ಸ್ಪೆಶಲ್ ಗ್ಯಾಂಗ್ ಹಣ ಉಳಿದರೆ ನನಗೆ ವೈಯಕ್ತಿಕ ಲಾಭವಿಲ್ಲ!!
Posted On July 17, 2021
ನಾನು ನಿನ್ನೆ ನನ್ನ ಜಾಗೃತ ಅಂಕಣದಲ್ಲಿ ಬಹಿರಂಗವಾಗಿ ಬರೆದಿದ್ದೇನೆ. ನಮ್ಮ ಟಿವಿ ವಾಹಿನಿಯಲ್ಲಿ ಕೂಡ ನೇರಪ್ರಸಾರ ಕಾರ್ಯಕ್ರಮದಲ್ಲಿ ಹೇಳಿದ್ದೇನೆ. ನನ್ನ ಉದ್ದೇಶ ಇಷ್ಟೇ, ನಮ್ಮ ತೆರಿಗೆಯ ಹಣ ಅನಾವಶ್ಯಕವಾಗಿ ವ್ಯರ್ಥವಾಗಬಾರದು ಎನ್ನುವುದು ಮಾತ್ರ. ನನ್ನ ಅಂಕಣ ಮತ್ತು ನೇರಪ್ರಸಾರದ ವಿಡಿಯೋ ಕ್ಲೀಪ್ ಸಾಮಾಜಿಕ ಜಾಲತಾಣಗಳಲ್ಲಿ ನೋಡಿ ಕೆಲವರು ನನಗೆ ಕರೆ ಮಾಡಿದ್ದಾರೆ. ಕೆಲವರು ಎಲ್ಲೆಲ್ಲೋ ಅಸಮಾಧಾನ ವ್ಯಕ್ತಪಡಿಸಿದ್ದಾರೆ ಎನ್ನುವ ಮಾಹಿತಿ ಸಿಕ್ಕಿದೆ. ನಾನು ಟಿವಿಯಲ್ಲಾಗಲಿ, ಅಂಕಣದಲ್ಲಾಗಲಿ ಮಾತನಾಡಲು, ಬರೆಯಲು ಆರಂಭಿಸಿದ್ದು ಇವತ್ತು ನಿನ್ನೆಯಿಂದಲ್ಲ. ಕರಾವಳಿಯಲ್ಲಿ ಕೇಬಲ್ ವಾಹಿನಿಗಳು ಆರಂಭವಾದಾಗಿನಿಂದಲೂ ಇಲ್ಲಿನ ವರದಿಗಾರರು, ನಿರೂಪಕರು ನನ್ನ ಬಳಿ ಅನೇಕ ವಿಷಯಗಳ ಬಗ್ಗೆ ಅಭಿಪ್ರಾಯ ಕೇಳಿದ್ದಾರೆ. ಡಿಬೇಟಿಗೆ ಆಹ್ವಾನಿಸಿದ್ದಾರೆ. ನಾನು ಮುಕ್ತವಾಗಿ ನನ್ನ ಅಭಿಪ್ರಾಯಗಳನ್ನು ಹೇಳಿದ್ದೇನೆ. ಪಾಲಿಕೆಯಲ್ಲಿ ಇಲ್ಲಿಯ ತನಕ ಎಷ್ಟೋ ಮೇಯರ್ ಗಳನ್ನು ಕಂಡಿದ್ದೇನೆ. ಎಷ್ಟೋ ಕಮೀಷನರ್ ಗಳ ಜೊತೆ ಮಾತನಾಡಿದ್ದೇನೆ. ಪಾಲಿಕೆಯ ಕಂಬಗಳು ಮಾತನಾಡುವಂತಿದ್ದರೆ ಪ್ರತಿಯೊಬ್ಬ ಅಧಿಕಾರಿಯ, ಕಾರ್ಪೋರೇಟರ್ ನ ಜಾತಕ ಹೊರಗೆ ಬರುತ್ತಿತ್ತು. ಬಿಜೆಪಿ ಆಡಳಿತದಲ್ಲಿದ್ದಾಗ ಸದಸ್ಯರೊಬ್ಬರು ನಿರ್ಲಕ್ಷ್ಯ ಮಾಡಿ ಮೇಯರ್ ಗಿರಿ ಕಾಂಗ್ರೆಸ್ ತಟ್ಟೆಗೆ ಹಾಕಿದ್ದನ್ನು ನೋಡಿದ್ದೇನೆ. ಕಾಂಗ್ರೆಸ್ಸಿಗರು ದುರಂಹಕಾರದಿಂದ ಅಧಿಕಾರದಿಂದ ಕೆಳಗಿಳಿಯುವುದನ್ನು ನೋಡಿದ್ದೇನೆ. ಯಾವುದೇ ಪಕ್ಷ ಅಧಿಕಾರದಲ್ಲಿ ಇರಲಿ ತಪ್ಪು ಮಾಡಿದಾಗ ಅದರ ವಿರುದ್ಧ ಮಾತನಾಡಿದ್ದೇನೆ. ಹೆಚ್ಚಿನ ಬಾರಿ ಅದನ್ನು ಕ್ರೀಡಾ ಮನೋಭಾವದಿಂದ ಆಡಳಿತ ಮತ್ತು ವಿಪಕ್ಷದ ಸದಸ್ಯರು ಸ್ವೀಕರಿಸಿದ್ದಾರೆ. ನೀವು ಹೇಳಿದ್ದು ಸರಿಯಾಗಿದೆ ಎಂದು ಹೇಳಿದ್ದಾರೆ. ಯಾವುದೇ ಪಕ್ಷ ಆಡಳಿತದಲ್ಲಿ ಇರಲಿ, ಅವರು ದಾರಿ ತಪ್ಪಿದಾಗ ವಿಪಕ್ಷದವರು ಆ ಬಗ್ಗೆ ಧ್ವನಿ ಎತ್ತಿ ಮಾತನಾಡಬೇಕು. ಇಲ್ಲದಿದ್ದರೆ ಆಡಳಿತ ಮಾಡುವವರಿಗೆ ತಾವು ಮಾಡಿದ್ದೇ ಸರಿ ಎಂದು ಆಗುತ್ತದೆ. ನಂತರ ಹೊರಗೆ ಜನರು ಬೈಯಲು ಶುರು ಮಾಡಿದಾಗ ಕಾಲ ಮಿಂಚಿ ಹೋಗಿರುವುದು ಗೊತ್ತಾಗುತ್ತದೆ. ನಂತರ ಅಧಿಕಾರ ಹೋದಾಗ ಆವತ್ತು ನಮ್ಮನ್ನು ಯಾರಾದರೂ ಎಚ್ಚರಿಸಬೇಕಿತ್ತು ಎಂದು ಅನಿಸುತ್ತದೆ. ನಾನು ಇವರು ಹೆಜ್ಜೆ ತಪ್ಪಿದಾಗಲೇ ಹೇಳುವುದರಿಂದ ಇಲ್ಲಿ ಸುಧಾರಿಸಲು ಅವಕಾಶ ಇರುತ್ತದೆ. ಹೇಳುವ ರೀತಿ ಸ್ವಲ್ಪ ಖಾರವಾಗಿರಬಹುದು. ಆದರೆ ಹೇಳಿದ್ದ ವಿಷಯದಲ್ಲಿ ಯಾವುದೇ ವೈಯಕ್ತಿಕ ಸ್ವಾರ್ಥವಿರುವುದಿಲ್ಲ.
