ಮೂರು ಘಟನೆಗಳು ಚುನಾವಣೆಯ ರೋಚಕತೆಗೆ ಮುನ್ನುಡಿ!!
ಮತದಾನಕ್ಕೆ ಹೆಚ್ಚು ಕಡಿಮೆ ಹದಿನೈದು ದಿನಗಳು ಇರುವ ಈ ಹಂತದಲ್ಲಿ ವಿವಿಧ ಪಕ್ಷಗಳ ಅಭ್ಯರ್ಥಿಗಳು, ಅವರ ಬೆಂಬಲಿಗರು ಏನೆಲ್ಲಾ ಗಿಮಿಕ್ಸ್ ಮಾಡಬಹುದೋ ಅದನ್ನು ಮಾಡುತ್ತಿದ್ದಾರೆ. ಆದರೆ ಚುನಾವಣೆ ಗೆಲ್ಲಲು ಯಾವುದೇ ವೈಯಕ್ತಿಕ ತೇಜೋವಧೆ ಮಾಡಿದರೆ ಮಾತ್ರ ದೇವರು ಒಪ್ಪಲಾರನು. ಕರಾವಳಿಯಲ್ಲಿ ಚುನಾವಣೆಗಳು ಸಿದ್ಧಾಂತವನ್ನು ಆಧರಿಸಿ ನಡೆಯುತ್ತವೆ ವಿನ: ಅನಗತ್ಯವಾದ ಟೀಕೆ, ಸುಳ್ಳು ಆರೋಪ ಅಥವಾ ಸಭ್ಯರಿಗೆ ಮುಜುಗರವಾಗುವಂತಹ ವಿಷಯ ಇಟ್ಟುಕೊಂಡು ಚುನಾವಣೆಗಳನ್ನು ನಡೆದಿಲ್ಲ. ಅದು ನಡೆಯಬಾರದು ಕೂಡ. ಆದರೆ ಈಗ ಕರಾವಳಿಯ ಮೂರು ಕ್ಷೇತ್ರಗಳಲ್ಲಿ ಈ ವಾರ ನಡೆದ ಘಟನೆಗಳು ಮಾತ್ರ ಮುಂದಿನ ದಿನಗಳಲ್ಲಿ ಇನ್ನಷ್ಟು ವಿವಾದ, ಆರೋಪ, ಪ್ರತ್ಯಾರೋಪಗಳಿಗೆ ಕಾರಣವಾಗುವ ಮುನ್ಸೂಚನೆ ನೀಡಿದೆ. ಮೊದಲನೇಯದಾಗಿ ಮೂಲ್ಕಿ- ಮೂಡಬಿದರೆ. ಈಗ ಮೂಲ್ಕಿ-ಮೂಡಬಿದಿರೆ ಕಾಂಗ್ರೆಸ್ ಅಭ್ಯರ್ಥಿ ಮಿಥುನ್ ರೈ ಒಂದು ಲೆಟರ್ ಹಿಡಿದು ಮೂಲ್ಕಿ – ಮೂಡಬಿದ್ರೆ ವ್ಯಾಪ್ತಿಯ ಸುಮಾರು ಸಾವಿರದಷ್ಟು ಏಕರೆ ಭೂಮಿಯನ್ನು ಸರಕಾರ ಸ್ವಾಧೀನಪಡಿಸಲು ತಮ್ಮ ಅಭ್ಯಂತರ ಇಲ್ಲ ಎಂದು ರಾಜ್ಯ ಸರಕಾರಕ್ಕೆ ಮೂಡಬಿದ್ರೆ ಶಾಸಕ ಉಮಾನಾಥ ಕೋಟ್ಯಾನ್ ಹಾಗೂ ಸಂಸದ ನಳಿನ್ ಕುಮಾರ್ ಕಟೀಲ್ ಲೆಟರ್ ನೀಡಿದ್ದಾರೆ ಎಂದು ಆರೋಪ ಮಾಡಿದ್ದಾರೆ. ಈ ಮೂಲಕ ಜನರಿಗೆ ತಮ್ಮ ಭೂಮಿ ಕಳೆದುಕೊಳ್ಳುವ ಬಗ್ಗೆ ಆತಂಕ ಸೃಷ್ಟಿಸಿದ್ದಾರೆ. ಇದಕ್ಕೆ ಸರಿಯಾಗಿ ಉಮಾನಾಥ್ ಕೋಟ್ಯಾನ್ ಅವರು ಕೂಡ ಸುದ್ದಿಗೋಷ್ಟಿ ನಡೆಸಿ ಇದು ಸುಳ್ಳು ಎಂದು ಸಾಬೀತುಪಡಿಸಲು ದೇವಸ್ಥಾನಕ್ಕೆ ಬರುವುದಾಗಿ ತಿಳಿಸಿದ್ದಾರೆ.
