ಕುಮಾರಣ್ಣ ಫುಲ್ ಆಕ್ಟಿವ್!
ಯಾರಾದರೂ ಅಧಿಕಾರಿಗಳು ನಿಮ್ಮ ಬಳಿ ಕೆಲಸ ಮಾಡಿಸಲು ಲಂಚ ಕೇಳಿದರೆ ನನಗೆ ದೂರು ಕೊಡಿ ಎಂದು ಉಪಮುಖ್ಯಮಂತ್ರಿ ಡಿಕೆಶಿವಕುಮಾರ್ ಅವರು ಬಹಿರಂಗವಾಗಿ ಕರೆ ಕೊಟ್ಟಿದ್ದರು. ಇದರಿಂದ ಅವರ ಮೇಲೆ ಜನರಿಗೆ ನಂಬಿಕೆ ಬಂದಿತ್ತು. ಆದರೆ ತಮ್ಮ ಸರಕಾರದ ಮಂತ್ರಿಗಳೇ ಲಂಚ ಕೇಳುತ್ತಿದ್ದರೆ ಯಾರ ಬಳಿ ದೂರು ಕೊಡಬೇಕು ಎಂದು ಡಿಕೆಶಿ ಅವರು ಹೇಳಿರಲಿಲ್ಲ. ಆದ್ದರಿಂದ ಪಾಪ ಅಧಿಕಾರಿಗಳು ನೇರವಾಗಿ ರಾಜ್ಯಪಾಲರ ಬಳಿ ದೂರು ಕೊಟ್ಟಿದ್ದಾರೆ ಎಂದು ಕಾಣುತ್ತದೆ. ಮಂಡ್ಯ ಜಿಲ್ಲೆಯ ಮಂಡ್ಯ, ಮಳವಳ್ಳಿ, ಕೃಷ್ಣರಾಜಪೇಟೆ, ಪಾಂಡವಪುರ, ನಾಗಮಂಗಲ, ಶ್ರೀರಂಗಪಟ್ಟಣ ಮತ್ತು ಮದ್ದೂರು ತಾಲ್ಲೂಕು ಸಹಾಯಕ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ಮಾನ್ಯ ರಾಜ್ಯಪಾಲರಿಗೆ ಲಿಖಿತ ದೂರು ನೀಡಿದ್ದಾರೆ. ಮಾನ್ಯ ಕೃಷಿ ಸಚಿವರಾದ ಚೆಲುವರಾಯ ಸ್ವಾಮಿಯವರು ತಮ್ಮ ಮಂಡ್ಯ ಜಿಲ್ಲೆಯ ಜಂಟಿ ಕೃಷಿ ನಿರ್ದೇಶಕರ ಮೂಲಕ ಲಂಚಕ್ಕಾಗಿ ಒತ್ತಡ ಹಾಕುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಲಾಗಿದೆ. ದೂರಿನ ಅರ್ಜಿಯಲ್ಲಿ ಅಧಿಕಾರಿಗಳು ತಮ್ಮಿಂದ ಆರರಿಂದ ಎಂಟು ಲಕ್ಷ ರೂಪಾಯಿಗಳನ್ನು ಕೇಳುತ್ತಿರುವುದಾಗಿ ತಿಳಿಸಿದ್ದಾರೆ. ಲಂಚ ಕೇಳುವ ಇಂತಹ ಅನಿಷ್ಟ ಪದ್ಧತಿಗೆ ಕಡಿವಾಣ ಹಾಕುವ ಸಂಬಂಧ ಕ್ರಮ ವಹಿಸದಿದ್ದಲ್ಲಿ ಅಧಿಕಾರಿಗಳು ಕುಟುಂಬ ಸದಸ್ಯರ ಜೊತೆಗೆ ವಿಷ ಕುಡಿಯುವುದಾಗಿ ತಿಳಿಸಿರುವುದರಿಂದ ತಮಗೆ ಬಂದ ದೂರಿನ ಅರ್ಜಿಯನ್ನು ನಿಯಮಾನುಸಾರ ಪರಿಶೀಲಿಸಿ, ಸೂಕ್ತ ಕ್ರಮ ವಹಿಸುವಂತೆ ರಾಜ್ಯಪಾಲರ ಕಾರ್ಯದರ್ಶಿಯವರು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಯವರಿಗೆ ಪತ್ರ ಬರೆದಿದ್ದಾರೆ. ಈ ಪತ್ರ ಈಗ ಬಹಿರಂಗಗೊಂಡಿದೆ. ಇಂತಹ ನಾಲ್ಕು ಪತ್ರಗಳು ಬಹಿರಂಗಗೊಂಡರೆ ಮುಂದಿನ ದಿನಗಳಲ್ಲಿ ಲೋಕಸಭಾ ಚುನಾವಣೆಯಲ್ಲಿ ರಾಜ್ಯದಲ್ಲಿ ಇಪ್ಪತ್ತು ಸ್ಥಾನ ಗೆಲ್ಲುವ ಗುರಿ ಇಟ್ಟುಕೊಂಡಿರುವ ಕಾಂಗ್ರೆಸ್ ಮಕಾಡೆ ಮಲಗಿಕೊಳ್ಳಲಿದೆ.
