ಸಿಎಂ ಚರ್ಚೆ- ದಲಿತರನ್ನು ಸಿಎಂ ಮಾಡುವಂತೆ ಒತ್ತಡ ಹಾಕುವ ಕೈ ನಾಯಕರ ಚಿಂತನೆ ಫಲ ಕೊಡುತ್ತಾ?
ಹೈಕಮಾಂಡ್ ತೀರ್ಮಾನಿಸಿದರೆ ಐದು ವರ್ಷ ನಾನೇ ಮುಖ್ಯಮಂತ್ರಿ – ಎಂದು ಹೇಳುವ ಮೂಲಕ ನಾಯಕತ್ವ ಬದಲಾವಂಣೆ ಕುರಿತ ಚರ್ಚೆಗೆ ಸಿದ್ಧರಾಮಯ್ಯ ಹೊಸ ಆಯಾಮ ನೀಡಿರಬಹುದು. ಆದರೆ ಒಂದು ವೇಳೆ ಹೈಕಮಾಂಡ್ ಸಿಎಂ ಬದಲಾಯಿಸುವ ತೀರ್ಮಾನ ಮಾಡಿದರೆ ಆಗ ಡಿಕೆ ಶಿವಕುಮಾರ್ ಅವರೊಬ್ಬರೇ ಪರ್ಯಾಯ ಆಯ್ಕೆಯಾಗಬಾರದು ಎಂದು ಅಂದುಕೊಂಡಿರುವ ರಾಜ್ಯ ಸರಕಾರದ ಹಿರಿಯ ಸಚಿವರು ತಾವೇ ಒಂದು ದಾಳ ಉರುಳಿಸಿದ್ದಾರೆ. ಅದೇ ದಲಿತ ಸಿಎಂ.
ಒಂದು ವೇಳೆ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ದಲಿತರಿಗೆ ಸಿಎಂ ಮಾಡುವ ಸಂಕಲ್ಪ ಮಾಡಿದರೆ ಅದು ರಾಜಕೀಯ ಇತಿಹಾಸದಲ್ಲಿ ಬಹುದೊಡ್ಡ ನಿರ್ಧಾರವಾಗಲಿದೆ. ಯಾಕೆಂದರೆ ಇಲ್ಲಿಯವರೆಗೆ ದಲಿತ ಸಿಎಂ ಮಾಡುವ ಚಿಂತನೆ ಅಧಿಕಾರಕ್ಕೆ ಏರಿದ ಪಕ್ಷಗಳ ಹೈಕಮಾಂಡಿನ ಮುಂದೆ ಆಗಾಗ ಚರ್ಚೆಗೆ ಬಂದಿದ್ದರೂ ಯಾವುದೇ ಪಕ್ಷದ ದಲಿತರಿಗೆ ಅಂತಹ ಅವಕಾಶ ಸಿಕ್ಕಿರಲಿಲ್ಲ. ಮಲ್ಲಿಕಾರ್ಜುನ ಖರ್ಗೆಯವರಿಗೆ ಆ ಅವಕಾಶ ಕೊನೆಯ ಕ್ಷಣದಲ್ಲಿ ಮಿಸ್ ಆಗಿ ಧರಂ ಸಿಂಗ್ ಅವರಿಗೆ ಆವತ್ತು ಒಲಿಯದಿದ್ದಿದ್ದರೆ ಈಗಾಗಲೇ ಮೊದಲ ದಲಿತ ಸಿಎಂ ಎನ್ನುವ ಪಟ್ಟ ಖರ್ಗೆಯವರಿಗೆ ಸಿಗುತ್ತಿತ್ತು. ಆದರೆ ರಾಜಕೀಯದಲ್ಲಿ ಎಲ್ಲವೂ ಅಂದುಕೊಂಡಂತೆ ಆಗುವುದಿಲ್ಲ. ಯಾವಾಗ ಯಾವ ಟ್ವಿಸ್ಟ್ ಸಿಗುತ್ತದೆ ಎಂಬ ಐಡಿಯಾ ಯಾರೂ ಊಹಿಸಲು ಆಗುವುದಿಲ್ಲ. ಹಾಗೇ ಸಿದ್ಧರಾಮಯ್ಯ ಬಿಟ್ಟುಕೊಟ್ಟರೆ ಖಾಲಿಯಾಗುವ ಸೀಟಿಗೆ ಶಿವಕುಮಾರ್ ಕುಳಿತುಕೊಳ್ಳುತ್ತಾರೆ ಎನ್ನುವುದು 2+2=4 ಎನ್ನುವಷ್ಟೇ ಸರಿಯಾದ ಲೆಕ್ಕಾಚಾರ ಆಗಿದ್ದರೂ ಇದು ರಾಜಕೀಯವಾಗಿರುವುದರಿಂದ ಅವರೇ ಆಗುತ್ತಾರೆ ಎನ್ನುವುದು ಈಗ ಗೋಡೆಯಲ್ಲಿ ಬರೆದಷ್ಟೇ ಸ್ಪಷ್ಟ ಅಲ್ಲ. ಆದ್ದರಿಂದ ಇನ್ನೊಂದು ಬದಿಯಿಂದ ಪ್ರಯತ್ನ ಮಾಡೋಣ ಎಂದು ದಲಿತ ಸಚಿವರ ಗುಂಪು ತಯಾರಾಗಿದೆ. ಅದರ ಚುಕ್ಕಾಣಿಯಲ್ಲಿ ಡಾ| ಪರಮೇಶ್ವರ್ ಹಾಗೂ ಎಚ್ ಸಿ ಮಹದೇವಪ್ಪ ಇದ್ದಾರೇನೋ ಎನ್ನುವ ಭಾವನೆ ಬರಲು ಮುಖ್ಯ ಕಾರಣ ಮಹದೇವಪ್ಪ ಅವರ ನಿವಾಸಕ್ಕೆ ತೆರಳಿದ ಪರಮೇಶ್ವರ್ ಸುಮಾರು ಒಂದು ಗಂಟೆಗೂ ಹೆಚ್ಚು ಕಾಲ ಸಮಾಲೋಚನೆ ಮಾಡಿರುವುದು.