ಮುಂದಿನ ಬಾರಿ ಸ್ಪೆಶಲ್ ಗ್ಯಾಂಗ್ ಸಂಖ್ಯೆ ಕಡಿಮೆಯಾಗಿ ಜನರ ತೆರಿಗೆಯ ಹಣ ಉಳಿದು ಅದು ಬೇರೆ ಅಭಿವೃದ್ಧಿ ಕಾರ್ಯಗಳಿಗೆ ಸದುಪಯೋಗ ಆದರೆ ಅದರಿಂದ ನನಗೆ ವೈಯಕ್ತಿಕವಾಗಿ ಏನೂ ಲಾಭವಿಲ್ಲ. ಟಿವಿ ವಾಹಿನಿಗಳ ಹೆಚ್ಚಿನ ನೇರಪ್ರಸಾರ ಕಾರ್ಯಕ್ರಮದಲ್ಲಿ ಕರೆ ಮಾಡುವ ವೀಕ್ಷಕರಲ್ಲಿ ಹಲವರು ತಮ್ಮ ಮನೆಯ ತೋಡಿನ, ಗೋಡೆಯ, ಹಿತ್ತಲಿನ ಸಮಸ್ಯೆಯನ್ನು ಹಿಡಿದುಕೊಂಡು ಫೋನ್ ತಾಗಿದ ಕೂಡಲೇ ಮಾತನಾಡುವುದರಿಂದ ಕಾರ್ಯಕ್ರಮದ ನೈಜ ಉದ್ದೇಶವೇ ಹಾಳಾಗಿಹೋಗುತ್ತದೆ. ನಾನು ಸ್ಪೆಶಲ್ ಗ್ಯಾಂಗಿನ ಹಣದಲ್ಲಿ ಭ್ರಷ್ಟಾಚಾರವಾಗುತ್ತೆ ಎನ್ನುವ ಹೇಳಿಕೆಗೆ ಬದ್ಧನಾಗಿದ್ದೇನೆ. ಕೆಲವರು ನಮ್ಮ ವಾರ್ಡಿನಲ್ಲಿ ಏನೂ ಭ್ರಷ್ಟಾಚಾರ ಆಗಿಲ್ಲ ಎಂದು ಅಂದುಕೊಂಡಿದ್ದರೆ ಅವರ ವಾರ್ಡಿನ ಕಾಮಗಾರಿ ಆಗುವ ಫೋಟೋ, ವಿಡಿಯೋ ಮಾಡಿ ತಮ್ಮ ಸಾಮಾಜಿಕ ಜಾಲತಾಣಗಳಲ್ಲಿ ಹಾಕಿಕೊಳ್ಳಲಿ. ಕಾರ್ಪೋರೇಟರ್ ಆಗುವವರು ತಮ್ಮ ವಾರ್ಡಿನ ಜನರ ಹಿತಾಸಕ್ತಿಯನ್ನು ಕಾಯಲು ಇದ್ದೇ ಇರಬೇಕು. ತೋಡು, ರಸ್ತೆ, ನೀರು, ದಾರಿದೀಪ ಇದೆಲ್ಲವನ್ನು ತೂಗಿಸಿಕೊಂಡು ಹೋಗುವುದೇ ಮನಪಾ ಸದಸ್ಯರ ಕೆಲಸ. ಕಾರ್ಪೋರೇಟರ್ ಆಗಿ ಜನಸೇವೆ ಮಾಡಬೇಕು ಎಂದು ಬಯಸುವ ಅನೇಕರು ತಾವು ನಿಸ್ವಾರ್ಥವಾಗಿ ಸೇವೆ ಮಾಡಬೇಕೆಂದೆ ಆಯ್ಕೆಯಾಗಿರುತ್ತಾರೆ. ಆದರೆ ಪಾಲಿಕೆಯ ಒಳಗಿನ ಸಿಸ್ಟಮ್ ಅವರಿಗೆ ಹಣದ ಆಸೆ ತೋರಿಸಿ ದಾರಿ ತಪ್ಪಿಸಲು ತುಂಬಾ ಸಮಯ ಬೇಕಾಗುವುದಿಲ್ಲ. ಇದಕ್ಕೆ ಒಂದು ಅವಧಿ ಕೂಡ ಬೇಕಾಗಿಲ್ಲ. ಪಾಲಿಕೆಯಲ್ಲಿ ಕೆಲವರು ಹಿರಿಯ ಸದಸ್ಯರಿದ್ದಾರೆ. ಅವರು ಬೇಕಾದರೆ ನಿರ್ಧರಿಸಲಿ, ಮೂರು ತಿಂಗಳು ಅರವತ್ತು ವಾರ್ಡುಗಳಲ್ಲಿ ಅರವತ್ತು ಗ್ಯಾಂಗ್ ಬೇಕಾ? ರಾತ್ರಿ ಎರಡು