ಅತೀ ಕಡಿಮೆ ವೆಚ್ಚದಲ್ಲಿ ವೆಂಟಿಲೇಟರ್ ತಯಾರಿಸಿದ ಪುತ್ತೂರು ವಿವೇಕಾನಂದ ಕಾಲೇಜ್!
ಕೊರೊನಾ ವೈರಸ್ ಇಡೀ ವಿಶ್ವವನ್ನೇ ತಲ್ಲಣಗೊಳಿಸಿದ್ದು ಭಾರತದಲ್ಲೂ ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚುತ್ತಿದೆ. ಇಡೀ ವಿಶ್ವದಲ್ಲೇ ಸಾವಿನ ಕೇಕೆ ಕೇಳುತ್ತಿದೆ. ಲಾಕ್‍ಡೌನ್ ಜಾರಿಯಲ್ಲಿದ್ದರೂ ಕೆಲ ಜನರ ನಿರ್ಲಕ್ಷ್ಯದಿಂದ ಭಾರತದಲ್ಲೂ ಎಷ್ಟೇ ಸರ್ಕಾರ ಮುಂಜಾಗ್ರತಾ ಕ್ರಮ ತೆಗೆದುಕೊಂಡರೂ ಈ ಮಹಾಮಾರಿ ಕಾಡುತ್ತಿದೆ. ಕೊರೊನಾ ವೈರಸ್ ನೇರವಾಗಿ ಮಾನವನ ದೇಹವನ್ನು ಪ್ರವೇಶಿಸಿ ಶ್ವಾಶಕೋಶಕ್ಕೆ ಅಂಟಿ ಉಸಿರಾಟ ವ್ಯವಸ್ಥೆಯನ್ನೇ ಬುಡಮೇಲುಗೊಳಿಸುತ್ತದೆ. ಇಂತಹ ಸಂದರ್ಭದಲ್ಲಿ ರೋಗಿಗೆ ಕೃತಕ ಉಸಿರಾಟದ ವ್ಯವಸ್ಥೆಯನ್ನು ಮಾಡಬೇಕಾಗುತ್ತದೆ. ಇದನ್ನೇ ಮನದಟ್ಟಿಕೊಂಡು ಪುತ್ತೂರಿನ ವಿವೇಕಾನಂದ ಇಂಜಿನಿಯರಿಂಗ್ ಕಾಲೇಜಿನ ಐಒಟಿ ಪ್ರಯೋಗಾಲಯದಲ್ಲಿ ಕಡಿಮೆ ವೆಚ್ಚದ ಉಸಿರಾಟ ನಿಯಂತ್ರಕ ವಿವೇಕ ಜೀವವರ್ಧಕ ಎನ್ನುವ ಸ್ವಚ್ಛ ಸ್ವಸ್ಥ ಶ್ವಾಸಕ್ರಿಯಾ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ.
