ಮಂಗಳೂರು: ಪ್ರತಿದಿನ 600 ಬೀದಿನಾಯಿಗಳಿಗೆ ಅನ್ನ ಹಾಕುವ ತಾಯಿಗೆ, ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ!
ಆಕೆಯದ್ದು ಮಾತೃ ಹೃದಯ. ಹಸಿದವರಿಗೆ ಅನ್ನ ನೀಡುವುದೇ ಆಕೆಯ ಮಹಾನ್ ಕಾಯಕ. ಮನುಷ್ಯರಿಗಾದರೆ ಯಾರಾದರೂ ಊಟ ಹಾಕುತ್ತಾರೆ. ಬೀದಿ ನಾಯಿಗಳಿಗೆ ಊಟ ಹಾಕುವುದು ಯಾರು ಎಂಬ ಜಿಜ್ಞಾಸೆಗೆ ಬಿದ್ದ ಅವರು, ತಾನು ಬಾಡಿಗೆ ಮನೆಯಲ್ಲಿದ್ದು ಸಂಕಷ್ಟದ ಜೀವನ ಮಾಡುತ್ತಿದ್ದರೂ, ಪ್ರತಿದಿನ 600 ಬೀದಿನಾಯಿಗಳಿಗೆ ಅನ್ನ ಬಡಿಸುತ್ತಾರೆ.ಈಕೆಯ ವಾಹನದ ಸದ್ದು ಕೇಳಿದರೆ ಸಾಕು ಆಕಳು ಹಸಿವಿನಿಂದ ಹಾಲಿಗಾಗಿ ತಾಯಿಯ ಬಳಿ ಓಡಿ ಬರುವಂತೆ ಎಲ್ಲಾ ಶ್ವಾನಗಳು ಬಂದು ಆಕೆಯನ್ನು ಸುತ್ತುವರಿಯುತ್ತವೆ. ಒಂದು ದಿನವೂ ತಪ್ಪದೇ ಪ್ರತಿ ದಿನ ಮೂಕ ಪ್ರಾಣಿಗಳ ಸಂರಕ್ಷಣೆ ಮಾಡುತ್ತಿರುವ ಮಂಗಳೂರಿನ ಈ ಮಹಾತಾಯಿಯ ಹೆಸರು ರಜನಿ ಶೆಟ್ಟಿ.
ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ
ರಜನಿ ಶೆಟ್ಟಿಯವರ ಈ ಸಾಧನೆಗೆ ಮತ್ತು ಮಾತೃ ಹೃದಯಕ್ಕೆ ಮಾಜಿ ಕ್ರಿಕೆಟಿಗ ವಿವಿಎಸ್ ಲಕ್ಷ್ಮಣ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ರಜನಿ ಶೆಟ್ಟಿಯವರ ಸಾಧನೆಗಾಥೆಯನ್ನು ಟ್ವಿಟ್ಟರ್‌ನಲ್ಲಿ ಶೇರ್ ಮಾಡಿದ ಲಕ್ಷ್ಮಣ್, ಮಂಗಳೂರು ಮೂಲದ ರಜನಿ ಶೆಟ್ಟಿ ಪ್ರತಿ ದಿನ ಸ್ವತಃ ಅಡಿಗೆ ಮಾಡಿ ನೂರಾರು ಪ್ರಾಣಿಗಳಿಗೆ ಆಹಾರ ನೀಡುತ್ತಾರೆ. ಬಾವಿಗಳಿಗೆ ಪ್ರಾಣಿಗಳು ಬಿದ್ದರೆ ಬಾವಿಗಿಳಿದು ರಕ್ಷಣೆ ಮಾಡುತ್ತಾರೆ. ಅನಾರೋಗ್ಯ ಹೊಂದಿದ, ಗಾಯಗೊಂಡ ಬೀದಿ ನಾಯಿಗಳಿಗೆ ಆರೈಕೆ ಮಾಡುತ್ತಾರೆ. ರಜನಿ ಶೆಟ್ಟಿಯವರ ಅದ್ಭುತ ಸೇವೆಗೆ ತಲೆ ಬಾಗುತ್ತೇನೆ ಎಂದು ವಿವಿಎಸ್ ಲಕ್ಷ್ಮಣ್ ಟ್ವೀಟ್ ಮಾಡಿದ್ದಾರೆ.
