ಒಂದು ಪ್ಲೇಟ್ ಗೋಮಾಂಸ ಪ್ಲೀಸ್ ಎಂದು ಸಿದ್ದು ಹೇಳಿದರೆ ತಂದುಕೊಡಲು ಕಾಂಗ್ರೆಸ್ಸಿನಲ್ಲಿ ಯಾರೂ ಇಲ್ಲ!!
ಸಿದ್ಧರಾಮಯ್ಯ ಗೊಂದಲದಲ್ಲಿದ್ದಾರೆ. ಅವರಿಗೆ ಗೋಮಾಂಸ ತಿನ್ನಲು ಇಷ್ಟ ಇರಬಹುದು. ಹಾಗಂತ ಅದನ್ನು ಕುತ್ತಿಗೆಗೆ ಕಟ್ಟಿ ಓಡಾಡುತ್ತಾ ಅಲ್ಪಸಂಖ್ಯಾತರನ್ನು ಖುಷಿ ಮಾಡುತ್ತೇನೆ ಎನ್ನುವ ಹಂಬಲ ಇರಬಾರದು. ಹಾಗೆ ಮಾಡಿದರೆ ಕಾಂಗ್ರೆಸ್ ಹೈಕಮಾಂಡಿಗೂ ಖುಷಿಯಾಗಲ್ಲ. ಯಾಕೆಂದರೆ ಗೋಹತ್ಯಾ ನಿಷೇಧದ ವಿಷಯದಲ್ಲಿ ಕಾಂಗ್ರೆಸ್ಸಿನಲ್ಲಿದ್ದ ಹಿಂದೂಗಳು ಅಕ್ಷರಶ: ಏನು ಮಾತನಾಡಬೇಕು ಎಂದು ತಿಳಿಯದೇ ಗೊಂದಲಕ್ಕೆ ಬಿದ್ದಿದ್ದಾರೆ. ಈ ಅನುಭವ ಸ್ವತ: ಸಿದ್ಧರಾಮಯ್ಯನವರಿಗೂ ಆಗಿದೆ. ಅವರು ತುಂಬಿದ ವಿಧಾನಸಭೆಯಲ್ಲಿ ನಿಂತು ನಾನು ಗೋಮಾಂಸ ತಿನ್ನುತ್ತೇನೆ, ಏನಿವಾಗ ಎಂದು ಆವಾಜ್ ಹಾಕಿದ್ದಾಗ ಯಾವ ಹಿಂದೂ ಕಾಂಗ್ರೆಸ್ ಶಾಸಕ ಕೂಡ ಸಿದ್ದು ಬೆಂಬಲಕ್ಕೆ ಬಂದಿರಲಿಲ್ಲ. ಆ ಕೋಪ ಸಿದ್ದು ಅವರಲ್ಲಿ ಯಾವತ್ತೂ ಇದ್ದೇ ಇರುತ್ತದೆ. ಆ ಕೋಪವನ್ನು ಅವರು ಇತ್ತೀಚೆಗೆ ಕಾಂಗ್ರೆಸ್ ಸಭೆಯಲ್ಲಿ ಬಹಿರಂಗಪಡಿಸಿದ್ದಾರೆ. ಕಾಂಗ್ರೆಸ್ ತನ್ನ ಸಿದ್ಧಾಂತದಲ್ಲಿ ಅಚಲವಾಗಿ ಇಲ್ಲದೇ ಹೋದರೆ ಪಕ್ಷ ಮುಂದುವರೆಯುವುದು ಹೇಗೆ? ಎಂದು ಪ್ರಶ್ನಿಸಿದ್ದಾರೆ.
