ಯಡ್ಡಿ ಕೊಟ್ಟಿದ್ದು ಮುನ್ನೂರು ಕೋಟಿ, ಸಿದ್ದು ದೊಡ್ಡ ಸೊನ್ನೆ!!
ಮಂಗಳೂರಿಗೆ ಭಾರತೀಯ ಜನತಾ ಪಾರ್ಟಿ ಹಾಗೂ ಕಾಂಗ್ರೆಸ್ಸಿನಲ್ಲಿ ಯಾವುದು ಮೇಲು ಎನ್ನುವುದಕ್ಕೆ ಒಂದು ಉದಾಹರಣೆಯನ್ನು ಕೊಟ್ಟರೆ ಎಲ್ಲರಿಗೂ ಸರಿಯಾಗಿ ಅರ್ಥವಾಗುತ್ತಾದೆ ಎಂದು ಭಾವಿಸುತ್ತೇನೆ. ಒಂದು ಕ್ಷೇತ್ರ ಅಭಿವೃದ್ಧಿಯಾಗಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ಅನುದಾನ. ಆ ಅನುದಾನವನ್ನು ಸ್ಥಳೀಯ ಸಂಸ್ಥೆಗಳು ಭರಿಸಲು ಸಾಧ್ಯವಾಗದಿದ್ದಾಗ ರಾಜ್ಯ ಸರಕಾರ ಅಥವಾ ಕೇಂದ್ರ ಸರಕಾರ ಮಧ್ಯಪ್ರವೇಶಿಸಿ ಸೂಕ್ತ ಹಣಕಾಸಿನ ವ್ಯವಸ್ಥೆ ಮಾಡಬೇಕಾಗುತ್ತದೆ. ಅದನ್ನು ಮಾಡುತ್ತಿದ್ದವರು ಯಡ್ಡಿ ಮಾತ್ರ. ಅವರು ರಾಜ್ಯದಲ್ಲಿ ಮುಖ್ಯಮಂತ್ರಿಯಾಗಿದ್ದಾಗ ಪ್ರತಿ ವರ್ಷ ಮಂಗಳೂರು ಮಹಾನಗರ ಪಾಲಿಕೆಗೆ ತಲಾ ನೂರು ಕೋಟಿ ರೂಪಾಯಿ ಅನುದಾನ ನೀಡಿದ್ದಾರೆ. ಒಟ್ಟು ಮೂರು ನೂರು ಕೋಟಿ ಅನುದಾನದ ಮೂಲಕವೇ ಪಾಲಿಕೆ ವ್ಯಾಪ್ತಿಯ ಬಹುತೇಕ ರಸ್ತೆಗಳು ಆ ದಿನಗಳಲ್ಲಿ ಕಾಂಕ್ರೀಟಿಕರಣಗೊಂಡಿದ್ದವು. ಹೀಗೆ ಪ್ರತಿ ಪಾಲಿಕೆಯ ವ್ಯಾಪ್ತಿಯನ್ನು ಕೂಡ ಅಭಿವೃದ್ಧಿ ಮಾಡಬೇಕೆಂಬ ದೂರದೃಷ್ಟಿ ಯಡ್ಡಿಗೆ ಇತ್ತು. ನಂತರ ಸಿದ್ದು ಸರಕಾರ ಬಂತು. ಸಿದ್ದುವಿನ ಬಳಿ ಬಹುಮತದ ಸರಕಾರದ ಇತ್ತು. ಐದು ವರ್ಷ ಯಾವುದೇ ಅಸ್ಥಿರತೆ, ಪ್ರಕೃತಿ ವಿಕೋಪ ಏನೂ ಇಲ್ಲದೆ ಸಿದ್ದು ಸರಕಾರ ರಚಿಸಿದರು. ಆದರೆ ಐದು ವರ್ಷದಲ್ಲಿ ನಮ್ಮ ಪಾಲಿಕೆಗಾಗಿ ಒಂದು ಚಿಕ್ಕಾಸನ್ನು ಕೂಡ ವಿಶೇಷ ಅನುದಾನವಾಗಿ ಬಿಡುಗಡೆ ಮಾಡಿಲ್ಲ. ಒಂದು ವೇಳೆ ಯಡ್ಡಿ ಹಾಕಿಕೊಟ್ಟಿದ್ದ ಮೇಲ್ಪಂಕ್ತಿಯನ್ನೇ ಸಿದ್ದು ಮುಂದುವರೆಸಿದ್ದರೆ ಮಂಗಳೂರು ಇನ್ನಷ್ಟು ಅಭಿವೃದ್ಧಿಯಾಗುತ್ತಿತ್ತು. ಆದರೆ ಸಿದ್ದುವಿಗೆ ಅಂತಹ ಇಚ್ಚಾಶಕ್ತಿ ಎಲ್ಲಿತ್ತು? ಅವರದ್ದೇನಿದ್ದರೂ ಶಾದಿಭಾಗ್ಯ, ಕೆಲವು ಸಮುದಾಯದ ಮಕ್ಕಳಿಗೆ ಶಾಲಾ ಟ್ರಿಪ್ ಹೀಗೆ ನಡೆಯುತ್ತಿತ್ತೇ ವಿನ: ಅಭಿವೃದ್ಧಿಯ ವಿಷಯವೇ ಇರಲಿಲ್ಲ. ಯಾವುದೇ ಒಂದು ಪಕ್ಷ ಅಧಿಕಾರಕ್ಕೆ ಬಂದಾಗ ಸಿಎಂ, ಸಚಿವರು ಮತ್ತು ಶಾಸಕರಿಗೆ ಒಂದು ದೂರದೃಷ್ಟಿ ಬೇಕು, ಸಿದ್ದು ಸಿಎಂ ಆಗಿದ್ದಾಗ ದಕ್ಷಿಣ ಕನ್ನಡದಲ್ಲಿ ಎಂಟರಲ್ಲಿ ಏಳು ಜನ ಕಾಂಗ್ರೆಸ್ ಶಾಸಕರಿದ್ದರು. ಮಂಗಳೂರು ನಗರ ದಕ್ಷಿಣ ಮತ್ತು ಉತ್ತರ ಕೂಡ ಇದಕ್ಕೆ ಹೊರತಾಗಿರಲಿಲ್ಲ. ಆದರೆ ಐದು ಪೈಸೆ ಲಾಭ ಕ್ಷೇತ್ರಗಳಿಗೆ ಆಗಲಿಲ್ಲ.
ಇನ್ನು ಎರಡನೇಯದಾಗಿ ಏಶಿಯನ್ ಬ್ಯಾಂಕ್ ಆಫ್ ಡೆವಲಪಮೆಂಟ್ (ಎಡಿಬಿ) ಮಂಗಳೂರಿನಲ್ಲಿ 24*7 ಕುಡಿಯುವ ನೀರು ಮತ್ತು ಒಳಚರಂಡಿ ಯೋಜನೆಗೆ 300 ಕೋಟಿ ರೂಪಾಯಿಗಳಿಗೂ ಮಿಕ್ಕಿ ಹಣವನ್ನು ನೀಡಿತ್ತು. ಅದನ್ನು ಸರಿಯಾಗಿ ವಿನಿಯೋಗಿಸಿದರೆ ಮಂಗಳೂರಿನ ಕುಡಿಯುವ ನೀರಿನ ಸಮಸ್ಯೆ ಪರಿಹಾರವಾಗಿ ಈಗ ದಶಕವಾಗುತ್ತಿತ್ತು. ಆಗ ಈ ಯೋಜನೆಯ ಜವಾಬ್ದಾರಿ ತೆಗೆದುಕೊಂಡದ್ದು ಕುಂಡ್ಸೆಪ್ಪು. ಅದರ ಯೋಜನಾ ನಿರ್ದೇಶಕರಾಗಿ ಇದ್ದದ್ದು ಈಗಿನ ಮಂಗಳೂರು ನಗರ ದಕ್ಷಿಣದ ಕಾಂಗ್ರೆಸ್ ಅಭ್ಯರ್ಥಿ. ಆ ಯೋಜನೆ ಯಾವ ರೀತಿಯಲ್ಲಿ ವಿಫಲವಾಯಿತು ಎಂದರೆ ಅರವತ್ತು ವಾರ್ಡುಗಳಿಗೆ ವಾರದ ಏಳು ದಿನವೂ ನಿತ್ಯ 24 ನೀರು ಬರುವುದು ಬಿಡಿ, ಏಳೆಂಟು ವಾರ್ಡುಗಳಿಗೆ ಎರಡು ದಿನಗಳಿಗೊಮ್ಮೆ ನಾಲ್ಕು ಗಂಟೆಯಾದರೂ ನೀರು ಬಂದರೂ ಅದೇ ಹೆಚ್ಚು ಎನ್ನುವ ಪರಿಸ್ಥಿತಿ ಇದೆ. ಅಧಿಕಾರಿಯಾಗಿ ಒಬ್ಬ ವ್ಯಕ್ತಿ ವಿಫಲನಾದರೆ ನಂತರ ಅವರೇ ಜನಪ್ರತಿನಿಧಿಯಾಗಿ ಆಯ್ಕೆಯಾದರೆ ಏನು ನಿರೀಕ್ಷೆ ಮಾಡಲು ಸಾಧ್ಯ? ಕೇಂದ್ರದಲ್ಲಿ ಬಿಜೆಪಿ ಸರಕಾರ ಯಾವಾಗ ಇದ್ದರೂ ಪ್ರತಿಬಾರಿ ಮಂಗಳೂರಿಗೆ ಅಲ್ಲಿಂದ ಅನುದಾನಗಳು ಬಂದಿವೆ. ಅನಂತಕುಮಾರ್ ಅವರು ನಾಗರಿಕ ವಿಮಾನಯಾನ ಸಚಿವರಾಗಿದ್ದಾಗ ಕೆಪಿಟಿಯಿಂದ ಮಂಗಳೂರು ವಿಮಾನ ನಿಲ್ದಾಣಕ್ಕೆ ಹೋಗುವ ರಸ್ತೆ ಕಾಂಕ್ರೀಟಿಕರಣಗೊಂಡು ಅಭಿವೃದ್ಧಿಗೊಂಡಿತ್ತು. ಈಗಲೂ ಬಿಜೆಪಿ ಸರಕಾರದ ಅನುದಾನದಿಂದ ಗುಜ್ಜರಕೆರೆ, ರಾಜಾಜಿ ಪಾರ್ಕ್, ಕದ್ರಿ ಪಾರ್ಕ್ ಗಳು ಅಂತರಾಷ್ಟ್ರೀಯ ಮಟ್ಟದ ಗುಣಮಟ್ಟದಲ್ಲಿ ನಿರ್ಮಾಣವಾಗಿದೆ. ಇದನ್ನು ಉಳಿಸಿ ಬೆಳೆಸುವುದು ನಮ್ಮ ಜವಾಬ್ದಾರಿ. ಆದರೆ ಅಭಿವೃದ್ಧಿ ಪರ ಚಿಂತನೆ ಮತ್ತು ಸೂಕ್ತ ಅನುದಾನದಿಂದ ಇದೆಲ್ಲ ಸಾಧ್ಯವಾಗಿದೆ.
ಇನ್ನು ಮಂಗಳೂರಿನಲ್ಲಿ ಬಹುತೇಕ ಕಡೆಗಳಲ್ಲಿ ರಸ್ತೆಗಳು ಕಾಂಕ್ರೀಟಿಕರಣಗೊಂಡು ಅಭಿವೃದ್ಧಿಯಾಗಿದೆ. ಈ ಬಾರಿ ರಾಜಕಾಲುವೆಗಳಿಗೆ ಬೃಹತ್ ತಡೆಗೋಡೆಗಳ ನಿರ್ಮಾಣವಾಗಿ ಕೃತಕ ನೆರೆಯ ಸಮಸ್ಯೆ ಇರುವುದಿಲ್ಲ. ಇನ್ನು ಜಲಸಿರಿ ಯೋಜನೆ ಸಮರ್ಪಕವಾಗಿ ಅನುಷ್ಟಾನವಾದರೆ ಕುಡಿಯುವ ನೀರಿನ ಸಮಸ್ಯೆ ಕೂಡ ಪರಿಹಾರವಾಗಲಿದೆ. ಕೇಂದ್ರದ ಜಲಜೀವನ್ ಮಿಶನ್ ಕೂಡ ಯಶಸ್ವಿಯಾಗಿ ಅನುಷ್ಟಾನಗೊಳ್ಳುತ್ತಿದೆ. ಮೋದಿಯವರ ಸ್ಮಾರ್ಟ್ ಸಿಟಿ ಅನುದಾನದಲ್ಲಿ ಮಂಗಳೂರು ಅಭಿವೃದ್ಧಿಯ ಪಥದಲ್ಲಿ ಸಾಗುತ್ತಿದೆ. ಇದೆಲ್ಲವೂ ಸಾಧ್ಯವಾಗಿರುವುದು ಯಾವ ಸರಕಾರದಿಂದ ಎನ್ನುವುದು ಜನರಿಗೆ ಗೊತ್ತಿದೆ. ಆದ್ದರಿಂದ ಯಾವಾಗಲೂ ಜನರು ಸೂಕ್ತ ಅಭ್ಯರ್ಥಿಯನ್ನು ಆಯ್ಕೆ ಮಾಡುವುದರಿಂದ ಕ್ಷೇತ್ರ ಕೂಡ ಅಭಿವೃದ್ಧಿಯಾಗುತ್ತದೆ. ರಾಜ್ಯದಲ್ಲಿ ಅವರದ್ದೇ ಸರಕಾರ ಬಂದರೆ ಕ್ಷೇತ್ರದ ಅಭಿವೃದ್ಧಿಗೂ ಅನುದಾನ ಬರುತ್ತೆ. ಆದರೆ ಬರುವ ಸರಕಾರ ಯಾವುದು ಎನ್ನುವುದು ಕೂಡ ಮುಖ್ಯ, ಈಗ ಹಿಂದಿನ ಉದಾಹರಣೆಗಳನ್ನು ನೋಡಿದರೆ ನಿಮಗೆ ಯಾರು ಮೇಲು ಎಂದು ಗೊತ್ತಾಗುತ್ತದೆ!
Leave A Reply