ಅದರೊಂದಿಗೆ ಮಿಥುನ್ ರೈ ಮೇಲೆ ಮಾನನಷ್ಟ ಮೊಕದ್ದಮೆ ದಾಖಲಿಸುವುದಾಗಿ ತಿಳಿಸಿದರು. ಈಗ ಮಿಥುನ್ ತೋರಿಸುತ್ತಿರುವ ದಾಖಲೆ ಎಂದು ಹೇಳುತ್ತಿರುವ ಕಾಗದ ಪತ್ರ ನೈಜವಾಗಿರುವಂತದ್ದು ಎಂದು ಪರಿಶೀಲಿಸುವಾಗ ಚುನಾವಣೆ ಮುಗಿದಿರುತ್ತದೆ. ಅದೇನಿದ್ದರೂ ನಂತರದ ಕಥೆ. ಇನ್ನು ಮಾನನಷ್ಟ ಮೊಕದ್ದಮೆ ಅದು ಇದು ಎಂದು ಎಷ್ಟೇ ಹೇಳಿದರೂ ಅದು ನ್ಯಾಯಾಲಯದ ಮೆಟ್ಟಲೇರಿ ವಾರದೊಳಗೆ ಅದರ ತೀರ್ಪು ಬರುವುದಿಲ್ಲ. ಹಾಗಾದರೆ ಈಗ ಉಳಿದಿರುವ ಕೆಲವು ದಿನಗಳೊಳಗೆ ಜನ ಏನನ್ನು ನಂಬಬೇಕು. ಒಂದು ವೇಳೆ ಅದು ಸುಳ್ಳು ಆರೋಪ ಎಂದು ಸಾಬೀತಾದರೆ ಅದಕ್ಕೆ ಹೊಣೆ ಹೊರಲು ಮಿಥುನ್ ರೈ ಸಿದ್ಧರಿದ್ದಾರಾ? ಯಾವುದಾದರೂ ಹೇಳಿಕೆ ನೀಡಿ ನಂತರ ಅದು ವಿವಾದಕ್ಕೆ ಈಡಾಗಿ ತಮಗೆ ಹಿನ್ನಡೆಯಾದರೆ ಆಗ ತಾನು ಹೇಳಿದ್ದು ತಪ್ಪಾಯಿತು, ಗೊತ್ತಿಲ್ಲದೇ ಹೇಳಿಬಿಟ್ಟೆ ಎಂದು ಸಮಜಾಯಿಷಿಕೆ ಕೊಡುವ ವ್ಯಕ್ತಿ ಮಿಥುನ್ ರೈಯವರು ಎಂದು ಇತ್ತೀಚೆಗೆ ಅವರು ಉಡುಪಿ ಮಠದ ಜಾಗದ ವಿಷಯದಿಂದ ಸಾಬೀತಾಗಿದೆ. ಆಗ ತಕ್ಷಣ ಅದು ಸುಳ್ಳೆಂದು ಪ್ರೂ ಆಯಿತು. ಮಿಥುನ್ ಬಣ್ಣ ಬಯಲಾಯಿತು. ಈಗ ಸಾವಿರ ಎಕರೆಯ ಜಾಗದ ವಿಷಯ ಹಿಡಿದುಕೊಂಡು ಬಂದಿದ್ದಾರೆ. ಆದ್ದರಿಂದ ಇವರನ್ನು ಜನ ಎಷ್ಟು ನಂಬುತ್ತಾರೋ, ಬಿಡುತ್ತಾರೋ ಎನ್ನುವುದು ಜನರಿಗೆ ಬಿಟ್ಟಿದ್ದು.
