ಫೋಟೋ ತೆಗೆಸಿಕೊಳ್ಳುವ ತಾಳ್ಮೆ ಇಲ್ಲದಿದ್ದರೆ ಹೇಗಯ್ಯ ಡಿಕೆಶಿ!
ಡಿಕೆ ಶಿವಕುಮಾರ್ ಕಾರ್ಯಕರ್ತನೊಬ್ಬ ತಮ್ಮ ಜೊತೆ ತುಂಬಾ ಹತ್ತಿರದಿಂದ ಸೆಲ್ಫಿ ತೆಗೆಯಲು ಹವಣಿಸುತ್ತಿದ್ದಾಗ ಕೋಪಗೊಂಡು ಛಟಾರನೆ ಕಾರ್ಯಕರ್ತನ ತಲೆಗೆ ಹೊಡೆದಿದ್ದಾರೆ. ಅವರ ಎದುರು ಮೀಡಿಯಾದವರು ಮತ್ತು ಮೊಬೈಲಿನಲ್ಲಿ ಶೂಟಿಂಗ್ ಮಾಡುತ್ತಿದ್ದವರು ತುಂಬಾ ಜನ ಇದ್ದ ಕಾರಣ ಆ ವಿಡಿಯೋ ವೈರಲ್ ಆಗಿದೆ. ಹೊಡೆದದ್ದನ್ನು ಡಿಕೆಶಿ ಸಮರ್ಥಿಸಿಕೊಂಡಿದ್ದಾರೆ. ಒಂದು ವಿಷಯವನ್ನು ಡಿಕೆಶಿ ಅರ್ಥ ಮಾಡಿಕೊಳ್ಳಬೇಕು ಏನೆಂದರೆ ಅವರು ಸಾರ್ವಜನಿಕ ಜೀವನದಲ್ಲಿ ಇದ್ದಾರೆ. ಒಂದು ರಾಷ್ಟ್ರೀಯ ಪಕ್ಷದ ರಾಜ್ಯಾಧ್ಯಕ್ಷರಾಗಿದ್ದಾರೆ. ಮುಂದಿನ ಬಾರಿ ಸಿಎಂ ಆಗಬೇಕು ಎಂದು ಕನಸು-ಮನಸ್ಸಿನಲ್ಲಿಯೂ ಕನವರಿಸುತ್ತಿರುವವರು. ಅವರ ಪಕ್ಷ ಈಗ ಅಧಿಕಾರದಲ್ಲಿಲ್ಲ. ಮುಂದಿನ ಬಾರಿ ಹೇಗಾದರೂ ಮಾಡಿ ಬಹುಮತಕ್ಕೆ ಬರಬೇಕು ಎಂದು ಡಿಕೆಶಿ ಒದ್ದಾಡುತ್ತಿದ್ದಾರೆ. ಅದಕ್ಕಾಗಿ ರಾಜ್ಯವ್ಯಾಪಿ ತಿರುಗಾಡುತ್ತಿದ್ದಾರೆ. ಅದರಲ್ಲಿಯೂ ಮಂಡ್ಯ ಜಿಲ್ಲೆಯಲ್ಲಿ ಪ್ರವಾಸದಲ್ಲಿ ಇರುವಾಗ ಅವರು ಇಂತಹುದನ್ನು ಸಾಮಾನ್ಯವಾಗಿ ನಿರೀಕ್ಷಿಸಲೇಬೇಕು.
ಮಂಡ್ಯದಂತಹ ಜಿಲ್ಲೆಯಲ್ಲಿ ರಾಜಕೀಯ ನಾಯಕರ ಜೊತೆ ಫೋಟೋ ತೆಗೆಯುವುದೇ ಒಂದು ಕ್ರೇಜ್. ಅಂತಹ ಹುಚ್ಚಾಟ ಕರಾವಳಿಯ ಭಾಗದಲ್ಲಿ ಇಲ್ಲ. ಆದರೆ ಆ ಭಾಗದಲ್ಲಿ ಜನರಿಗೆ ದೊಡ್ಡ ದೊಡ್ಡ ರಾಜಕೀಯ ನಾಯಕರು ಹತ್ತಿರದಿಂದ ನೋಡಲು ಸಿಗುತ್ತಾರೆ ಎಂದರೆ ಅವರನ್ನು ನೋಡುವುದೇ ಒಂದು ಸಂಭ್ರಮ. ಮೂಲತ: ಅಮಾಯಕರಾಗಿರುವ ಅಲ್ಲಿನ ಜನಸಾಮಾನ್ಯರಿಗೆ ಡಿಕೆಶಿ ಬಳಿ ಎಷ್ಟೇ ಕೋಟಿ ಇರಲಿ, ಅದು ಲೆಕ್ಕಕ್ಕೆ ಇಲ್ಲ. ಅಲ್ಲಿನ ಜನ ಹಣ, ಅಂತಸ್ತು ತುಂಬಾ ನೋಡಿದ್ದಾರೆ. ಅವರಿಗೆ ಶ್ರೀಮಂತಿಕೆ ರುಚಿಸುವುದಿಲ್ಲ. ಆದರೆ ರಾಜಕೀಯ ನಾಯಕರೆಂದರೆ ಜೀವ ಬಿಡುತ್ತಾರೆ. ಸ್ವಭಾವತ: ಮುಗ್ಧರಾಗಿರುವುದರಿಂದ ಅವರಿಗೆ ರಾಜಕೀಯ ನಾಯಕರೆಂದರೆ ದೇವರ ತರಹ. ಅಂತವರು ತಮ್ಮ ಬೀದಿಗೆ ಬರುತ್ತಾರೆ ಎಂದ ಕೂಡಲೇ ಒಂದು ಫೋಟೋ ತೆಗೆಸೋಣ ಎನ್ನುವ ಆಸೆ ಇದ್ದೇ ಇರುತ್ತೆ. ಅದನ್ನು ಡಿಕೆಶಿಯಂತವರು ಮೊದಲು ಅರ್ಥ ಮಾಡಿಕೊಳ್ಳಬೇಕು. ಅವರೇನು ನಿಮ್ಮ ಮನೆಯೊಳಗೆ ಬಂದು ನೀವು ಸ್ನಾನ ಮಾಡುವಾಗ ಬಚ್ಚಲುಕೋಣೆಗೆ ನುಗ್ಗಿ ಫೋಟೋ ತೆಗೆಯಲಿಲ್ಲವಲ್ಲ. ನೀವು ಮಾದೇಗೌಡರನ್ನು ಭೇಟಿಯಾಗಿ ಸಿಂಪಥಿ ಗಿಟ್ಟಿಸಲು ತಾನೆ ಬಂದಿರುವುದು. ಮಾದೇಗೌಡರನ್ನು ಭೇಟಿ ಮಾಡಿ ಮಂಡ್ಯ ಜನರ ಕಣ್ಣಿನಲ್ಲಿ ಹೀರೋ ಆಗಲು ತಾನೆ ನೀವು ಹೋಗಿರುವುದು. ಹಾಗಿರುವಾಗ ಒಬ್ಬ ಕಾರ್ಯಕರ್ತ ಫೋಟೋ ತೆಗೆಯಲು ನಿಮ್ಮ ಬಳಿ ಬಂದರೆ ನಿಮಗೆ ಹೊಡೆಯುವಷ್ಟು ಸಿಟ್ಟು ಯಾಕೆ? ಹೆಗಲ ಮೇಲೆ ಕೈ ಹಾಕಿ ಫೋಟೋ ತೆಗೆಯಲು