ಸರಕಾರದ ಹೊಟ್ಟೆ ತುಂಬಿಸಲು ಮಕ್ಕಳಿಗೆ ಮೊಟ್ಟೆ!!
ಮಗು, ಶಾಲೆಯಲ್ಲಿ ಮೊಟ್ಟೆ ಕೊಟ್ಟರೆ ತಿನ್ನಬೇಡಾ ಎಂದು ಯಾವ ಅಪ್ಪ ಅಥವಾ ಅಮ್ಮ ತಾನೆ ತಮ್ಮ ಮಕ್ಕಳಿಗೆ ಹೇಳಬಹುದು. ಒಂದು ವೇಳೆ ಹೇಳಿದರೂ ಯಾಕೆ ತಿನ್ನಬಾರದು ಎಂದು ಮಗು ತಿರುಗಿ ಪ್ರಶ್ನೆ ಮಾಡಿದರೆ ಯಾವ ಅಪ್ಪ, ಅಮ್ಮನ ಬಳಿ ಉತ್ತರ ಇದೆ. ಸಸ್ಯಾಹಾರಿ, ಮಾಂಸಹಾರಿ ಎನ್ನುವ ಭೇದಬಾವ ಮಾಡಲಾಗದ ಚಿಕ್ಕ ವಯಸ್ಸಿನಲ್ಲಿ ಮೊಟ್ಟೆ ತಿನ್ನುವವರು ಆ ಕೋಣೆಯಲ್ಲಿ ಊಟಕ್ಕೆ ಕುಳಿತುಕೊಳ್ಳಿ, ಬಾಳೆಹಣ್ಣು ತಿನ್ನುವವರು ಈ ಕೋಣೆಯಲ್ಲಿ ಕುಳಿತುಕೊಳ್ಳಿ ಎಂದು ಯಾವ ಶಿಕ್ಷಕರು ತಾನೆ ವಿಭಾಗಿಸಬಲ್ಲರು. ಇದು ಅಂದುಕೊಂಡದ್ದು ಸುಲಭವಲ್ಲ. “ಅಮ್ಮಾ, ನನ್ನ ಫ್ರೆಂಡ್ಸ್ ಮೊಟ್ಟೆ ತಿಂದ್ರು. ನಾನು ಮಾತ್ರ ಒಬ್ಬನೇ ಬೇರೆ ಕೋಣೆಯಲ್ಲಿ ಊಟ ಮಾಡುವಾಗ ಬಾಳೆಹಣ್ಣು ತಿಂದೆ. ನಾವು ಯಾಕೆ ಮೊಟ್ಟೆ ತಿನ್ನಬಾರದು. ಮೊಟ್ಟೆ ತಿಂದರೆ ಏನಾಗುತ್ತದೆ ಅಮ್ಮಾ” ಎಂದು ಮಗ ಅಥವಾ ಮಗಳು ತಾಯಿಗೆ ಕೇಳಿದರೆ ತಾಯಿ ಏನು ಹೇಳಬಹುದು. ಅದು ಹಾಳು ಎಂದು ಹೇಳುತ್ತಾಳಾ? ಹೇಳಿದರೆ ಮಗು ಮರುದಿನ ” ಛೀ, ನೀವು ಹಾಳು ತಿನ್ನುವವರು, ನಾನು ನಿಮ್ಮ ಫ್ರೆಂಡ್ ಅಲ್ಲ” ಎಂದು ಶಾಲೆಯಲ್ಲಿ ಹೇಳಿದರೆ ಹೋಗುವ ಸಂದೇಶ ಏನು? ಅದೇ ವಿಷಯ ಮಕ್ಕಳ ಮನಸ್ಸಿನಲ್ಲಿ ಗಟ್ಟಿಯಾದರೆ ಅವರು ಬೆಳೆದಂತೆಲ್ಲ ಮಾಂಸಹಾರಿಗಳನ್ನು ದ್ವೇಷಿಸಲಾರಂಭಿಸಿದರೆ ? ಆದರೆ ಇದ್ಯಾವುದರ ಅರಿವೆಯೇ ಇಲ್ಲದೆ ಭಾರತೀಯ ಜನತಾ ಪಾರ್ಟಿಯ ಸರಕಾರ ಶಾಲೆಗಳಲ್ಲಿ ಮೊಟ್ಟೆ ವಿತರಣೆಗೆ ಮುಂದಾಗಿದೆ.
