ಮೆಸ್ಕಾಂ ನೆಲ ಅಗೆದದ್ದು ನೋಡದಿದ್ದರೆ ಕಾದಿದೆ ಗಂಡಾಂತರ!!
Posted On January 25, 2021
ನಿಮ್ಮ ಮನೆಯ ಒಳಗೆ ಯಾರಾದರೂ ಬಂದು ನೆಲ ಅಗೆದು ಹೋದರೆ ನೀವು ಸುಮ್ಮನೆ ಬಿಡುತ್ತೀರಾ? ನಿಮ್ಮ ಮನೆಯ ಅಂಗಳದಲ್ಲಿ ಯಾರಾದರೂ ಒಂದು ಪ್ಲಾಸ್ಟಿಕ್ ತೊಟ್ಟೆ ಬಿಸಾಡಿ ಹೋದರೆ ನೀವು ಹಾಗೆ ಚೆಂದ ನೋಡುತ್ತಾ ಕುಳಿತುಕೊಳ್ಳುವಿರಾ? ಇಲ್ಲವಲ್ಲ. ಯಾಕೆಂದರೆ ನಿಮ್ಮ ಮನೆಯ ಮೇಲೆ ನಿಮಗೆ ಹಕ್ಕು ಮಾತ್ರವಲ್ಲ, ಪ್ರೀತಿ ಕೂಡ ಇದೆ. ನಿನ್ನೆ ನಮ್ಮ ಮನೆಯ ಅಡುಗೆ ಕೋಣೆಗೆ ಯಾರೋ ಬಂದು ಅಗೆದು ಮುಚ್ಚಿ ಹೋದರು, ಯಾರು ಅಂತ ಗೊತ್ತೆ ಆಗಿಲ್ಲ. ನಾನು ಯಾರು ಎಂದು ನೋಡಿಲ್ಲ ಎಂದು ನೀವು ಹೇಳಿದ್ರೆ ಒಂದೋ ನಿಮಗೆ ತಲೆಕೆಟ್ಟಿರಬೇಕು ಅಥವಾ ನಿಮಗೆ ನಿಮ್ಮ ಮನೆಯ ಮೇಲೆ ಪ್ರೀತಿ ಇಲ್ಲ ಎಂದೇ ಅರ್ಥ. ಸದ್ಯ ಇಡೀ ಪಾಲಿಕೆ ವ್ಯಾಪ್ತಿಯನ್ನು ಒಂದು ಮನೆ ಎಂದು ತೆಗೆದುಕೊಂಡರೆ ಅದರ ಉಸಾಬರಿ ನೋಡಬೇಕಾದದ್ದು ಪಾಲಿಕೆಯ ಕಮೀಷನರ್. ಹಾಗಂತ ಅವರು ಪ್ರತಿ ರಸ್ತೆಯಲ್ಲಿ ಎಲ್ಲಿ ಅಗೆದಿದ್ದಾರೆ, ಎಲ್ಲಿ ಮುಚ್ಚಿದ್ದಾರೆ ಎಂದು ನೋಡಿ ಕುಳಿತುಕೊಳ್ಳಲು ಆಗುವುದಿಲ್ಲ. ಹಾಗಿರುವುದರಿಂದ ನೋಡಬೇಕಾಗಿರುವುದು ಇಂಜಿನಿಯರಿಂಗ್ ವಿಭಾಗದ ಅಧಿಕಾರಿಗಳು. ಆದರೆ ಅವರು ನೋಡುವುದಿಲ್ಲ. ಗುತ್ತಿಗೆದಾರರು ಬೇರೆ ಬೇರೆ ಕಾಮಗಾರಿಗಳ ಹೆಸರಿನಲ್ಲಿ ಅಗೆಯುತ್ತಾರೆ, ಮುಚ್ಚುತ್ತಾರೆ, ಹೋಗುತ್ತಾರೆ. ಹಾಗಾದರೆ ಮಂಗಳೂರು ಮಹಾನಗರ ಪಾಲಿಕೆಯ ವ್ಯಾಪ್ತಿಯಲ್ಲಿ ಯಾವುದೇ ಕಾಮಗಾರಿಗಳು ನಡೆದಾಗ ಪಾಲಿಕೆ ಕಡೆಯಿಂದ ಯಾಕೆ ಒಂದು ಕಣ್ಣು ಅದರ ಮೇಲೆ ಇಡುವುದಿಲ್ಲ ಎನ್ನುವುದಕ್ಕೆ ಉತ್ತರ ಸಿಗುವುದಿಲ್ಲ.