ಎದುರಿಗೆ ರೈತರ ಬಗ್ಗೆ ಪ್ರೀತಿ, ಹಿಂದಿನಿಂದ ಲಂಚ!
ಅಧಿಕಾರಿಗಳಿಂದ ಸಚಿವರು ಲಂಚ ಕೇಳುವುದು ಇದು ಮೊದಲನೇಯದ್ದು ಅಲ್ಲ ಮತ್ತು ಕೊನೆಯದ್ದು ಆಗಿರಲಿಕ್ಕಿಲ್ಲ. ಆದರೆ ಭಾರತೀಯ ಜನತಾ ಪಾರ್ಟಿಯವರ ಸರಕಾರ 40% ಕಮೀಷನ್ ಸರಕಾರ ಎಂದು ಹೇಳಿ ಅಧಿಕಾರಕ್ಕೆ ಬಂದ ಕಾಂಗ್ರೆಸ್ಸಿಗರು ಅಧಿಕಾರಕ್ಕೆ ಬಂದು ಇನ್ನೂ ಮೂರು ತಿಂಗಳು ಕೂಡ ಕಳೆದಿಲ್ಲ. ಅಷ್ಟು ಬೇಗ ಕೈಯನ್ನು ಕೆಸರಿನಲ್ಲಿ ಅದ್ದಿ ಬಾಯಲ್ಲಿ ಇಟ್ಟು ಚೀಪುತ್ತಾರೆ ಎಂದರೆ ಇದರ ಅರ್ಥ ಏನು? ಅಷ್ಟಕ್ಕೂ ಅಧಿಕಾರಿಗಳಿಂದ ಸಚಿವರು ಹಣ ವಸೂಲಿಗೆ ಇಳಿದರೆ ಜನಸಾಮಾನ್ಯರಿಗೆ ತೊಂದರೆ ಏನು ಎಂದು ನಿಮಗೆ ಅನಿಸಬಹುದು. ವಿಷಯ ಇಷ್ಟೇ, ಮಾನ್ಯ ಸಚಿವರಾದ ಚೆಲುವರಾಯ ಸ್ವಾಮಿಗೆ ಸಿಕ್ಕಿರುವುದು ಚಪ್ಪಲಿ ಹೊರಗೆ ಇಟ್ಟು ಕಚೇರಿ ಪ್ರವೇಶಿಸಬೇಕಾದಷ್ಟು ಪವಿತ್ರವಾಗಿರುವ ಕೃಷಿ ಇಲಾಖೆ. ಈ ಇಲಾಖೆ ನೇರವಾಗಿ ವ್ಯವಹಾರ ಇಟ್ಟುಕೊಳ್ಳುವುದು ದೇಶದ ಬೆನ್ನೆಲುಬಾಗಿರುವ ರೈತರ ಜೊತೆ. ಅದರಲ್ಲಿಯೂ ತಾಲೂಕು ಮಟ್ಟದ ಕೃಷಿ ನಿರ್ದೇಶಕರು ಮತ್ತು ಸಿಬ್ಬಂದಿಗಳು ನೇರವಾಗಿ ಕೃಷಿಕರ ಜೊತೆ ಅವರ ಏಳುಬೀಳುಗಳನ್ನು ಸ್ಪಂದಿಸಿ ಅದಕ್ಕೆ ಪರಿಹಾರ ನೀಡುವವರು. ಅವರಿಂದ ಆರೇಳು ಲಕ್ಷದ ಪೀಕಲು ಅವರದ್ದೇ ಇಲಾಖೆಯ ಸಚಿವರು ಹೊರಟರೆ ಅವರು ಏನು ಮಾಡುತ್ತಾರೆ. ಅವರು ತಮ್ಮ ಹಣವನ್ನು ಏನು ಕಿಸೆಯಿಂದ ಕೊಡುವುದಿಲ್ಲ. ಅದನ್ನು ರೈತರಿಂದ ಅವರು ಏನಾದರೂ ಕಾರಣಗಳನ್ನು ಹೇಳಿ ವಸೂಲಿ ಮಾಡಿಯೇ ಮಾಡುತ್ತಾರೆ. ಆಗ ಪಾಪದ ಬಡ ರೈತ ಅಧಿಕಾರಿಗಳಿಗೆ ಕೊಡಲು ಎಲ್ಲಿಂದಲಾದರೂ ಹಣವನ್ನು ಹೊಂದಿಸಬೇಕಾಗುತ್ತೆ.
