ಪ್ರವೀಣ್ ಹತ್ಯೆ ಬಿಜೆಪಿ ನಾಯಕರಿಗೂ, ಕಾರ್ಯಕರ್ತರಿಗೂ ಮುಂದಿನ ದಾರಿ ತೋರಿಸಿದೆ!!
ಯಾಕೆ ಈಗ ಭಾರತೀಯ ಜನತಾ ಪಾರ್ಟಿಯ ಕಾರ್ಯಕರ್ತರು ಪ್ರತಿಭಟನೆ ಮಾಡುತ್ತಿದ್ದಾರೆ? ಯಾಕೆಂದರೆ ಅವರದ್ದೇ ಪಕ್ಷದ ಒಬ್ಬ ನಿಷ್ಟಾವಂತ ಕಾರ್ಯಕರ್ತನ ಹತ್ಯೆಯಾಗಿದೆ. ಕಳೆದ ಬಾರಿ ಕಾಂಗ್ರೆಸ್ ರಾಜ್ಯದಲ್ಲಿ ಅಧಿಕಾರದಲ್ಲಿದ್ದಾಗಲೂ ಬಿಜೆಪಿ ಸಹಿತ ಸಂಘಪರಿವಾರದ ಕಾರ್ಯಕರ್ತರ ಹತ್ಯೆಗಳಾಗುತ್ತಿದ್ದವು. ಆಗಲೂ ಇದೇ ಕಾರ್ಯಕರ್ತರು ಹೋರಾಟ ಮಾಡುತ್ತಿದ್ದರು. ಈಗಲೂ ಹೋರಾಟ ಮಾಡುತ್ತಿದ್ದಾರೆ. ಆಗ ಇವರು ಪ್ರತಿಭಟಿಸಲು ನಿಂತಾಗ ಯಾರ ವಿರುದ್ಧ ಎಂದು ಕರೆಕ್ಟಾಗಿ ಗೊತ್ತಿತ್ತು. ಬಿಜೆಪಿ ಅಧಿಕಾರಕ್ಕೆ ಬಂದ ಬಳಿಕ ಹಿಂದೂಗಳ ಹತ್ಯೆಗಳಾಗುವಾಗ ಹಿಂದೂ ಕಾರ್ಯಕರ್ತರಲ್ಲಿ ಅಸಮಾಧಾನದ ಗೆರೆಗಳು ಮೂಡಲು ಶುರುವಾಯಿತು. ಯಾರಲ್ಲಿ ದು:ಖ ತೋಡಿಕೊಳ್ಳುವುದು. ಯಾರಲ್ಲಿ ನ್ಯಾಯ ಕೇಳುವುದು. ಹೋರಾಟಕ್ಕೆ ನಿಂತಾಗ ಯಾರ ವಿರುದ್ಧ ಎಂದು ಗೊಂದಲ ಆರಂಭದಲ್ಲಿ ಇತ್ತು. ಆ ಗೊಂದಲ ತುಂಬಾ ಸಮಯ ಗೊಂದಲವಾಗಿಯೇ ಉಳಿಯಲಿಲ್ಲ. ಹರ್ಷಾ ಕೊಲೆಯಾದಾಗ ಆ ಗೊಂದಲ ಇತ್ತು ನಿಜ. ಆದರೆ ಯಾವಾಗ ಸುಳ್ಯದ ಪ್ರವೀಣ್ ನೆಟ್ಟಾರು ಅವರ ಹತ್ಯೆಯಾದಾಗ ಆ ಗೊಂದಲ ಉಳಿದಿಲ್ಲ. ಯಾಕೆಂದರೆ ಈ ಎಲ್ಲಾ ಹತ್ಯೆಗಳನ್ನು ತಡೆಯಬಹುದಿತ್ತು, ಆದರೆ ತಡೆಯುವಲ್ಲಿ ರಾಜ್ಯ ಸರಕಾರ ವಿಫಲವಾಗಿದೆ ಎಂದು ಕಾರ್ಯಕರ್ತರಿಗೆ ಮನದಟ್ಟಾಗಿದೆ. ಅದಕ್ಕಾಗಿ ಅವರು ಇತಿಹಾಸದಲ್ಲಿ ಮೊದಲ ಬಾರಿ ಈ ಪ್ರಮಾಣದಲ್ಲಿ ತಮ್ಮದೇ ನಾಯಕರ ವಿರುದ್ಧ ಕೆಂಡಕಾರುತ್ತಿದ್ದಾರೆ. ಹಿಂದೆ ಹೀಗೆ ಹಿಂದೂ ಕಾರ್ಯಕರ್ತರ ಹತ್ಯೆಯಾದಾಗ ಜನರು ಬೀದಿಗೆ ಇಳಿಯುತ್ತಾ ಇದ್ದರೆ ಆಗ ಇದೇ ಬಿಜೆಪಿ ನಾಯಕರಿಗೆ ಖುಷಿಯಾಗುತ್ತಿತ್ತು. ಮತಗಳ ಧ್ರುವೀಕರಣವಾಗುತ್ತಿದೆ ಎನ್ನುವ ಸ್ಪಷ್ಟ ಸಂದೇಶ ಸಮಾಧಾನ ತರುತ್ತಿತ್ತು. ಆದರೆ ಈಗ ಪರಿಸ್ಥಿತಿ ರಿವಸ್ಸ್ ಆಗಿದೆ. ಬಿಜೆಪಿ ಅಧಿಕಾರದಲ್ಲಿದೆ. ಬಿಜೆಪಿಯದ್ದೇ ಕಾರ್ಯಕರ್ತರು ಹತ್ಯೆಗೊಳಗಾಗುತ್ತಿದ್ದಾರೆ.
ಆವತ್ತು ಕಾಂಗ್ರೆಸ್ ಸರಕಾರ ಇದ್ದಾಗ ಬೀದಿಗೆ ಇಳಿದವರೇ ಈಗ ಮತ್ತೆ ಬೀದಿಗೆ ಇಳಿದಿದ್ದಾರೆ. ಒಂದೆರಡು ಸಲ ಕಠಿಣ ಕ್ರಮ ಕೈಗೊಳ್ಳುತ್ತೇವೆ ಎಂದು ಹೇಳಿದರೆ ಜನ ನಂಬುತ್ತಾರೆ. ಆದರೆ ಅದೇ ಚರ್ವಿತಚರ್ವಣ ಹೇಳಿಕೆಗಳು ಹೊರಬಂದರೆ ನಂಬಲು ಸಾಧ್ಯವಿದೆಯಾ? ಕಠಿಣ ಕ್ರಮ ತೆಗೆದುಕೊಳ್ಳುತ್ತೇವೆ ಎಂದು ಸಿಎಂ, ಗೃಹಸಚಿವರು ಹೇಳುತ್ತಿದ್ದಾಗ ಅಲ್ಲಿಯೇ ಪಕ್ಕದ ಜೈಲಿನಲ್ಲಿ ಅದೇ ಹರ್ಷಾ ಕೊಲೆ ಆರೋಪಿಗಳು ಮಜಾ ಉಡಾಯಿಸಿದ ಸುದ್ದಿ ರಾಜ್ಯದ ಜನರಿಗೆ ಟಿವಿಯಲ್ಲಿ ಕಾಣುತ್ತಿದ್ದರೆ ಯಾವ ಬಿಜೆಪಿ ಅಥವಾ ಹಿಂದೂ ಕಾರ್ಯಕರ್ತ ತಾನೆ ಕಠಿಣ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎನ್ನುವ ಹೇಳಿಕೆಯನ್ನು ನಂಬುತ್ತಾನೆ. ಆದರೂ ಮೇಲೆ ನೋಡಿ ಉಗಿಯುವುದು ಬೇಡಾ ಎಂದು ಬಿಜೆಪಿ ಕಾರ್ಯಕರ್ತರು ಸುಮ್ಮನಿದ್ದರು. ಆದರೆ ಯಾವಾಗ ಪ್ರವೀಣ್ ನೆಟ್ಟಾರು ಎಂಬ ದಕ್ಷಿಣ ಕನ್ನಡ ಬಿಜೆಪಿ ಯುವಮೋರ್ಚಾ ಕಾರ್ಯಕಾರಿಣಿ ಸದಸ್ಯನನ್ನು ಆತನದ್ದೇ ಅಂಗಡಿಯ ಹೊರಗೆ ಅಟ್ಟಾಡಿಸಿ ಕೊಂದು ಹಾಕಿದರಲ್ಲ, ಆಗ ಇದೇ ಕಾರ್ಯಕರ್ತರ ಸಹನೆಯ ಕಟ್ಟೆ ಓಡೆಯಿತು. ಅಷ್ಟೂ ಕೋಪ ಹೋಗಿರುವುದು ಇದೇ ಆರಗ ಜ್ಞಾನೇಂದ್ರರ ಮೇಲೆ. ಇವರ ಸರಕಾರ ಶೂಟೌಟ್ ಅಂತೂ ಮಾಡುವುದಿಲ್ಲ. ಆದರೆ ಕನಿಷ್ಟ ಹಂತಕರ ಕೈಕಾಲು ಮುರಿದು ಮೂಲೆಗೆ ಹಾಕಬಹುದಲ್ಲ. ಅದು ಕೂಡ ಮಾಡದೇ ಜೈಲಿನೊಳಗೆ ಬಿರಿಯಾನಿ, ವಿಡಿಯೋ ಕಾಲ್ ಗೆ ಅವಕಾಶ ಕೊಡುತ್ತಾರಲ್ಲ, ಇನ್ನು ಇದರ ನ್ಯಾಯ ಕೇಳಲು ಹರ್ಷಾ ಸಹೋದರಿ ಅರಗ ಬಳಿ ಅವರು ಮಾತನಾಡಿದ ರೀತಿ ಕೂಡ ಜನರಿಗೆ ಬೇಸರ ತಂದಿದೆ. ಹೀಗೆ ಇರುವಾಗಲೇ ಪ್ರವೀಣ್ ಹತ್ಯೆಯಾಗಿದೆ.
ಕೊನೆಯದಾಗಿ ರಾಜೀನಾಮೆ ಪರ್ವ ಶುರುವಾಗಿದೆ. ಪಕ್ಷದ ವಿವಿಧ ಪದಾಧಿಕಾರಿಗಳಾಗಿದ್ದವರು ರಾಜೀನಾಮೆ ಕೊಡುತ್ತಿದ್ದಾರೆ. ಅವರ ಮನವೊಲಿಸಿ ಸರಿ ಮಾಡೋಣ ಎಂದು ಬಿಜೆಪಿ ನಾಯಕರು ಅಂದುಕೊಳ್ಳಬಹುದು. ನಮ್ಮ ಕಾರ್ಯಕರ್ತರು ನಮಗೆ ಬಿಟ್ಟು ಬೇರೆಯವರಿಗೆ ಎಲ್ಲಿ ವೋಟ್ ಹಾಕುತ್ತಾರೆ. ನಾಲ್ಕು ದಿನ ಕೋಪ ಇರುತ್ತದೆ.
ನಂತರ ಸರಿಯಾಗುತ್ತದೆ ಎನ್ನುವ ಮನಸ್ಥಿತಿಯಿಂದ ಬಿಜೆಪಿ ಹೊರಬರಬೇಕು. ಇಲ್ಲದಿದ್ದರೆ ಐದು ವರ್ಷ ರೆಸ್ಟ್ ಸಿಗುವ ಸಾಧ್ಯತೆ ಹೆಚ್ಚಾಗಲಿದೆ!
Leave A Reply