ಒಂದು ಕಡೆಯಲ್ಲಿ ಎಡಿಬಿ-2, ಅಮೃತ ಯೋಜನೆ ಕಾಮಗಾರಿಗಳು ನಡೆಯುತ್ತಿವೆ. ಇನ್ನೊಂದೆಡೆ ಸ್ಮಾರ್ಟ್ ಸಿಟಿ ಕಾಮಗಾರಿಗಳು ನಡೆಯುತ್ತಿವೆ. ಮತ್ತೊಂದೆಡೆ ಮೆಸ್ಕಾಂನವರು ಕೇಬಲ್ ಅಳವಡಿಸಲು ಅಂಡರ್ ಗ್ರೌಂಡ್ ಕೆಲಸ ಮಾಡುತ್ತಿದ್ದಾರೆ. ಒಟ್ಟಿನಲ್ಲಿ ಮಂಗಳೂರಿನಲ್ಲಿ ಅಭಿವೃದ್ಧಿ ಕಾಮಗಾರಿಗಳು ಜೋರಾಗಿ ನಡೆಯುತ್ತಿವೆ. ಆದ್ರೆ ಪಾಲಿಕೆಯವರು ಆ ಕುರಿತು ತಮಗೆ ಸಂಬಂಧವೇ ಇಲ್ಲದಂತೆ ವರ್ತಿಸಿದರೆ ಈ ಮಳೆಗಾಲದಲ್ಲಿ ಒಂದು ದೊಡ್ಡ ಗಂಡಾಂತರ ಮಂಗಳೂರನ್ನು ಕಾಡಲಿದೆ. ಅದೇನೆಂದರೆ ಮೆಸ್ಕಾಂ ನೆಲ ಅಗೆತ. ಅವರು ಅಗೆಯುತ್ತಾರೆ. ಕೇಬಲ್ ಅಳವಡಿಸುತ್ತಾರೆ. ಅದರ ಮೇಲೆ ಅಲ್ಲಿಯೇ ಅಗೆದಾಗ ಇದ್ದ ಮಣ್ಣನ್ನು ಹಾಕುತ್ತಾರೆ. ಕೆಲವು ಕಡೆ ಮರಳು ಕೂಡ ಹಾಕಿದ್ದಾರೆ. ಅವರು ಹಾಕಿ ಹೋದ ಬಳಿಕ ವಾಹನಗಳು ಅದರ ಮೇಲೆ ಓಡಾಡಿದಾಗ ಅದು ಸರಿಯಾಗಿ ಲೆವೆಲ್ಲಿಗೆ ಬರಲೂಬಹುದು. ಬರದೇನೂ ಇರಬಹುದು. ಕೆಲವು ಕಡೆ ಉಳಿದ ಮಣ್ಣು, ಮರಳನ್ನು ಗುತ್ತಿಗೆದಾರರು ಹಾಗೆ ಬಿಟ್ಟು ಹೋಗಿರುವುದರಿಂದ ಸಮಸ್ಯೆ ಶುರುವಾಗುತ್ತದೆ. ಒಂದನೇಯದಾಗಿ ವಾಹನಗಳ ಸರಾಗ ಓಡಾಟಕ್ಕೆ ಕಷ್ಟವಾಗುತ್ತದೆ. ಇನ್ನೊಂದೇನೆಂದರೆ ಮಣ್ಣಿನ ಮತ್ತು ಮರಳಿನ ರಾಶಿ ಹಾಗೇ ಉಳಿದರೆ ಮುಂದಿನ ಮಳೆಗಾಲಕ್ಕೆ ಸುರಿಯುವ ಮಳೆಯ ನೀರು ಆ ಮಣ್ಣಿನ ಮತ್ತು ಮರಳಿನ ರಾಶಿಯನ್ನು ತೆಗೆದುಕೊಂಡು ಸನಿಹದಲ್ಲಿಯೇ ಇರುವ ಚರಂಡಿಗೆ ಹೋಗುತ್ತದೆ. ಒಂದು ಕಡೆ ಒಂದು ಮೀಟರ್ ಅಗಲದ ಚರಂಡಿಯ ಹೂಳನ್ನು ಸರಿಯಾಗಿ ತೆಗೆಯಲಾಗದೇ ಪ್ರತಿ ಬಾರಿ ಅಲ್ಲಲ್ಲಿ ಕೃತಕ ನೆರೆ ಸಾಮಾನ್ಯವಾಗಿದೆ. ಈ ಬಾರಿ ನೂರಕ್ಕೆ ನೂರು ಹೆಚ್ಚಿನ ಕಡೆ ಕೃತಕ ನೆರೆ ಗ್ಯಾರಂಟಿಯಾಗುತ್ತದೆ. ಇದಕ್ಕೆ ಕಾರಣ ಯಾರು ಎಂದು ನೋಡಿದರೆ ಸಂಶಯವೇ ಬೇಡಾ, ಅದು ಮಹಾನಗರ ಪಾಲಿಕೆ. ಯಾಕೆಂದರೆ ಮೆಸ್ಕಾಂ ಕಡೆಯಿಂದ ನೆಲದಡಿ ಕೇಬಲ್ ಅಳವಡಿಸುವ ಗುತ್ತಿಗೆ ಸಿಕ್ಕಿರುವುದು ಬೆಂಗಳೂರಿನ ಕಂಪೆನಿಗೆ. ಅವರಿಗೆ ಮಂಗಳೂರಿನ ಭೌಗೋಳಿಕ ಕಥೆ ಗೊತ್ತಿಲ್ಲ. ಅವರಿಗೆ ಅದು ಬೇಕಾಗಿಯೂ ಇಲ್ಲ. ಅವರು ಅಗೆದರು. ಒಟ್ರಾಶಿ ಮುಚ್ಚಿದರು. ಹೋಗಿಬಿಟ್ಟರು. ನಂತರ ಅನುಭವಿಸಬೇಕಾಗಿರುವುದು ಮಂಗಳೂರು ಜನ. ತೊಂದರೆ ಆದ ನಂತರ ಪಾಲಿಕೆ ಸರಿ ಮಾಡಲು ಹೊರಟರೆ ಜನರ ತೆರಿಗೆಯ ಹಣ ಮತ್ತೆ ಪೋಲು. ಇದು ಆಗಬಾರದು ಎಂದು ಈಗಾಗಲೇ ಮೇಯರ್ ಅವರು ಇಂಜಿನಿಯರಿಂಗ್ ವಿಭಾಗಕ್ಕೆ ಸೂಚನೆ ನೀಡಿದ್ದಾರೆ. ಪಾಲಿಕೆಯ ಕಮೀಷನರ್ ಕೂಡ ಈ ಬಗ್ಗೆ ಆದೇಶ ನೀಡಿದ್ದಾರೆ. ಜಿಲ್ಲಾಧಿಕಾರಿಯರು ಈಗಾಗಲೇ ಸಭೆಗಳಲ್ಲಿ ಎಚ್ಚರಿಕೆ ನೀಡಿದ್ದಾರೆ. ಇಷ್ಟಿದ್ದು ವಿವಿಧ ಕಾಮಗಾರಿಗಳ ಮತ್ತು ಪಾಲಿಕೆಯ ನಡುವೆ ಸಂವಹನ ಇಲ್ಲದೆ ಹೋದರೆ ಏನು ಮಾಡುವುದು. ಆಗ ಕಾರ್ಪೋರೇಟರ್ ಗಳು ರಂಗಕ್ಕೆ ಇಳಿಯಬೇಕು. ತಮ್ಮ ವಾರ್ಡಿನಲ್ಲಿ ಅಲ್ಲಲ್ಲಿ ಅಗೆದು ಹಾಗೆ ಬಿಟ್ಟ ಕಾಮಗಾರಿಗಳು, ಮುಚ್ಚಿಟ್ಟ ನೆಲದ ಮೇಲೆ ಹಾಗೆ ಉಳಿದ ಮಣ್ಣು, ಮರಳು ತೆಗೆಸುವಂತೆ ಗುತ್ತಿಗೆದಾರರಿಗೆ ಪಾಲಿಕೆಯ ಸಂಬಂಧಿತ ಅಧಿಕಾರಿಗಳಿಂದ ಸೂಚನೆ ಹೊರಡಿಸಬೇಕು. ಹಾಗೆಂದು ಗುತ್ತಿಗೆದಾರರು ಮೆಸ್ಕಾಂ ಕೇಬಲ ಹಾಕುವಾಗ ಅಲ್ಲಿಯೇ ಕೆಳಗೆ ನೆಲದಡಿ ಇರುವ ನೀರಿನ ಪೈಪುಗಳಿಗೆ ಹಾನಿ ಮಾಡಿ ನೀರು ಪೋಲು ಆಗಲು ಆರಂಭವಾಯಿತೋ ಕುಡಿಯುವ ನೀರಿನ ಸಮಸ್ಯೆ ಶುರುವಾಯಿತು ಎಂದು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ. ಒಂದು ವೇಳೆ ಕಾರ್ಪೋರೇಟರ್ ಗಳ ಮಾತುಗಳನ್ನು ಪಾಲಿಕೆಯಲ್ಲಿ ಯಾರೂ ಕಿವಿಗೆ ಹಾಕಿಕೊಳ್ಳದಿದ್ದರೆ ತಮ್ಮ ಶಾಸಕರ ಮೂಲಕ ಒತ್ತಡ ತರಲೇಬೇಕು. ಇನ್ನು ಯುವ ಉತ್ಸಾಹಿ ಮನಪಾ ಸದಸ್ಯರು ತಮ್ಮ ವಾರ್ಡಿನಲ್ಲಿ ಆಗುತ್ತಿರುವ ಅಗೆತದ ಕಾಮಗಾರಿಗಳನ್ನು ನಿಂತು ನೋಡಿದರೆ ತುಂಬಾ ಒಳ್ಳೆಯದು. ಯಾಕೆಂದರೆ ಸ್ವಲ್ಪ ಹೆಚ್ಚು ಕಡಿಮೆಯಾದರೆ ಒಂದೋ ಕೃತಕ ನೆರೆ ಅಥವಾ ನೀರಿಗೆ ಹಾಹಾಕಾರ ಉಂಟಾಗಲಿದೆ!!.
- Advertisement -
Leave A Reply