ರಾಜೇಂದ್ರ ಕುಮಾರ್ ಅಷ್ಟು ಸುಲಭವಾಗಿ ಹಿಂದೆ ಸರಿದದ್ದು ಯಾಕೆ!!
ವಿಧಾನಪರಿಷತ್ ನಲ್ಲಿ ಶಾಸಕನಾಗಬೇಕು ಎನ್ನುವ ರಾಜೇಂದ್ರ ಕುಮಾರ್ ಆಸೆ ಸದ್ಯಕ್ಕೆ ಮುಂದೂಡಲಾಗಿದೆ ಎಂದೇ ಹೇಳಬಹುದು. ಏನೇ ಆಗಲಿ, ಈ ಬಾರಿ ವಿಧಾನಪರಿಷತ್ ಗೆ ಸ್ಪರ್ಧಿಸಿ ಕಾಂಗ್ರೆಸ್ಸಿಗೆ ಒಂದು ಬುದ್ಧಿ ಕಲಿಸುತ್ತೇನೆ ಎನ್ನುವ ವೀರಾವೇಶದಲ್ಲಿ ರಾಜೇಂದ್ರ ಕುಮಾರ್ ಚುನಾವಣಾ ಕಚೇರಿ ಕೂಡ ತೆರೆದಿದ್ದರು. ಅವರ ಹಿಂದೆ ಮುಂದೆ, ಅಕ್ಕಪಕ್ಕ ಕಾಂಗ್ರೆಸ್ಸಿನ ಕೆಲವು ಲೆಟರ್ ಹೆಡ್ ನಾಯಕರು ಕಾಣಿಸಿಕೊಂಡರು. ರಾಜೇಂದ್ರ ಕುಮಾರ್ ಒಂದೆರಡು ಕಡೆ ಮಾಧ್ಯಮಗಳಲ್ಲಿ ಗೆಲುವು ನೂರಕ್ಕೆ ನೂರು ಎನ್ನುವ ಆಶಾಭಾವನೆ ವ್ಯಕ್ತಪಡಿಸಿದ್ದೂ ಆಯಿತು. ಇನ್ನು ಏನಿದ್ದರೂ ಕಾಂಗ್ರೆಸ್ ಮಕಾಡೆ ಮಲಗುತ್ತದೆ ಎಂದು ರಾಜಕೀಯ ಪಂಡಿತರು ಲೆಕ್ಕ ಹಾಕುತ್ತಿದ್ದಂತೆ ರಾಜೇಂದ್ರ ಕುಮಾರ್ ಕಾಂಗ್ರೆಸ್ ರಾಜ್ಯಾಧ್ಯಕ್ಷ ಡಿಕೆಶಿ ಮನೆಯಲ್ಲಿ ಕಾಣಿಸಿಕೊಂಡುಬಿಟ್ಟರು. ಡಿಕೆಶಿ ಏನು ಹೇಳಿದರು, ಅಲ್ಲಿದ್ದ ಸೊರಕೆ ಏನು ಸಲಹೆ ಕೊಟ್ಟರು ಗೊತ್ತಿಲ್ಲ. ಹೋಗುವಾಗ ಇದ್ದ ಉತ್ಸಾಹ ಮಂಗಳೂರಿಗೆ ಬರುತ್ತಿದ್ದಂತೆ ಠುಸ್ ಆಗಿದೆ. ಇತ್ತ ಸಚಿವ ಸೋಮಶೇಖರ್ ಕೂಡ ರಾಜೇಂದ್ರ ಕುಮಾರ್ ಅವರ ಬಂಡವಾಳ ಬಯಲಿಗೆ ಹಾಕುವ ಅರ್ಥದ ಮಾತುಗಳನ್ನು ಆಡಿದ್ದು, ರಾಜೇಂದ್ರ ಕುಮಾರ್ ಅವರಿಗೆ ತಮ್ಮ ವಾಸ್ತವ ಗೊತ್ತಾಯಿತಾ? ಒಟ್ಟಿನಲ್ಲಿ ರಾಜೇಂದ್ರ ಕುಮಾರ್ ಕಣದಿಂದ ಹಿಂದೆ ಸರಿದುಬಿಟ್ಟರು. ಅವರು ಯಾಕೆ ಮಾಡಿದರು ಎನ್ನುವುದು ಅವರ ಆಪ್ತ ವಲಯಕ್ಕೆ ಮೊದಲೇ ಗೊತ್ತಿರುತ್ತದೆ. ಆದರೆ ಜನ ಮಾತ್ರ ವಿವಿಧ ಆಯಾಮಗಳಲ್ಲಿ ಯೋಚಿಸುತ್ತಿದ್ದಾರೆ. ಅಷ್ಟಕ್ಕೂ ಏನಾಗಿರಬಹುದು.
