನಾನು ಹೇಳುತ್ತಿದ್ದೇನೆ ಎಂದುಕೊಳ್ಳುತ್ತೀರಿ. ಇಲ್ಲಿ ಕೇಳಿ. ಮೋದಿಯವರ ಲೋಕಸಭಾ ಕ್ಷೇತ್ರ ವಾರಣಾಸಿಯಲ್ಲಿ ಇಬ್ಬರು ಒಂದು ಅಂಗಡಿಗೆ ಹೋಗುತ್ತಾರೆ. ಅಲ್ಲಿ ಅವರಲ್ಲಿ ಒಬ್ಬರು ಗೋಧಿ ಹುಡಿಗೆ ಕಿಲೋ ಎಷ್ಟು ಎನ್ನುತ್ತಾರೆ. ಅಂಗಡಿಯವನು 40 ರೂಪಾಯಿ ಎನ್ನುತ್ತಾನೆ. ಅದಕ್ಕೆ ಒಬ್ಬ ವ್ಯಕ್ತಿ “ಇಲ್ಲಿನ ಡಿಸಿ 25 ರೂಪಾಯಿಗೆ ಮಾರಲು ಹೇಳಿದ್ದಾರಲ್ಲ” ಎನ್ನುತ್ತಾರೆ. ಅದಕ್ಕೆ ಅಂಗಡಿಯವನು “ಅವರು ಬೇಕಾದ್ದು ಹೇಳುತ್ತಾರೆ. ನಿಮಗೆ ಇಲ್ಲಿ ಬೇಡವಾದ್ರೆ ಅವರ ಹತ್ತಿರವೇ ಖರೀದಿಸಿ” ಎನ್ನುತ್ತಾರೆ. ನಂತರ ಇನ್ನೊಬ್ಬ ವ್ಯಕ್ತಿ “ಕಿಲೋ ಅಕ್ಕಿಗೆ ಎಷ್ಟು?” ಎನ್ನುತ್ತಾರೆ. ಅಂಗಡಿಯವನು 50 ರೂಪಾಯಿ ಎನ್ನುತ್ತಾನೆ. ಅದಕ್ಕೆ ಈ ವ್ಯಕ್ತಿ ಇದು ಕೂಡ ಸಿಕ್ಕಾಪಟ್ಟೆ ಹೆಚ್ಚಾಯಿತಲ್ಲ ಎನ್ನುತ್ತಾರೆ. ಅದಕ್ಕೆ ಅಂಗಡಿಯವನು ಅದನ್ನು ಕೂಡ ನೀವು ಡಿಸಿ ಹತ್ತಿರವೇ ಖರೀದಿಸಿ ಎನ್ನುತ್ತಾನೆ. ಆಗ ಅವರಿಬ್ಬರು ತಮ್ಮ ಐಡಿ ಕಾರ್ಡ್ ತೆಗೆದು ತೋರಿಸುತ್ತಾರೆ. ಬಂದವರು ಬೇರೆ ಯಾರೂ ಅಲ್ಲ. ಡಿಸಿ ಕೈಲಾಶ್ ರಾಜ್ ಶರ್ಮಾ ಹಾಗೂ ಎಎಸ್ ಪಿ ಪ್ರಭಾಕರ ಚೌಧರಿ. ನಂತರ ಅಂಗಡಿಯವನ ಕಥೆ ಅಲ್ಲಿನ ಅಧಿಕಾರಿಗಳು ಏನು ಮಾಡಿದರು ಎಂದು ಪ್ರತ್ಯೇಕ ಹೇಳಬೇಕಾಗಿಲ್ಲ ತಾನೆ.
ನಾನೀಗ ಹೇಳುವುದು ನಮ್ಮ ಡಿಸಿ ಮತ್ತು ಪೊಲೀಸ್ ಕಮೀಷನರ್ ಹಾಗೆ ಯಥಾವತ್ತಾಗಿ ಮಾಡಬೇಕು ಎಂದರೆ ಅದು ಆಗುವ ಹೋಗುವ ಮಾತಲ್ಲ. ಯಾಕೆಂದರೆ ನಮ್ಮ ಡಿಸಿ, ಪೊಲೀಸ್ ಕಮೀಷನರ್ ನಿತ್ಯ ಟಿವಿ, ಪೇಪರ್, ಸಾಮಾಜಿಕ ಜಾಲತಾಣಗಳಲ್ಲಿ ಬರುವುದರಿಂದ ಅವರ ಪರಿಚಯ ಅಂಗಡಿಯವರಿಗೆ ಚೆನ್ನಾಗಿ ಇದೆ. ಆದರೆ ಇವರುಗಳು ತಮ್ಮ ಕೈಕೆಳಗಿನ ಅಧಿಕಾರಿಗಳನ್ನು ಕಳುಹಿಸಿ ನಾಲ್ಕೈದು ಅಂಗಡಿಗಳ ಸುತ್ತು ಹೊಡೆದು ಬರಲು ಹೇಳಿದ್ರು ಸಾಕು. ವ್ಯಾಪಾರಿಗಳ ವಾಸ್ತವಾಂಶ ಗೊತ್ತಾಗುತ್ತೆ. ಈ ನಡುವೆ ಒಳ್ಳೆಯ ವ್ಯಾಪಾರಿಗಳು ಸಿಕ್ಕಿದರೆ ಅವರಿಗೆ ಜಿಲ್ಲಾಡಳಿತ ಸನ್ಮಾನ ಮಾಡಲಿ. ಮೋಸ ಮಾಡಿದವರಿಗೆ ಏನು ಮಾಡಬೇಕು ಎನ್ನುವುದು ಅವರಿಗೆ ಬಿಟ್ಟಿದ್ದು, ಕಾನೂನು ನಿಮ್ಮ ಕೈಯಲ್ಲಿಯೇ ಇದೆ!
Leave A Reply