ಕರ್ನೂಲ್ ಬಸ್ ಬೆಂಕಿ ದುರಂತದಲ್ಲಿ 12 ಮಂದಿಯನ್ನು ರಕ್ಷಿಸಿದ ಬೆಂಗಳೂರು ಉದ್ಯೋಗಿ!
 
			    	    ಕೆಲವು ವ್ಯಕ್ತಿಗಳು ಮಾಡುವ ಸಹಾಯಕ್ಕೆ ಬೆಲೆಕಟ್ಟಲು ಸಾಧ್ಯವಿಲ್ಲ. ಬೆಂಕಿ ಹೊತ್ತಿಕೊಂಡು ಸುಟ್ಟು ಹೋಗುತ್ತಿದ್ದ ಬಸ್ ಒಳಗಿನಿಂದ ತಮ್ಮ ಜೀವವನ್ನು ಪಣಕ್ಕೆ ಇಟ್ಟು ಪ್ರಯಾಣಿಕರನ್ನು ಹೊರಗೆ ತೆಗೆಯುವುದು ಚಿಕ್ಕ ವಿಷಯವೇ ಅಲ್ಲ. ಆದರೆ ಹರೀಶ್ ಕುಮಾರ್ ರಾಜು ಎನ್ನುವವರು ಅದನ್ನು ಮಾಡಿ ತೋರಿಸಿದ್ದಾರೆ. ಬೆಂಕಿ ಹೊತ್ತಿಕೊಂಡಿದ್ದ ಬಸ್ ನಲ್ಲಿ ಬೆಂಕಿಯ ಕೆನ್ನಾಲಗೆಗೆ ಸಿಕ್ಕು ನರಳಾಡುತ್ತಿದ್ದವರಿಗೆ ಆಪದ್ಭಾಂಧವನನಾಗಿ ಬಂದ ಹರೀಶ್ ಬರೋಬ್ಬರಿ 12 ಜನರ ಪ್ರಾಣ ಉಳಿಸಿದ ಎನ್ನುವುದನ್ನು ಊಹಿಸಿದಾಗ ಮೈ ರೋಮಾಂಚನವಾಗುತ್ತದೆ. ಕಳೆದ ಶುಕ್ರವಾರ ಮಧ್ಯರಾತ್ರಿ ಆಂಧ್ರಪ್ರದೇಶದ ಕರ್ನೂಲ್ ನಿಂದ ಬೆಂಗಳೂರಿಗೆ ಬರುತ್ತಿದ್ದ ಖಾಸಗಿ ಬಸ್ ಬೆಂಕಿ ಅನಾಹುತಕ್ಕೀಡಾದ ಘಟನೆಯಲ್ಲಿ ಈತ ಮೆರೆದ ಸಮಯಪ್ರಜ್ಞೆ ಹಾಗೂ ಸಾಹಸಕ್ಕೆ ಆಂಧ್ರಪ್ರದೇಶ ಸರಕಾರ ಅಭಿನಂದಿಸಿದೆ.