ಮೊದಲನೇಯದಾಗಿ ಕಾಂಗ್ರೆಸ್ ಆರಂಭದಲ್ಲಿಯೇ ಚುನಾವಣೆಗೆ ಸ್ಪರ್ಧಿಸದಂತೆ ಮನವಿ ಮಾಡಿರಬಹುದು. ಯಾಕೆಂದರೆ ರಾಜೇಂದ್ರ ಕುಮಾರ್ ಪಕ್ಷೇತರರಾಗಿ ಸ್ಪರ್ಧಿಸಿದರೆ ಕಾಂಗ್ರೆಸ್ ಸೋಲುವುದು ಗ್ಯಾರಂಟಿಯಾಗುತ್ತಿತ್ತು. ಹಾಗೆ ಒಂದು ವೇಳೆ ಸೋತರೆ ಅದಕ್ಕಿಂತ ದೊಡ್ಡ ಮುಖಭಂಗ ಕಾಂಗ್ರೆಸ್ಸಿಗೆ ಬೇರೆ ಇಲ್ಲ. ಒಂದು ವೇಳೆ ರಾಜೇಂದ್ರ ಕುಮಾರ್ ಅವರಿಗೆ ಕಾಂಗ್ರೆಸ್ಸಿನಿಂದಲೇ ಟಿಕೆಟ್ ಕೊಟ್ಟರೆ ನಾವು 11 ಮಂದಿ ತಲಾ ಒಂದು ಲಕ್ಷ ರೂಪಾಯಿ ಕಟ್ಟಿದ್ದು ಸಜ್ಜಿಗೆ, ಅವಲಕ್ಕಿ ತಿನ್ನಲಾ ಎಂದು ನಿಷ್ಟಾವಂತ ಕಾಂಗ್ರೆಸ್ಸಿಗರು ಕೇಳಲ್ವಾ? ಇನ್ನು ಈಗ ಕಾಂಗ್ರೆಸ್ಸಿನಿಂದ ಟಿಕೆಟ್ ಪಡೆದ ಮಂಜುನಾಥ ಭಂಡಾರಿ ದೆಹಲಿಯಿಂದ ಬೆಂಗಳೂರಿನ ತನಕ ಉನ್ನತ ಕಾಂಗ್ರೆಸ್ ಮುಖಂಡರ ಸ್ನೇಹ ಸಂಪಾದಿಸಿದವರು. ಮೂಲತ: ಸಜ್ಜನ ವ್ಯಕ್ತಿತ್ವ. ತಮಗಿಂತ ಕಿರಿಯರಿಗೆ ಗೌರವ ಕೊಡುವುದನ್ನು ಮಂಜುನಾಥ ಭಂಡಾರಿಯವರ ಬಳಿ ಕಲಿಯಬೇಕು. ಅಹಂಕಾರ ಇಲ್ಲ, ಡೌನ್ ಟು ಅರ್ಥ್ ಮನೋಭಾವ ಇರುವ ವ್ಯಕ್ತಿ. ಇಂಜಿನಿಯರಿಂಗ್ ಪದವೀಧರ ಮಾತ್ರವಲ್ಲದೆ ಅದರಲ್ಲಿ 2004 ರಲ್ಲಿ ಅತ್ಯುತ್ತಮ ಇಂಜಿನಿಯರ್ ವರ್ಷದ ಪ್ರಶಸ್ತಿ ಪಡೆದ ಹೆಗ್ಗಳಿಕೆ ಕೂಡ ಇದೆ. ಪಂಚಾಯತ್ ರಾಜ್ ನಲ್ಲಿ ಮಹಿಳೆಯ ಪ್ರಾತಿನಿಧ್ಯ ವಿಷಯದಲ್ಲಿ ಎಂಫಿಲ್ ಮತ್ತು ಪಿಎಚ್ ಡಿ ಕೂಡ ಮಾಡಿದ್ದಾರೆ. ಅಮೇರಿಕಾದಲ್ಲಿ ಫೆಲೋಶಿಪ್ ಕೂಡ ಪಡೆದಿದ್ದಾರೆ. ಅವರು ಅತ್ಯುತ್ತಮ ಕ್ರೀಡಾಪಟು ಮಾತ್ರವಲ್ಲ ಅನೇಕ ಕ್ರೀಡಾ ಸಂಘ ಸಂಸ್ಥೆಗಳಲ್ಲಿ ವಿವಿಧ ಹುದ್ದೆಯಲ್ಲಿ ಪದಾಧಿಕಾರಿಯಾಗಿದ್ದಾರೆ. ಸಹ್ಯಾದ್ರಿ ಶಿಕ್ಷಣ ಸಂಸ್ಥೆಯ ಮೂಲಕ ಸಾಕಷ್ಟು ಹೆಸರು ಮಾಡಿದ್ದಾರೆ. ಅವರಿಗೆ ಅರ್ಹವಾಗಿ ವಿಧಾನಪರಿಷತ್ ಸ್ಥಾನ ಸಿಗಲೇಬೇಕು.
