ಮೂಡಾಕ್ಕೆ ತೋರಿಸಿದ ಉತ್ಸಾಹ ಪಾಲಿಕೆಗಿಲ್ಲ!
ಯಾವುದು ಹೆಚ್ಚು ಅಗತ್ಯವಿದೆಯೋ ಅದನ್ನು ಮೊದಲು ಮಾಡುವ ಮೂಲಕ ಮಂಗಳೂರಿನಲ್ಲಿ ಮಳೆಗಾಲವನ್ನು ಯಶಸ್ವಿಯಾಗಿ ನಿರ್ವಹಿಸಬೇಕೆಂದು ಕರ್ನಾಟಕದ ನೂತನ ಸರಕಾರಕ್ಕೆ ಮೊದಲ ಮನವಿ. ಯಾಕೆಂದರೆ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಪೂರ್ಣಾವಧಿ ಕಮೀಷನರ್ ಪ್ರಸ್ತುತ ಇಲ್ಲ. ಇದ್ದ ಕಮೀಷನರ್ ಚೆನ್ನಬಸಪ್ಪನವರನ್ನು ಗೃಹಸಚಿವರು ತಮ್ಮ ಆಪ್ತ ಕಾರ್ಯದರ್ಶಿಯನ್ನಾಗಿ ಕರೆಯಿಸಿಕೊಂಡಿದ್ದಾರೆ. ಪಾಲಿಕೆಯ ಕಮೀಷನರ್ ಸ್ಥಾನಕ್ಕೆ ರಾಜ್ಯ ಸರಕಾರ ಯಾರನ್ನೂ ಕೂಡ ನೇಮಿಸಿಲ್ಲ. ಹಾಗಂತ ಮಂಗಳೂರು ನಗರಾಭಿವೃದ್ಧಿ ಪ್ರಾಧಿಕಾರದಲ್ಲಿ ಕಮೀಷನರ್ ಸ್ಥಾನ ಏನೂ ಖಾಲಿ ಇರಲಿಲ್ಲ. ಆದರೆ ಹಾಲಿ ಕಮೀಷನರ್ ಅವರನ್ನು ಅಲ್ಲಿಂದ ವರ್ಗಾವಣೆ ಮಾಡಿ ತಕ್ಷಣ ಅವರ ಸ್ಥಾನಕ್ಕೆ ಬೇರೆಯವರನ್ನು ತಂದು ನೇಮಿಸಲಾಗಿದೆ. ಆದರೆ ಅದೇ ಊರಿನಲ್ಲಿ ಇನ್ನೊಂದು ಪ್ರಮುಖ ಸ್ಥಾನವಾಗಿರುವ ಪಾಲಿಕೆಯ ಕಮೀಷನರ್ ಆಗಿ ಯಾರನ್ನು ಕೂಡ ನೇಮಿಸುವ ಗೋಜಿಗೆ ಸರಕಾರ ಹೋಗಿಲ್ಲ. ಇದರಿಂದ ಅಗುವ ಸಮಸ್ಯೆ ಏನು?
ಕಾಮ್ ಔರ್ ಬಹುತ್ ಬಾಕಿ ಹೇ!