ಇನ್ನು ಎರಡನೇಯ ವಿಷಯ ಕಾಪು ವಿಧಾನಸಭಾ ಕ್ಷೇತ್ರದ್ದು. ಅಣ್ಣಾಮಲೈ ಅವರು ಕಾಪುವಿಗೆ ಭಾರತೀಯ ಜನತಾ ಪಾರ್ಟಿಯ ಅಭ್ಯರ್ಥಿಯ ಪರವಾಗಿ ಪ್ರಚಾರಕ್ಕೆಂದು ಬಂದ ಹೆಲಿಕಾಪ್ಟರ್ ನಲ್ಲಿ ಹಣ ತಂದಿದ್ರು ಎಂದು ಅಲ್ಲಿನ ಕಾಂಗ್ರೆಸ್ ಅಭ್ಯರ್ಥಿ ವಿನಯ ಕುಮಾರ್ ಸೊರಕೆ ಆರೋಪಿಸಿದ್ದಾರೆ. ಹೇಳಿ ಕೇಳಿ ಅಲ್ಲಿನ ಬಿಜೆಪಿ ಅಭ್ಯರ್ಥಿ ಸುರೇಶ್ ಶೆಟ್ಟಿ ಗುರ್ಮೆ ಹೆಸರಾಂತ ಉದ್ಯಮಿ. ಜನರಿಗಾಗಿ ಅವರು ಇಲ್ಲಿಯ ತನಕ ಮಾಡಿದ ದಾನಧರ್ಮದಿಂದ ಅವರು ಅಲ್ಲಿ ಪ್ರೀತಿ ಸಂಪಾದಿಸಿದ್ದಾರೆ ವಿನ: ಅವರಿಗೆ ಹಣ ಹಂಚಿ ಗೆಲ್ಲುವಂತಹ ಅಗತ್ಯ ಇಲ್ಲ. ಒಂದು ವೇಳೆ ಭಾರತೀಯ ಜನತಾ ಪಾರ್ಟಿಯವರು ಲಾಲಾಜಿ ಮೆಂಡನ್ ಅವರಿಗೆ ಟಿಕೆಟ್ ನೀಡಿದ್ದರೆ ಸೊರಕೆ ಅನಾಯಾಸವಾಗಿ ಗೆಲ್ಲುತ್ತಿದ್ದರು. ಅದು ಅವರಿಗೂ ಗೊತ್ತಿತ್ತು. ಆದರೆ ಹಾಲಾಡಿ ಸಡನ್ ನಿವೃತ್ತಿ ಉಡುಪಿ ಜಿಲ್ಲೆಯ ರಾಜಕೀಯ ಚಿತ್ರಣವನ್ನು ಬದಲಾಯಿಸಿರುವುದು ಸೊರಕೆ ಅವರಿಗೂ ಬಿಸಿತುಪ್ಪವಾಗಿರಬಹುದು. ಆದ್ದರಿಂದ ಅವರು ಅಣ್ಣಾಮಲೈ ಕಾಪುವಿಗೆ ಬಂದಾಗ ಸಹಜವಾಗಿ ಆತಂಕಕ್ಕೆ ಒಳಗಾಗಿದ್ದಾರೆ. ಒಂದು ವೇಳೆ ಅವರ ಬಳಿ ನೈಜ ಸಾಕ್ಷ್ಯ ಇದ್ದರೆ ಅವರು ಆ ಸಾಕ್ಷಿಯನ್ನು ಚುನಾವಣಾ ಆಯೋಗಕ್ಕೆ ಕೊಡಬಹುದಿತ್ತು. ಹಾಗೆ ನೋಡಿದರೆ ಧರ್ಮಸ್ಥಳಕ್ಕೆ ಬಂದ ಡಿಕೆಶಿವಕುಮಾರ್ ಅವರ ಹೆಲಿಕಾಪ್ಟರ್ ಪರಿಶೀಲಿಸಲು ಹೆಲಿಕಾಪ್ಟರ್ ಪೈಲೆಟ್ ಬಿಡಲಿಲ್ಲ ಎನ್ನುವ ಮಾತಿದೆ. ಹಾಗಾದರೆ ನಿಜವಾಗಿ ಡೌಟ್ ಬರಬೇಕಾಗಿರುವುದು ಯಾರ ಮೇಲೆ?
