15 ವರ್ಷ ಹಿಂದೆ ಮರ ಉಳಿಸಲು ನಾವು ಮಾಡಿದ ಕೆಲಸ ನೆನಪಿಗೆ ಬಂತು!!
ಇವತ್ತು ವಿಶ್ವ ಪರಿಸರ ದಿನ. ಯಥಾಪ್ರಕಾರ ಒಬ್ಬರಿಗೊಬ್ಬರು ವಿಶ್ ಮಾಡುವುದು ನಂತರ ಮರೆತುಬಿಡುವುದು ಎಲ್ಲಾ ಕಡೆ ಸಾಮಾನ್ಯ. ಪರಿಸರದ ಪರ ಉದ್ದದ ಭಾಷಣ ಮಾಡುವವರು ಕೂಡ ಹೆಚ್ಚೆಂದರೆ 2-3 ಮರಗಳನ್ನು ಕಡಿಯುವುದನ್ನು ತಡೆಯುವುದರಿಂದ ದೊಡ್ಡ ಸಾಧನೆ ಮಾಡಿದಂತೆ ಆಗುವುದಿಲ್ಲ. ಸ್ಥಳೀಯಾಡಳಿತ ಸಂಸ್ಥೆಗಳು ರಸ್ತೆ ಅಭಿವೃದ್ಧಿ, ಅಗಲೀಕರಣ, ಕಾಂಕ್ರೀಟ್ ಕಾಮಗಾರಿಯ ಹೆಸರಿನಲ್ಲಿ ಮರಗಳನ್ನು ಕಡಿಯುವಾಗ ಕೇಂದ್ರ ಸರಕಾರದ ನಿಯಮಸೂಚಿ ಇರುತ್ತದೆ. ರಸ್ತೆ ಅಗಲೀಕರಣ ಮಾಡುವಾಗ ನಾಲ್ಕು ಮರ ಕಡಿದರೆ ಅದರ ನಾಲ್ಕರಷ್ಟು ಅಂದರೆ 16 ಗಿಡಗಳನ್ನು ನೆಡಬೇಕು ಎಂದು ಸೂಚನೆ ಇರುತ್ತದೆ. ಸರಕಾರದ ಯಾವುದೇ ಇಲಾಖೆ ಕಂಡೀಷನ್ ಇಲ್ಲದೆ ಅನುಮತಿಯನ್ನು ಕೊಡುವುದಿಲ್ಲ. ಆದರೆ ಷರತ್ತುಗಳು ಪಾಲನೆಯಾಗುವುದಿಲ್ಲ ಎನ್ನುವುದು ಮಾತ್ರ ಅಕ್ಷರಶ: ನಿಜ. ಇನ್ನು ಪಾಲಿಕೆ ವತಿಯಿಂದ ಬಿಲ್ಡರ್ ಗಳಿಗೆ ಕಟ್ಟಡ ನಿರ್ಮಾಣಕ್ಕೆ ಅನುಮತಿ ನೀಡುವಾಗ ಬಿಲ್ಡರ್ ಗಳು ವಸತಿ ಸಮುಚ್ಚಯ ಅಥವಾ ವ್ಯವಹಾರಿಕ ಕಟ್ಟಡ ಕಟ್ಟುವ ಜಾಗದಲ್ಲಿ 2 ಗಿಡಗಳನ್ನು ನೆಡಲೇಬೇಕು ಎನ್ನುವ ನಿರ್ಬಂಧನೆ ಇದೆ. ಅದು ಪಾಲಿಕೆಯ ಷರತ್ತು ಪಟ್ಟಿ 12 ರಲ್ಲಿ ಸ್ಪಷ್ಟವಾಗಿದೆ. ಆದರೆ 2 ಗಿಡ ಬಿಡಿ ಒಂದು ಹೂವಿನ ಸಸಿಯನ್ನು ಕೂಡ ಯಾವ ಬಿಲ್ಡರ್ ಕೂಡ ನೆಡುವುದಿಲ್ಲ. ಇದರ ಬದಲು ಪ್ರತಿ ಬಿಲ್ಡರ್ ಕಡೆಯಿಂದ ಒಂದು ಅಫಿದಾವಿತ್ ಮಾಡಿಸಿಕೊಳ್ಳಬೇಕು. ಅದರಲ್ಲಿ ಕಾಟಾಚಾರಕ್ಕೆ ಎರಡು ಗಿಡ ನೆಟ್ಟು ಫೋಟೋ ತೆಗೆಯುವ ಬಿಲ್ಡರ್ ಗಳಿಗೆ ಕಡಕ್ ಸೂಚನೆ ನೀಡಬೇಕು. ಅದೇನೆಂದರೆ ಗಿಡ ಕೇವಲ ನೆಡುವುದಲ್ಲ. ಅದನ್ನು ಬೆಳೆಸಿ ದೊಡ್ಡ ಮರ ಮಾಡಬೇಕು. ಹಾಗೆ ಮಾಡದಿದ್ದರೆ ಅವರ ವಿರುದ್ಧ ಕಠಿಣ ಕ್ರಮ ತೆಗೆದುಕೊಳ್ಳಬೇಕು.