ಪ್ರತೀ ಮನುಷ್ಯನಿಗೆ 6-10 ಎಂಎಲ್/ಕೆಜಿ ಆಮ್ಲಜನಕ ಅಗತ್ಯವಿದ್ದು ಈ ಮಾನದಂಡವನ್ನು ಬಳಸಿಕೊಂಡು ಈ ಯಂತ್ರವನ್ನು ಅಭಿವೃದ್ದಿಪಡಿಸಲಾಗಿದ್ದು ಆರ್ಡಿನೋ ತಂತ್ರಜ್ಞಾನವನ್ನು ಇದಕ್ಕೆ ಬಳಸಿಕೊಳ್ಳಲಾಗಿದೆ. ಇಲ್ಲಿ ಆಕ್ಸಿಜನ್ ಸಿಲಿಂಡರ್‍ನಿಂದ ಬರುವ ಆಮ್ಲಜನಕವು ನಿಗದಿತ ಪ್ರಮಾಣದಲ್ಲಿ ಮತ್ತು ನಿರ್ದಿಷ್ಟ ವೇಗದಲ್ಲಿ ಪೂರೈಕೆಯಾಗುವಂತೆ ಮಾಡಿ ರೋಗಿ ಉಸಿರಾಟ ಕ್ರಿಯೆಯನ್ನು ನಿಯಂತ್ರಿಸಲಾಗುತ್ತದೆ. ತಜ್ಞ ವೈದ್ಯರ ಸಲಹೆಯಂತೆ ಉಸಿರಾಟದ ತೊಂದರೆ ಇರುವ ರೋಗಿಗಳಿಗೆ ಜೀವರಕ್ಷಕವಾಗಿ ಇದನ್ನು ಬಳಸಬಹುದು. ಈ ಸಾಧನ ನಿರ್ಮಾಣ ವೆಚ್ಚ ಸುಮಾರು ಹತ್ತು ಸಾವಿರ ರೂಪಾಯಿಗಳಾಗಿರುತ್ತದೆ. ದೇರಳಕಟ್ಟೆ ಕೆ.ಎಸ್ ಹೆಗ್ಡೆ ಮೆಡಿಕಲ್ ಅಕಾಡಮಿಯ ಅರಿವಳಿಕೆ ಮತ್ತು ತುರ್ತು ಆರೈಕೆ ವಿಭಾಗದ ಡಾ.ವರುಣ್ ಭಾಸ್ಕರ್ ಪುತ್ತೂರು ಸಿಟಿ ಆಸ್ಪತ್ರೆಯ ಆಡಳಿತ ನಿರ್ದೇಶಕ ಡಾ. ಭಾಸ್ಕರ್ ಎಸ್, ಕನ್ಸಲ್ಟೆಂಟ್ ಗೈನಾಕಾಲಜಿಸ್ಟ್ ಡಾ.ಅನಿಲ್ ಬೈಪಡಿತ್ತಾಯ ಮತ್ತು ಅರಿವಳಿಕೆ ತಜ್ಞ ಡಾ.ಎಸ್.ಎಂ ಪ್ರಸಾದ್ ಅವರು ವೈದ್ಯಕೀಯ ಸಲಹೆಗಳನ್ನು ನೀಡಿದ್ದಾರೆ. ಈ ಮೂಲಕ ಉಸಿರಾಟ ನಿಯಂತ್ರಕ ವಿವೇಕ ಜೀವವರ್ಧಕ ಎನ್ನುವ ಸ್ವಚ್ಛ ಸ್ವಸ್ಥ ಶ್ವಾಸಕ್ರಿಯಾ ಸಾಧನವನ್ನು ಅಭಿವೃದ್ಧಿಪಡಿಸಲಾಗಿದೆ.
ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಶ್ರೀಮತಿ ಸಿಂಧೂ.ಬಿ.ರೂಪೇಶ್ ಮತ್ತು ಇತರ ಅಧಿಕಾರಿಗಳ ಸಮ್ಮುಖದಲ್ಲಿ ಇದರ ಪ್ರಾತ್ಯಕ್ಷಿಕೆ ನೀಡಲಾಗಿದ್ದು ಜಿಲ್ಲಾಧಿಕಾರಿಯ ಸೂಚನೆಯ ಮೇರೆಗೆ ಜಿಲ್ಲಾ ಶಸ್ತ್ರಚಿಕಿತ್ಸಾ ತಜ್ಞರ ಪ್ರತಿನಿಧಿಗಳಾಗಿ ಆಗಮಿಸಿದ ಮಂಗಳೂರು ವೆನ್‍ಲಾಕ್ ಆಸ್ಪತ್ರೆಯ ಅರಿವಳಿಕೆ ತಜ್ಷೆ ಡಾ.ಜೆಸಿಂತಾ ಡಿಸೋಜ ಮತ್ತು ವೈದ್ಯ ಡಾ.ವಿಜಯ್ ಕುಮಾರ್ ಈ ಸಾಧನದ ಕಾರ್ಯವೈಖರಿಯ ಬಗ್ಗೆ ಮೆಚ್ಚುಗೆ ಸೂಚಿಸಿದ್ದಾರೆ.
Leave A Reply