ಮುಸ್ಲಿಂ ಗುತ್ತಿಗೆದಾರರಿಗೆ ಕೆಲಸ ಸಿಗುವುದು ಹೇಗೆ ಖಾದರ್?
ಖಾದರ್ ಬಟ್ಟೆಯ ಒಳಗೆ ಕಲ್ಲು ಕಟ್ಟಿ ಕೇಸರಿ ಪಾಳಯದ ಒಳಗೆ ಎಸೆದ ರೀತಿ ಖಂಡಿತ ಒಂದು ಕ್ಷಣ ಭಾರತೀಯ ಜನತಾ ಪಾರ್ಟಿಯ ಶಾಸಕರು ಮುಟ್ಟಿನೋಡಿಕೊಳ್ಳುವಂತಾಯಿತು. ಹೇಳಿದ್ದು ಅಕ್ಷರಶ: ಸುಳ್ಳಾದರೂ ಹೇಳಿದ ರೀತಿ ಮತ್ತು ಸಂದರ್ಭ ಮಾತ್ರ ಪಕ್ವ ರಾಜಕಾರಣಿಯಾಗಿ ಖಾದರ್ ಬೆಳೆದ ಶೈಲಿ ತೋರಿಸುವಂತಾಯಿತು. ಖಾದರ್ ಹೇಳಿದ್ದು ಇಷ್ಟೇ. ದೇವಸ್ಥಾನಗಳ ಜಾತ್ರೆಗಳಲ್ಲಿ ಮುಸ್ಲಿಮರ ಅಂಗಡಿಗಳಿಗೆ ವ್ಯಾಪಾರಕ್ಕೆ ಅವಕಾಶ ಇಲ್ಲ ಎಂದು ಹೇಳುವ ಬಿಜೆಪಿಯ ದಕ್ಷಿಣ ಕನ್ನಡ ಜಿಲ್ಲೆಯ ಶಾಸಕರು ತಮ್ಮ ತಮ್ಮ ವಿಧಾನಸಭಾ ಕ್ಷೇತ್ರಗಳಲ್ಲಿ ಮುಸ್ಲಿಮ್ ಗುತ್ತಿಗೆದಾರರಿಗೆ ಎಲ್ಲಾ ಕೆಲಸ ಕೊಡುತ್ತಿದ್ದಾರೆ. ಇದು ಹಿಂದೂತ್ವನಾ ಎಂದು ಪ್ರಶ್ನೆ ಮಾಡಿದ್ದಾರೆ. ಒಬ್ಬ ರಾಜಕಾರಣಿಯಾಗಿ ಖಾದರ್ ಇಂತಹ ಹೇಳಿಕೆ ಕೊಡುವುದು ಅವರ ತಂತ್ರದ ಭಾಗ. ಯಾಕೆಂದರೆ ಹೀಗೆ ಹೇಳಿದರೆ ಮಾತ್ರ ಬಿಜೆಪಿ ಕಾರ್ಯಕರ್ತರಿಗೆ ತಮ್ಮ ಶಾಸಕರ ಮೇಲೆ ಅಪನಂಬಿಕೆ ಶುರುವಾಗುತ್ತದೆ. ಇವರು ಒಳಗೊಂದು, ಹೊರಗೊಂದು ಎಂದು ಅನಿಸುತ್ತದೆ. ಒಮ್ಮೆ ನಂಬಿಕೆ ಹೊರಟು ಹೋದರೆ ಮತ್ತೆ ಹುಟ್ಟಿಸುವುದು ಕಷ್ಟ ಎಂದು ಖಾದರ್ ಅವರಿಗೆ ಗೊತ್ತಿಲ್ಲದೇ ಏನಿಲ್ಲ. ಆದರೆ ಒಬ್ಬರು ಸಚಿವರಾಗಿದ್ದವರು, ಮೂರು ಬಾರಿ ಶಾಸಕರಾಗಿರುವವರಿಗೆ ಈಗ ಸರಕಾರದ ಗುತ್ತಿಗೆ ಹೇಗೆ ಸಿಗುತ್ತದೆ ಎನ್ನುವುದು ತಿಳಿದಿದೆ. ಆದರೆ ಜನಸಾಮಾನ್ಯರಿಗೆ ಇದೆಲ್ಲ ಗೊತ್ತಿಲ್ಲ ಎಂದು ಅವರು ಅಂದುಕೊಂಡಿರುವುದರಿಂದ ತಮ್ಮ ಹೇಳಿಕೆಯಿಂದ ಅವರೇ ಖುಷಿಯಾಗಿದ್ದಾರೆ.
ಮೊದಲನೇಯದಾಗಿ ಈ ಸರಕಾರಿ ಗುತ್ತಿಗೆಯನ್ನು ಪಡೆದುಕೊಳ್ಳುವುದು ಈ-ಟೆಂಡರ್ ಮೂಲಕ. ಅಲ್ಲಿ ಕಂಪ್ಯೂಟರ್ ಅರ್ಜಿ ಹಾಕಿದ ಗುತ್ತಿಗೆದಾರರು ಹಿಂದೂ, ಮುಸ್ಲಿಂ, ಕ್ರೈಸ್ತರು ಎಂದು ನೋಡುವುದಿಲ್ಲ. ಯಾರು ಅರ್ಹರಾಗಿದ್ದಾರೋ ಅವರಿಗೆ ಕೆಲಸ ಸಿಗುತ್ತದೆ. ಹಾಗೆ ಗುತ್ತಿಗೆ ಪಡೆದುಕೊಂಡು ಬಂದವರನ್ನು ಇಲ್ಲಿನ ಶಾಸಕರು “ಏಯ್, ನೀನು ಮುಸ್ಲಿಂ, ನೀನು ಹೇಗೆ ಗುತ್ತಿಗೆ ಪಡೆದುಕೊಂಡು ಬಂದೆ. ನಿನಗೆ ನನ್ನ ಕ್ಷೇತ್ರದಲ್ಲಿ ಕೆಲಸ ಮಾಡಲು ಬಿಡುವುದಿಲ್ಲ” ಎಂದು ಹೇಳಲು ಸಾಧ್ಯವಿಲ್ಲ. ಯಾಕೆಂದರೆ ಇದು ಕಾನೂನಿಗೆ ವಿರೋಧ. ಇದು ಖಾದರ್ ಅವರಿಗೆ ಗೊತ್ತಿಲ್ಲ ಎಂದಲ್ಲ. ಇನ್ನು ಶಾಸಕರಾದವರು ಕೆಲವು ವಿಶೇಷ ಅನುದಾನಗಳನ್ನು ತಮ್ಮ ಸ್ವಪ್ರಯತ್ನದಿಂದ ಪಡೆದುಕೊಂಡು ಬರುತ್ತಾರೆ. ಅದನ್ನು ಅವರು ನಿರ್ಮಿತಿ ಕೇಂದ್ರ ಅಥವಾ ಸರಕಾರದ ಅಧೀನ ಸಂಸ್ಥೆಗಳಿಂದ ಮಾಡಿಸುತ್ತಾರೆ. ನಿರ್ಮಿತಿ ಕೇಂದ್ರ ಅಥವಾ ಸರಕಾರದ ಯಾವುದೇ ಸಂಸ್ಥೆ ಕೆಲಸ ತೆಗೆದುಕೊಂಡರೆ ಅದು ಯಾರಿಗಾದರೂ ಗುತ್ತಿಗೆ ಕೊಟ್ಟು ಕೆಲಸ ಮಾಡಿಸಬೇಕಾಗುತ್ತದೆ. ನಿರ್ಮಿತಿ ಕೇಂದ್ರದ ಒಳಗೆ ಮೇಸ್ತ್ರಿ, ಕಲ್ಲು ಹೊರುವವರು, ಸಿಮೆಂಟ್ ಕಲಸುವವರು ಕುರ್ಚಿ ಹಾಕಿ ಕುಳಿತಿರುವುದಿಲ್ಲ. ಆಗ ನಿರ್ಮಿತಿ ಕೇಂದ್ರದವರಿಗೆ ಕೆಲಸವನ್ನು ನಮ್ಮವರಿಗೆ ಕೊಡಿ ಎನ್ನುವ ಅಲಿಖಿತ ಸೂಚನೆ ಇರುತ್ತದೆ. ಕಾಂಗ್ರೆಸ್ ಇದ್ದಾಗ ಅವರ ಶಾಸಕರ ಹಿಂದೆ, ಮುಂದೆ ಸುತ್ತುವವರಿಗೆ ಕೆಲಸ ಸಿಗುತ್ತದೆ. ಈಗ ಬಿಜೆಪಿ ಇದ್ದ ಕಾರಣ ಬಿಜೆಪಿಯ ಶಾಸಕರು ತಮ್ಮ ಪಕ್ಷದವರಿಗೆ ಕೊಡಿಸಬಹುದು. ಕೆಲವರು ಕಾಂಗ್ರೆಸ್ ಶಾಸಕರು ಇದ್ದಾಗ ಕಾಂಗ್ರೆಸ್ ಶಾಸಕರ ಹಿಂದೆ, ಬಿಜೆಪಿ ಶಾಸಕರು ಇದ್ದಾಗ ರಾತ್ರೋರಾತ್ರಿ ಈ ಕಡೆ ಜಂಪ್ ಹೊಡೆದು ನಿಷ್ಟೆ ಬದಲಿಸುತ್ತಾರೆ. ಹಾಗೆ ಅಂತವರಿಗೆ ಯಾವ ಪಕ್ಷದ ಶಾಸಕರು ಇದ್ದರೂ ಕೆಲಸ ಸಿಗುತ್ತದೆ. ಇದು ಬಹಿರಂಗ ರಹಸ್ಯ. ಬಿಜೆಪಿ ಇರುವಾಗ ಪಕ್ಷಕ್ಕಾಗಿ ದುಡಿದವರಿಗೆ ಮಾತ್ರ ಕೊಡಬೇಕು ಎನ್ನುವ ಕಾರಣಕ್ಕೆ ಮುಖಂಡರಿಗೆ ಕೆಲಸ ಸಿಗುತ್ತದೆ. ನೇರವಾಗಿ ಮುಸ್ಲಿಮರಿಗೆ ಗುತ್ತಿಗೆ ಸಿಗುವ ಸಾಧ್ಯತೆ ಇರುವುದಿಲ್ಲ.