ಇನ್ನು ಹಿಂದಿನಿಂದಲೂ ಕಾಂಗ್ರೆಸ್ ರಣತಂತ್ರ ನಿರ್ವಹಣೆಯಲ್ಲಿ ತನು, ಮನ, ಧನ ಸುರಿದು ಸೇವೆ ಸಲ್ಲಿಸಿರುವ ಭಂಡಾರಿಯವರು ಶಿವಮೊಗ್ಗದಲ್ಲಿ ಕಾಂಗ್ರೆಸ್ ಲೋಕಸಭಾ ಅಭ್ಯರ್ಥಿಯೂ ಆಗಿದ್ದರು. ಒಬ್ಬ ಉತ್ತಮ ಶಾಸಕ ಕಾಂಗ್ರೆಸ್ಸಿಗೆ ಈ ಮೂಲಕವಾದರೂ ಸಿಕ್ಕಿದರಲ್ಲ ಎನ್ನುವುದು ಸತ್ಯ. ರಾಜೇಂದ್ರ ಕುಮಾರ್ ಅವರಿಗಿಂತ ಮಂಜುನಾಥ ಭಂಡಾರಿ ಸಾವಿರ ಪಾಲು ಆಗಬಹುದು ಎಂದು ಕಾಂಗ್ರೆಸ್ಸಿಗರ ಅಂಬೋಣ. ಅಷ್ಟಕ್ಕೂ ಮಂಜುನಾಥ ಭಂಡಾರಿ ನಿಲ್ಲುತ್ತಾರೆ ಎಂದರೆ ನಾನು ನಿಲ್ಲೋಲ್ಲ ಎಂದು ಹೇಳಿ ರಾಜೇಂದ್ರ ಕುಮಾರ್ ಕಣದಿಂದ ಹಿಂದೆ ಸರಿದಿರುವುದಲ್ಲ. ಬೇರೆ ಏನಾದರೂ ಸ್ಥಾನಮಾನ ಕೊಡಲಾಗುತ್ತೆ ಎಂದು ಆಸೆ ತೋರಿಸಿ ಕಾಂಗ್ರೆಸ್ ಆಟ ಆಡಿರಬಹುದು. ಅದರಲ್ಲಿ ಕಾಂಗ್ರೆಸ್ಸಿನಿಂದ ವಿಧಾನಸಭೆಯ ಟಿಕೆಟ್ ಕೂಡ ಇರಬಹುದು. ಹೇಗೂ ಇನ್ನು ಎರಡು ದಶಕ ಕಾರ್ಕಳದಲ್ಲಿ ಕಾಂಗ್ರೆಸ್ ಬರುವಂತೆ ಕಾಣಲ್ಲ. ಆದ್ದರಿಂದ ಸೋಲುವ ಜಾಗದಿಂದ ಇವರನ್ನು ನಿಲ್ಲಿಸಿ ಒಂದು ಪ್ರಯತ್ನ ಮಾಡೋಣ ಎಂದು ಕಾಂಗ್ರೆಸ್ ರಾಜ್ಯ ನಾಯಕರು ಅಂದುಕೊಂಡಿರಬಹುದು. ಸರಿಯಾಗಿ ನೋಡಿದರೆ ಕಾರ್ಕಳದಲ್ಲಿ ಗೋಪಾಲ ಭಂಡಾರಿಯವರ ಬಳಿಕ ಕಾಂಗ್ರೆಸ್ ಪಕ್ಷವೇ ಇಲ್ಲ. ಆದ್ದರಿಂದ ಅಲ್ಲಿ ಮಗನಿಗೆ ರಾಜಕೀಯ ಭವಿಷ್ಯ ಕಲ್ಪಿಸೋಣ ಎಂದು ವೀರಪ್ಪ ಮೊಯಿಲಿ ಪ್ರಯತ್ನಿಸಿದ್ದರು. ಅದಕ್ಕಾಗಿ ಕಳೆದ ಬಾರಿ ಗೋಪಾಲ ಭಂಡಾರಿಯವರನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ನೈಟ್ ವಾಚಮೆನ್ ತರಹ ಇಳಿಸಿ ಮುಂದಿನ ಬಾರಿ ಮಗನಿಗಾಗಿ ಅಲ್ಲಿ ಟವೆಲ್ ಹಾಕಿದ್ದರು. ಆದರೆ ಅವರ ಮಗ ಅತ್ತ ಸುಳಿಯಲೇ ಇಲ್ಲ. ತಮ್ಮ ರಾಜಕೀಯ ಜೀವನದ ಸಂಧ್ಯಾಕಾಲದಲ್ಲಿ ಇರುವ ಮೊಯಿಲಿ ತಮ್ಮ ಉತ್ತರಾಧಿಕಾರಿ ಇಲ್ಲದೆ ರಾಜಕೀಯ ಅಧ್ಯಾಯವನ್ನು ಮುಗಿಸಿಬಿಡುವ ಸಾಧ್ಯತೆ ಇದೆ. ಅಂತಹ ಸಂದರ್ಭದಲ್ಲಿ ರಾಜೇಂದ್ರ ಕುಮಾರ್ ಅವರು ಕಾರ್ಕಳದಲ್ಲಿ ನಿಲ್ಲುವ ಸಾಧ್ಯತೆ ಇದೆ. ಇನ್ನು ಕಾಂಗ್ರೆಸ್ ಮುಂದಿನ ಬಾರಿ ಅಧಿಕಾರಕ್ಕೆ ಬಂದೇ ಬರುತ್ತೇವೆ ಎನ್ನುವ ಉಮ್ಮೇದಿನಲ್ಲಿ ರಾಜೇಂದ್ರ ಕುಮಾರ್ ಅವರಿಗೆ ವಿಧಾನಸಭೆಗೆ ಬನ್ನಿ ಎಂದು ಆಶ್ವಾಸನೆ ಸಿಕ್ಕಿರಬಹುದು. ಇನ್ನು ಒಂದು ವೇಳೆ ನೀವು ಈಗ ಸ್ಪರ್ಧಿಸಿ ಕಾಂಗ್ರೆಸ್ಸನ್ನು ಸೋಲಿಸಿ ವಿಧಾನ ಪರಿಷತ್ತಿಗೆ ಬಂದೇ ಬಿಟ್ಟಿರಿ ಎಂದೇ ಇಟ್ಟುಕೊಳ್ಳಿ, ನಿಮಗೆ ರಾಜ್ಯ ಸರಕಾರ ಸುಮ್ಮನೆ ಬಿಡುವುದಿಲ್ಲ. ನಾವೆ ಫಿಟ್ಟಿಂಗ್ ಇಟ್ಟು ನಿಮ್ಮ ಸಹಕಾರಿ ಜೀವನ ಮುಗಿಸುತ್ತೇವೆ. ಒಂದು ದಿನವೂ ನೆಮ್ಮದಿ ಇಲ್ಲದೆ ಕಳೆಯುವಂತೆ ಮಾಡುತ್ತೇವೆ. ಆಯ್ಕೆ ನಿಮ್ಮದು ಎಂದು ಕಾಂಗ್ರೆಸ್ ನಾಯಕರು ಹೇಳಿರಬಹುದು. ಗಾಜಿನ ಮನೆಯಲ್ಲಿ ಕುಳಿತಿರುವ ರಾಜೇಂದ್ರ ಕುಮಾರ್ ಕಾಂಗ್ರೆಸ್ ಎನ್ನುವ ಗಾಜಿನ ಮನೆಗೆ ಕಲ್ಲೆಸೆಯಲು ಹಿಂದೆ ಸರಿದದ್ದೇ ಹೀಗೆ!!
Leave A Reply