ಒಂದು ವೇಳೆ ಇದನ್ನು ಕಾಂಗ್ರೆಸ್ ಮಾಡಿದ್ದರೆ ಜನಿವಾರಿಧಾರಿ ಬಿಜೆಪಿಗರು ಸದನದಲ್ಲಿ ಪ್ರತಿಭಟನೆ ಮಾಡುತ್ತಿದ್ದರು. ಈಗ ಅವರೇ ಆರಂಭಿಸಿರುವ ಯೋಜನೆಯಾಗಿರುವುದರಿಂದ ಯಾರೂ ಕೂಡ ಚಕಾರ ಎತ್ತುತ್ತಿಲ್ಲ. ಒಂದು ಸರಕಾರ ಮಕ್ಕಳ ವಿಷಯದಲ್ಲಿ ಏನೂ ಭೇದಬಾವ ಮಾಡಬಾರದು ಎಂದು ಹೇಳುತ್ತೇವೆ. ಕಳೆದ ಬಾರಿ ಕಾಂಗ್ರೆಸ್ ಸರಕಾರ ಇರುವಾಗ ಸಿದ್ಧರಾಮಯ್ಯನವರು ಶಾಲಾ ಮಕ್ಕಳ ಪ್ರವಾಸದ ವಿಷಯದಲ್ಲಿ ಮಾಡಿದ ವಿಭಜನೆಯನ್ನು ದೊಡ್ಡ ಸಂಗತಿ ಮಾಡಲಾಗಿತ್ತು. ಹಾಗಾದರೆ ಇದು ಕೂಡ ಹಾಗೆ ಅಲ್ಲವೇ? ಇನ್ನು ಮೊಟ್ಟೆ ತಿಂದರೆ ಮಾತ್ರ ಪ್ರೋಟಿನ್ ಅಥವಾ ಆರೋಗ್ಯ ಬರುತ್ತದೆ ಎಂದು ಯಾವ ಮೂರ್ಖ ಸರಕಾರಕ್ಕೆ ಸಲಹೆ ಕೊಟ್ಟನೋ ಗೊತ್ತಿಲ್ಲ. ಉದಾಹರಣೆಗೆ ಬಾಲಿವುಡ್ ಖ್ಯಾತ ನಟರಾದ ಶಹೀದ್ ಕಪೂರ್, ಜಾನ್ ಅಬ್ರಾಹಂ ಪಕ್ಕಾ ಸಸ್ಯಹಾರಿಗಳು. ಅವರು ಅದ್ಭುತವಾದ ದೇಹಧಾಡ್ಯ ಹೊಂದಿಲ್ಲವೇ. ಹಾಗಿರುವಾಗ ಪುಟ್ಟ ಮಕ್ಕಳು ಮೊಟ್ಟೆ ತಿಂದು ಜಿಮ್ ಮಾಡಬೇಕಾಗಿದೆಯೇ, ಇಲ್ಲವಲ್ಲ. ಇನ್ನು ಮೊಟ್ಟೆ ಒಂದು ಸತ್ವಯುತ ಆಹಾರ ಎಂದೇ ವಾದಿಸುವವರ ಬಗ್ಗೆ ಒಂದು ಮಾತು ಹೇಳಬೇಕು. ಅದೇನೆಂದರೆ ಹಾಗಾದರೆ ಮೊಟ್ಟೆಗೆ ಏನೂ ಪರ್ಯಾಯ ಆಹಾರ ಸಸ್ಯಹಾರದಲ್ಲಿ ಇಲ್ಲವೇ? ಇದೆ. ಆದರೆ ಅದರ ಕಡೆ ನೋಡುವಷ್ಟು ವ್ಯವಧಾನ ಸರಕಾರಕ್ಕೆ ಇಲ್ಲ. ಯಾಕೆಂದರೆ ಬಹುಶ: ಮೊಟ್ಟೆಯಲ್ಲಿ ಸಿಗುವಷ್ಟು ಕಮೀಷನ್ ಬೇರೆಯದ್ದರಲ್ಲಿ ಇಲ್ಲವೇನೋ. ಇಲ್ಲದೆ ಹೋದರೆ ಕಳೆದ ಬಾರಿ ಸಚಿವೆಯೊಬ್ಬರು ಮೊಟ್ಟೆಯ ಕಮೀಷನ್ ತಿಂದ ಪ್ರಕರಣ ಯಾಕೆ ಮುನ್ನಲೆಗೆ ಬಂದಿತ್ತು. ಆದ್ದರಿಂದ ಇದೆಲ್ಲವನ್ನು ನೋಡಿ ಸರಕಾರ ಮೊಟ್ಟೆಯಲ್ಲಿ ತನಗೆ “ಶಕ್ತಿ” ಬರುತ್ತದೆ ಎಂದು ನಿರ್ಧರಿಸಿ ಹೊರಟಂತೆ ಕಾಣುತ್ತದೆ.