ಇದು ರಾಜಕೀಯ ಸಭೆ ಅಲ್ಲ ಎಂದು ಇಬ್ಬರೂ ಸಮಾಲೋಚನೆ ನಡೆಸಿ ಬಂದ ಬಳಿಕ ಹೇಳಿದರಾದರೂ ಇಂತಹ ಕಾಲಘಟ್ಟದಲ್ಲಿ ಅವರು ರಾಜಕೀಯ ಮಾತನಾಡುವುದಿಲ್ಲ ಎಂದು ಅವರು ಹೇಳಿದರೂ ಯಾರೂ ನಂಬುವ ಸ್ಥಿತಿಯಲ್ಲಿ ಇಲ್ಲ. ಆದರೂ ದಲಿತ ಶಕ್ತಿ ಪ್ರದರ್ಶನಕ್ಕೆ ರಾಜ್ಯದ ಕೆಲ ದಲಿತ ಸಚಿವರು ಮುಂದಾಗಿರುವುದು ನಿಜ. ಆ ಮೂಲಕ ದಲಿತರ ಸಮಸ್ಯೆಗಳನ್ನು ರಾಜ್ಯ ಸರಕಾರದ ಮುಂದಿಟ್ಟು ಪರಿಹಾರ ದೊರಕಿಸಿಕೊಳ್ಳುವ ನಿಟ್ಟಿನಲ್ಲಿ ಕೆಲಸ ಮಾಡಲಾಗುವುದು ಎಂದು ಅಂತವರು ಹೇಳುತ್ತಿದ್ದರಾದರೂ ಅದರ ನೈಜ ಉದ್ದೇಶ ಏನೆಂಬುದು ಎಲ್ಲರಿಗೂ ಗೊತ್ತಿದೆ. ಇಲ್ಲಿ ಸಿದ್ಧರಾಮಯ್ಯ ಬಣದ ಸಚಿವರು ಹಾಗೂ ತಟಸ್ಥ ಬಣದ ಸಚಿವರು ಒಂದಾಗುತ್ತಿದ್ದಾರೆ ಎಂದರೆ ಡಿಕೆಶಿವಕುಮಾರ್ ಅವರಿಗೆ ಕಂಟಕ ತರಲು ಸಜ್ಜಾಗುತ್ತಿದ್ದಾರೆ ಎಂದೇ ಅರ್ಥ. ಆದರೆ ಡಿಕೆಶಿ ಯಾರನ್ನೂ ನಂಬಿ ರಾಜಕಾರಣ ಮಾಡುವವರಲ್ಲ. ಅವರದ್ದೇನಿದ್ದರೂ ತಮ್ಮ ಶ್ರಮಕ್ಕೆ ಕೂಲಿ ಕೊಡಿ ಎನ್ನುವ ಸಿದ್ಧಾಂತ, ಪಕ್ಷವನ್ನು ಅಧಿಕಾರಕ್ಕೆ ಬರಲು ಎಲ್ಲವನ್ನು ಸುರಿದಿರುವುದರಿಂದ ಸಹಜವಾಗಿ ತಮಗೆ ಮುಂದಿನ ಎರಡೂವರೆ ವರ್ಷ ಸಿಎಂ ಮಾಡಿ ಎನ್ನುವುದೇ ಅವರ ಏಕಮಾತ್ರ ಬೇಡಿಕೆ. ಅದು ಈಡೇರುತ್ತಾ ಎನ್ನುವುದಕ್ಕೆ ಇನ್ನು ಒಂದು ತಿಂಗಳು ಕಾಯಬೇಕು.