ನಮಗೆ ರೈತರ ಬದುಕು ಹೇಗಿದೆ ಎನ್ನುವುದು ಗೊತ್ತಿದೆ. ಪ್ರತಿಯೊಬ್ಬ ಜನಪ್ರತಿನಿಧಿ ಮೈಕ್ ಸಿಕ್ಕಿದರೆ ರೈತರ ಬಗ್ಗೆ ಪುಂಖಾನುಪುಂಖವಾಗಿ ಮಾತನಾಡಬಲ್ಲರು. ಕಣ್ಣಿನಿಂದ ಆಶ್ರುಧಾರೆ ಹರಿಸಬಲ್ಲರು. ಆದರೆ ರೈತರ ಇಲಾಖೆಯದ್ದೇ ಸಚಿವರಾದ ಕೂಡಲೇ ಅದೇ ಇಲಾಖೆಯ ಅಧಿಕಾರಿಗಳನ್ನು ಸುಲಿದು ತಿಂದರೆ ಅದರಿಂದ ನೇರವಾಗಿ ಪರಿಣಾಮ ಬೀರುವುದು ರೈತರ ಮೇಲೆ ಎನ್ನುವ ಕನಿಷ್ಟ ಜ್ಞಾನವೂ ಇಲ್ಲವಾಯಿತಾ ಎನ್ನುವುದು ಪ್ರಶ್ನೆ. ಒಂದು ಕಡೆ ಕುಮಾರಸ್ವಾಮಿಯವರು ಪರೋಕ್ಷವಾಗಿ ಚೆಲುವರಾಯ ಸ್ವಾಮಿಯವರ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಹೇಳುತ್ತಿರುವಾಗ ದಾಖಲೆ ಕೊಡಿ ಎಂದು ಕಾಂಗ್ರೆಸ್ ಸರಕಾರದ ಎಲ್ಲಾ ಚೆಲುವರು ಬೊಬ್ಬೆ ಹೊಡೆಯುತ್ತಿದ್ದಾರೆ. ಇದಕ್ಕಿಂತ ಬೇರೆ ದಾಖಲೆ ಬೇಕಾ ಸ್ವಾಮಿ. ಆದ್ದರಿಂದ ಈ ಬಗ್ಗೆ ತಕ್ಷಣ ಸಿಎಂ ಆಂತರಿಕ ವಿಚಾರಣೆ ನಡೆಸಬೇಕು.
ಕುಮಾರಣ್ಣ ಫುಲ್ ಆಕ್ಟಿವ್!
ಒಂದು ವೇಳೆ ಚೆಲುವರಾಯ ಸ್ವಾಮಿಯವರ ಮೇಲೆ ಸುಳ್ಳು ದೂರು ದಾಖಲಾಗಿದ್ದರೆ ಆಗ ಅಧಿಕಾರಿಗಳ ವಿರುದ್ಧ ಕ್ರಮ ತೆಗೆದುಕೊಳ್ಳಬೇಕು. ಆದರೆ ಅಂತಹ ಸಾಧ್ಯತೆ ಕಡಿಮೆ. ಯಾಕೆಂದರೆ ಸುಮ್ಮಸುಮ್ಮನೆ ರಾಜ್ಯಪಾಲರ ತನಕ ಯಾರೂ ಕೂಡ ಲಂಚದ ಆರೋಪಗಳನ್ನು ತೆಗೆದುಕೊಂಡು ಹೋಗುವುದಿಲ್ಲ. ಹಾಗಂತ ಮಂಡ್ಯದಿಂದ ಇಂತಹ ದೂರುಗಳು ಬಂದಿದೆ ಎಂದರೆ ಅದರ ಹಿಂದೆ ಕುಮಾರಣ್ಣನ ಬೆಂಬಲ ಅಧಿಕಾರಿಗಳಿಗೆ ಇಲ್ಲ ಎಂದಲ್ಲ. ಅಧಿಕಾರದಲ್ಲಿ ಇರಲಿ, ಇಲ್ಲದಿರಲಿ ವಿಧಾನಸೌಧದ ಮೂಲೆಮೂಲೆಯಲ್ಲಿಯೂ ಗೌಡರ ಕುಟುಂಬಕ್ಕೆ ನಿಷ್ಟರಾಗಿರುವ ಅಧಿಕಾರಿಗಳ ಪಡೆ ಇದೆ. ಅವರನ್ನು ಅಷ್ಟು ಸುಲಭವಾಗಿ ಏಮಾರಿಸಿ ಅಧಿಕಾರ ನಡೆಸುವುದು ಕಾಂಗ್ರೆಸ್ಸಿಗಾಗಲಿ, ಬಿಜೆಪಿಗಾಗಲಿ ಸುಲಭವಾಗುವುದಿಲ್ಲ. ಆದ್ದರಿಂದ ಮಂಡ್ಯದಿಂದ ಇಂತಹ ದೂರುಗಳು ಎದ್ದು ರಾಜಭವನದ ಅಂಗಣದಲ್ಲಿ ಬಿದ್ದಿವೆ ಎಂದರೆ ಕುಮಾರಣ್ಣ ಸುಮ್ಮನೆ ಕುಳಿತುಕೊಂಡಿಲ್ಲ ಎಂದೇ ಅರ್ಥ. 19 ಶಾಸಕರನ್ನು ಇಟ್ಟುಕೊಂಡು ಕಾಂಗ್ರೆಸ್ಸನ್ನು ಇಷ್ಟು ಆಡಿಸುತ್ತಿರುವ ಕುಮಾರಸ್ವಾಮಿಯವರ ಎದುರು ಬಿಜೆಪಿ 66 ಸೀಟು ಗೆದ್ದರೂ ಸ್ವಲ್ಪ ಮಂಕಾದಂತೆ ಕಾಣುತ್ತಿರುವುದೇ ಈ ಕಾರಣಕ್ಕೆ. ತಮ್ಮದೇ ಪಾಳಯದಲ್ಲಿದ್ದು, ಗೌಡರ ಕುಟುಂಬದ ಹಿಂದೆ ಮುಂದೆ ಕೈಕಟ್ಟಿ ನಿಲ್ಲುತ್ತಿದ್ದ ಚೆಲುವ ತಮಗೆ ಕೈ ಕೊಟ್ಟು ಕಾಂಗ್ರೆಸ್ಸಿಗೆ ಸೇರಿ ಇವತ್ತು ಕೃಷಿ ಮಂತ್ರಿಯಾಗಿರುವುದು ಪದ್ಮನಾಭನಗರದ ದೊಡ್ಡ ಮನೆಗೆ ಜೀರ್ಣಿಸಿಕೊಳ್ಳಲು ಆಗುತ್ತಿಲ್ಲ. ಒಟ್ಟಿನಲ್ಲಿ ಎದುರಿನಿಂದಲೋ, ಹಿಂದಿನಿಂದಲೋ ಚೆಲುವ ತಮ್ಮೊಂದಿಗೆ ಹೊಂದಾಣಿಕೆ ಮಾಡಿಕೊಳ್ಳದೇ ಇದ್ದರೆ ಅದು ಕಾಂಗ್ರೆಸ್ ಸರಕಾರದ ಹಿತದೃಷ್ಟಿಯಿಂದಲೂ ಡೇಂಜರ್ ಎಂದು ಸೂಚನೆ ಈಗಾಗಲೇ ದಳಪತಿಗಳಿಂದ ಹೋಗಿರಬಹುದು.
Leave A Reply