ಇನ್ನು ಅನೇಕ ಓದುಗ ಹಿತೈಷಿಗಳಿಗೆ ಗೊತ್ತಿರಲಿಕ್ಕಿಲ್ಲ. ಪ್ರತಿ ಮಳೆಗಾಲಕ್ಕೆ ಅರಣ್ಯ ಇಲಾಖೆಗೆ ಸಸಿ ನೆಡಲು ಅನುದಾನ ಬರುತ್ತದೆ. ಆಗ ಅರಣ್ಯ ಇಲಾಖೆಯ ಅಧಿಕಾರಿಗಳು “ನಮ್ಮಲ್ಲಿ ಸಸಿಗಳು ಇವೆ, ಬೇಕಾದವರು ಬೇಕಾದಷ್ಟು ತೆಗೆದುಕೊಂಡು ಹೋಗಿ” ಎಂದು ಒಂದಿಷ್ಟು ಪ್ರಚಾರ ಮಾಡುತ್ತಾರೆ. ಜನಪ್ರತಿನಿಧಿಗಳಿಂದ ಶಾಲಾ, ಕಾಲೇಜಿನ ಮಕ್ಕಳನ್ನು ಒಟ್ಟು ಮಾಡಿಸಿ ಗಿಡ ನೆಡಿ, ಪರಿಸರ ಉಳಿಸಿ ಎನ್ನುವ ಕಾರ್ಯಕ್ರಮ ಮಾಡುತ್ತಾರೆ. ಕಾರ್ಯಕ್ರಮ ನಡೆದ ಅಂಗಳದಲ್ಲಿಯೇ ಫೋಟೋಕ್ಕಾಗಿ ಜನಪ್ರತಿನಿಧಿಗಳಿಂದ ನಾಲ್ಕು ಸಸಿ ನೆಡಿಸುತ್ತಾರೆ. ಅದರೊಂದಿಗೆ ವಿದ್ಯಾರ್ಥಿಗಳಿಗೆ ಒಂದೊಂದು ಸಸಿ ಕೊಟ್ಟು ಕಳುಹಿಸುತ್ತಾರೆ. ಅದರ ಬಳಿಕ ಫೈಲ್ ರೆಡಿ ಮಾಡಿ ಬಿಲ್ ತಯಾರು ಮಾಡಿ ಕಳುಹಿಸಿಕೊಡುತ್ತಾರೆ. ಲಕ್ಷಾಂತರ ರೂಪಾಯಿ ಹಣ ವ್ಯರ್ಥವಾಗುವುದೇ ವಿನ: ಪ್ರಯೋಜನ ಶೂನ್ಯ. ಇದರಿಂದ ಆಗುವುದು ಏನಿಲ್ಲ. ಐನೂರು ಮಕ್ಕಳಲ್ಲಿ ಅರ್ಧದಷ್ಟು ಹೋಗುವಾಗ ದಾರಿಯಲ್ಲಿ ಬಿಸಾಡಿ ಹೋದರೂ ಅಶ್ಚರಿ ಇಲ್ಲ. ಇದು ಯಾವ ಸರಕಾರ ಬಂದರೂ ನಡೆಯುವುದು ಅದೇ ರೀತಿಯಲ್ಲಿ. ಇದರಿಂದ ಯಾವ ಪರಿಸರ ಕೂಡ ಅಭಿವೃದ್ಧಿಯಾಗುವುದಿಲ್ಲ.
ಸುಮಾರು 15 ವರ್ಷಗಳ ಹಿಂದಿನ ಮಾತು. ಲೇಡಿಹಿಲ್ ನಿಂದ ಮಣ್ಣಗುಡ್ಡೆಯ ತನಕದ ರಸ್ತೆ ಅಗಲೀಕರಣ ಆಗುವುದರಲ್ಲಿತ್ತು. ಅಲ್ಲಿ ಅನೇಕ ಮರಗಳಿದ್ದವು. ಅದನ್ನು ಕಡಿಯದೇ ರಸ್ತೆ ಕಾಂಕ್ರೀಟಿಕರಣ ಮಾಡುವುದು ಸಾಧ್ಯವಿರಲಿಲ್ಲ. ಪಾಲಿಕೆಯಿಂದ ಅರಣ್ಯ ಇಲಾಖೆಗೆ ಮನವಿ ಹೋಯಿತು. 23 ಮರಗಳನ್ನು ಕಡಿಯಲು ಪಾಲಿಕೆಗೆ ಅನುಮತಿ ಸಿಕ್ಕಿತ್ತು. 12 ಮರಗಳನ್ನು ಪಾಲಿಕೆ ಧರೆಗುರುಳಿಸಿ ಆಗಿತ್ತು. ಆದರೆ ಉಳಿದ 11 ಮರಗಳನ್ನು ಕಡಿಯದೇ ರಸ್ತೆ ಅಗಲೀಕರಣ ಮಾಡಿ ಕಾಂಕ್ರೀಟ್ ಹಾಕಬಹುದಿತ್ತು. ಆಗ ನಾನು, ಕಟೀಲು ದಿನೇಶ್ ಪೈ ಹಾಗೂ ವಿದ್ಯಾ ದಿನಕರ್ ಆ ಮರಗಳನ್ನು ಕಡಿಯದಂತೆ ಪಾಲಿಕೆಗೆ ಮನವಿ ಮಾಡಿಕೊಂಡೆವು. ಆದರೆ ಪಾಲಿಕೆ ಕೇಳಲಿಲ್ಲ. ಆದರೆ ಅನಗತ್ಯವಾಗಿ ಮರಗಳನ್ನು ಕಡಿಯುವುದನ್ನು ನೋಡಿ ಕುಳಿತುಕೊಳ್ಳಲು ನಾವು ಕೂಡ ತಯಾರಿರಲಿಲ್ಲ. ಇನ್ನೇನೂ ಮರುದಿನ ಮರಗಳನ್ನು ನೆಲಕ್ಕೆ ಉರುಳಿಸುತ್ತಾರೆ ಎನ್ನುವ ಖಚಿತ ಮಾಹಿತಿ ಬಂದ ಕೂಡಲೇ ನಾವು ಮೂವರು ಒಂದು ನಿರ್ಧಾರಕ್ಕೆ ಬಂದೆವು. ಸೀದಾ ಕುದ್ರೋಳಿ ಗೋಕರ್ಣನಾಥ ಕ್ಷೇತ್ರಕ್ಕೆ ಹೋದೆವು. ಅಲ್ಲಿ ಹಳದಿ ಬಟ್ಟೆಯಲ್ಲಿ ಪ್ರಸಾದ ತೆಗೆದುಕೊಂಡೆವು. ಅದನ್ನು ತಂದು ಆ ಹನ್ನೊಂದು ಮರಗಳಲ್ಲಿ ಐದು ಗೋಳಿಮರಗಳು ಕೂಡ ಇದ್ದವಲ್ಲ. ಮರಗಳಿಗೆ ಕಟ್ಟಿದೆವು. ಆ ಮರಗಳು ಇವತ್ತಿಗೂ ಇವೆ. ಆವತ್ತು ಆ ಮರಗಳಿಗೆ ಕುದ್ರೋಳಿ ದೇವಸ್ಥಾನದ ಪ್ರಸಾದ ಇದ್ದ ಕಾರಣ ಯಾರೂ ಕೂಡ ಆ ಮರಗಳನ್ನು ಕಡಿಯುವ ಧೈರ್ಯ ಮಾಡಲಿಲ್ಲ. ಇವತ್ತಿಗೂ ಆ ಮರಗಳನ್ನು ನೋಡುವಾಗ 15 ವರ್ಷದ ಹಿಂದಿನ ಕಥೆ ನೆನಪಾಗುತ್ತದೆ. ಹೀಗೆ ಅನಿವಾರ್ಯವಾಗಿ ಮರಗಳನ್ನು ಉಳಿಸಲೇಬೇಕಾದ ಪರಿಸ್ಥಿತಿ ಬಂದಾಗ ನಾವು ತೆಗೆದುಕೊಳ್ಳುವ ಹೆಜ್ಜೆಗಳು ಪರಿಸರವನ್ನು ಉಳಿಸಬಲ್ಲದು. ಟ್ರೈ ಮಾಡಿ, ನೋಡಿ. ಒಟ್ಟಿನಲ್ಲಿ ಪರಿಸರ ಉಳಿಯಬೇಕು!!
Leave A Reply