ಇನ್ನು ಪುತ್ತೂರು ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಆಶಾ ತಿಮ್ಮಪ್ಪ ಗೌಡ ಅವರು ಮಾತನಾಡುವಾಗ ಮಹತೋಬಾರ ಎಂದು ಹೇಳುವಾಗ ಒಂದಿಷ್ಟು ತೊದಲಿದ್ದಾರೆ. ಅದನ್ನೇ ವಿಷಯವಾಗಿಸಿದ ಅವರ ವಿರೋಧಿಗಳು ಅವರನ್ನು ತುಂಬಾ ಟ್ರೋಲ್ ಮಾಡುತ್ತಿದ್ದಾರೆ. ಕೆಲವೊಮ್ಮೆ ಒತ್ತಡದಲ್ಲಿ ಅಥವಾ ಗಡಿಬಿಡಿಯಲ್ಲಿ ಕೆಲವು ಶಬ್ದಗಳು ನಾಲಗೆಯ ತುದಿಯಲ್ಲಿ ಹೊಳುವಾಗ ಅಸ್ತವ್ಯಸ್ತ ಆಗುವುದು ಯಾರಿಗಾದರೂ ಸಹಜ. ಆದರೆ ಅದನ್ನೇ ವಿಷಯವಾಗಿಸಿ ಅವರ ವಿರುದ್ಧ ಬಾಣ ಬಿಡುವ ಅಗತ್ಯ ಏನಿದೆ? ಅಭ್ಯರ್ಥಿಗಳ ಹೋರಾಟ ನಡೆಯಬೇಕಾಗಿರುವುದು ಸತ್ಯ, ತತ್ವ, ಆದರ್ಶಗಳ ಮೇಲೆ. ಆಗ ಗೆದ್ದರೂ, ಸೋತರೂ ಒಂದು ತೃಪ್ತಿ ಇರುತ್ತದೆ. ಅದೇ ಅಡ್ಡರಸ್ತೆಯಲ್ಲಿ ಸೋತರೂ, ಗೆದ್ದರೂ ಅದರಿಂದ ಆತ್ಮವಂಚನೆ ಆಗುತ್ತದೆ. ನಮ್ಮ ಅಭ್ಯರ್ಥಿಗಳು ಯಾವುದೇ ಕೀಳುಮಟ್ಟದ ಟ್ರೋಲ್ ಮಾಡುವಾಗ ಒಂದಿಷ್ಟು ಯೋಚಿಸಿ. ಯಾಕೆಂದರೆ ಇವತ್ತು ಮಾಡಿದ ತಂತ್ರ ನಾಳೆ ನಿಮಗೆ ತಿರುಗುಬಾಣವಾಗಬಹುದು. ಒಟ್ಟಿನಲ್ಲಿ ಚುನಾವಣೆಯ ಕ್ಲೈಮ್ಯಾಕ್ಸ್ ನಲ್ಲಿ ಇನ್ನೇನೆನೂ ನೋಡಬೇಕು. ಆ ದೇವರೇ ಬಲ್ಲ!
Leave A Reply