ಸರಕಾರಿ ಅಧಿಕಾರಿಗಳ ನಿರ್ಲಕ್ಷ್ಯವೂ, ಸಿದ್ದುವಿನ ಇಮ್ರಾನ್ ಪ್ರೇಮವೂ!!
ಸರಕಾರಿ ಕೆಲಸ ಸಿಗಲಿ ಎಂದು ಹೆಚ್ಚಿನವರು ದೇವರಿಗೆ ಪ್ರಾರ್ಥಿಸುವುದೇಕೆ ಎಂದರೆ ಸರಕಾರಿ ಕಚೇರಿಗಳು ಒಂದು ರೀತಿಯಲ್ಲಿ ಮಾವನ ಮನೆ ಇದ್ದ ಹಾಗೆ ಎಂದು ಅಲ್ಲಿ ಕೆಲಸಕ್ಕೆ ಇರುವವರು ನಿರ್ಧರಿಸಿಬಿಟ್ಟಿದ್ದಾರೆ. ಆದ್ದರಿಂದ ಅಲ್ಲಿ ಸೇರಲು ಸ್ಪರ್ಧೆ ಇರುತ್ತದೆ. ಹಣ ಕೊಟ್ಟಾದರೂ ಒಂದು ಸಲ ಸರಕಾರಿ ನೌಕರಿಗೆ ಸೇರೋಣ ಎಂದು ಗುರಿ ಇಟ್ಟುಕೊಂಡಿರುತ್ತಾರೆ. ಅವರಿಂದಾಗಿ ಈಗ ಸರಕಾರಿ ಕಚೇರಿಗಳ ಅವಸ್ಥೆ ಏನಾಗಿದೆ ಎಂದು ರಾಜ್ಯ ಮುಖ್ಯ ಕಾರ್ಯದರ್ಶಿ ಪಿ ರವಿಕುಮಾರ್ ಅವರು 2021 ರ ನವೆಂಬರ್ 16 ರಂದು ಅಧಿಕಾರಿ ನೌಕರರಿಗೆ ಮತ್ತು ಇಲಾಖೆಗಳ ಮುಖ್ಯ ಕಾರ್ಯದರ್ಶಿ, ಕಾರ್ಯದರ್ಶಿ, ಆಯುಕ್ತರು, ನಿರ್ದೇಶಕರಿಗೆ ಪತ್ರ ಬರೆದಿದ್ದಾರೆ. ಅವರು ಬರೆದ ಪತ್ರದ ಮುಖ್ಯ ಅಂಶಗಳು ಏನೆಂದರೆ ಬೆಳಿಗ್ಗೆ ಸಮಯಕ್ಕೆ ಸರಿಯಾಗಿ ಅಧಿಕಾರಿಗಳು, ಸಿಬ್ಬಂದಿಗಳು ಕೆಲಸಕ್ಕೆ ಬರುವುದಿಲ್ಲ. ಅವರಿಗೆ ನಿಯಮ ಪ್ರಕಾರ ಬೆಳಿಗ್ಗೆ 10 ಗಂಟೆಗೆ ಡ್ಯೂಟಿಗೆ ಹಾಜರಾಗಬೇಕು. ಆದರೆ ಹೆಚ್ಚಿನವರು 10.30 ಅಥವಾ 11 ಗಂಟೆಗೆ ಬರುತ್ತಾರೆ. ಹಾಗಂತ ಲೇಟ್ ಆಗಿ ಬಂದಿದ್ದೇವೆ. ಆ ಕೆಲಸವನ್ನು ಸ್ವಲ್ಪ ಹೊತ್ತು ಹೆಚ್ಚು ಕುಳಿತುಕೊಂಡು ಮಾಡಿ ಹೋಗೋಣ ಎಂದು ಇವರ್ಯಾರು ಅಂದುಕೊಳ್ಳುವುದಿಲ್ಲ. ಸಂಜೆ ಐದು ಕಾಲು ಆಗುತ್ತಿದ್ದಂತೆ ಫೈಲುಗಳನ್ನು