ಕಿಶೋರ್ ಅಮನ್ “ಶೆಟ್ಟಿ” ಹೆಮ್ಮೆಯಿಂದ ಸರ್ ನೇಮ್ ಹಾಕಿಕೊಂಡಿದ್ದ!!
ಭಾರತ ಯುವ ರಾಷ್ಟ್ರ. ಇಲ್ಲಿ ಕನಸನ್ನು ಕಂಗಳಲ್ಲಿ ತುಂಬಿ ಮನೋರಂಜನಾ ಕ್ಷೇತ್ರದಲ್ಲಿ ದೊಡ್ಡ ಹೆಸರು ಮಾಡಬೇಕು ಎಂದು ಲಕ್ಷಾಂತರ ಯುವಕರು ನಿತ್ಯ ಪ್ರಯತ್ನಿಸುತ್ತಾರೆ. ಆದರೆ ಅವರಲ್ಲಿ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಕೆಲವರನ್ನು ಮಾತ್ರ ಕಲಾದೇವತೆ ತನ್ನ ಬಳಿ ಕರೆಸಿಕೊಳ್ಳುತ್ತಾಳೆ ಮತ್ತು ಎತ್ತಿ ಹಿಡಿಯುತ್ತಾಳೆ. ಹಾಗೆ ತನ್ನ ಅತ್ಯುತ್ತಮ ನೃತ್ಯದಿಂದ ತುಂಬಾ ಹೆಸರನ್ನು ಸಂಪಾದಿಸಿದ ಯುವಕನ ಹೆಸರು ಕಿಶೋರ್ ಅಮನ್. ಮುಂಬೈಯಲ್ಲಿ ಬೆಳೆಯಬೇಕಾದರೆ ಶೆಟ್ಟಿ ಎಂದು ಸರ್ ನೇಮ್ ಇದ್ದರೆ ಒಳ್ಳೆಯದು ಎಂದು ಅನಿಸಿ ತಾನು ಬಂಟ್ ಸಮುದಾಯದಲ್ಲಿ ಹುಟ್ಟಿರದಿದ್ದರೂ ಶೆಟ್ಟಿ ಎಂದು ಸರ್ ನೇಮ್ ಇಟ್ಟುಕೊಂಡಿದ್ದ. ಯಾವಾಗ ಈತ ದೊಡ್ಡ ದೊಡ್ಡ ಸ್ಟೇಜ್ ಗಳಲ್ಲಿ ಮಿಂಚುತ್ತಿದ್ದನೋ, ರಿಯಾಲಿಟಿ ಶೋಗಳಲ್ಲಿ ತೀರ್ಪುಗಾರನಾಗಿ ಕುಳಿತುಕೊಂಡಿದ್ದನೋ ಆಗ ಯಾರೂ ಅವನ ಸರ್ ನೇಮ್ ಬಗ್ಗೆ ಆಕ್ಷೇಪ ಎತ್ತಿರಲಿಲ್ಲ. ಕಿಶೋರ್ ಶೆಟ್ಟಿ ನಮ್ಮವ ಎಂದು ಅಭಿಮಾನ ಇತ್ತು. ಆದರೆ ಯಾವಾಗ ಡ್ರಗ್ಸ್ ಪ್ರಕರಣದಲ್ಲಿ ಸಿಕ್ಕಿಬಿದ್ದನೋ ನಂತರ ಆತ ಶೆಟ್ಟಿ ಸರ್ ನೇಮ್ ಬಳಸುವುದರ ಬಗ್ಗೆ ಆಕ್ಷೇಪಗಳು ಕೇಳಿಬರುತ್ತಿವೆ. ಇಲ್ಲಿ ಕಿಶೋರ್ ಯಾವ ಜಾತಿಯವನು ಎನ್ನುವುದು ನಮಗೆ ಮುಖ್ಯವಲ್ಲ. ಆದರೆ ಅವನನ್ನು ನೋಡಿ ಎಷ್ಟೋ ಡ್ಯಾನ್ಸರುಗಳು ಕರಾವಳಿಯಲ್ಲಿ ಸ್ಫೂರ್ತಿ ಪಡೆದಿದ್ದಾರೆ. ಕಿಶೋರ್ ನಂತೆಯೇ ಆಗಬೇಕು ಎಂದು ಆಸೆಪಟ್ಟಿದ್ದಾರೆ. ಅವನ ಬಳಿ ಸಲಹೆ, ಮಾರ್ಗದರ್ಶನ, ತರಬೇತಿಯನ್ನು ಕೂಡ ಪಡೆದಿದ್ದಾರೆ. ಕಿಶೋರ್ ಡ್ಯಾನ್ಸ್ ಕಂಡು ಎಷ್ಟೋ ಜನ ಚಪ್ಪಾಳೆ ತಟ್ಟಿದ್ದಾರೆ. ಹುಲಿವೇಷಕ್ಕೆ ಕರೆಸಿ ಸತ್ಕರಿಸಿದ್ದಾರೆ. ಈಗ ಅಂತಹ ಎಲ್ಲರ ಅಭಿಮಾನಕ್ಕೆ ಕಿಶೋರ್ ನೀರೆರೆಚಿದಂತೆ ಆಗಿದೆ. ನಮಗೆ ಪ್ರತಿಭೆ ದೇವರು ಕೊಟ್ಟಿರುತ್ತಾರೆ. ಅದನ್ನು ಪೋಷಿಸಿ ನಾವು ದೊಡ್ಡದು ಮಾಡಿರುತ್ತೇವೆ. ಅದರಿಂದಲೇ ನಮಗೆ ಸಾಕಷ್ಟು ಅಭಿಮಾನಿಗಳು ಹುಟ್ಟಿಕೊಳ್ಳುತ್ತಾರೆ. ಕಿಶೋರ್ ಗೆ ಕೂಡ ಉತ್ತಮ ಭವಿಷ್ಯ ಇತ್ತು. ಇನ್ನೂ ಇರಬಹುದು. ಆದರೆ ಹೀಗೆ ಡ್ರಗ್ಸ್ ಸಾಗಾಟದ ಮೂಲಕ ಆತ ತನ್ನ ಇಮೇಜಿಗೆ ತಾನೇ ಕಲ್ಲು ಎತ್ತಿಹಾಕಿದ್ದಾನೆ.
ಬೆಂಗಳೂರಿನಲ್ಲಿ ಸರಣಿ ಧಾರಾವಾಹಿಯಂತೆ ಒಬ್ಬೊಬ್ಬರೇ ಅಂದರ್ ಆಗುತ್ತಿದ್ದಾರೆ. ಕೆಲವರನ್ನು ಸಿಸಿಬಿ ವಿಚಾರಣೆಗೆ ಕರೆಸಿಕೊಳ್ಳುತ್ತಾ ಇದೆ. ಇದೆಲ್ಲದ್ದಕ್ಕೆ ಕಾರಣ ಏನು?ಕಲಾವಿದರಿಗೆ ಹೆಸರು ಬರುತ್ತಿದ್ದಂತೆ ದಂಡಿಯಾಗಿ ಬಂದು ಬೀಳುವ ಹಣ. ಸ್ಟಾರ್ ಗಳಿಗೆ ಹಣದ ಹೊಳೆ ಹರಿದು ಬರುತ್ತಿದ್ದಂತೆ ಅವರಿಗೆ ಅದನ್ನು ಹೇಗೆ ಖರ್ಚು ಮಾಡಬೇಕು ಎಂದು ಗೊತ್ತಾಗುವುದಿಲ್ಲ. ಫಾರಂ ಹೌಸ್ ಅದು ಇದು ಎಂದು ಮಾಡುತ್ತಾರೆ. ಇವರಿಗೆ ನೋಡಿಕೊಳ್ಳಲು ಪುರುಸೊತ್ತು ಇರುವುದಿಲ್ಲ. ನೋಡಲಿಕ್ಕೆ ಬೇರೆಯವರಿಗೆ ಗುತ್ತಿಗೆ ಕೊಡುತ್ತಾರೆ. ಅವರು ಸ್ಟಾರ್ ಫಾರಂ ಹೌಸ್, ಪೊಲೀಸರು ಏನೂ ಮಾಡುವುದಿಲ್ಲ ಎಂದು ಧೈರ್ಯದಿಂದ ಮನಸ್ಸಿಗೆ ಬಂದದ್ದು ಮಾಡುತ್ತಾರೆ. ಹಾಗೆ ಕೆಲವರು ನಾವು ಸಿಕ್ಕಿಬೀಳುವುದಿಲ್ಲ, ದೊಡ್ಡವರ ಸಂಪರ್ಕ ಇದೆ, ಹೆಸರಿದೆ ಎಂದು ಧೈರ್ಯದಿಂದ ಡ್ರಗ್ಸ್ ಸಾಗಾಟ ಮಾಡಿರಬಹುದು. ಮಂಗಳೂರಿನಲ್ಲಿ ಗಾಂಜಾ, ಅಫೀಮು ಹರಿದಾಡುತ್ತಿರುತ್ತದೆ ಎಂದು ಪೊಲೀಸರು ಅಪರೂಪಕ್ಕೊಮ್ಮೆ ಯಾರನ್ನಾದರೂ ಹಿಡಿಯುವಾಗ ಗೊತ್ತಾಗುತ್ತಿತ್ತು. ಆದರೆ ಅಂತರಾಷ್ಟ್ರೀಯ ಲೆವೆಲ್ಲಿನ ಡ್ರಗ್ಸ್ ಮಂಗಳೂರಿನಲ್ಲಿ ಸುತ್ತಾಡುತ್ತಿದೆ ಎಂದು ಗೊತ್ತಾದದ್ದೇ ಈಗ. ಬಹುಶ: ಕೇಂದ್ರ ತನಿಖಾ ತಂಡ ಬೆಂಗಳೂರಿನಲ್ಲಿ ತನಕ ಡ್ರಗ್ಸ್ ಹುಡುಕಿಕೊಂಡು ಬರದೇ ಇದ್ದರೆ ಇನ್ನಷ್ಟು ವರ್ಷ ಹೀಗೆ ಡ್ರಗ್ಸ್ ಆರಾಮವಾಗಿ ರಾಜ್ಯದ ಉದ್ದಗಲಕ್ಕೂ ಓಡಾಡುತ್ತಿತ್ತು. ಇನ್ನು ಡ್ರಗ್ಸ್ ಜಾಲದಲ್ಲಿ ಬಂಧಿತರಾಗಿರುವವರನ್ನು ಮತ್ತು ವಿಚಾರಣೆಗೆ ಒಳಗಾಗಿರುವವ ಮೇಲೆ ಮೃಧು ಧೋರಣೆ ತಳೆಯುವಂತೆ ಪೊಲೀಸರ ಮೇಲೆ ಒತ್ತಡ ಬೀಳುತ್ತಿದೆ ಎನ್ನುವ ಮಾಹಿತಿ ಬರುತ್ತಿದೆ. ಮೊದಲನೇಯದಾಗಿ ಬಂಧನಕ್ಕೆ ಒಳಗಾಗುವವರ ಪರ ಯಾವ ರಾಜಕಾರಣಿ ಅಥವಾ ಸ್ವಾಮೀಜಿಗಳು ಕೂಡ ಪೊಲೀಸರ ಮೇಲೆ ಒತ್ತಡ ಹೇರಬಾರದು. ಯಾಕೆಂದರೆ ಅದು ಅಕ್ಷಮ್ಯ ಅಪರಾಧ. ಒಂದು ವೇಳೆ ತಲೆಸರಿಯಲ್ಲದವರು ಯಾರಾದರೂ ಒತ್ತಡ ಹಾಕಿದ್ರೂ ಪೊಲೀಸ್ ಅಧಿಕಾರಿಗಳು ಈ ಬಗ್ಗೆ ಒತ್ತಡಕ್ಕೆ ಒಳಗಾಗಬಾರದು. ಒಂದು ವೇಳೆ ಯಾವುದಾದರೂ ಪ್ರಭಾವಿಗಳ ಒತ್ತಡಕ್ಕೆ ಮಣಿದು ಕೇಸ್ ವೀಕ್ ಮಾಡಿದರೆ ಅದು ಅವರು ತಮ್ಮ ಆತ್ಮಸಾಕ್ಷಿಗೆ ಮಾಡುವ ದ್ರೋಹ. ಇದು ಶಾಪವಾಗಿ ಅವರ ಮಕ್ಕಳಿಗೆ ತಟ್ಟಬಹುದು. ಆದ್ದರಿಂದ ಏನೇ ಆಗಲಿ ತಪ್ಪು ಮಾಡಿದವರು ಶಿಕ್ಷೆ ಅನುಭವಿಸಲೇಬೇಕು. ನಮ್ಮ ಯುವ ಭಾರತ ಸ್ಟ್ರಾಂಗ್ ಆಗಿ ಇರಬೇಕು ಎಂದರೆ ಡ್ರಗ್ಸ್ ಇಲ್ಲಿಂದ ಓಡಲೇಬೇಕು. ನನ್ನ ಒಬ್ಬನಿಂದ ಏನಾಗುತ್ತೆ ಎನ್ನುವ ಸಿನಿಕತನ ಬೇಡಾ. ಪ್ರತಿಯೊಬ್ಬರು ಪ್ರಯತ್ನ ಮಾಡಿದರೆ ಡ್ರಗ್ಸ್ ನಮ್ಮ ಮನೆಬಾಗಿಲಿಗೆ ಬಂದು ನಮ್ಮ ಮಕ್ಕಳ ಭವಿಷ್ಯ ಹಾಳಾಗುವುದು ತಪ್ಪುತ್ತದೆ. ಇವತ್ತು ಬೇರೆಯವರ ಮಕ್ಕಳು ಹಾಳಾಗುತ್ತಿರಬಹುದು. ಭಾರತದ ಜವಾಬ್ದಾರಿ ಪ್ರಜೆ ಎಚ್ಚೆತ್ತುಕೊಳ್ಳದಿದ್ದರೆ ಅದು ನಮ್ಮೆಲ್ಲರ ಮಕ್ಕಳನ್ನು ಅದರ ಕಬಂಧ ಬಾಹುಗಳಿಗೆ ಎಳೆದುಕೊಳ್ಳಬಹುದು!
Leave A Reply