ಮುಂಬೈ ಮೂಲದ ರಜನಿ ಶೆಟ್ಟಿಮುಂಬೈ ಮೂಲದ ರಜನಿ ಶೆಟ್ಟಿಯವರು ದಾಮೋದರ ಶೆಟ್ಟಿ ಎಂಬುವವರನ್ನು ವಿವಾಹವಾಗಿದ್ದು, ಸದ್ಯ ಮಂಗಳೂರಿನ ಬಾಡಿಗೆ ಮನೆಯಲ್ಲಿ ನೆಲೆಸಿದ್ದಾರೆ. ದಾಮೋದರ್ ಶೆಟ್ಟಿ ವೃತ್ತಿಯಲ್ಲಿ ಡ್ರೈವರ್ ಆಗಿದ್ದು, ಈ ದಂಪತಿ ಮೂವರು ಮಕ್ಕಳನ್ನು ಹೊಂದಿದ್ದಾರೆ. ರಜನಿ ಶೆಟ್ಟಿ ಕುಟುಂಬ ನಂಬಿಕೊಂಡಿರುವುದು ಪತಿಯ ದುಡಿಮೆಯನ್ನೇ. ಆದರೂ ರಜನಿ ಶೆಟ್ಟಿಯವರ ಮನೆಯಲ್ಲಿ 40ಕ್ಕೂ ಶ್ವಾನಗಳು, 15 ಬೆಕ್ಕುಗಳು, 4 ಹದ್ದುಗಳಿವೆ. ಇವೆಲ್ಲವೂ ಬೀದಿಯಲ್ಲಿ ಯಾರೋ ಬಿಟ್ಟುಹೋಗಿರುವುದು ಮತ್ತು ರಸ್ತೆಯಲ್ಲಿ ಗಾಯವಾಗಿ ಬಿದ್ದಿರುವುದು. ಕಷ್ಟದ ಜೀವನದ ನಡುವೆಯೇ ರಜನಿ ಶೆಟ್ಟಿ ಮನೆ ಪ್ರಾಣಿಗಳಿಗೆ ಅರಮನೆಯಾಗಿದೆ.
ಶ್ವಾನಗಳಿಗೆ ಸ್ನಾನ, ಆರೈಕೆ, ಔಷಧಿಯನ್ನು ರಜನಿ ಶೆಟ್ಟಿಯವರು ಮಾಡುತ್ತಾರೆ. ತಾನು ಸಾಕಿದ ಎಲ್ಲಾ ಶ್ವಾನಗಳಿಗೆ ಸಂತಾನಹರಣ ಚಿಕಿತ್ಸೆಯನ್ನೂ ಮಾಡಿಸಿದ್ದಾರೆ. ಮಂಗಳೂರಿನ ಬಳ್ಳಾಲ್ ಭಾಗ್ ಬಳಿಯ ಪುಟ್ಟ ಮನೆಯಲ್ಲಿ ರಜನಿ ಶೆಟ್ಟಿ ಕುಟುಂಬದ ಜೊತೆ ಎಲ್ಲಾ ಪ್ರಾಣಿಗಳೂ ಕುಟುಂಬದ ಸದಸ್ಯರಂತೆ ಇವೆ.
ಪ್ರತಿದಿನ 50 ಕೆ.ಜಿ ಅನ್ನಮನೆಯಲ್ಲಿ ಮಾತ್ರವಲ್ಲದೇ ಪ್ರತಿದಿನ ಸುಮಾರು 600ರಷ್ಟು ಬೀದಿನಾಯಿಗಳಿಗೆ ರಜನಿ ಶೆಟ್ಟಿ ಆಹಾರ ಹಾಕುತ್ತಾರೆ. ಪ್ರತಿದಿನ 50 ಕೆ.ಜಿ ಅನ್ನ, ಮಾಂಸದಂಗಡಿಗಳಿಂದ ಅಳಿದುಳಿದ ಮಾಂಸದ ತುಂಡು, ಅರಸಿನ ಪುಡಿ, ಉಪ್ಪನ್ನು ಸೇರಿಸಿ ದೊಡ್ಡ ಪಾತ್ರೆಯಲ್ಲಿ ಬೇಯಿಸುತ್ತಾರೆ. ಕತ್ತಲಾದ ಬಳಿಕ ಪತಿ ಅಥವಾ ಮಗಳೊಂದಿಗೆ ನಗರದ ಸ್ಟೇಟ್ ಬ್ಯಾಂಕ್, ಬಂದರು, ಡಿಸಿ ಕಚೇರಿ, ಬಿಜೈ, ಲಾಲ್ ಭಾಗ್, ಲೇಡಿ ಹಿಲ್, ಮಣ್ಣಗುಡ್ಡೆ, ಪಿ.ವಿ.ಎಸ್, ಚಿಲಿಂಬಿ ಹೀಗೆ ಹಲವು ಭಾಗಗಳಲ್ಲಿ ಆಹಾರ ಹಾಕುತ್ತಾರೆ. ರಜನಿ ಶೆಟ್ಟಿಯವರು 600ಕ್ಕಿಂತ ಹೆಚ್ಚು ಶ್ವಾನಗಳಿಗೆ ಆಹಾರ ಹಾಕಿ ಮತ್ತೆ ಮನೆಗೆ ತಲುಪುವಾಗ ಗಂಟೆ ನಡುರಾತ್ರಿ 2.30 ದಾಟಿರುತ್ತದೆ. ಮರುದಿನ ಮತ್ತೆ ಎದ್ದು ಶ್ವಾನಗಳಿಗೆ ಆಹಾರ ಸಿದ್ಧಪಡಿಸುತ್ತಾರೆ.
ಶ್ವಾನಗಳು ಹಸಿವಿನಿಂದ ಇರಬಾರದು ತಾನು ಊಟ ಮಾಡದಿದ್ದರೂ ಶ್ವಾನಗಳು ಹಸಿವಿನಿಂದ ಇರದ ಹಾಗೆ ರಜನಿ ಶೆಟ್ಟಿ ನೋಡಿಕೊಂಡಿದ್ದಾರೆ. ಹುಷಾರಿಲ್ಲದ ಸಂದರ್ಭದಲ್ಲೂ ತನ್ನ ಶ್ವಾನ ಸೇವೆಯನ್ನು ರಜನಿ ಶೆಟ್ಟಿ ಬಿಟ್ಟಿಲ್ಲ. ಒಂದು ದಿನ ಹೋಗದಿದ್ದರೆ ಶ್ವಾನಗಳು ದಾರಿ ಕಾಯುತ್ತಿರುತ್ತವೆ ಅಂತಾ ಹೇಳುತ್ತಾರೆ ರಜನಿ ಶೆಟ್ಟಿ.
ರಜನಿ ಶೆಟ್ಟಿಯವರು ಬಾವಿಯಲ್ಲಿ ಬಿದ್ದು ಜೀವನ್ಮರಣ ಹೋರಾಟ ಮಾಡುತ್ತಿದ್ದ ಪ್ರಾಣಿಗಳಿಗೂ ಜೀವ ರಕ್ಷಣೆ ಮಾಡಿದ್ದಾರೆ. ಇದುವರೆಗೂ 10ಕ್ಕೂ ಅಧಿಕ ಶ್ವಾನಗಳು, ಬೆಕ್ಕುಗಳು ರಜನಿಯವರಿಂದ ರಕ್ಷಣೆಗೊಳಗಾಗಿವೆ. 10 ಅಡಿ ಆಳದ ಬಾವಿಗೆ ಕೇವಲ ಹಗ್ಗದ ಸಹಾಯದಿಂದ ಕೆಳಗಿಳಿದು ಪ್ರಾಣಿಗಳನ್ನು ರಕ್ಷಣೆ ಮಾಡಿದ ಸಾಹಸ ರಜನಿ ಶೆಟ್ಟಿಯವರದ್ದಾಗಿದೆ.
Leave A Reply