ಹೋದದ್ದೇ ತಪ್ಪಾಗುವುದಾದರೆ ಒಂದೂವರೆ ವರ್ಷದ ಬಳಿಕ ಇಂತಹುದೇ ಲಕ್ಷಾಂತರ ಜನರ ಮನೆ ಬಾಗಿಲಿಗೆ ಹೋಗಿ ಅವರ ಕೈಕಾಲು ನೀವು ಹಿಡಿಯಲ್ವಾ? ಒಂದು ವೇಳೆ ನಿಮಗೆ ಸಾರ್ವಜನಿಕರಿಂದ ಕಿರಿಕಿರಿ ಎನಿಸಿದರೆ ನೇರವಾಗಿ ಕಾರಿನಲ್ಲಿಯೇ ಯಾರ ಮನೆಗೆ ಹೋಗಬೇಕೋ ಅವರ ಮನೆಗೆ ಹೋಗಿ. ಈ ಪಾದಯಾತ್ರೆಯ ನಾಟಕ ಯಾಕೆ? ಮೀಡಿಯಾದಲ್ಲಿ ಬರಲಿ ಎನ್ನುವ ಕಾರಣಕ್ಕೆ ತಾನೆ, ಪ್ರಚಾರದಲ್ಲಿ ಇರಬೇಕು ಎಂದು ಹೌದಲ್ವೇ? ಒಂದು ವೇಳೆ ನಿಮ್ಮ ಹತ್ತಿರದಲ್ಲಿ ಯಾರೂ ಸುಳಿಯಬಾರದು ಎಂದಾದರೆ ಮಾನವ ಕೋಟೆ ನಿರ್ಮಿಸಿ ಅದರೊಳಗೆ ಚಲಿಸಿ.
ಡಿಕೆಶಿಯವರೇ ನಿಮ್ಮ ಹಿನ್ನಲೆಯನ್ನು ಕೂಡ ಒಂದು ಕ್ಷಣ ಯೋಚಿಸಿ. ಏನೂ ಇಲ್ಲದೆ ರಾಮನಗರದಂತಹ ಯಾವುದೋ ಹಳ್ಳಿಯಿಂದ ತಾವು ಬೆಂಗಳೂರಿಗೆ ಬಂದಾಗ ನಿಮಗೂ ದೊಡ್ಡದೊಡ್ಡವರ ಜೊತೆ ನಿಂತು ಫೋಟೋ ತೆಗೆಸುವ ಆಸೆ ಇರಲೇ ಇಲ್ವೇ? ಯಾವುದೋ ದೊಡ್ಡ ನಾಯಕರು ಫೋಟೋ ತೆಗೆಯಲು ಬಿಡಲಿಲ್ಲ ಎಂದಾಗ ಆವತ್ತು ನಿಮ್ಮ ಮನಸ್ಸು ಮುದುಡಿರಬಹುದಲ್ಲವೇ? ಒಂದು ವಿಷಯ ನೆನಪಿನಲ್ಲಿಟ್ಟುಕೊಳ್ಳಿ ಡಿಕೆಶಿಯವರೇ, ನೀವು ಮನೆ ಬಿಟ್ಟು ರಸ್ತೆಗೆ ಬಂದ ಬಳಿಕ ಯಾವುದ್ಯಾವುದೋ ವಿಷಯವನ್ನು ಮನಸ್ಸಿನಲ್ಲಿಟ್ಟು ಯಾವುದೋ ಕೋಪ ನಂತರ ಯಾರದ್ದೋ ಮೇಲೆ ಆ ಸಿಟ್ಟು ತೆಗೆಯಲು ಹೋಗಬೇಡಿ. ನೀವು ಈಗ ತೋರಿಸಬೇಕಾಗಿರುವುದು ಸಹನೆ ಮತ್ತು ಸ್ಥಿತಪ್ರಜ್ಞೆ. ದೊಡ್ಡ ನಾಯಕರೆನಿಸಿಕೊಂಡವರು ಬಹುಬೇಗ ಟೆಂಪರ್ ಕಳೆದುಕೊಳ್ಳಬಾರದು. ಒಂದು ವೇಳೆ ನಿಮ್ಮ ಮನಸ್ಸು ಅಲ್ಲಿಯೇ ಇರುತ್ತಿದ್ದರೆ ನಿಮಗೆ ಅಷ್ಟು ಸಿಟ್ಟು ಬರುತ್ತಿರಲಿಲ್ಲ ಎಂದು ನಿಮಗೆ ಅನಿಸುತ್ತಿದ್ದರೆ ನಿಮ್ಮ ಮನಸ್ಸನ್ನು ಕೇಂದ್ರಿಕರಿಸುವ ಯೋಗ, ಧ್ಯಾನ ಮಾಡಿ. ಅದರಲ್ಲಿಯೂ ಇಲ್ಲಿ ಇರುವ ವಿಷಯ ಏನೆಂದರೆ ಈಗಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳು ತುಂಬಾ ವೇಗವಾಗಿ ಇರುವುದರಿಂದ ನಿಮ್ಮ ಇಂತಹ ನಡೆಗಳ ಬಗ್ಗೆ ಮಂಡ್ಯದಲ್ಲಿ ಕುಳಿತ ವ್ಯಕ್ತಿ ಮಾತ್ರವಲ್ಲ ರಾಜ್ಯದ ಮೂಲೆಮೂಲೆಗಳಿಂದ ಜನ ಪ್ರತಿಕ್ರಿಯೆ ಕೊಡಲು ಶುರು ಮಾಡುತ್ತಾರೆ. ನಿಮ್ಮದೇ ಪಕ್ಷದ ಒಳಗಿರುವ ನಿಮ್ಮ ಹಿತಚಿಂತಕರು ನಿಮ್ಮ ಈ ಕೋಪದ ದೌರ್ಬಲ್ಯವನ್ನು ಬಳಸಿ ನಿಮ್ಮನ್ನು ತುಳಿಯಲೂಬಹುದು. ಇನ್ನು ಭಾರತೀಯ ಜನತಾ ಪಾರ್ಟಿಯವರು ಇಂತಹ ವಿಷಯ ಇಟ್ಟುಕೊಂಡು ಸುದ್ದಿಗೋಷ್ಟಿ ಮಾಡುವಷ್ಟು ದೊಡ್ಡ ಸಂಗತಿ ಇದೇನಲ್ಲ. ಇದರಿಂದ ನಿಮ್ಮ ಪಕ್ಷದ ಮುಖಂಡರು ಕಲಿಯಬೇಕಾದ ಪಾಠ ಏನೆಂದರೆ ಇಂತಹ ಘಟನೆ ನಿಮ್ಮ ನಾಯಕರ ಜೊತೆಗೂ ಆಗಬಹುದು. ಒಂದಂತೂ ನಿಜ, ರಾಜಕೀಯದಲ್ಲಿ ಕಾರ್ಯಕರ್ತರು ಇದ್ದರಷ್ಟೇ ನೀವು. ಆ ಕಾರ್ಯಕರ್ತ ತೆಗೆಯುವ ಇಂತಹ ಫೋಟೋಗಳಿಂದ ನಿಮ್ಮಂತವರಿಗೆ ವರ್ಚಸ್ಸು ಹೆಚ್ಚಾಗುವುದು. ಕಾರ್ಯಕರ್ತರಿಂದಲೇ ನಾಯಕರು ಹುಟ್ಟಿಕೊಳ್ಳುವುದು. ನಾಯಕರಿಂದ ಕಾರ್ಯಕರ್ತರಲ್ಲ. ಡಿಕೆಶಿ ಈ ಘಟನೆಗೆ ಕ್ಷಮೆಯಾಚಿಸಿದರೆ ದೊಡ್ಡವರಾಗುತ್ತಾರೆ. ಇಲ್ಲದಿದ್ದರೆ ಮುಂದಿನ ಬಾರಿ ಮಂಡ್ಯ ಸೇರಿ ಉತ್ತರ ಕರ್ನಾಟಕದ ಜನ ಬುದ್ಧಿ ಕಲಿಸುತ್ತಾರೆ!!
Leave A Reply