ಗೋಹತ್ಯಾ ನಿಷೇಧ ಮಾಡಿ ಬಿಜೆಪಿ ಮೈಲೇಜ್ ಪಡೆಯುತ್ತಿದ್ದರೆ, ತಾನು ಒಬ್ಬನೇ ಅಷ್ಟೂ ಬಿಜೆಪಿಯ ಕೇಸರಿ ಪಡೆಯನ್ನು ಎದುರಿಸುತ್ತಿರುವಾಗ ಒಬ್ಬನೇ ಒಬ್ಬ ಕಾಂಗ್ರೆಸ್ ಶಾಸಕ ತನ್ನ ಬೆಂಬಲಕ್ಕೆ ಬರದೇ ಇರುವುದು ಬಿಜೆಪಿಗೆ ಆನೆಬಲ ಬಂದಂತೆ ಆಗಿದೆ ಎಂದು ಅವರು ಕೋಪ ಹೊರಹಾಕಿರುವುದು ಸಹಜ. ಇದರರ್ಥ ಇಷ್ಟೇ, ಸಿದ್ದು ಏನು ಅಂದುಕೊಂಡು ಕಾಂಗ್ರೆಸ್ಸಿಗೆ ಬಂದಿದ್ದರೋ ಆ ಕಾಂಗ್ರೆಸ್ ಈಗ ಇಲ್ಲ. ಸಿದ್ಧರಾಮಯ್ಯನವರ ವೈಯಕ್ತಿಕ ರಾಜಕೀಯ ನಿಲುವುಗಳಿಂದ ಕಾಂಗ್ರೆಸ್ ಮುಂದೆ ಬಂದಾಗಿದೆ. ಕಾಂಗ್ರೆಸ್ ತುಂಬಾ ಮುಂದೆ ಹೋಗಿರುವುದು ಸಿದ್ದು ಗಮನಕ್ಕೆ ಬಂದಿಲ್ಲ. ಅವರು ವಿಧಾನಸಭೆಯಲ್ಲಿ ಇವತ್ತಿಗೂ ಕಾಂಗ್ರೆಸ್ ಗೋಹತ್ಯಾ ನಿಷೇಧದ ವಿರುದ್ಧವಾಗಿ ಮಾತನಾಡಬೇಕು ಎಂದು ಬಯಸುತ್ತಿದ್ದಾರೆ. ಬಿಜೆಪಿ ವಿರುದ್ಧ ಜನಾಭಿಪ್ರಾಯ ಸಂಗ್ರಹಿಸಿ ಎನ್ನುತ್ತಿದ್ದಾರೆ. ತಮ್ಮ ವಾದಕ್ಕೆ ಬಲ ತುಂಬಲು ಮಡಿಕೇರಿಯ ಜನ ಗೋಮಾಂಸ ತಿನ್ನುತ್ತಾರೆ ಎಂದು ಹೇಳುತ್ತಾರೆ. ಅಲ್ಲಿ ಕೇಸು ಆಯಿತು ಎಂದ ಕೂಡಲೇ ನಾನು ಹೇಳಿದ್ದಕ್ಕೆ ಯಾರಿಗಾದರೂ ಬೇಸರವಾದರೆ ಕ್ಷಮಿಸಿ ಎನ್ನುತ್ತಾರೆ. ನಂತರ ತಾನು ತಿನ್ನುವುದಿಲ್ಲ, ಬೇರೆಯವರು ತಿಂದರೆ ವಿರೋಧಿಸಲ್ಲ ಎನ್ನುತ್ತಾರೆ. ಒಮ್ಮೆ ತಿನ್ನುತ್ತೇನೆ, ಏನೀಗ? ಎನ್ನುವವರು ನಂತರ ತಿನ್ನುವುದಿಲ್ಲ ಎಂದು ಹೇಳುತ್ತಾರೆ. ಹಾಗಾದರೆ ಸಿದ್ದು ಅವರಿಗೆ ಏನಾಗಿದೆ. ಕಾಂಗ್ರೆಸ್ ಪಕ್ಷ ಅಂತೂ ಎರಡು ದೋಣಿಯ ಮೇಲೆ ಕಾಲಿಟ್ಟು ತುಂಬಾ ಸಮಯವಾಗಿದೆ. ಅದಕ್ಕಿಗ ತನ್ನ ಸಿದ್ಧಾಂತದ ಬಗ್ಗೆ ಸ್ಪಷ್ಟತೆ ಇಲ್ಲ. ಆದರೆ ಸಿದ್ದು ಜಾತ್ರೆಯಲ್ಲಿ ದಾರಿತಪ್ಪಿದ ಮಗುವಿನಂತೆ ಆಗಿದ್ದಾರೆ. ಅವರಿಗೆ ಕಾಂಗ್ರೆಸ್ ನಿಲುವಿನ ಬಗ್ಗೆ ಗೊತ್ತಾಗುತ್ತಿಲ್ಲ. ಆದ್ದರಿಂದ ಅಲ್ಲಿಯೂ ಸಲ್ಲದೆ, ಇಲ್ಲಿಯೂ ಸಲ್ಲದೆ ಸಿದ್ದು ಏಕಾಂಗಿಯಾಗಿದ್ದಾರೆ. ಸಿದ್ದುವಿಗೆ ಈ ಪರಿಸ್ಥಿತಿ ಯಾಕೆ ಬಂತು? ಏಕೆಂದರೆ ಸಿದ್ದು ಸಮಾಜವಾದಿ ಲೋಹಿಯಾ ಸಿದ್ಧಾಂತದಿಂದ ಬಂದವರು. ಅದು ಒಂದು ಕಾಲಕ್ಕೆ ಜೆಡಿಎಸ್ ನಂಬಿಕೊಂಡು ಬಂದ ಸಿದ್ಧಾಂತ. ಆದರೆ ದೇವೆಗೌಡರಿಗೆ ವಯಸ್ಸಾಗುತ್ತಿದ್ದಂತೆ ಯಾವುದೇ ಪಕ್ಕಾ ಸಿದ್ಧಾಂತ ಇಲ್ಲದ ಕುಮಾರಸ್ವಾಮಿ ಅಧಿಕಾರದ ರುಚಿ ಕಂಡರೋ ನಂತರ ಅತ್ತ ಲೋಹಿಯಾ ಸಿದ್ಧಾಂತವೂ ಇಲ್ಲದೆ ಇತ್ತ ಹಿಂದೂತ್ವವೂ ಇಲ್ಲದೆ ಜೆಡಿಎಸ್ ತನ್ನ ಭದ್ರಕೋಟೆ ಹಳೆ ಮೈಸೂರು ಭಾಗದಲ್ಲಿ ಒದ್ದಾಡಿ ಪ್ರಾಣ ಬಿಡುತ್ತಿದೆ. ಹೀಗಿರುವಾಗ ಜನರ ನಾಡಿ ಮಿಡಿತ ಅರಿಯದ ಸಿದ್ದು ತನ್ನ ಬೆಂಬಲಕ್ಕೆ ನಿಲ್ಲಿ ಎಂದು ತನ್ನದೇ ಪಕ್ಷದ ಶಾಸಕರನ್ನು ಗೋಗರೆಯುವಂತಾಗಿದೆ. ಆದರೆ ಅಧಿಕಾರಕ್ಕೆ ಬರುವ ತನಕ ಗೋಹತ್ಯಾ ನಿಷೇಧದ ವಿಷಯದಲ್ಲಿ ಉಗ್ರ ಹೋರಾಟ ಮಾಡುವುದು ಬೇಡಾ ಎಂದು ಡಿಕೆಶಿ ತಮ್ಮ ಜಾಣತನವನ್ನು ತೋರಿಸಿದ್ದಾರೆ. ಒಮ್ಮೆ ಅಧಿಕಾರಕ್ಕೆ ಬಂದ ಮೇಲೆ ಈ ಕಾಯ್ದೆಯನ್ನು ಮತ್ತೆ ನಮಗೆ ಬೇಕಾದ ಹಾಗೆ ಬದಲಿಸೋಣ, ಈಗಲೇ ಸುಮ್ಮನೆ ಏನೇನೋ ಹೇಳಿ ನಮ್ಮ ಕಾಲಿನ ಮೇಲೆ ನಾವೇ ಕಲ್ಲು ಹಾಕುವುದು ಬೇಡಾ ಎನ್ನುವ ನಿಲುವು ಅವರದ್ದು. ಅಲ್ಪಸಂಖ್ಯಾತರು ಮತ ಹಾಕಲು ಬೇಕು, ಹಾಗಂತ ಗೋಮಾಂಸವನ್ನು ತಲೆ ಮೇಲೆ ಹೊತ್ತು ತಿರುಗಿದರೆ ಸ್ವತ: ಅಲ್ಪಸಂಖ್ಯಾತರಿಗೂ ನಮ್ಮ ಓಲೈಕೆ ಕಂಡು ವಾಕರಿಕೆ ಬರಬಹುದು ಎಂದು ಡಿಕೆಶಿ ಅಂದುಕೊಂಡಿದ್ದಾರೆ. ಆದರೆ ಸಿದ್ಧರಾಮಯ್ಯನವರಿಗೆ ತಾವು ಅಹಿಂದ ನಾಯಕರಾಗದೇ ಇದ್ದರೆ ಮುಂದಿನ ಬಾರಿ ಅಪ್ಪಿತಪ್ಪಿ ಅಧಿಕಾರಕ್ಕೆ ಬಂದರೆ ತಮ್ಮ ಬಲ ಗೊತ್ತಾಗುವುದಿಲ್ಲ. ಆದ್ದರಿಂದ ಅಹಿಂದವನ್ನು ಬೆನ್ನಿಗೆ ಕಟ್ಟಿಕೊಂಡೇ ಉಳಿಯಲು ನಿರ್ಧರಿಸಿದ್ದಾರೆ. ಅದಕ್ಕಾಗಿ ಮುದಿ ದನಗಳನ್ನು ಬಿಜೆಪಿ ಮುಖಂಡರ ಮನೆಯಂಗಳಕ್ಕೆ ಬಿಟ್ಟು ಬನ್ನಿ ಎಂದು ಹೇಳುತ್ತಾರೆ. ಅವರು ಗೋವನ್ನು ಕೇವಲ ಹಾಲಿಗೆ ಬಳಸುತ್ತಾರೆ ಎಂದು ಅಂದುಕೊಂಡ ಪರಿಣಾಮವೇ ಅಥವಾ ಗೋ ಎಂದರೆ ಅದು ಬಳಸಿ ಎಸೆಯುವ ಪ್ರಾಣಿ ಎಂದು ಅಂದುಕೊಂಡಿರುವ ಸಾಧ್ಯತೆಯೋ ಗೊತ್ತಾಗುವುದಿಲ್ಲ. ಗೋವು ಹಾಲು ಕೊಡುವಾಗ ಮಾತ್ರ ಕಾಮಧೇನು ಅಲ್ಲ, ಅದು ಬದುಕಿರುವ ದಿನದ ಕೊನೆಯ ತನಕ ಕೂಡ ಕಾಮಧೇನು ಎನ್ನುವುದು ಸಿದ್ಧರಾಮಯ್ಯನವರಿಗೆ ಗೊತ್ತಿರಲಿಕ್ಕಿಲ್ಲ ಅಥವಾ ಗೊತ್ತಿದ್ದರೂ ಅರಗಿಸಿಕೊಳ್ಳುವ ಆಸಕ್ತಿ ಇಲ್ಲ. ಒಬ್ಬ ವ್ಯಕ್ತಿ ಮುಖ್ಯಮಂತ್ರಿ ಹುದ್ದೆಯ ತನಕ ಹೋಗಿ ಅಲ್ಲಿ ಐದು ವರ್ಷ ಅಧಿಕಾರ ನಡೆಸಿ ನಂತರ ಧಡಾರನೆ ಕೆಳಗೆ ಬಿದ್ದು ಮತ್ತೆ ಮೈಕೈ ಒರೆಸಿ ಆಸೆಯಿಂದ ಸಿಎಂ ಕುರ್ಚಿ ಕಡೆ ನೋಡಿದರೆ ಹೇಗೋ ಹಾಗಿದೆ ಸಿದ್ದು ಕರುಣಾಜನಕ ಕಥೆ-ವ್ಯಥೆ. ಸಮಾಜವಾದಿಗಳು ಇರುವುದೇ ಹಾಗೆ. ಆದರೆ ಕಾಂಗ್ರೆಸ್ ಮತ್ತು ಜೆಡಿಎಸ್ ಜನರ ಅಭಿರುಚಿಗೆ ತಕ್ಕಂತೆ ಬದಲಾಗುತ್ತಿವೆ. ಅದೇ ಬಿಜೆಪಿಗೆ ತಮ್ಮ ಪ್ರಣಾಳಿಕೆಯಲ್ಲಿ ಕೊಟ್ಟ ಭರವಸೆಯನ್ನು ಈಡೇರಿಸಲೇ ಬೇಕಿತ್ತು. ಅದಕ್ಕಾಗಿ ಗೋಹತ್ಯಾ ನಿಷೇಧ ಜಾರಿಗೆ ತರಲೇಬೇಕಿತ್ತು. ಅದರಿಂದ ಚುನಾವಣೆ ವೇಳೆ ಲಾಭ ಆಗುತ್ತಾ? ಆಗಲೂಬಹುದು ಇಲ್ಲದೆಯೂ ಇರಬಹುದು. ಆದರೆ ಸಿದ್ದು ಮಾತ್ರ ರಾತ್ರಿಯ ಕೊನೆಯ ಬಸ್ಸು ತಪ್ಪಿ ಬಸ್ ಸ್ಟ್ಯಾಂಡಿನ ನೆಲದ ಮೇಲೆ ಮಲಗಿದ ಪ್ರಯಾಣಿಕನಂತಾಗಿದ್ದಾರೆ!
Leave A Reply