ಮಂಗಳೂರಿನಲ್ಲಿ ಈ ಬಾರಿ ದೊಡ್ಡ ಮಳೆ ಎನ್ನುವುದು ಇನ್ನು ಬರದೇ ಇರುವುದರಿಂದ ಮಂಗಳೂರಿಗರು ಬಚಾವ್. ಒಂದು ವೇಳೆ ಏನಾದರೂ ಪ್ರಕೃತಿ ವಿಕೋಪ ಸಂಭವಿಸಿದರೆ ಆಗ ಪಾಲಿಕೆಯಲ್ಲಿ ಕಮೀಷನರ್ ಅವರೇ ಇಲ್ಲದೇ ಇದ್ದರೆ ಏನಾಗುತ್ತದೆ? ಮದುವೆಗೆ ಗಂಡೇ ಇಲ್ಲದ ಪರಿಸ್ಥಿತಿ ಆಗುತ್ತದೆ. ಇದು ಸರಕಾರ ನಡೆಸುವವರಿಗೆ ಗೊತ್ತಿರಬೇಕು. ಇಷ್ಟೇ ಅಲ್ಲ, ಪಾಲಿಕೆಯಲ್ಲಿ ಮೂರು ಜನ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಇರಲೇಬೇಕು. ಆದರೆ ಸದ್ಯ ಮೂರರಲ್ಲಿ ಎರಡು ಸ್ಥಾನ ಖಾಲಿ ಇದೆ. ಮೂವರ ಕೆಲಸವನ್ನು ಒಬ್ಬರೇ ಮಾಡಬೇಕಾಗಿದೆ. ಇಷ್ಟೇ ಅಲ್ಲ, ಈ ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಮೇಲೆ ಒಬ್ಬರು ಸೂಪರಿಟೆಂಡೆಂಟ್ ಇಂಜಿನಿಯರ್ ಇರುತ್ತಾರೆ. ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಆ ಸ್ಥಾನ ಕೂಡ ಖಾಲಿ ಇದೆ. ಈಗ ಇರುವ ಏಕೈಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರೇ ಉಳಿದ ಇಬ್ಬರು ಎಕ್ಸಿಕ್ಯೂಟಿವ್ ಇಂಜಿನಿಯರ್ಸ್ ಕೆಲಸವನ್ನು ಮಾಡಿ ನಂತರ ಸೂಪರಿಟೆಂಡೆಂಟ್ ಇಂಜಿನಿಯರ್ ಅವರ ಕೆಲಸವನ್ನು ಕೂಡ ಮಾಡಬೇಕಿದೆ. ಇಷ್ಟಕ್ಕೆ ಮುಗಿತಾ? ಇಲ್ಲ, ಕಾಮ್ ಔರ್ ಬಾಕಿ ಹೇ.
ಈ ನಾಲ್ಕು ಮಂದಿಯ ಕೆಲಸವನ್ನು ಮಾಡಿದ್ರೆ ಮುಗಿತಾ? ಇನ್ನೊಂದು ದೊಡ್ಡ ಜವಾಬ್ದಾರಿಯನ್ನು ಕೂಡ ಈಗ ಇರುವ ಏಕೈಕ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರೇ ಮುಗಿಸಬೇಕಿದೆ. ಮಂಗಳೂರಿನಲ್ಲಿ ಜಲಸಿರಿ ಯೋಜನೆ ಎನ್ನುವ ಕೇಂದ್ರ ಸರಕಾರದ ಮಹತ್ವಾಕಾಂಕ್ಷಿ ಯೋಜನೆ ಅನುಷ್ಠಾನಗೊಳ್ಳುತ್ತಿದೆ. ಅದನ್ನು ನೋಡಿಕೊಳ್ಳಲು ಓರ್ವ ಪ್ರತ್ಯೇಕ ಅಧಿಕಾರಿ ಇರಬೇಕು. ಆದರೆ ನಮ್ಮಲ್ಲಿ ಆ ಸ್ಥಾನ ಕೂಡ ಖಾಲಿ ಇದೆ. ಈಗ ಏನಾಗಿದೆ ಎಂದರೆ ಒಟ್ಟು ಐದು ಜನರ ಕೆಲಸವನ್ನು ಒಬ್ಬ ಇಂಜಿನಿಯರ್ ಅವರೇ ಮಾಡುವ ಪರಿಸ್ಥಿತಿ ಇದೆ. ಪಾಲಿಕೆಯಲ್ಲಿ “ಸರಿಯಾಗಿ ಕೆಲಸ ಮಾಡುವವರಿಗೆ” ಒಂದು ಸ್ಥಾನದ ಕೆಲಸವನ್ನು ಮಾಡುವುದೇ ದೊಡ್ಡ ಸವಾಲು. ಹಾಗಿರುವಾಗ ಐದು ಜನರ ಕೆಲಸವನ್ನು ಒಬ್ಬರು ಮಾಡುವುದೆಂದರೆ ಅದಕ್ಕಿಂತ ದೊಡ್ಡ ತಲೆಬಿಸಿ ಬೇರೆ ಇಲ್ಲ. ಯಾಕೆಂದರೆ ಎಕ್ಸಿಕ್ಯೂಟಿವ್ ಇಂಜಿನಿಯರ್ ಅವರಿಗೆ ತಮ್ಮದೇ ಸಾಕಷ್ಟು ಕೆಲಸ ಇರುತ್ತದೆ. ಅದನ್ನು ನೋಡುವುದರ ಜೊತೆಗೆ ಅವರು ಇನ್ನಿಬ್ಬರು ಎಕ್ಸಿಕ್ಯೂಟಿವ್ ಇಂಜಿನಿಯರ್ಸ್, ಸೂಪರಿಟೆಂಡೆಂಟ್ ಇಂಜಿನಿಯರ್, ಜಲಸಿರಿ ಆಫೀಸರ್ ಹೀಗೆ ಎಲ್ಲರ ಕೆಲಸವನ್ನು ಮಾಡಬೇಕಾಗಿರುವುದರಿಂದ ಅವರ ಇಡೀ ದಿನ ಕೇವಲ ಫೈಲ್ ಗಳಿಗೆ ಸಹಿ ಹಾಕುವುದರಲ್ಲಿ ಮುಗಿದುಹೋಗಲಿದೆ. ಹೀಗಿರುವಾಗ ಅವರು ಕಾಮಗಾರಿಗಳನ್ನು ಪರಿಶೀಲಿಸುವುದು ಇರಲಿ, ಕೇವಲ ಫೈಲ್ ಗಳಿಗೆ ಸಹಿ ಹಾಕುವುದರಲ್ಲಿಯೇ ಬ್ಯುಸಿ.
ಮೂಡಾಕ್ಕೆ ತೋರಿಸಿದ ಉತ್ಸಾಹ ಪಾಲಿಕೆಗಿಲ್ಲ!
ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವರು ಮುಂದಿನ ಬಾರಿ ಪಾಲಿಕೆಗೆ ಬಂದಾಗ ಈ ಸಮಸ್ಯೆ ಪರಿಹಾರ ಕಾಣಲಿ ಎನ್ನುವುದು ಎಲ್ಲರ ನಿರೀಕ್ಷೆ. ಈಗಾಗಲೇ ಸರಕಾರದ ಮಟ್ಟದಲ್ಲಿ ಅನೇಕ ಪ್ರಮುಖ ಸ್ಥಾನಗಳು ಖಾಲಿ ಬಿದ್ದಿವೆ. ಅವುಗಳಿಗೆ ಸೂಕ್ತ ಅಧಿಕಾರಿಗಳನ್ನು ನೇಮಿಸಬೇಕು. ಇಲ್ಲದಿದ್ದರೆ ಕೆಲಸಕಾರ್ಯಗಳು ಹಳ್ಳ ಹಿಡಿಯುತ್ತವೆ. ಸಚಿವರು ತಮಗೆ ಅನುಕೂಲವಾಗಿರುವ ಅಧಿಕಾರಿಗಳನ್ನು ಆಪ್ತ ಕಾರ್ಯದರ್ಶಿಯನ್ನಾಗಿ ತೆಗೆದುಕೊಳ್ಳುವಾಗ ಖಾಲಿಯಾಗುವ ಸ್ಥಾನಕ್ಕೆ ಅಧಿಕಾರಿಗಳನ್ನು ಗೊತ್ತು ಮಾಡಬೇಕು. ಅವರು ತಮ್ಮದು ಮಾತ್ರ ನೋಡಿಕೊಂಡರೆ ರಾಜ್ಯದ ಪ್ರಮುಖ ಸ್ಥಾನಗಳು ಖಾಲಿಯಾಗಿ ಜನ ಸಮಸ್ಯೆ ಅನುಭವಿಸಬೇಕಾಗುತ್ತದೆ. ಹಾಗೆ ಆಗದಿರಲಿ, ಸರಕಾರ ಮೂಡಾ ಕಮೀಷನರ್ ನೇಮಕದಲ್ಲಿ ತೋರಿಸಿದಷ್ಟೇ ಉತ್ಸಾಹ ಪಾಲಿಕೆ ಕಮೀಷನರ್ ನೇಮಕದಲ್ಲಿಯೂ ತೋರಿಸಲಿ ಎನ್ನುವುದು ಅಪೇಕ್ಷೆ.
Leave A Reply