ಬಾಲ್ಯದಲ್ಲಿ ಸಂಸ್ಕಾರ ಕಲಿತರೆ ವಿಶ್ವ ಮಹಿಳಾ ದಿನ, ಇಲ್ಲದಿದ್ದರೆ ವೆಲೆಂಟೈನ್ ಡೇ!
ಇವತ್ತು ವಿಶ್ವ ಮಹಿಳಾ ದಿನ. ನಾಳೆ ವೆಲೆಂಟೈನ್ ಡೇ ಅಂದರೆ ಪ್ರೇಮಿಗಳ ದಿನ. ತಮ್ಮ ಅಪ್ಪ, ಅಮ್ಮನ ಜನ್ಮದಿನ ನೆನಪಿಟ್ಟುಕೊಳ್ಳದಿದ್ದರೂ ಅನೇಕ ಪಡ್ಡೆಗಳು ಫೆಬ್ರವರಿ 14 ನೇ ತಾರೀಕನ್ನು ಚೆನ್ನಾಗಿ ನೆನಪಿನಲ್ಲಿಟ್ಟುಕೊಳ್ಳುತ್ತಾರೆ. ತಮ್ಮ ಗ್ರೀಟಿಂಗ್ಸ್ ಕಾರ್ಡ್, ರೋಸ್, ಗಿಫ್ಟ್ ಗಳು ಹೆಚ್ಚು ಬಿಕರಿಯಾಗಬೇಕೆಂದು ಯಾವುದೋ ಮಾರ್ಕೆಟಿಂಗ್ ತಜ್ಞರು ಶುರು ಮಾಡಿದ ಈ ದಿನ ಪ್ರತಿ ವರ್ಷ ಚೀನಿ ಉತ್ಪನ್ನಗಳಿಗೆ ಬಹುದೊಡ್ಡ ಮಾರುಕಟ್ಟೆಯಾಗಿತ್ತು. ಆ ದಿನ ಇಂತಹ ಬಣ್ಣದ ಬಟ್ಟೆ ಹಾಕಿದರೆ ಈ ಅರ್ಥ ಬರುತ್ತದೆ, ರೆಡ್ ಹಾಕಿದರೆ ಎಂಗೇಜ್, ಹಳದಿ ಹಾಕಿದರೆ ಇನ್ನೊಂದು, ಗ್ರೀನ್ ಹಾಕಿದರೆ ಮತ್ತೊಂದು ಅರ್ಥ ಎಂದು ನಿಖರವಾಗಿ ಹೇಳುವ ಯುವಕ, ಯುವತಿಯರಿಗೆ ಈ ಬಾರಿ ಪರೀಕ್ಷೆಯಲ್ಲಿ ಇಂತಹ ಪ್ರಶ್ನೆಗಳಿಗೆ ಇಂತಹುದೇ ಉತ್ತರ ಬರೆದರೆ ಮಾತ್ರ ಮಾರ್ಕ್ ಸಿಗುತ್ತದೆ ಎಂದು ಗೊತ್ತಿರುವುದಿಲ್ಲ. ಆವತ್ತು ಯಾವ ಗಿಫ್ಟ್ ನೀಡಿದರೆ ಆ ಹುಡುಗಿ ಇಂಪ್ರೆಸ್ ಆಗುತ್ತಾಳೆ ಎಂದು ದಿನಗಟ್ಟಲೆ ಯೋಚಿಸುವ ಹುಡುಗನಿಗೆ ತನ್ನ ಅಪ್ಪ, ಅಮ್ಮ, ಅಕ್ಕ, ತಂಗಿಗೆ ಇಂಪ್ರೆಸ್ ಮಾಡಲು ಯಾವ ಒಳ್ಳೆಯ ಕೆಲಸ ಮಾಡಬೇಕು ಎಂದು ಯೋಚಿಸುವಷ್ಟು ವ್ಯವಧಾನವಿರುವುದಿಲ್ಲ. ಯಾಕೆಂದರೆ ಅಂತಹ ಹುಡುಗ, ಹುಡುಗಿಯನ್ನು ನಮ್ಮ ಸಮಾಜ ಬೆಳೆಸಿದ ರೀತಿಯಲ್ಲಿಯೂ ತಪ್ಪಿದೆ. ಹಿಂದೆ ನಾವು ಚಿಕ್ಕವರಿರುವಾಗ ಯುಗಾದಿ, ಮಕರ ಸಂಕ್ರಮಣ, ಶಿವರಾತ್ರಿ, ನೂಲಹುಣ್ಣಿಮೆ ಇಂತಹ ದಿನಗಳನ್ನು ನಮ್ಮ ಪೋಷಕರು ನಮಗೆ ಮನಸ್ಸಿಗೆ ನಾಟುವಂತೆ ವಿವರಿಸುತ್ತಿದ್ದರು. ಬೆಳ್ಳಿಗ್ಗೆ ಎದ್ದು ನಿತ್ಯಕ್ರಿಯಾವಿಧಿಗಳನ್ನು ಮಾಡಿದ ಹುಡುಗ ದೇವರ ಸ್ತೋತ್ರ, ಸಂಧ್ಯಾವಂದನೆ ಮಾಡಿ ದೇವರಿಗೆ ದೀಪ ಬೆಳಗಿ ಪೂಜೆ ಮಾಡಿ ಆಹಾರ ಸೇವಿಸುತ್ತಿದ್ದ. ಆ ಬಳಿಕ ಗಂಜಿ ಊಟ ಮಾಡಿ ಶಾಲೆಗೆ ಹೊರಡುವ ಕ್ರಮ ಇತ್ತು. ಹುಡುಗಿಯರಾದರೆ ಅಂಗಳ ಗುಡಿಸುವದು, ತಾಯಿಗೆ ಅಡುಗೆಯಲ್ಲಿ ಸಹಾಯ ಮಾಡುವುದು. ರಂಗೋಲಿ ಹಾಕುವುದು. ತುಳಸಿಗೆ ನೀರು ಹಾಕಿ ಊದುಬತ್ತಿ ಹಚ್ಚುವುದು ಎಲ್ಲಾ ನಡೆಯುತ್ತಿತ್ತು. ಆದರೆ ಈಗ ಎದ್ದ ಕೂಡಲೇ ಟಿವಿಶನ್. ನಂತರ ನ್ಯೂಡಲ್ಸ್ ಅಥವಾ ಬ್ರೆಡ್ ಆಮ್ಲೆಟ್. ಮಕ್ಕಳಿಗೆ ಶಾಲೆಗೆ ಹೋಗುವಾಗ ತಂದೆ, ತಾಯಿಯ ಕಾಲು ಹಿಡಿದು ಆರ್ಶೀವಾದ ಪಡೆಯಬೇಕೆನ್ನುವ ಸಂಸ್ಕೃತಿ ಪೋಷಕರು ಕಲಿಸುವುದಿಲ್ಲ, ಮಕ್ಕಳಿಗೆ ಗೊತ್ತಿರುವುದಿಲ್ಲ. ಅಮ್ಮನಿಗೆ ಮಗ, ಮಗಳಿಗೆ 96 ಬಂದರೆ ಸಾಕು. ಅವನು ಸಂಸ್ಕೃತಿ ಕಲಿತು ಏನಾಗಬೇಕು ಎನ್ನುವ ತಾತ್ಸಾರ ಇರುತ್ತದೆ. ಆದ್ದರಿಂದ ಪರೀಕ್ಷೆಯಲ್ಲಿ ಮಾರ್ಕು ಮಾತ್ರ ಮುಖ್ಯ ಎಂದು ಅರಿತುಕೊಂಡು ಬೆಳೆಯುವ ಈಗಿನ ಭಾರತೀಯ ಮನಸ್ಸುಗಳು ನಮ್ಮ ಆಚಾರ, ವಿಚಾರಗಳಿಗಿಂತ ಬೇಗ ಪಾಶ್ಚಿಮಾತ್ಯ ಸಂಸ್ಕೃತಿಯತ್ತ ತಿರುಗುತ್ತವೆ. ಆದ್ದರಿಂದ ಅಲ್ಲಿ ಇಂತಹ ಹಾಳುಮೂಳು ವೆಲೇಂಟೈನ್ ಡೇಗಳು ಇರುತ್ತವೆ.
ಪಾಶ್ಚಿಮಾತ್ಯರಿಗೆ ಪ್ರೇಮ, ಕಾಮ ಕೇವಲ ಒಂದು ಹೊತ್ತಿನ ಊಟಕ್ಕೆ ಸಮ. ಅವರಿಗೆ ಬಾಂಧವ್ಯದ ಅರ್ಥ ಗೊತ್ತಿಲ್ಲ. ಮಗು ತಾಯಿಯ ಹೊಟ್ಟೆಯಲ್ಲಿ ಬೆಳೆಯುವಾಗಲೇ ಅವನ ಅಪ್ಪ ಬದಲಾಗಿರುತ್ತಾನೆ. ಶಾಲೆಗೆ ಸೇರಿಸುವ ಹೊತ್ತಿಗೆ ತಾಯಿಗೆ ಮತ್ತೊಂದು ಮದುವೆಯಾಗಿರುತ್ತೆ. ಅಲ್ಲಿ ಪ್ರೇಮಿಗಳ ದಿನ ಒಂದು ಮೋಜಿಗೆ ಸೀಮಿತ. ಆದರೆ ನಮಗೆ ಪ್ರೇಮ ಒಂದು ಜನ್ಮದ ಬಂಧನ. ಅದನ್ನು ಒಂದು ದಿನ ಎಂದು ನಿಗದಿಗೊಳಿಸಿ ಆಚರಿಸುವ ಅಗತ್ಯ ಇರುವುದಿಲ್ಲ. ಈ ದಿನದಂದು ಅನೇಕ ಬಾರಿ ಒತ್ತಾಯಪೂರ್ವಕವಾಗಿ ಪ್ರೇಮ ನಿವೇದನೆ ನಡೆಯುವುದು