ಕಪಾಟಿನಲ್ಲಿ ಇಟ್ಟು ಹೊರಡಲು ಶುರು ಮಾಡುತ್ತಾರೆ. ಮನಸ್ಸಿದ್ದರೆ ಲೆಡ್ಜರ್ ನಲ್ಲಿ ಒಂದು ಸಹಿ ಹಾಕುತ್ತಾರೆ. ಹೆಚ್ಚಿನವರು ಅದು ಕೂಡ ಹಾಕುವುದಿಲ್ಲ. ಬಂದ ಸ್ವಲ್ಪ ಹೊತ್ತಿನಲ್ಲಿಯೇ ಚಾ, ಸಿಗರೇಟು ಎಂದು ಎದ್ದು ಹೋಗುತ್ತಾರೆ. ಇದರಿಂದ ಏನಾಗುತ್ತದೆ ಎಂದು ಕಡತಗಳು ಸರಿಯಾದ ಸಮಯಕ್ಕೆ ವಿಲೇವಾರಿಯಾಗುತ್ತಿಲ್ಲ. ಜನಸಾಮಾನ್ಯರಿಗೆ ಅದರಿಂದ ಕೆಲಸಕಾರ್ಯಗಳು ವಿಳಂಬವಾಗುತ್ತವೆ.
ಇನ್ನು ಅನೇಕರು ಬಯೋ ಮೆಟ್ರಿಕ್ ನಲ್ಲಿ ಹಾಜರಾತಿಯನ್ನು ದಾಖಲಿಸುವುದಿಲ್ಲ. ಅದು ಇಲ್ಲದಂತೆ ಆಗುತ್ತಿದೆ. ಇನ್ನು ಕೆಲವರು ರಜೆಯ ಅರ್ಜಿಯನ್ನು ಲಿಖಿತವಾಗಿ ನೀಡುವುದನ್ನೇ ಮುಂದುವರೆಸಿದ್ದಾರೆ. ಹೀಗೆ ಆದರೆ ಕೆಲಸಗಳು ವೇಗ ಪಡೆಯುವುದು ಯಾವಾಗ? ಇವರಿಗೆ ಕೆಲಸದ ಅವಧಿ ಹೊರೆಯಾಗಬಾರದು ಎಂದು 7.30 ಗಂಟೆ ಒಟ್ಟು ದುಡಿದರೆ ಸಾಕು ಎಂದು ನಿಯಮ ಮಾಡಲಾಗಿದೆ. ಆದರೆ ಇವರು ಅದು ಕೂಡ ಮಾಡುವುದಿಲ್ಲ. ಹಾಗಂತ ಆ ವೇತನ ಆಯೋಗ, ಈ ವೇತನ ಆಯೋಗ ಎಂದು ಪ್ರತಿಭಟನೆ, ಹೋರಾಟಕ್ಕೆ ಇವರು ಯಾವತ್ತೂ ರೆಡಿ. ಸಂಬಳ ಎಷ್ಟು ಸಾವಿರವೇ ಇರಲಿ, ಗಿಂಬಳ ಮಾತ್ರ ಲಕ್ಷಗಳಲ್ಲಿ ಇರುತ್ತದೆ ಎನ್ನುವುದಕ್ಕೆ ಪಾಲಿಕೆಯ ಜವಾನರ ಮೇಲೆಯೂ ಈಗ ಆಗಿರುವ ಎಸಿಬಿ ದಾಳಿಗಳೇ ಸಾಕ್ಷಿ. ಇದು ಕೇವಲ ಒಂದು ಜಿಲ್ಲೆ, ನಗರದ ವಿಷಯ ಅಲ್ಲ. ಹೆಚ್ಚಿನ ಕಡೆ ಸರಕಾರಿ ಕಚೇರಿಗಳ ಕಥೆ ಇದೇ ರೀತಿ. ಇದಕ್ಕೆ ಏನು ಕಾರಣ ಎಂದು ನೋಡುತ್ತಾ ಹೋದರೆ ಆಯಾ ಸ್ಥಳಗಳ ಜನಪ್ರತಿನಿಧಿಗಳ ಹಿಡಿತ ತಪ್ಪಿ ಹೋಗಿರುವುದೇ ಕಾರಣ. ಎಲ್ಲರೂ ಏನಾದರೊಂದು ಚುನಾವಣೆ ಅಥವಾ ಸ್ವಹಿತಾಸಕ್ತಿಯ ಕಾರ್ಯದಲ್ಲಿಯೇ ಬಿಝಿ ಇದ್ದರೆ ಇದನ್ನೆಲ್ಲ ನೋಡುವವರು ಯಾರು? ಆದ್ದರಿಂದ ಯಾರಿಗೂ ಹೆದರಿಕೆ ಇಲ್ಲ. ಇದು ಹೀಗೆ ಮುಂದುವರೆದರೆ ಜನ ಮುಂದೊಂದು ದಿನ ಬುದ್ಧಿ ಕಲಿಸ್ತಾರೆ. ಯಾರಿಗೆ? ಅದು ಚುನಾವಣೆಯಲ್ಲಿ ಗೊತ್ತಾಗುತ್ತೆ. ಆದ್ದರಿಂದ ಜನಪ್ರತಿನಿಧಿಗಳು ಎಚ್ಚೆತ್ತು ಇದನ್ನು ಸರಿಪಡಿಸಿದರೆ ಬಚಾವ್. ಇಲ್ಲದೇ ಹೋದರೆ ಕಾಲ ಮಿಂಚಿ ಹೋಗಬಹುದು.
ಇನ್ನು ಊಸರವಳ್ಳಿ ಜಾತಿಗೆ ಸೇರಿದ ನವಜ್ಯೋತ್ ಸಿಂಗ್ ಸಿದ್ದು ಎನ್ನುವವರು ಮತ್ತೊಮ್ಮೆ ತನ್ನ ಅಣ್ಣ ಎಂದು ಕರೆದಿರುವುದು ಪಕ್ಕದ ಮನೆಯ ವ್ಯಕ್ತಿಯನ್ನು ಅಲ್ಲ, ಬದಲಾಗಿ ಪಕ್ಕದ ದೇಶದ ವ್ಯಕ್ತಿಯನ್ನು. ಸಿದ್ದು ಮನಸ್ಸು ಅಷ್ಟು ದೊಡ್ಡದಾಗಿದೆಯಾ ಎಂದು ಅಂದುಕೊಳ್ಳಬೇಡಿ. ಸಿದ್ದು ಹೀಗೆ ಕರೆದಿರುವುದು ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ನನ್ನು. ಬಹುಶ: ರಾತ್ರಿ ಎರಡು ಪೆಗ್ ಜಾಸ್ತಿ ಆದ ನಂತರ ಕರೆದಿರಬಹುದು ಎಂದು ಅಂದುಕೊಂಡಿದ್ದರೆ ಅದು ನಿಮ್ಮ ತಪ್ಪು. ಸಿದ್ದು ತಮ್ಮ ಒಡಹುಟ್ಟಿದವನಂತಿರುವ ಖಾನ್ ನನ್ನು ಎಲ್ಲರ ಮುಂದೆಯೇ ಹಾಗೆ ಕರೆದು ಈಗ ಸಾಮಾಜಿಕ ಜಾಲತಾಣಗಳಲ್ಲಿ ಉಗಿಸಿಕೊಂಡಿದ್ದಾರೆ. ಪಾಕಿಸ್ತಾನದ ಭಯೋತ್ಪಾದಕರು ಮತ್ತು ಅವರನ್ನು ಕಳಿಸಿಕೊಡುತ್ತಿರುವ ಅಲ್ಲಿನ ಸೈನಿಕರು ನಮ್ಮ ಜಮ್ಮು-ಕಾಶ್ಮೀರದಲ್ಲಿ ಆಗಾಗ ಅಮಾಯಕ ನಾಗರಿಕರನ್ನು ಮತ್ತು ವೀರ ಯೋಧರನ್ನು ಕೊಂದು ಕೇಕೆ ಹಾಕುತ್ತಿದ್ದರೆ ಈ ಪಟಿಯಾಲ ಬೇಬಿಯಂತಿರುವ ಸಿದ್ದು ಇಮ್ರಾನ್ ಖಾನ್ ನನ್ನು ಅಣ್ಣ ಎಂದು ಹೇಳುವ ಮೂಲಕ ತಾವೊಬ್ಬ ದೊಡ್ಡ ಸಾಧನೆ ಮಾಡಿದಂತೆ ಅಂದುಕೊಂಡಿರಬಹುದು. ಆದರೆ ಇವತ್ತಿಗೂ ಪಂಜಾಬ್ ಇಷ್ಟು ಹಾಳಾಗಿದ್ದರೆ ಅದಕ್ಕೆ ಕಾರಣ ಪಾಕಿಸ್ತಾನ. ಅಲ್ಲಿಂದ ಬರುವ ಡ್ರಗ್ಸ್ ನಮ್ಮ ಪಂಜಾಬನ್ನು ಉಡ್ತಾ ಪಂಜಾಬ್ ಮಾಡಿಬಿಟ್ಟಿತ್ತು. ಪಾಕಿನ ಭಯೋತ್ಪಾದಕರು ತಮ್ಮ ಅಡಗುತಾಣವನ್ನಾಗಿ ಮಾಡಿಕೊಂಡಿರುವುದು ಪಂಜಾಬನ್ನು. ಇತ್ತ ಆ ರಾಜ್ಯದ ಕಾಂಗ್ರೆಸ್ ರಾಜ್ಯಾಧ್ಯಕ್ಷರೂ ಆಗಿರುವ ಸಿದ್ದು ಹೀಗೆ ಕರೆಯಬೇಕಾದರೆ ಕಾರಣ ಇರಲೇಬೇಕಲ್ಲ. ಇದೆ. ಅದೇನೆಂದರೆ ಮುಂದಿನ ವರ್ಷ ಬರಲಿರುವ ಪಂಜಾಬ್ ಚುನಾವಣೆ. ಮುಸ್ಲಿಮರ ಮತಗಳನ್ನೇ ನೆಚ್ಚಿಕೊಂಡಿರುವ ಕಾಂಗ್ರೆಸ್ ಈಗ ಇಮ್ರಾನ್ ಖಾನ್ ಸಂಬಂಧಿಗಳಂತಿರುವ ತಾವು ಇಮ್ರಾನ್ ಖಾನ್ ನನ್ನು ಹೊಗಳಿದರೆ ಮುಸ್ಲಿಮರ ಮತಗಳು ಸಾರಾಸಗಟಾಗಿ ತಮ್ಮ ಬುಟ್ಟಿಗೆ ಬೀಳುತ್ತವೆ ಎಂದು ಅಂದುಕೊಂಡಿದೆ. ಇರಲೂಬಹುದು. ಆದರೆ ಮುಸ್ಲಿಮರಿಗೆ ಅಲ್ಲಿ ಕಾಂಗ್ರೆಸ್ಸಿಗೆ ಮತ ಹಾಕಬೇಕಾದ ಅನಿವಾರ್ಯತೆ ಇಲ್ಲ. ಯಾಕೆಂದರೆ ಅಲ್ಲಿ ಆಪ್ ಕಾಲಿಟ್ಟಿದೆ. ಇದರಿಂದ ಹೆದರಿದ ಸಿದ್ದು ಇಮ್ರಾನ್ ಖಾನ್ ನನ್ನು ಅಣ್ಣ ಎನ್ನುತ್ತಿದ್ದಾರೆ. ನಾಳೆ ತಂದೆ ಎನ್ನಲೂಬಹುದು!
Leave A Reply