ಹರೀಶ್ ಕುಮಾರ್ ರಾಜು ಮೂಲತ: ಆಂಧ್ರಪ್ರದೇಶದ ಧರ್ಮಾವರಂ ಜಿಲ್ಲೆಯ ಯುವಕ. ಸದ್ಯ ಬೆಂಗಳೂರಿನಲ್ಲಿ ಉದ್ಯೋಗದಲ್ಲಿದ್ದಾರೆ. ಇವರು ಎಂಜಿನಿಯರಿಂಗ್ ಪದವಿ ಪಡೆದದ್ದು ದೊಡ್ಡಬಳ್ಳಾಪುರದ ಆರ್. ಎಲ್. ಜಾಲಪ್ಪ ತಾಂತ್ರಿಕ ಮಹಾವಿದ್ಯಾಲಯದಲ್ಲಿ.
ಈ ಬಗ್ಗೆ ಮಾತನಾಡಿರುವ ಹರೀಶ್ ” ಕಾರಿನಲ್ಲಿ ಬೆಂಗಳೂರಿನತ್ತ ವೇಳೆ ದೂರದಿಂದಲೇ ದಟ್ಟ ಹೊಗೆ ಕಣ್ಣಿಗೆ ಬಿತ್ತು. ಹತ್ತಿರ ಬಂದು ನೋಡಿದರೆ, ರಸ್ತೆ ಮಧ್ಯದಲ್ಲಿ ಬಸ್ಸಿಗೆ ಬೆಂಕಿ ಹೊತ್ತಿ ಉರಿಯುತ್ತಿತ್ತು. ಬಸ್ ನ ಮುಂಭಾಗದಲ್ಲಿ ಬೆಂಕಿ ತೀವ್ರವಾಗಿತ್ತು. ಹಿಂಭಾಗದಲ್ಲಿ ದಟ್ಟ ಹೊಗೆ ಆವರಿಸಿತ್ತು. ನಾವು ತಡ ಮಾಡಲಿಲ್ಲ. ಕಾರಿನಲ್ಲಿದ್ದ ಸ್ಟೆಪ್ನಿ ಬದಲಿಸುವ ರಾಡ್ ಹಾಗೂ ಕಬ್ಬಿಣದ ಸ್ಟ್ಯಾಂಡ್ ಅನ್ನು ತೆಗೆದುಕೊಂಡು ಹೋಗಿ ಬಸ್ ನ ಗಾಜುಗಳನ್ನು ಒಡೆದು ಪುಡಿ ಮಾಡಿದೆವು. ಅರೆ ಬರೆ ಒಡೆದ ಗಾಜುಗಳ ಮಧ್ಯದಲ್ಲಿ ನುಸುಳುತ್ತಿದ್ದ ಪ್ರಯಾಣಿಕರಿಗೆ ಹೊರಬರಲು ಅನುವು ಮಾಡಿಕೊಟ್ಟೆವು. ನನ್ನೊಂದಿಗೆ ನವೀನ್ ಎನ್ನುವ ಯುವಕ ಸಹ ಇದ್ದ. ಇದರ ನಡುವೆ ಮಹಿಳೆಯೊಬ್ಬರು ತನ್ನ ಮಗುವನ್ನು ತಬ್ಬಿಕೊಂಡು ಸುಡುಬೆಂಕಿಯ ನಡುವೆ ನರಳಿ, ಸುಟ್ಟುಕರಕಲಾದ ದಾರುಣ ದೃಶ್ಯವನ್ನು ನೋಡಿಯೂ ಅವರನ್ನು ರಕ್ಷಿಸಲಾಗದ ಅಸಹಾಯಕತೆ ನನ್ನದಾಗಿತ್ತು” ಎಂದು ಭಾವುಕರಾದರು. ಈ ಬಸ್ ದುರಂತದಲ್ಲಿ ಒಟ್ಟು 20 ಜನ ಸಾವಿಗೀಡಾಗಿದ್ದಾರೆ. ಉಳಿದ 12 ಜನರನ್ನು ರಕ್ಷಿಸಲಾಗಿದೆ. ಈ ಘಟನೆಯ ಬಳಿಕ ಸ್ಲೀಪರ್ ಬಸ್ಸುಗಳ ಸುರಕ್ಷತೆಯ ಬಗ್ಗೆ ಸಾಕಷ್ಟು ಚರ್ಚೆಗಳು ನಡೆದಿವೆ. ಆದರೆ ಇವತ್ತಿಗೂ ಅದು ಎಷ್ಟರಮಟ್ಟಿಗೆ ಪಾಲಿಸಲ್ಪಟ್ಟಿವೆ ಎನ್ನುವುದನ್ನು ಕೂಡ ನೋಡಬೇಕಾಗಿದೆ.

 
		    				         
								     
								    