ಉಂಟು. ಅದರಿಂದ ಹೆದರುವ ಸಭ್ಯ ಹೆಣ್ಣುಮಕ್ಕಳು ಆ ದಿನ ಕಾಲೇಜಿಗೆ ರಜೆ ಹಾಕುವ ಪ್ರಸಂಗವೂ ನಡೆಯುತ್ತದೆ. ಅಷ್ಟಕ್ಕೂ ಈ ದಿನದಂದು ಪ್ರೇಮ ನಿವೇದನೆ ಮಾಡಿ ಅಂತಹ ಹೆಣ್ಣನ್ನು ಭೋಗಕ್ಕೆ ಬಳಸುವ ಕೆಲವು ಕಿರಾತಕರು ಇದ್ದಾರೆ. ಈ ದಿನಗಳಂದು ಪಬ್ ಮತ್ತು ಅಮಲು ಪದಾರ್ಥ ಸೇವಿಸಲು ಅನುಮತಿ ಇರುವ ಅನೇಕ ಡಿಸ್ಕೋಥೆಕ್ ಗಳಲ್ಲಿ ಭರಪೂರ ಹೆಣ್ಣಿನ ಶೋಷಣೆ ನಡೆಯುತ್ತದೆ. ಎಷ್ಟೋ ಹೆಣ್ಣುಮಕ್ಕಳು ಹುಡುಗರ ಕಪಟ ಪ್ರೇಮ ನಿವೇದನಕ್ಕೆ ಸಿಲುಕಿ ತನು, ಮನ ಅವನಿಗೆ ಒಪ್ಪಿಸಿ ಮೋಸಕ್ಕೆ ಒಳಗಾಗುತ್ತಾರೆ. ಯಾವ ತಾಯಿ ತನ್ನ ಮಗನಿಗೆ ಹೆಣ್ಣನ್ನು ಗೌರವಿಸುವ ಬುದ್ಧಿಯನ್ನು ಬಾಲ್ಯದಲ್ಲಿಯೇ ಹೇಳಿಕೊಡುವುದಿಲ್ಲವೋ ಆ ತಾಯಿಯೇ ಮುಂದೆ ಅಂತಹ ಮಕ್ಕಳ ವಿಷಯದಲ್ಲಿ ಅವಮಾನ, ಸಂಕಟಕ್ಕೆ ಒಳಗಾಗುತ್ತಾಳೆ. ತಮ್ಮ ಕೆಲಸದ ಒತ್ತಡ, ಹೊರಗೆ, ಒಳಗೆ ಕೆಲಸ ಮಾಡಬೇಕಾದ ಅನಿವಾರ್ಯತೆಯಲ್ಲಿ ನಿಮ್ಮ ಮಕ್ಕಳ ಬಾಲ್ಯವನ್ನು ಕೆಲಸದವರ, ನರ್ಸರಿಗಳ ಆಯಾಗಳ ತೆಕ್ಕೆಯಲ್ಲಿ ಕೊಟ್ಟು ಏನೋ ಸಾಧಿಸಲು ಹೊರಡಬೇಡಿ. ಅಂತಹ ಮಗು ಮುಂದೆ ಪ್ರೀತಿಯನ್ನು ಅರಸಿ ತೊಂದರೆಗೆ ಸಿಲುಕುತ್ತದೆ. ಅಂತವರಿಗಾಗಿ ಈ ವೆಲೆಂಟೈನ್ ದಿನಗಳು ಕಾಯುತ್ತಿರುತ್ತವೆ.
ಬಜರಂಗದಳ, ಶ್ರೀರಾಮಸೇನೆ ಈ ನಿಟ್ಟಿನಲ್ಲಿ ಒಂದಿಷ್ಟು ಎಚ್ಚರಿಕೆ ಕೊಟ್ಟ ಕಾರಣ ಬೀಚ್, ಪಾರ್ಕುಗಳಲ್ಲಿ ಹಿಂದಿದ್ದಷ್ಟು ಪ್ರೇಮಿಗಳ ರಶ್ ಇಲ್ಲ. ಒಂದು ವೇಳೆ ನಿಮಗೆ ಡೇ ಎಂದು ಏನಾದರೂ ಆಚರಿಸುವುದೇ ಆದರೆ ನಿಮ್ಮ ತಾಯಿ, ತಂದೆ, ಅಕ್ಕ, ತಂಗಿ, ಸಹೋದರರ ಜನ್ಮದಿನ ಆಚರಿಸಿ. ಆ ದಿನ ಅವರನ್ನು ಸಂತೋಷವಾಗಿಡಿ. ಏಕೆಂದರೆ ಅದು ನಿಮ್ನನ್ನು ಕೊನೆ ತನಕ ಕಾಯುತ್ತದೆ. ಉಳಿದದ್ದು ನಿಮ್ಮ ಪರ್ಸ್ ಎಷ್ಟು ಭಾರ ಇದೆ ಎನ್ನುವುದರ ಮೇಲೆ ಅವಲಂಬಿತವಾಗಿರುತ್ತದೆ!!
Leave A Reply