ಮಾತ್ರ ಸಾಕು ಎಂದು ಹೇಳುವುದು ಯಾವ ಲಾಜಿಕ್? ಇನ್ನು ಪಾಲಿಕೆಯಲ್ಲಿರುವ ಸದಸ್ಯರಲ್ಲಿ ಕೆಲವರು ಈ ಸ್ಪೆಶಲ್ ಗ್ಯಾಂಗ್ ಸೌಲಭ್ಯವನ್ನು ಯಶಸ್ವಿಯಾಗಿ ಉಪಯೋಗಿಸಿ ತಮ್ಮ ವಾರ್ಡಿನ ಸೇವೆ ಮಾಡುತ್ತಿದ್ದರೆ ಅವರಿಗೆ ದೊಡ್ಡ ಹ್ಯಾಟ್ಸಪ್. ಅಂತವರ ಬಗ್ಗೆ ನನಗೆ ಯಾವತ್ತೂ ಗೌರವವಿದೆ. ಅವರು ತಮ್ಮ ವಾರ್ಡಿನಲ್ಲಿ ಆಗಿರುವ ಸ್ಪೆಶಲ್ ಗ್ಯಾಂಗ್ ಕೆಲಸಗಳನ್ನು ನನ್ನ ಗಮನಕ್ಕೆ ತಂದರೆ ಅವರನ್ನು ಇದೇ ಜಾಗೃತ ಅಂಕಣದಲ್ಲಿ ನಾನು ಹೆಸರು ಹಾಕಿ ಅಭಿನಂದಿಸಲಿದ್ದೇನೆ. ಇನ್ನು ಪಾಲಿಕೆಯ ಯಾವುದೇ ಪಕ್ಷದ ಸದಸ್ಯರು ಇರಲಿ ಆತ್ಮಸಾಕ್ಷಿಯಿಂದ ಒಂದು ವಿಷಯ ಹೇಳಬೇಕು, ಏನೆಂದರೆ ಆಂಟೋನಿ ವೇಸ್ಟ್ ನವರು ನಿಮ್ಮ ವಾರ್ಡಿನ ಒಂದು ಮೀಟರ್ ಅಗಲದ ತೋಡುಗಳ ಹೂಳನ್ನು ಎತ್ತಿ ಸ್ವಚ್ಚ ಮಾಡಿದ್ದಾರಾ? ಒಂದು ವೇಳೆ ಆಂಟೋನಿ ವೇಸ್ಟ್ ನವರು ಸರಿಯಾಗಿ ಕೆಲಸ ಮಾಡಿದರೆ ಮೂರು ತಿಂಗಳಿಗೆ ಅರವತ್ತು ವಾರ್ಡಿಗೆ ಬೆಳಿಗ್ಗೆ ಅರವತ್ತು ಸ್ಪೆಶಲ್ ಗ್ಯಾಂಗ್ ಬೇಕಾ? ಮೂರು ತಿಂಗಳಿಗೆ ಒಂದೊಂದು ವಾರ್ಡಿಗೆ ಮೂರುಕಾಲು ಲಕ್ಷ ಖರ್ಚು ಇದೆಯಾ? ಮನಪಾ ಸದಸ್ಯರು ಎಂದು ಕರೆಸಿಕೊಳ್ಳುವುದು ಮುಖ್ಯವಲ್ಲ. ನೀವು ಮಾಡಿದ ಕೆಲಸ ನಿಮಗೆ ಆತ್ಮತೃಪ್ತಿಯನ್ನು ತರಬೇಕು. ಯಾರು ಸರಿಯಾದ ದಾರಿಯಲ್ಲಿ ನಡೆಯುತ್ತಿದ್ದಿರೋ ಅವರು ಆರೋಪಗಳ ಬಗ್ಗೆ ಯೋಚಿಸುವ ಅಗತ್ಯ ಇಲ್ಲ. ಯಾರು ತಪ್ಪು ಮಾಡುತ್ತಿದ್ದಿರೋ ಅವರು ಎಚ್ಚರಿಕೆಯಿಂದ ಇರಿ!
- Advertisement -
Trending Now
ಕೆಆರ್ ಎಸ್ ರಸ್ತೆಗೆ ಸಿದ್ಧರಾಮಯ್ಯ ಹೆಸರು ಇಡಲು ಚಿಂತನೆ, ಪರ -ವಿರೋಧ!
December 25, 2024
ರಾಜ್ಯದಲ್ಲಿ ಪ್ರಪ್ರಥಮ ಮೂಳೆ ದಾನ!
December 25, 2024
Leave A Reply