ಆದರೆ ಖಾದರ್ ಅವರು ಎಂತಹ ಜಾಣ ರಾಜಕಾರಣಿ ಎಂದರೆ ಸಿದ್ದುನಂತವರು ಏನೇನೋ ಬಾಯಿಗೆ ಬಂದಂತೆ ಮಾತನಾಡಿ ಹಾಳಾಗುತ್ತಿದ್ದರೆ ಇವರು ಮಾತ್ರ ಸೈಲೆಂಟ್ ಬಾಂಬ್ ಹಾಕಿ ಚೆಂದ ನೋಡಿಬಿಟ್ಟಿದ್ದಾರೆ. ಖಾದರ್ ಅವರಿಂದ ಬಿಜೆಪಿ ಫಸ್ಟ್ ಟೈಮ್ ಶಾಸಕರು ಕಲಿಯುವುದು ತುಂಬಾ ಇದೆ. ಇನ್ನು ಬಿಜೆಪಿಯ ದುರಾದೃಷ್ಟವೋ ಏನೋ ದಕ್ಷಿಣ ಕನ್ನಡದಲ್ಲಿ ಮುಸ್ಲಿಂ ಗುತ್ತಿಗೆದಾರರೇ ಹೆಚ್ಚು. ಅವರೇ ಅರ್ಜಿ ಹಾಕುವುದು, ಅವರಿಗೆ ಕೆಲಸ ಸಿಗುವುದು ಸಾಮಾನ್ಯ. ಇನ್ನು ಅವರಿಗೆ ಹಲವು ವರ್ಷಗಳಿಂದ ಈ ಫೀಲ್ಡಿನಲ್ಲಿ ಇದ್ದು ಯಾರನ್ನು ಚೆನ್ನಾಗಿ ಇಟ್ಟುಕೊಳ್ಳಬೇಕು, ಎಲ್ಲಿ ಕೆಮ್ಮಬಾರದು, ಎಲ್ಲಿ ಯಾರ ಹೆಗಲಿನ ಹಿಂದೆ ನಿಲ್ಲಬಾರದು ಎಂದು ಚೆನ್ನಾಗಿ ಗೊತ್ತಿದೆ. ಅವರು ಅದನ್ನು ಕಾಪಾಡಿಕೊಂಡು ಹೋಗುತ್ತಾರೆ. ಇನ್ನು ಕೆಲಸಗಳು ಮುಂಗಡ ಹಣ ಹಾಕಿ ಮಾಡುವಂತದ್ದು ಇರುವಾಗ ಮುಸ್ಲಿಂ ಗುತ್ತಿಗೆದಾರರು ಅದರಲ್ಲಿಯೇ ಪಳಗಿರುವುದರಿಂದ ಅವರು ಯಾವುದಕ್ಕೂ ರೆಡಿ. ಹೀಗೆ ಮುಸ್ಲಿಂ ಗುತ್ತಿಗೆದಾರರು ಹೇಗಾದರೂ ಮಾಡಿ ಈ ಸರಕಾರಿ ಕಾಮಗಾರಿಗಳಲ್ಲಿ ತಾವು ಆಳಕ್ಕೆ ಇಳಿದುಬಿಟ್ಟಿದ್ದಾರೆ. ಅವರನ್ನು ಹಿಡಿಯುವಂತೆಯೂ ಇಲ್ಲ, ಬಿಡುವಂತೆಯೂ ಇಲ್ಲ. ಇದೆಲ್ಲವನ್ನು ಅರಿತಿರುವ ಖಾದರ್ ಮಾತ್ರ ತಾವು ಕೇಸರಿ ಪಾಳಯದಲ್ಲಿ ಮೈಮನಸ್ಸು ಉಂಟು ಮಾಡಲು ಬ್ರಹ್ಮಾಸ್ತ್ರ ಬಿಟ್ಟಿದ್ದಾರೆ. ಅದರ ಸೃಷ್ಟಿಕರಣ ಕೊಡಲು ಬಿಜೆಪಿ ಶಾಸಕರು ಧಾವಿಸುವಂತಾಗಿದೆ. ರಾಜಕಾರಣ ಎನ್ನುವುದು ಕೇವಲ ತಾನು ಮಾಡುವ ಅಭಿವೃದ್ಧಿ ಕಾರ್ಯವನ್ನು ತೋರಿಸುವುದಕ್ಕಿಂತ ಎದುರಾಳಿ ಎಸೆಯುವ ಅಸ್ತ್ರವನ್ನು ಹುಡಿ ಮಾಡುವ ತಂತ್ರ ಕೂಡ ಪ್ರದರ್ಶಿಸಬೇಕಾಗಿದೆ ಎನ್ನುವುದು ಮಾರ್ಮಿಕ ಸತ್ಯ!
Leave A Reply