ಆದರೆ ಇದ್ಯಾವುದೂ ಗೊತ್ತಿಲ್ಲದ ಹೆಣ್ಣುಮಗಳೊಬ್ಬಳು ನೀಡಿದ ಹೇಳಿಕೆ ಇತ್ತೀಚೆಗೆ ಸಾಕಷ್ಟು ವೈರಲ್ ಆಗಿತ್ತು. ಅದರ ಹಿನ್ನಲೆ ಒಮ್ಮೆ ನೋಡೋಣ. ಮೊಟ್ಟೆಯನ್ನು ಮಕ್ಕಳಿಗೆ ಹಂಚಬಾರದು ಎಂದು ಹಲವು ಮಠಾಧೀಶರು ಸರಕಾರಕ್ಕೆ ಆಗ್ರಹ ಮಾಡಿದ್ದರು. ಅದಕ್ಕೆ ಓರ್ವ ಹೆಣ್ಣುಮಗಳು ವಿರೋಧ ವ್ಯಕ್ತಪಡಿಸಿ ಮೊಟ್ಟೆಯನ್ನು ಮಠದಲ್ಲಿ ಬಂದು ತಿನ್ನುತ್ತೇವೆ ಎಂದು ಆವಾಜ್ ಹಾಕಿದ್ದಳು. ಸಂಜೆ ಆ ಬಗ್ಗೆ ಕ್ಷಮೆ ಕೇಳಿದ್ದಾಳೆ. ಅದು ಬೇರೆ ವಿಷಯ. ಆದರೆ ಈಕೆ ಹಾಗೆ ಮೊಟ್ಟೆಯ ಹೇಳಿಕೆಯನ್ನು ಕೊಡಬೇಕಾದರೆ ಅವಳಿಗೆ ಯಾರಾದರೂ ಕುಮ್ಮಕ್ಕು ಕೊಟ್ಟಿರಬೇಕು. ಅವಳಾಗಿಯೇ ಹಾಗೆ ಹೇಳುವ ಸಾಧ್ಯತೆಯೇ ಇಲ್ಲ. ಇನ್ನು ಅವಳಿಗೆ ಮಠಗಳ ವಿರುದ್ಧ ಮಾತನಾಡಲು ಪ್ರೇರಣೆ ಕೊಟ್ಟಿರುವ ವ್ಯಕ್ತಿ ಅಥವಾ ಸಂಘಟನೆಗಳಿಗೆ ಗೊತ್ತಿರಬೇಕಾಗಿರುವುದು ಏನೆಂದರೆ ನಮ್ಮ ರಾಜ್ಯದ ಎಷ್ಟೋ ಮಠಗಳು ಹಸಿದ ಮಕ್ಕಳಿಗೆ ಉಚಿತ ಊಟ ಮತ್ತು ಶಿಕ್ಷಣವನ್ನು ಎಷ್ಟೋ ದಶಕಗಳಿಂದ ಮಾಡುತ್ತಾ ಬರುತ್ತಿವೆ. ಅವರ್ಯಾರು ಮೊಟ್ಟೆ ಮಠದಲ್ಲಿ ಹಂಚಿಲ್ಲ. ಆದರೂ ಅಲ್ಲಿ ಕಲಿತ ಮಕ್ಕಳು ಸೇನೆಯಿಂದ ಹಿಡಿದು ಐಪಿಎಸ್, ಐಎಎಸ್ ಆಗಿದ್ದಾರೆ. ಎಷ್ಟೋ ಮಠಗಳು ಕೊರೊನಾ ಸಹಿತ ಪ್ರಾಕೃತಿಕ ವಿಕೋಪ ಸಂದರ್ಭದಲ್ಲಿ ತಮ್ಮ ಉದಾರ ಸಹಾಯಹಸ್ತ ಚಾಚಿದ್ದಾರೆ. ಅವರು ಆಗ ಮೊಟ್ಟೆ ಹಂಚಿಲ್ಲ. ಆದ್ದರಿಂದ ಮೊಟ್ಟೆಯನ್ನು ತಿನ್ನುವುದರಿಂದ ನಾವು ಏನೋ ಆರೋಗ್ಯವಂತರಾಗುತ್ತೇವೆ ಎನ್ನುವ ಭ್ರಮೆ ಬೇಡಾ. ಮೊಟ್ಟೆಯೇ ಸರ್ವಸ್ವ ಎಂದು ಅಂದುಕೊಳ್ಳುವುದು ತಪ್ಪು. ಈಗೀಗ ಕೋಳಿಗಳಿಗೆ ಹಾಕುವ ಕಳಪೆ ಆಹಾರದಿಂದ ಮೊಟ್ಟೆಗಳಲ್ಲಿ ಗುಣಮಟ್ಟ ಉಳಿದಿಲ್ಲ. ಇಷ್ಟಿದ್ದೂ ಮೊಟ್ಟೆಯೇ ಶ್ರೇಷ್ಟ ಎಂದುಕೊಂಡರೆ ಅದು ನಿಮ್ಮ ಇಚ್ಚೆ. ಹಾಗಂತ ಈ ಹಿಂದೆ ಸರಕಾರಗಳು ಅಂಗನವಾಡಿ ಕೇಂದ್ರಗಳಿಗೆ ಪೋಷಕಾಂಶಯಕ್ತ ಆಹಾರಗಳ ಹೆಸರಿನಲ್ಲಿ ಕಳಪೆ ಕಚ್ಚಾಪದಾರ್ಥಗಳನ್ನು ಹಂಚುತ್ತಿದ್ದವು. ಆ ಗುತ್ತಿಗೆಯನ್ನು ತೆಗೆದುಕೊಂಡವರು ಕಳಪೆ ಪದಾರ್ಥಗಳನ್ನು ಶಾಲೆಗಳಿಗೆ, ಅಂಗನವಾಡಿಗೆ ಪೂರೈಸಿ ತಾವು ದುಂಡಗಾಗುತ್ತಾ ಹೋದರು. ಕಟ್ಟಡಗಳ ಮೇಲೆ ಕಟ್ಟಡ ಕಟ್ಟಿದರು. ಆದರೆ ಅವರು ಪೂರೈಸಿದ ಆಹಾರವನ್ನು ಸೇವಿಸಿದ ಮಕ್ಕಳು ಒಳಗೊಳಗೆ ದುರ್ಬಲರಾಗುತ್ತಾ ಹೋದರು. ಆದ್ದರಿಂದ ಏನೂ ಮಾಡಿದರೂ ಅದರಲ್ಲಿ ಲಾಭ ನೋಡುವ ಸರಕಾರಗಳು ನಿಜಕ್ಕೂ ಮಕ್ಕಳ ಕಾಳಜಿ ವಹಿಸಲು ಈ ಮೊಟ್ಟೆಯ ಕಥೆಯನ್ನು ಹೆಣೆದಿದ್ದಾರೋ ಅಥವಾ ತಮ್ಮ ಹೊಟ್ಟೆ ತುಂಬಿಸಲು ಮೊಟ್ಟೆಯನ್ನು ಇಡುತ್ತಿದ್ದಾರೋ!
Leave A Reply